ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಂಡೈ ವೆನ್ಯೂ: ಅತ್ಯಾಧುನಿಕ ಸಂವಹನ, ಸುರಕ್ಷತಾ ತಂತ್ರಜ್ಞಾನ

Last Updated 16 ಏಪ್ರಿಲ್ 2019, 19:46 IST
ಅಕ್ಷರ ಗಾತ್ರ

ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಿಕಾ ಕಂಪನಿ ಹುಂಡೈನ ಬಹು ನಿರೀಕ್ಷಿತ ಕಾಂಪಾಕ್ಟ್‌ ಎಸ್‌ಯುವಿ ‘ವೆನ್ಯೂ’ ಮುಂದಿನ ತಿಂಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಜಾಗತಿಕ ಮಟ್ಟದ ಅತ್ಯಾಧುನಿಕ ಸಂವಹನ ಮತ್ತು ಸುರಕ್ಷತಾ ತಂತ್ರಜ್ಞಾನಗಳನ್ನು ಇದು ಹೊಂದಿರಲಿದೆ.

ಆಪತ್ತಿನ ಸಂದರ್ಭಗಳಲ್ಲಿ ಸಂದೇಶ ರವಾನಿಸುವ ವ್ಯವಸ್ಥೆ ಸೇರಿದಂತೆಭಾರತದ ಮಾರುಕಟ್ಟೆಯನ್ನೇ ಕೇಂದ್ರಿಕರಿಸಿ ಕೆಲವು ವಿಶಿಷ್ಟ ತಂತ್ರಜ್ಞಾನಗಳನ್ನು (ಫೀಚರ್) ‘ವೆನ್ಯೂ’ನಲ್ಲಿ ಅಳವಡಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.

‘ಬ್ಲ್ಯೂಲಿಂಕ್‌’ ಎಂಬಜಾಗತಿಕ ಸಂವಹನ ತಂತ್ರಜ್ಞಾನವನ್ನು ‘ವೆನ್ಯೂ’ ಮೂಲಕ ಹುಂಡೈ ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ. ಇದಕ್ಕಾಗಿ ನೆಟ್‌ವರ್ಕ್‌ ಸಂಪರ್ಕ ಪಡೆಯಲು ವೊಡಾಫೋನ್‌–ಐಡಿಯಾ ದೂರಸಂಪರ್ಕ ಸಂಸ್ಥೆಯೊಂದಿಗೆ ಕಂಪನಿ ಒಪ್ಪಂದವನ್ನೂ ಮಾಡಿಕೊಂಡಿದೆ.

ಬ್ಲ್ಯೂಲಿಂಕ್‌ ತಂತ್ರಜ್ಞಾನದಲ್ಲಿ ಕೃ‌ತಕ ಬುದ್ಧಿಮತ್ತೆ ಮತ್ತು ಸಂವಹನಕ್ಕೆ ಸಂಬಂಧಿಸಿದ 33 ತಂತ್ರಜ್ಞಾನಗಳಿದ್ದು, ಈ ಪೈಕಿ 10 ತಂತ್ರಜ್ಞಾನಗಳನ್ನು ಭಾರತದ ಮಾರಕಟ್ಟೆಯನ್ನೇ ಕೇಂದ್ರೀಕರಿಸಿ ಅಭಿವೃದ್ಧಿಪಡಿಸಲಾಗಿದೆ. ಭವಿಷ್ಯದಲ್ಲಿ ತಯಾರಿಸುವ ಎಲ್ಲ ವಾಹನಗಳಲ್ಲಿ ಈ ಹೊಸ ತಂತ್ರಜ್ಞಾನಗಳನ್ನು ಅಳವಡಿಸಲೂ ಅದು ಯೋಚಿಸುತ್ತಿದೆ.

‘ವಾಹನಗಳಲ್ಲಿ ಬಳಸಲಾಗುತ್ತಿರುವ ಸಂವಹನ ತಂತ್ರಜ್ಞಾನ ಅಭಿವೃದ್ಧಿ ಮತ್ತು ಅವುಗಳ ಬಳಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಕಂಪನಿಗೆ ಸಾಕಷ್ಟು ಅನುಭವವಿದೆ. ನಾವು ಈ ತಂತ್ರಜ್ಞಾನವನ್ನು ‘ವೆನ್ಯೂ’ನಲ್ಲೂ ಅಳವಡಿಸುತ್ತಿದ್ದೇವೆ. ಜೊತೆಗೆ ಭಾರತದ ಮಾರುಕಟ್ಟೆ ಗುರಿಯಾಗಿಸಿಕೊಂಡು ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನಗಳನ್ನು ಬಳಸುತ್ತಿದ್ದೇವೆ. ಭಾರತ ಕೇಂದ್ರಿತ ತಂತ್ರಜ್ಞಾನದ ಬಗ್ಗೆ ಹಲವು ಸುತ್ತಿನ ಅಧ್ಯಯನ ಮತ್ತು ಪರೀಕ್ಷೆಗಳನ್ನು ನಡೆಸಲಾಗಿದೆ’ ಎಂದು ಹುಂಡೈ ಮೋಟಾರ್‌ ಇಂಡಿಯಾದ ಎಂಜಿನಿಯರಿಂಗ್‌ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಜಿ ಹಾಂಗ್‌ ಬೀಕ್‌ ಹೇಳಿದ್ದಾರೆ.

ಬ್ಲ್ಯೂಲಿಂಕ್‌ ಕಾರ್ಯನಿರ್ವಹಣೆಗೆ ಹೇಗೆ?:ಬ್ಲ್ಯೂಲಿಂಕ್ ಸಾಧನವು ವೊಡಾಫೋನ್ ಐಡಿಯಾ ಸಂಸ್ಥೆಯ ಇ-ಸಿಮ್ ಹೊಂದಿರಲಿದೆ. ಇದು 4ಜಿ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸಲಿದೆ. 4ಜಿ ಇಲ್ಲದ ಕಡೆಗಳಲ್ಲಿ 3ಜಿಯಲ್ಲೂ ಕೆಲಸ ಮಾಡುತ್ತದೆ.

‘ಜಾಗತಿಕ ಮಟ್ಟದ ಕೃತಕ ಬುದ್ಧಿಮತ್ತೆ ಕಂಪನಿಯೊಂದು ಅಭಿವೃದ್ಧಿ ಪಡಿಸಿರುವ ಕ್ಲೌಡ್‌ ಆಧಾರಿತ ಧ್ವನಿ ಗುರುತು ತಂತ್ರಜ್ಞಾನವನ್ನೂ ಬ್ಲ್ಯೂಲಿಂಕ್‌ ಸಾಧನ ಹೊಂದಿರಲಿದೆ. ಸಾಧನವು ಅತ್ಯಂತ ನಿಖರವಾಗಿ ಸಂಚಾರ ಪಥ (ಟ್ರಾಫಿಕ್‌ ನೇವಿಗೇಷನ್‌) ಹಾಗೂ ಸ್ಥಳೀಯ ಸ್ಥಳಗಳನ್ನು (ಲೋಕಲ್‌ ಸರ್ಚ್‌) ಗುರುತಿಸಲಿದೆ. ಯಾವುದೇ ರೀತಿಯ ಇಂಗ್ಲಿಷ್‌ ಉಚ್ಛಾರಣೆಯನ್ನು ಗುರುತಿಸಿ ಜನರೊಂದಿಗೆ ಸಂವಹನ (ಇಂಟರ್‌ಆ್ಯಕ್ಟಿವ್‌ ರೆಕೊಗ್ನಿಷನ್‌) ಮಾಡುವ ಸಾಮರ್ಥ್ಯವೂ ಈ ಉಪಕರಣಕ್ಕಿದೆ. ಸಂಸ್ಥೆಯು ಎರಡು ವರ್ಷಗಳಿಂದ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಹಲವು ವೈಶಿಷ್ಟ್ಯಪೂರ್ಣ ಗುಣಲಕ್ಷಣಗಳನ್ನು ಹೊಂದಿರುವ ಬ್ಲ್ಯೂಲಿಂಕ್‌ ತಂತ್ರಜ್ಞಾನವು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಕಾರ್ಯಸಾಧುವಾದ, ವಾಸ್ತವವಾದ ಮತ್ತು ‌ಅನುಕೂಲಕರ ವಾಹನ ಸಂವಹನ ತಂತ್ರಜ್ಞಾನವಾಗಿದೆ’ ಎಂದು ಹುಂಡೈ ಮೋಟಾರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋನ್‌ ಸೋಬ್‌ ಕಿಮ್‌ ಅವರು ಹೇಳಿದ್ದಾರೆ.

‘ವೆನ್ಯೂ’ನಿಂದ ಆರಂಭವಾಗಿ ಕಂಪನಿ ಭವಿಷ್ಯದಲ್ಲಿ ತಯಾರಿಸುವ ಎಲ್ಲ ವಾಹನಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲಿದ್ದೇವೆ. ಆ ಮೂಲಕ ಪ್ರತಿಯೊಬ್ಬರಿಗೂ ಈ ತಂತ್ರಜ್ಞಾನ ಲಭ್ಯ ಇರುವಂತೆ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

ಗಮನ ಸೆಳೆಯುವ ತಂತ್ರಜ್ಞಾನ

ಹುಂಡೈ ‘ವೆನ್ಯೂ’ ಹಲವು ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನಗಳನ್ನೂ ಹೊಂದಿರಲಿದೆ. ವಾಹನ ಹಾಳಾಗಿರುವುದು/ಅಪಘಾತಕ್ಕೀಡಾಗಿರುವ ಮಾಹಿತಿಯನ್ನು ಸ್ವಯಂ ಚಾಲಿತವಾಗಿ ರವಾನಿಸುವ ವ್ಯವಸ್ಥೆ, ತುರ್ತು ಅಥವಾ ವಿಪತ್ತಿನ ಸಂದರ್ಭದಲ್ಲಿ ಸಂದೇಶ ರವಾನಿಸುವ ಹಾಗೂ ಕಂಪನಿಯಿಂದ ತಕ್ಷಣ ಸಹಾಯ ಪಡೆಯುವ ತಂತ್ರಜ್ಞಾನಗಳು ‘ವೆನ್ಯೂ’ನಲ್ಲಿ ಹುಂಡೈ ಅಳವಡಿಸಲಿದೆ. ಇವುಗಳಲ್ಲದೇ, ಎಂಜಿನ್‌ ಚಾಲೂ/ನಿಲ್ಲಿಸುವ, ತಾಪಮಾನ ನಿಯಂತ್ರಣ, ಡೋರ್‌ ಲಾಕ್‌/ಅನ್‌ಲಾಕ್‌ ವ್ಯವಸ್ಥೆ ಕೂಡ ಹೊಸ ತಂತ್ರಜ್ಞಾನದ ಭಾಗವಾಗಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT