ನವದೆಹಲಿ: ಮೋಟಾರ್‌ಸೈಕಲ್ ತಯಾರಿಕಾ ಕಂಪನಿ ರಾಯಲ್ ಎನ್‌ಫೀಲ್ಡ್ ಮಂಗಳವಾರ ಹೊಸ ಬೈಕ್ ಬಿಡುಗಡೆ ಮಾಡಿದೆ. 'ಸ್ಕ್ರ್ಯಾಮ್ 411' ಹೆಸರಿನ ಹೊಸ ಬೈಕ್ ಆರಂಭಿಕ ಬೆಲೆ ₹2.03 ಲಕ್ಷ ಇದೆ.
ರಾಯಲ್ ಎನ್‌ಫೀಲ್ಡ್‌ನ ಎಲ್‌ಎಸ್–410 ಎಂಜಿನ್ ಪ್ಲಾಟ್‌ಫಾರ್ಮ್ ಮತ್ತು 'ಹ್ಯಾರಿಸ್ ಪರ್ಫಾರ್ಮೆನ್ಸ್' ಚಾಸಿಸ್ ಮೇಲೆ ಸ್ಕ್ರ್ಯಾಮ್ 411 ತಯಾರಿಸಲಾಗಿದೆ. ನಗರದ ರಸ್ತೆಗಳು ಹಾಗೂ ಕಚ್ಚಾ ರಸ್ತೆಗಳಲ್ಲೂ ಸರಾಗವಾಗಿ ಸಾಗುವಂತಹ ಸಾಮರ್ಥ್ಯವನ್ನು ಈ ಬೈಕ್ ಹೊಂದಿರುವುದಾಗಿ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಾದ್ಯಂತ ಈ ಬೈಕ್ ಖರೀದಿಗೆ ಲಭ್ಯವಿದ್ದು, ಬಣ್ಣಗಳ ಆಯ್ಕೆಯ ಆಧಾರದಲ್ಲಿ ₹2,03,085ರಿಂದ ₹2,08,593ರ ವರೆಗೂ ಬೆಲೆ ನಿಗದಿಯಾಗಿದೆ. ಯುರೋಪ್ ಹಾಗೂ ಏಷಿಯಾ ಪೆಸಿಫಿಕ್ ಮಾರುಕಟ್ಟೆಗಳಿಗೆ ಈ ವರ್ಷದ ಮಧ್ಯ ಭಾಗದಲ್ಲಿ ಸ್ಕ್ರ್ಯಾಮ್ ಪ್ರವೇಶ ಪಡೆಯಲಿದೆ.
The Royal Enfield Scram 411 is made for the ‘switch’ - a motorcycle that calls unpredictability its playground. Engage Scram Mode!
ಈ ಬೈಕ್‌ನಲ್ಲಿ 411 ಸಿಸಿ, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. 6,500 ಆರ್‌ಪಿಎಂನಲ್ಲಿ ಗರಿಷ್ಠ 24.3 ಬಿಎಚ್‌ಪಿ ಶಕ್ತಿಯನ್ನು ಹೊಮ್ಮಿಸುತ್ತದೆ ಹಾಗೂ 4,000–4,500 ಆರ್‌ಪಿಎಂನಲ್ಲಿ ಗರಿಷ್ಠ 32 ನ್ಯೂಟನ್ ಮೀಟರ್ ಟಾರ್ಕ್ ಹೊಮ್ಮುತ್ತದೆ.
ಆಟೊ ಮೀಟರ್, ಟ್ರಿಪ್ ಮೀಟರ್, ಸಮಯ, ಇಂಧನದ ಮಟ್ಟ ಹಾಗೂ ಬೈಕ್ ಸರ್ವೀಸ್ ರಿಮೈಂಡರ್ ಅನ್ನು ಡಿಜಿಟಲ್ ಮೀಟರ್ ತೋರುತ್ತದೆ. ವೇಗವನ್ನು ಸೂಚಿಸಲು ಅನಲಾಗ್ ಮೀಟರ್ ಸಹ ಒಳಗೊಂಡಿದೆ.
ಬೈಕ್‌ನ ಮುಂದಿನ, ಹಿಂದಿನ ಚಕ್ರಗಳಿಗೆ ಡಿಸ್ಕ್ ಬ್ರೇಕ್‌ಗಳಿದ್ದು, ಡ್ಯೂಯಲ್ ಚಾನೆಲ್ ಆ್ಯಂಟಿ-ಲಾಕ್ ಬ್ರೇಕಿಂಗ್ ವ್ಯವಸ್ಥೆಯೂ (ಎಬಿಎಸ್) ಇದೆ.