ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾದಿಂದ 14 ಹೊಸ ಟ್ರಕ್‌ ಬಿಡುಗಡೆ

Last Updated 5 ಸೆಪ್ಟೆಂಬರ್ 2022, 17:34 IST
ಅಕ್ಷರ ಗಾತ್ರ

ಮುಂಬೈ: ಟಾಟಾ ಮೋಟರ್ಸ್‌ ಕಂಪನಿಯು ಸಿಎನ್‌ಜಿ ಚಾಲಿತ 5 ಟ್ರಕ್‌ಗಳನ್ನೂ ಒಳಗೊಂಡು ಒಟ್ಟಾರೆ 14 ಹೊಸ ಟ್ರಕ್‌ ಮಾದರಿಗಳನ್ನು ದೇಶದ ಮಾರುಕಟ್ಟೆಗೆ ಸೋಮವಾರ ಬಿಡುಗಡೆ ಮಾಡಿದೆ.

ಜಿಯೊ ವರ್ಲ್ಡ್‌ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್‌ ವಾಘ್‌ ಅವರು ಈ ಟ್ರಕ್‌ಗಳನ್ನು ಬಿಡುಗಡೆ ಮಾಡಿದರು.

‘ರಾಷ್ಟ್ರದ ಮೂಲಸೌಲಭ್ಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ವಾಹನಗಳನ್ನು ಅಭಿವೃದ್ಧಿ ಮಾಡಲಾಗಿದೆ. ಇಂಧನ ಕ್ಷಮತೆ, ಪರ್ಯಾಯ ಇಂಧನಗಳ ಬಳಕೆಯತ್ತ ಗಮನವಿರಿಸಿ, ಸುರಕ್ಷತೆಗೆ ಒತ್ತು ನೀಡಿ ಈ ವಾಹನಗಳನ್ನು ಬಿಡುಗಡೆ ಮಾಡಿದ್ದೇವೆ. ಶೂನ್ಯ ಮಾಲಿನ್ಯದ ವಾಹನಗಳ ಅಭಿವೃದ್ಧಿಯತ್ತಲೂ ಸಂಶೋಧನೆ ತೀವ್ರಗತಿಯಲ್ಲಿ ಮುಂದುವರಿದಿದೆ. ಹೈಡ್ರೋಜನ್‌ ಬಳಕೆ ಮಾಲಿನ್ಯ ತಡೆಗೆ ಉತ್ತಮವೇ ಆದರೂ ಅಗತ್ಯ ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ. ಮುಂದೆ ಸಿಎನ್‌ಜಿ ಮತ್ತು ಹೈಡ್ರೋಜನ್‌ ಮಿಶ್ರಿತ ಇಂಧನ ಬಳಕೆ, ಜೈವಿಕ ಸಿಎನ್‌ಜಿ ಬಳಕೆಯತ್ತಲೂ ನಮ್ಮ ಸಂಶೋಧನೆ ಮುಂದುವರಿದಿದೆ’ಎಂದರು.

ವಾಹನಗಳಲ್ಲೇನು ವಿಶೇಷ: ಪುಟ್ಟ ಗಾತ್ರದ ಮಿನಿ ಟಿಪ್ಪರ್‌ನಿಂದ (710ಕೆ) ಹಿಡಿದು, ಸುಮಾರು 55 ಟನ್‌ ಎಳೆಯಬಲ್ಲ (SIGNA 5530S) ಬೃಹತ್‌ ಟ್ರಕ್‌ವರೆಗಿನ ವಾಹನಗಳು ಬಿಡುಗಡೆ ಆಗಿವೆ. ಎಲ್ಲ ವಾಹನಗಳು ಬಿಎಸ್‌ 6 ಎಂಜಿನ್‌ಗಳನ್ನು ಹೊಂದಿವೆ. ಚಾಲಕನನ್ನು ಎಚ್ಚರಿಸುವ ವ್ಯವಸ್ಥೆ, ಕ್ಯಾಬಿನ್‌ ಎಸಿ, ಚಾಲಕರಿಗೆ ವಿಶ್ರಾಂತಿ ವ್ಯವಸ್ಥೆ, ಆಕರ್ಷಕ ಮತ್ತು ಆರಾಮದಾಯಕ ಒಳಾಂಗಣ, ಡ್ಯಾಷ್‌ ಬೋರ್ಡ್‌ಗೆ ಗಿಯರ್‌ ಲಿವರ್‌ ಅಳವಡಿಕೆ, ಬಾಗಿಸಿ ಹೊಂದಿಸ ಬಹುದಾದ ಸ್ಟೀರಿಂಗ್ ಇತ್ಯಾದಿ ವ್ಯವಸ್ಥೆಯನ್ನು ಹೊಂದಿದೆ. ಎಲ್ಲ ಟ್ರಕ್‌ಗಳಿಗೂ 6 ವಿಧದ (ಸುರಕ್ಷತೆ, ವಾಹನ ನಿರ್ವಹಣೆ ಹಾಗೂ ದುರಸ್ತಿಯ ಜಾಲಗಳು, ಜಿಪಿಎಸ್‌ ನಿಗಾ ವ್ಯವಸ್ಥೆ, ಇಂಧನ ಕ್ಷಮತೆಯ ನಿಗಾ, ಚಾಲನೆ ಮೇಲೆ ನಿಗಾ) ‘ಸಂಪೂರ್ಣ ಸುರಕ್ಷತಾ’ ಹೆಸರಿನ ಮೊಬೈಲ್‌ ಆಧರಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

(ಕಂಪನಿಯ ಆಹ್ವಾನದ ಮೇರೆಗೆ ವರದಿಗಾರ ಮುಂಬೈಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT