ಗುರುವಾರ , ಏಪ್ರಿಲ್ 15, 2021
20 °C
ಟೆಸ್ಟ್‌ ಡ್ರೈವ್‌

ಬಿಎಸ್‌–6 ಶ್ರೇಣಿಯ ರೇಡಿಯಾನ್‌, ಸ್ಕೂಟಿ ಪೆಪ್‌

ಉದಯ ಯು. Updated:

ಅಕ್ಷರ ಗಾತ್ರ : | |

Prajavani

ಟಿವಿಎಸ್‌ ಸಂಸ್ಥೆಯು ಎರಡೂವರೆ ದಶಕಗಳ ಹಿಂದೆ ಬಿಡುಗಡೆ ಮಾಡಿದ್ದ ಸ್ಕೂಟಿ ಹಾಗೂ ಇತ್ತೀಚೆಗೆ ಬಿಡುಗಡೆ ಮಾಡಿದ್ದ ರೇಡಿಯಾನ್‌ ಬೈಕ್‌ನ ಬಿಎಸ್‌–6 ಆವೃತ್ತಿಗಳನ್ನು ಮಾರುಕಟ್ಟೆಗೆ ಇಳಿಸಿದೆ.

ಎರಡು ವರ್ಷಗಳ ಹಿಂದೆಯಷ್ಟೇ ರೇಡಿಯಾನ್‌ ಬೈಕ್‌ ಬಿಡುಗಡೆ ಮಾಡಿದ್ದ ಟಿವಿಎಸ್‌ ಕಂಪನಿಯು ಈಗ ‘ಬಿಎಸ್‌–6’ ಹೊಸ ನಿಯಮಗಳಿಗೆ ಅನುಸಾರವಾಗಿ ಬೈಕ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿದೆ.

ಬಿಎಸ್‌–6 ಆವೃತ್ತಿಯ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳೇನೂ ಕಾಣಿಸುವುದಿಲ್ಲ. (ವಿಶೇಷ ಆವೃತ್ತಿಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಿದೆ. ‘ಪ್ರಜಾವಾಣಿ’ ಟೆಸ್ಟ್‌ ಡ್ರೈವ್‌ಗೆ ನೀಡಿದ್ದ ವಾಹನ ಸಾಮಾನ್ಯ ಆವೃತ್ತಿಯಾಗಿತ್ತು). ಇಂಧನ ಸಾಮರ್ಥ್ಯದಲ್ಲಿ ಶೇ 15ರಷ್ಟು ಹೆಚ್ಚಳವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಫ್ಯುಯೆಲ್‌ ಇಂಜೆಕ್ಷನ್‌ ತಂತ್ರಜ್ಞಾನ ಇದಕ್ಕೆ ಕಾರಣ.

110 ಸಿ.ಸಿ. ಎಂಜಿನ್‌, 18 ಇಂಚ್‌ ಟ್ಯೂಬ್‌ಲೆಸ್‌ ಟೈರ್‌ಗಳು, ಕಪ್ಪು ಬಣ್ಣದ ಅಲಾಯ್‌ ವ್ಹೀಲ್‌, ಸಾಕಷ್ಟು  ಗ್ರೌಂಡ್‌ ಕ್ಲಿಯರೆನ್ಸ್‌, ಇಂಧನ ಟ್ಯಾಂಕ್‌ ಎರಡೂ ಕಡೆಗಳಲ್ಲಿ ಥೈ ಪ್ಯಾಡ್... ಎಲ್ಲವೂ ಹೊಸ ಆವೃತ್ತಿಯಲ್ಲೂ ಇವೆ. ಮೊದಲ ಆವೃತ್ತಿಯಲ್ಲಿ ಇಂಧನ ಕ್ಷಮತೆಯು ಲೀಟರ್‌ಗೆ ಸುಮಾರು 60 ಕಿ.ಮೀ. ಇದ್ದರೆ, ಈಗ ಅದು 65–70 ಕಿ.ಮೀ.ಗೆ ಹೆಚ್ಚಿದೆ. ಹೊಸ ಆವೃತ್ತಿಯಲ್ಲೂ ಬೈಕ್‌ ಹೊರಡಿಸುವ ಧ್ವನಿ ಗಮನಸೆಳೆಯುತ್ತದೆ. ಬ್ರೇಕ್‌ನಲ್ಲಿ ಎಸ್‌ಬಿಎಸ್‌ ತಂತ್ರಜ್ಞಾನ ಇದೆ. ಡಿಸ್ಕ್‌ ಬ್ರೇಕ್‌ ಇಲ್ಲ.

ಬಿಎಸ್‌–6 ತಂತ್ರಜ್ಞಾನ ಅಳವಡಿಸಿದ್ದರಿಂದ ಬೈಕ್‌ ಇನ್ನಷ್ಟು ಸುಖಕರ ಸವಾರಿಯನ್ನು ನೀಡುತ್ತದೆ. ಮಧ್ಯಮವರ್ಗದ ಜನವರ್ಗ ಹಾಗೂ ಸಣ್ಣ ದೂರದ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದ ಬೈಕ್‌ ಆದ್ದರಿಂದ, ಹೆದ್ದಾರಿಯಲ್ಲಿ ದೂರಪ್ರಯಾಣಕ್ಕೆ ಸೂಕ್ತವೆನಿಸುವುದಿಲ್ಲ. 60 ಕಿ.ಮೀ.ಗೂ ಹೆಚ್ಚಿನ ವೇಗದಲ್ಲಿ ಹೋದರೆ ಸಣ್ಣ ಕಂಪನ ಕಾಣಿಸುತ್ತದೆ. ಆದರೆ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಳಸುವ ಗ್ರಾಹಕರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ.

ತಂತ್ರಜ್ಞಾನದಲ್ಲಿ ಉನ್ನತೀಕರಣ ಆಗಿರುವುದರಿಂದ ಬೈಕ್‌ನ ಬೆಲೆಯಲ್ಲೂ ಸುಮಾರು ₹6,500ರಷ್ಟು ಹೆಚ್ಚಳವಾಗಿದೆ.

ಸ್ಕೂಟಿ ಪೆಪ್‌ ಪ್ಲಸ್‌

ಮಹಿಳೆಯರನ್ನೇ ಗಮನದಲ್ಲಿಟ್ಟುಕೊಂಡ ಟಿವಿಎಸ್‌ ಸಂಸ್ಥೆಯು 1996ರಲ್ಲಿ ತಯಾರಿಸಿದ್ದ 88 ಸಿಸಿ ಸಾಮರ್ಥ್ಯದ ‘ಸ್ಟೂಟಿ ಪೆಪ್‌’ನ ಬಿಎಸ್‌–6 ಆವೃತ್ತಿ ‘ಸ್ಕೂಟಿ ಪೆಪ್‌ ಪ್ಲಸ್‌’ಸಹ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದರಲ್ಲಿ ಫ್ಯುಯೆಲ್‌ ಇಂಜೆಕ್ಷನ್‌ ಹಾಗೂ ಇಟಿಎಸ್‌ಐ ತಂತ್ರಜ್ಞಾನವನ್ನು ಬಳಸಿರುವುದು ಸಂಸ್ಥೆಯ ಹೆಗ್ಗಳಿಕೆ.

ಕೆಲವು ಹೊಸ ಸ್ಟಿಕರ್‌ಗಳೊಂದಿಗೆ ಹೆಚ್ಚಿನ ಲುಕ್‌ ನೀಡಿದ್ದು, ಸೀಟ್‌ ಎತ್ತರವನ್ನು ಸ್ವಲ್ಪ ಹೆಚ್ಚಿಸಿದ್ದು, ಸೈಲೆನ್ಸರ್‌ನಲ್ಲಿ ಹೊಸ ಸುರಕ್ಷತಾ ಪಟ್ಟಿಯನ್ನು ಅಳವಡಿಸಿದ್ದು... ಮುಂತಾದ ಸಣ್ಣಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿದರೆ ಸ್ಕೂಟಿ ಪೆಪ್‌ನ ವಿನ್ಯಾಸದಲ್ಲಿ ತುಂಬಾ ಬದಲಾವಣೆಗಳನ್ನೇನೂ ಸಂಸ್ಥೆ ಮಾಡಿಲ್ಲ. ಬದಲಿಗೆ, ಟ್ಯಾಂಕ್‌ ಸಾಮರ್ಥ್ಯವು ಹಿಂದಿನ ಐದು ಲೀಟರ್‌ನಿಂದ 4.2 ಲೀಟರ್‌ಗೆ ಇಳಿಕೆಯಾಗಿದೆ. ಫ್ಯುಯೆಲ್‌ ಇಂಜೆಕ್ಷನ್‌ ತಂತ್ರಜ್ಞಾನ ಬಳಸಿದ್ದರಿಂದ ‘ಚಾಕ್‌’ ಅನ್ನು ತೆಗೆದುಹಾಕಲಾಗಿದೆ. ಎಸ್‌ಬಿಎಸ್‌ ತಂತ್ರಜ್ಞಾನದ ಡ್ರಂ ಬ್ರೇಕ್‌ಗಳಿವೆ. ಸ್ಕೂಟರ್‌ನ ಭಾರವು 95 ಕೆ.ಜಿಯಿಂದ 93 ಕೆ.ಜಿಗೆ ಇಳಿಕೆಯಾಗಿದೆ. ಹಳೆಯ ಮಾದರಿಗೆ ಹೋಲಿಸಿದರೆ ಹೊಸ ಮಾದರಿಯ ಬೆಲೆಯಲ್ಲಿ ₹ 8,000ದಿಂದ ₹9,000 ದಷ್ಟು ಏರಿಕೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.