ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೈಡ್ರೋಜನ್‌ ಇಂಧನ ಚಾಲಿತ ಟ್ರಕ್‌ ಅನಾವರಣ

Last Updated 6 ಫೆಬ್ರುವರಿ 2023, 19:04 IST
ಅಕ್ಷರ ಗಾತ್ರ

ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಅಶೋಕ್ ಲೇಲ್ಯಾಂಡ್ ಕಂಪನಿಗಳು ಒಟ್ಟಾಗಿ, ಹೈಡ್ರೋಜನ್ ಇಂಧನದಿಂದ ಚಲಿಸುವ ಭಾರಿ ಸಾಮರ್ಥ್ಯದ ಟ್ರಕ್‌ ಅನಾವರಣಗೊಳಿಸಿವೆ. ಇಲ್ಲಿ ಸೋಮವಾರ ಆರಂಭವಾದ ಇಂಧನ ಸಪ್ತಾಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಟ್ರಕ್‌ ಅನಾವರಣ ಮಾಡಿದರು.

ಅಶೋಕ್‌ ಲೇಲ್ಯಾಂಡ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ಒಂದು ವರ್ಷದಿಂದ ಈ ಟ್ರಕ್‌ ಅಭಿವೃದ್ಧಿಯಲ್ಲಿ ತೊಡಗಿವೆ. 2022ರ ಆಗಸ್ಟ್‌ನಿಂದ ಇದು ಪ್ರಾಯೋಗಿಕ ಬಳಕೆಯಲ್ಲಿ ಇತ್ತು. ಈ ಟ್ರಕ್‌ನ ಒಟ್ಟಾರೆ ವಿನ್ಯಾಸವು ಡೀಸೆಲ್‌ ಚಾಲಿತ ಟ್ರಕ್‌ಗಳಿಗೆ ಹೋಲುವಂತಿದೆ ಎಂದು ಪ್ರಕಟಣೆ ತಿಳಿಸಿದೆ.

‘ಸುಸ್ಥಿರ ಹಾಗೂ ಪರಿಸರ ಪೂರಕ ವಾಹನ ತಯಾರಿಕಾ ವಲಯದಲ್ಲಿ ನಾಯಕತ್ವದ ಸ್ಥಾನ ಪಡೆಯುವುದು ನಮ್ಮ ಗುರಿ’ ಎಂದು ಅಶೋಕ್‌ ಲೇಲ್ಯಾಂಡ್ ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ತಾಂತ್ರಿಕ ಅಧಿಕಾರಿ ಡಾ.ಎನ್. ಸರವಣನ್ ಹೇಳಿದ್ದಾರೆ.

ಹೈಡ್ರೋಜನ್ ಚಾಲಿತ ಟ್ರಕ್‌ ಹೊರಸೂಸುವ ಇಂಗಾಲದ ಪ್ರಮಾಣವು ತೀರಾ ನಗಣ್ಯ. ಈ ಟ್ರಕ್‌ನ ಸಾಮರ್ಥ್ಯವು ಸಾಂಪ್ರದಾಯಿಕ ಎಂಜಿನ್ ಹೊಂದಿರುವ ಟ್ರಕ್‌ಗಳಿಗೆ ಸರಿಸಮವಾಗಿರುತ್ತದೆ. ಅಲ್ಲದೆ, ಹೈಡ್ರೋಜನ್ ಚಾಲಿತ ಟ್ರಕ್‌ಗಳ ನಿರ್ವಹಣಾ ವೆಚ್ಚ ಕಡಿಮೆ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ ಹೇಳಿದೆ.

ರಿಲಯನ್ಸ್ ಕಂಪನಿಯು ಮುಂದಿನ ದಿನಗಳಲ್ಲಿ ಭಾರಿ ಸಾಮರ್ಥ್ಯದ ಟ್ರಕ್‌ಗಳಲ್ಲಿ ಹೈಡ್ರೋಜನ್ ಚಾಲಿತ ಎಂಜಿನ್ ಬಳಕೆಯನ್ನು ವ್ಯಾಪಕವಾಗಿ ಪರೀಕ್ಷೆಗೆ ಒಳಪಡಿಸಲಿದೆ. ನಂತರದಲ್ಲಿ ಈ ಟ್ರಕ್‌ಗಳನ್ನು ರಿಲಯನ್ಸ್ ಕಂಪನಿಯು ತನ್ನಲ್ಲಿ ಬಳಕೆಗೆ ತೆಗೆದುಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT