ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್‌ ವಿಮೆ ಖರೀದಿ ಹೇಗೆ?

Last Updated 17 ಮೇ 2019, 11:56 IST
ಅಕ್ಷರ ಗಾತ್ರ

ಕಾರು ಕೊಳ್ಳುವ ಖುಷಿಯ ಜೊತೆಗೆ ಎಂತಹ ಕಾರು ಖರೀದಿಸಬೇಕು ಎಂಬ ಸವಾಲೂ ಎದುರಾಗುತ್ತದೆ. ಕಾರಿನ ವಿಮೆ ಖರೀದಿಯೂ ಒಂದು ರೀತಿಯ ಸವಾಲೇ ಸರಿ. ಎಂತಹ ವಿಮೆ ಖರೀದಿಸಬೇಕು ಎಂದು ಕಾರು ಮಾರಾಟಗಾರರು ಒಂದಿಷ್ಟು ಸಲಹೆಗಳನ್ನು ನಿಮ್ಮ ಮುಂದಿಡುತ್ತಾರೆ. ಅದು ಇಷ್ಟಕ್ಕೇ ಮುಗಿಯುವುದಿಲ್ಲ. ನಿಮ್ಮ ಅಕ್ಕಪಕ್ಕದ ಮನೆಯವರು, ಸ್ನೇಹಿತರು, ಸಂಬಂಧಿಕರೂ ತಮಗೆ ತಿಳಿದ ಒಂದಿಷ್ಟು ಸಲಹೆಗಳನ್ನು ನಿಮ್ಮ ತಲೆಗೆ ತುರುಕಲು ಯತ್ನಿಸುತ್ತಾರೆ.

ಹಾಗಾದರೆ ಯಾರ ಮಾತು ಹಿತ. ಎಲ್ಲ ರೀತಿಯ ವಿಮೆ ಪಾಲಿಸಿಗಳನ್ನು ಸಂಪೂರ್ಣ ಮೌಲ್ಯಮಾಪನ ಮಾಡಬೇಕು. ಎಲ್ಲರ ಸಲಹೆಗಳನ್ನೂ ಪರಿಗಣಿಸಿ, ನಿಮಗೆ ಸರಿ ಎನಿಸಿದ ಅಂಶಗಳನ್ನೂ ಅಳೆದೂ ತೂಗಿ, ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾದವರು ನೀವೇ. ಏಕೆಂದರೆ ಕಾರು ವಿಮೆಯನ್ನು ಖರೀದಿಸುವವರು ನೀವೇ. ಸರಿ, ಹಾಗಾದರೆ ಇದನ್ನು ಆರಂಭಿಸುವುದು ಹೇಗೆ. ಮೊದಲ ಬಾರಿಗೆ ಕಾರು ವಿಮೆ ಖರೀದಿಸುವವರಿಗೆ ಇಲ್ಲಿ ಒಂದಿಷ್ಟು ಸಲಹೆಗಳಿವೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರೀತಿಯ ಪಾಲಿಸಿಗಳ ಬಗ್ಗೆ ಮೊದಲು ವಿವರವಾಗಿ ತಿಳಿದುಕೊಳ್ಳುವುದು ಅಗತ್ಯ.ಮೊದಲ ಕಾರು ವಿಮೆ ಖರೀದಿಗೆ ಮುನ್ನ ಪ್ರಾಥಮಿಕ ಮಾಹಿತಿಯನ್ನು ಅರಿತಿರಬೇಕು. ಎರಡು ರೀತಿಯ ಕಾರು ವಿಮೆ ಲಭ್ಯ ಇರುತ್ತವೆ. ಥರ್ಡ್‍‍ಪಾರ್ಟಿ ಇನ್ಶೂರೆನ್ಸ್ ಹಾಗೂ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್.

ಅಪಘಾತದ ಸಂದರ್ಭದಲ್ಲಿ ಮೂರನೇ ವ್ಯಕ್ತಿಗೆ (ಥರ್ಡ್ ಪಾರ್ಟಿ) ಆಗಿರುವ ದೈಹಿಕ ಗಾಯ, ವಾಹನಕ್ಕೆ ಆಗಿರುವ ಹಾನಿ ಹಾಗೂ ಪಾಲಿಸಿದಾರರಿಗೆ ಅಪಘಾತ ವಿಮೆ ಪರಿಹಾರವನ್ನು ‘ಥರ್ಡ್ ಪಾರ್ಟಿ ಮೋಟಾರು ವಿಮಾ ಪಾಲಿಸಿ’ ನೀಡುತ್ತದೆ.

ಪಾಲಿಸಿದಾರರಿಗೆ ಆಗುವ ಹಾನಿ ಹಾಗೂ ಅವರ ವಾಹನಕ್ಕೆ ಆಗಿರುವ ಹಾನಿಗೆ ನೀಡುವ ಪರಿಹಾರವು ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಎಂದೆನಿಸಿಕೊಳ್ಳುತ್ತದೆ. ವಿಮೆಯು ಎಷ್ಟು ಪ್ರಮಾಣದಲ್ಲಿ ಕವರೇಜ್ ನೀಡಬೇಕು ಎಂಬುದನ್ನು ನೀವು ನಿರ್ಧರಿಸಬೇಕು.

ಯಾವ ರೀತಿಯ ಕಾರನ್ನು ನೀವು ಖರೀದಿಸುತ್ತಿದ್ದೀರಿ, ಅದು ಹೊಸದೇ ಅಥವಾ ಬಳಕೆ ಮಾಡಿದ್ದೇ, ನಿಮ್ಮ ಕುಟುಂಬದಲ್ಲಿ ಎಷ್ಟು ಜನರಿದ್ದಾರೆ ಎಂಬ ಅಂಶಗಳ ಮೇಲೆ ವಿಮೆ ಖರೀದಿಯೂ ನಿರ್ಧಾರವಾಗಬೇಕು.

ವಿವಿಧ ಆ್ಯಡ್–ಆನ್‌ಗಳ ಬಗ್ಗೆ ತಿಳಿದುಕೊಳ್ಳಿ
ವಾಹನಕ್ಕೆ ಹೆಚ್ಚುವರಿ ರಕ್ಷಣೆ ಒದಗಿಸುವ ‘ಆ್ಯಡ್ ಆನ್‌’ಗಳನ್ನು ಬೇಸಿಕ್ ಪಾಲಿಸಿಗಳು ಹೊಂದಿರದೇ ಇರಬಹುದು. ಆ್ಯಡ್‌ ಆನ್‌ಗಳ ಅತ್ಯಂತ ಅನುಕೂಲಕರ ವೈಶಿಷ್ಟ್ಯವೆಂದರೆ, ನಿಮಗೆ ಬೇಡವಾದದ್ದನ್ನು ಕೈಬಿಡಬಹುದು. ಹೀಗಾಗಿ ಅನಗತ್ಯವಾಗಿ ಹಣವನ್ನು ಪಾವತಿಸುವ ಅಗತ್ಯವಿರುವುದಿಲ್ಲ. ಕೆಲವು ಆ್ಯಡ್‌–ಆನ್‌ ಕೊಟ್ಟ ಹಣಕ್ಕೆ ಸೂಕ್ತ ಸೌಲಭ್ಯ ನೀಡುತ್ತವೆ. ಕಾರಿನ ಎಂಜಿನ್ ರಕ್ಷಣೆ ಹಾಗೂ ನೋ ಕ್ಲೇಮ್ ಬೋನಸ್‌ಗಳು ಹೊಸ ಚಾಲಕರಿಗೆ ಹೆಚ್ಚು ಉಪಯುಕ್ತ.

ಆನ್‌ಲೈನ್‌ನಲ್ಲಿ ಖರೀದಿ
ಎಂತಹ ವಿಮೆ ಖರೀದಿಸಬೇಕು ಎಂದು ನೀವು ಒಮ್ಮೆ ನಿರ್ಧರಿಸಿದ ಬಳಿಕ ಅದನ್ನು ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಖರೀದಿಸಬಹುದು. ಕ್ಷಣಮಾತ್ರದಲ್ಲಿ ಅದು ನಿಮಗೆ ಲಭ್ಯವಾಗುತ್ತದೆ. ಅದನ್ನು ಪ್ರಿಂಟ್ ಔಟ್ ತೆಗೆದುಕೊಂಡು ಇಟ್ಟುಕೊಳ್ಳಬಹುದು.

ನೋ ಕ್ಲೇಮ್ ಬೋನಸ್
ಕಾರು ವಿಮೆ ಹೊಂದಿರುವ ಪ್ರತಿಯೊಬ್ಬರೂ ನೋ ಕ್ಲೇಮ್ ಬೋನಸ್ (ಎನ್‌ಸಿಬಿ) ಬಗ್ಗೆ ತಿಳಿದುಕೊಳ್ಳಬೇಕಾದುದು ಅಗತ್ಯ. ಹಿಂದಿನ ವರ್ಷದಲ್ಲಿ ಯಾವುದೇ ಕ್ಲೇಮ್ ಮಾಡದಿದ್ದಲ್ಲಿ, ವಿಮೆ ನವೀಕರಣದ ವೇಳೆ ಡಿಸ್ಕೌಂಟ್ ಸಿಗುವಂತೆ ಇದು ಮಾಡುತ್ತದೆ. ಒಂದು ಅಥವಾ ಅದಕ್ಕಿಂತ ಹೆಚ್ಚಿನ ವರ್ಷ ಕ್ಲೇಮ್ ಮಾಡದಿದ್ದಲ್ಲಿ, ನವೀಕರಣದಲ್ಲಿ ಶೇ 20ರಿಂದ ಶೇ 50ರವರೆಗೆ ಡಿಸ್ಕೌಂಟ್ ದೊರೆಯುತ್ತದೆ. ಒಳ್ಳೆಯ ಚಾಲನೆಗೆ ಇದು ಕಂಪನಿ ನೀಡುವ ಉಡುಗೊರೆ.

ಕಾರು ವಿಮೆ ಕೊಳ್ಳುವ ಮೊದಲು ನಿಯಮ ಮತ್ತು ನಿಬಂಧನೆಗಳನ್ನು ಸಂಪೂರ್ಣವಾಗಿ ಓದಬೇಕು. ಪಾವತಿಸಬೇಕಾದ ಹಣ, ವಿಮೆ ಅವಧಿ, ಕವರೇಜ್‌ಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಮೇಲೆ ಹೇಳಿದ ವಿಷಯಗಳ ಹೊರತಾಗಿ,ಇನ್ನಿತರ ದೃಷ್ಟಿಕೋನಗಳಲ್ಲಿಯೂ ಆಲೋಚಿಸಿ ವಿಮೆ ಖರೀದಿಸಿ. ಉದಾಹರಣೆಗೆ, ಯಾವ ವಿಷಯಗಳು ವಿಮೆಗೆ ಒಳಪಡುವುದಿಲ್ಲ ಎಂಬುದನ್ನೂ ತಿಳಿದುಕೊಳ್ಳಬೇಕು.

ನಿಮ್ಮ ಅಗತ್ಯಗಳನ್ನು ಪೂರೈಸಬಲ್ಲ ಆಯ್ಕೆಗಳಿರುವ ಪಾಲಿಸಿಯನ್ನು ಖರೀದಿಸಿದರೆ ಮಾತ್ರ ನಿಮಗೆ ಲಾಭವಾಗುತ್ತದೆ. ಖರೀದಿಗೆ ಮುನ್ನ ಈ ಬಗ್ಗೆ ನೀವು ಒಂದಿಷ್ಟು ಹೋಂ ವರ್ಕ್ ಮಾಡಿಕೊಂಡಿದ್ದರೆ ಒಳಿತು.

(ಡಿಎಚ್‌ಎಫ್‌ಎಲ್‌ ಜನರಲ್‌ ಇನ್ಶೂರೆನ್ಸ್‌ನ ಭಾಗವಾಗಿರುವ ವಿಮೆ ತಂತ್ರಜ್ಞಾನ ಸಂಸ್ಥೆ COCOದ ಲೇಖನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT