ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಕಂಡಕ್ಟರ್‌ ಚಿಪ್ ಕೊರತೆ: ಪ್ರಯಾಣಿಕ ವಾಹನ ರಿಟೇಲ್‌ ಮಾರಾಟ ಶೇ 10ರಷ್ಟು ಇಳಿಕೆ

Last Updated 7 ಫೆಬ್ರುವರಿ 2022, 11:46 IST
ಅಕ್ಷರ ಗಾತ್ರ

ನವದೆಹಲಿ: ಪ್ರಯಾಣಿಕ ವಾಹನದ ರಿಟೇಲ್‌ ಮಾರಾಟವು 2021ರ ಜನವರಿಗೆ ಹೋಲಿಸಿದರೆ 2022ರ ಜನವರಿಯಲ್ಲಿ ಶೇಕಡ 10ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ವಾಹನ ವಿತರಕರ ಒಕ್ಕೂಟ (ಎಫ್‌ಎಡಿಎ) ಸೋಮವಾರ ತಿಳಿಸಿದೆ.

2021ರ ಜನವರಿಯಲ್ಲಿ 2.87 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟ ಆಗಿದ್ದವು. 2022ರ ಜನವರಿಯಲ್ಲಿ ಇದು 2.58 ಲಕ್ಷಕ್ಕೆ ಇಳಿಕೆ ಆಗಿದೆ.

ಸೆಮಿಕಂಡಕ್ಟರ್‌ ಚಿಪ್‌ ಕೊರತೆಯಿಂದಾಗಿ ಕಂಪನಿಗಳು ನಿರಂತರವಾಗಿ ತಯಾರಿಕಾ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ ಎಂದು ಒಕ್ಕೂಟದ ಅಧ್ಯಕ್ಷ ವಿಂಕೇಶ್‌ ಗುಲಾಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬರುತ್ತಿರುವುದರಿಂದ ವಾಣಿಜ್ಯ ವಾಹನಗಳ ವಿಭಾಗವು ಬೆಳವಣಿಗೆ ಕಾಣಲಿದ್ದು, ಅದರಲ್ಲಿಯೂ ಮುಖ್ಯವಾಗಿ ಎಚ್‌ಸಿವಿ ವಿಭಾಗವು ಉತ್ತಮ ಬೆಳವಣಿಗೆ ಕಾಣಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚು ವೆಚ್ಚ ಮಾಡುತ್ತಿರುವುದರಿಂದ ಒಟ್ಟಾರೆಯಾಗಿ ವಾಣಿಜ್ಯ ವಾಹನಗಳ ಬೇಡಿಕೆಯು ಹೆಚ್ಚಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

25 ಸಾವಿರ ಕಿಲೋ ಮೀಟರ್‌ ಉದ್ದದ ಹೊಸ ಹೆದ್ದಾರಿ ನಿರ್ಮಾಣ ಮಾಡುವ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದಾಗಿ ಮೂಲಸೌಕರ್ಯ ಯೋಜನೆಗಳ ಮೇಲಿನ ವೆಚ್ಚಕ್ಕೆ ಇನ್ನಷ್ಟು ಉತ್ತೇಜನ ಸಿಗಲಿದ್ದು, ವಾಣಿಜ್ಯ ವಾಹನಗಳ ಮಾರಾಟವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಗುಲಾಟಿ ತಿಳಿಸಿದ್ದಾರೆ.

ದ್ವಿಚಕ್ರ ಮತ್ತು ಎಂಟ್ರಿ ಲೆವೆಲ್‌ನ ಪ್ರಯಾಣಿಕ ವಾಹನಗಳ ಮಾರಾಟಕ್ಕೆ ಗ್ರಾಮೀಣ ಪ್ರದೇಶವು ಮುಖ್ಯವಾಗಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ ₹ 2.37 ಲಕ್ಷ ಕೋಟಿ ತೆಗೆದಿರಿಸುವುದಾಗಿ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈ ನಿರ್ಧಾರದಿಂದಾಗಿ ದ್ವಿಚಕ್ರ, ಟ್ರ್ಯಾಕ್ಟರ್‌ ಮತ್ತು ಎಂಟ್ರಿ ಲೆವೆಲ್‌ನ ಪ್ರಯಾಣಿಕ ವಾಹನ ಮಾರಾಟವು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಮಾರಾಟದ ವಿವರ

ವಾಹನ;2021 ಜನವರಿ;2022 ಜನವರಿ;ಇಳಿಕೆ/ಏರಿಕೆ

ಪ್ರಯಾಣಿಕ ವಾಹನ;2.87 ಲಕ್ಷ;2.58 ಲಕ್ಷ;10.12% ಇಳಿಕೆ

ದ್ವಿಚಕ್ರ ವಾಹನ;11.75 ಲಕ್ಷ;10.17 ಲಕ್ಷ;13.44% ಇಳಿಕೆ

ಟ್ರ್ಯಾಕ್ಟರ್‌;61,485;55,421;9.86% ಇಳಿಕೆ

ತ್ರಿಚಕ್ರ;31,162;40,449;29.8% ಏರಿಕೆ

ವಾಣಿಜ್ಯ ವಾಹನ;56,227;67,763;20.52% ಏರಿಕೆ

ಒಟ್ಟಾರೆ ಮಾರಾಟ;16.12 ಲಕ್ಷ;14.39 ಲಕ್ಷ;10.69% ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT