ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌–4 ವಾಹನ ಮಾರಾಟ: ಲಾಕ್‌ಡೌನ್ ತೆರವು ನಂತರ 10 ದಿನಗಳ ಅವಕಾಶ ನೀಡಿದ ಸುಪ್ರೀಂ

Last Updated 27 ಮಾರ್ಚ್ 2020, 12:56 IST
ಅಕ್ಷರ ಗಾತ್ರ

ನವದೆಹಲಿ: ಏಪ್ರಿಲ್‌ನಿಂದ ಬಿಎಸ್‌–6 ಗುಣಮಟ್ಟದ ವಾಹನ ಮಾರಾಟ ಕಡ್ಡಾಯಗೊಳಿಸಿ ಈ ಹಿಂದೆಯೇ ಆದೇಶಿಸಲಾಗಿದೆ. ಆದರೆ, ಕೊರೊನಾ ವೈರಸ್‌ ಸೋಂಕು ತಡೆಗಾಗಿ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ಬಿಎಸ್‌–4 ಕಾರುಗಳು ಮಾರಾಟವಾಗದೇ ಉಳಿದಿವೆ. ಲಾಕ್‌ಡೌನ್‌ ಮುಕ್ತಾಯಗೊಂಡ ನಂತರ 10 ದಿನಗಳ ವರೆಗೂ ಬಿಎಸ್‌–4 ವಾಹನಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅವಕಾಶ ನೀಡಿದೆ.

ವಾಹನ ವಿತರಕರ ಸಂಘದ ಒಕ್ಕೂಟದ (ಎಫ್‌ಎಡಿಎ) ಪ್ರಕಾರ, ದೇಶದಲ್ಲಿ ಮಾರಾಟವಾಗದೇ ಉಳಿದಿರುವ ಬಿಎಸ್‌–4 ಕಾರುಗಳ ಸಂಖ್ಯೆ 17,250 ಹಾಗೂ ವಾಣಿಜ್ಯ ಉದ್ದೇಶಿತ ವಾಹನಗಳು 14,000. ಲಾಕ್‌ಡೌನ್‌ ತೆರವುಗೊಂಡ ನಂತರದಲ್ಲಿ 10 ದಿನಗಳ ವರೆಗೂ ಬಿಎಸ್‌–4 ವಾಹನಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಈ ಹಿಂದೆ ಸುಪ್ರೀಂ ಕೋರ್ಟ್‌ ಬಿಎಸ್‌–4 ವಾಹನಗಳ ಮಾರಾಟ ಹಾಗೂ ನೊಂದಣಿಗೆ ಮಾರ್ಚ್ 31 ಅಂತಿಮಗೊಳಿಸಿತ್ತು.

ಸುಪ್ರೀಂ ಕೋರ್ಟ್‌ ಸೂಚನೆಯ ಪ್ರಕಾರ, ಭಾರತದ ಕಾರು ತಯಾರಿಕಾ ಕಂಪನಿಗಳು ಬಿಎಸ್‌–4 ಗುಣಮಟ್ಟದ ಶೇ 10ರಷ್ಟು ವಾಹನಗಳನ್ನು ಮಾತ್ರವೇ ಮಾರಾಟ ಮಾಡಲು ಅವಕಾಶವಿದೆ. ಆದರೆ, ಆದೇಶದಲ್ಲಿ ದೆಹಲಿ–ಎನ್‌ಸಿಆರ್‌ ವಲಯದ ಕುರಿತು ಪ್ರಸ್ತಾಪಿಸಲಾಗಿಲ್ಲ ಎಂದು ವರದಿಯಾಗಿದೆ.

ಲಾಕ್‌ಡೌನ್‌ನಿಂದಾಗಿ ವಾಹನಗಳ ಮಾರಾಟಕ್ಕೆ ತೀವ್ರ ಪೆಟ್ಟು ಬಿದ್ದಿದೆ. ದೇಶದಲ್ಲಿ ಮಾರಾಟವಾಗದೇ ಉಳಿದಿರುವ ಬಿಎಸ್‌–4 ಗುಣಮಟ್ಟದ ದ್ವಿಚಕ್ರ ವಾಹನಗಳ ಸಂಖ್ಯೆ 6,00,000 ದಿಂದ 8,00,000 ಎಂದು ಅಂದಾಜಿಸಲಾಗಿದೆ. ಆ ವಾಹನಗಳ ಒಟ್ಟು ಮೌಲ್ಯ ಸುಮಾರು ₹3,600 ಕೋಟಿ.

ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೊ ಮೊಟೊಕಾರ್ಪ್‌, ಬಿಎಸ್‌–4 ವಾಹನಗಳ ಮಾರಾಟ ಮತ್ತು ನೋಂದಣಿಗೆ ಅಂತಿಮ ಗಡುವು ಮೂರು ತಿಂಗಳ ವರೆಗೂ ವಿಸ್ತರಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT