ನವದೆಹಲಿ: ಬೆಂಗಳೂರು ಸೇರಿ ದೇಶದ 50ಕ್ಕೂ ಹೆಚ್ಚು ನಗರಗಳಲ್ಲಿ ಹೊಸದಾಗಿ 250 ವಿದ್ಯುತ್‌ಚಾಲಿತ ವಾಣಿಜ್ಯ ವಾಹನಗಳ ಚಾರ್ಜಿಂಗ್ ಕೇಂದ್ರ ತೆರೆಯಲು ಟಾಟಾ ಮೋಟರ್ಸ್ ನಿರ್ಧರಿಸಿದೆ.
ಅತಿವೇಗದ ಚಾರ್ಜಿಂಗ್ ಕೇಂದ್ರಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಮತ್ತು ಥಂಡರ್‌ಪ್ಲಸ್ ಸೆಲ್ಯೂಷನ್ಸ್ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಕಂಪನಿಯು ಬುಧವಾರ ತಿಳಿಸಿದೆ.
ದೆಹಲಿ, ಮುಂಬೈ, ಚೆನ್ನೈ, ಪುಣೆ, ಕೊಚ್ಚಿ ಸೇರಿ ಪ್ರಮುಖ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಹೊಸ ಕೇಂದ್ರಗಳ ಸ್ಥಾಪನೆಯೊಂದಿಗೆ ಒಟ್ಟು ಚಾರ್ಜಿಂಗ್ ಕೇಂದ್ರಗಳ ಸಂಖ್ಯೆ 540ಕ್ಕೆ ತಲುಪಲಿದೆ ಎಂದು ತಿಳಿಸಿದೆ.
ಕೇಂದ್ರಗಳಿಗೆ ಅಗತ್ಯವಿರುವ ಹಾರ್ಡ್‌ವೇರ್‌ಗಳನ್ನು ಡೆಲ್ಟಾ ಎಲೆಕ್ಟ್ರಾನಿಕ್ಸ್ ಪೂರೈಸಲಿದೆ. ಥಂಡರ್‌ಪ್ಲಸ್ ಸೆಲ್ಯೂಷನ್ಸ್ ಇವುಗಳನ್ನು ಅಳವಡಿಸುವ ಜೊತೆಗೆ ಕಾರ್ಯಾಚರಣೆ ಮಾಡಲಿದೆ ಎಂದು ಹೇಳಿದೆ.
ದೂರದ ಸ್ಥಳಗಳಿಗೆ ಸರಕು ಸಾಗಣೆಗಾಗಿ ಇ–ಕಾಮರ್ಸ್ ಕಂಪನಿಗಳು, ಪಾರ್ಸಲ್ ಮತ್ತು ಕೊರಿಯರ್ ಸೇವಾದಾತರು ಸೇರಿ ಹಲವು ಕಂಪನಿಗಳು ವಿದ್ಯುತ್‌ಚಾಲಿತ ವಾಣಿಜ್ಯ ವಾಹನಗಳನ್ನು ಹೆಚ್ಚಾಗಿ ಬಳಸುತ್ತವೆ. ಅವರಿಗೆ ಈ ಚಾರ್ಚಿಂಗ್ ಕೇಂದ್ರಗಳಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ ಎಂದು ವಿವರಿಸಿದೆ.