ಭಾರತದಲ್ಲಿ ಉದ್ಯಮ ವಿಸ್ತರಣೆ ಇಲ್ಲ: ಟಿಕೆಎಂ
ಬೆಂಗಳೂರು: ದೇಶದಲ್ಲಿ ವಾಹನ ಉದ್ಯಮದ ಮೇಲೆ ವಿಧಿಸುತ್ತಿರುವ ತೆರಿಗೆ ತೀರಾ ಹೆಚ್ಚು ಎಂದು ಹೇಳಿರುವ ಟೊಯೊಟಾ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಕಂಪನಿ, ‘ಭಾರತದಲ್ಲಿ ನಾವು ನಮ್ಮ ಉದ್ಯಮವನ್ನು ವಿಸ್ತರಿಸುವುದಿಲ್ಲ’ ಎಂದು ಹೇಳಿದೆ. ಆದರೆ, ‘ಈಗಿರುವ ಔದ್ಯಮಿಕ ಚಟುವಟಿಕೆಗಳು ಮುಂದುವರಿಯಲಿವೆ’ ಎಂದು ಸ್ಪಷ್ಟಪಡಿಸಿದೆ.
‘ಸರ್ಕಾರವು ಹೈಬ್ರಿಡ್ ವಾಹನಗಳ ಮೇಲಿನ ತೆರಿಗೆ ಪ್ರಮಾಣವನ್ನು ತೀರಾ ಹೆಚ್ಚಿನ ಮಟ್ಟಕ್ಕೆ ಏರಿಸಿದೆ. ಈ ಪ್ರಮಾಣದ ತೆರಿಗೆ ಸಮರ್ಥನೀಯವಲ್ಲ. ನಾವು ಮೂರನೆಯ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಕೈಹಾಕುವುದಿಲ್ಲ. ಏಕೆಂದರೆ, ನಾವು ಈಗಿರುವ ಘಟಕಗಳ ಸಾಮರ್ಥ್ಯವನ್ನೇ ಪೂರ್ಣವಾಗಿ ಬಳಸಿಕೊಂಡಿಲ್ಲ. ಈಗಿರುವ ತೆರಿಗೆ ಪ್ರಮಾಣದಿಂದಾಗಿ, ಇಷ್ಟು ತೆರಿಗೆ ಒಪ್ಪಿಕೊಳ್ಳಿ, ಇಲ್ಲವೇ ಸುಮ್ಮನಿರಿ ಎಂಬ ಸಂದೇಶ ರವಾನೆ ಆಗುತ್ತಿದೆ’ ಎಂದು ಟಿಕೆಎಂನ ಉಪಾಧ್ಯಕ್ಷ ಶೇಖರ್ ವಿಶ್ವನಾಥನ್ ಹೇಳಿದರು.
‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಈ ತೆರಿಗೆ ಪ್ರಮಾಣದ ಕಾರಣದಿಂದಾಗಿ, ಸರ್ಕಾರದ ಕಡೆಯಿಂದ ನಮಗೆ ‘ನೀವು ಬೇಡ’ ಎಂಬ ಸಂದೇಶ ರವಾನೆ ಆಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ಹೈಬ್ರಿಡ್ ವಾಹನಗಳ ವಿಚಾರದಲ್ಲಿ ಯಾವುದೇ ಚರ್ಚೆ ಇಲ್ಲದೆ, ಯಾವುದೇ ಮುನ್ಸೂಚನೆ ಕೂಡ ಇಲ್ಲದೆ ತೆರಿಗೆ ಪ್ರಮಾಣವನ್ನು ಜಾಸ್ತಿ ಮಾಡಲಾಯಿತು. ಹೈಬ್ರಿಡ್ ವಾಹನಗಳಿಗೆ ಒಟ್ಟು ಶೇಕಡ 43ರಷ್ಟು ತೆರಿಗೆ ಪಾವತಿ ಮಾಡಬೇಕು’ ಎಂದು ವಿವರಿಸಿದರು.
ಸರ್ಕಾರವು ಮೊದಲಿನ ಹೆಜ್ಜೆಯಾಗಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ) ಪೂರ್ವದ ಮಟ್ಟಕ್ಕೆ ತೆರಿಗೆ ನಿಗದಿ ಮಾಡಬೇಕು. ಅದಾದ ನಂತರ, ತೆರಿಗೆಯನ್ನು ಇನ್ನೂ ಶೇಕಡ 10ರಷ್ಟು ತಗ್ಗಿಸಬೇಕು. ಹೈಬ್ರಿಡ್ ವಾಹನಗಳ ಮೇಲಿನ ತೆರಿಗೆಯನ್ನು ವಿದ್ಯುತ್ ಚಾಲಿತ (ಇ.ವಿ.) ವಾಹನಗಳಿಗೆ ವಿಧಿಸುತ್ತಿರುವ ತೆರಿಗೆ ಮಟ್ಟಕ್ಕೆ ತರಬೇಕು. ಹೈಬ್ರಿಡ್ ವಾಹನಗಳೂ ಒಂದು ಬಗೆಯಲ್ಲಿ ವಿದ್ಯುತ್ ಚಾಲಿತ ವಾಹನಗಳೇ ಆಗಿವೆ ಎಂದು ಅವರು ಹೇಳಿದರು.
ಹೈಬ್ರಿಡ್ ಅಲ್ಲದ, ಇತರ ವಾಹನಗಳ ಮೇಲಿನ ತೆರಿಗೆಯನ್ನೂ ತಗ್ಗಿಸಬೇಕು ಎಂದು ಅವರು ಒತ್ತಾಯಿಸಿದರು. ಹೈಬ್ರಿಡ್ ಅಲ್ಲದ ವಾಹನಗಳ ಮೇಲಿನ ತೆರಿಗೆ ಪ್ರಮಾಣ ಈಗ ಶೇ 28ರಷ್ಟು ಇದೆ. ಇದು ಬಹಳ ಹೆಚ್ಚಾಯಿತು. ಇದನ್ನು ಕೂಡ ಶೇ 18ರಷ್ಟಕ್ಕೆ ಇಳಿಸಬೇಕು. ಇದರಿಂದ ಗ್ರಾಹಕರಿಗೇ ಲಾಭ ಆಗುತ್ತದೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.