ಶುಕ್ರವಾರ, ಜೂಲೈ 10, 2020
22 °C
ವಯನಾಡು: ಪ್ರಚಾರ ಭಾಷಣದಲ್ಲಿ ಬಂಡೀಪುರ ರಾಷ್ಟ್ರೀಯ ಹೆದ್ದಾರಿ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ

ರಾತ್ರಿ ಸಂಚಾರ ನಿಷೇಧ ಚರ್ಚೆ ಮತ್ತೆ ಮುನ್ನೆಲೆಗೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವಾಹನಗಳ ಸಂಚಾರ ನಿಷೇಧ ಬಿಕ್ಕಟ್ಟನ್ನು ಪರಿಶೀಲಿಸುವುದಾಗಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಯನಾಡಿನಲ್ಲಿ ಇತ್ತೀಚೆಗೆ ಹೇಳಿರುವುದು ರಾತ್ರಿ ನಿಷೇಧ ಸಂಚಾರಕ್ಕೆ ಸಂಬಂಧಿಸಿದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. 

ನಾಲ್ಕೈದು ತಿಂಗಳ ಹಿಂದೆ ಕೇಂದ್ರ ಸರ್ಕಾರ, ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಾಡಿದ್ದಾಗ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಜ್ಯದ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳೂ ನಡೆದಿದ್ದವು. ಕೊನೆಗೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ರಾತ್ರಿ ವಾಹನಗಳ ಸಂಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಈಗ ರಾಹುಲ್‌ ಗಾಂಧಿ ಹೇಳಿಕೆಯಿಂದ ಈ ವಿಚಾರದ ಬಗ್ಗೆ ಚರ್ಚೆ ಆರಂಭವಾಗಿದೆ. ಪರಿಸರಪ್ರೇಮಿಗಳು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಮಣಿದು ರಾಹುಲ್‌ ಗಾಂಧಿ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ವಯನಾಡಿನ ಪರಿಸರಪ್ರೇಮಿಗಳು ಹೇಳಿದ್ದಾರೆ. ಜಿಲ್ಲೆಯಲ್ಲೂ ‌ವನ್ಯಜೀವಿ ತಜ್ಞರು, ಪರಿಸರ ವಾದಿಗಳು ಹೇಳಿಕೆಯನ್ನು ವಿರೋಧಿಸಿದ್ದಾರೆ. ಬಂಡೀಪುರ ರಾತ್ರಿ ಸಂಚಾರ ವಿಷಯವನ್ನು ರಾಜಕೀಯಕ್ಕೆ ಬಳಸಬಾರದು. ವನ್ಯಜೀವಿಗಳ ಹಿತದೃಷ್ಟಿಯಿಂದ ನಿಷೇಧ ಮುಂದುವರಿಯಬೇಕು ಎಂದು ಅವರು ಹೇಳಿದ್ದಾರೆ.

‘ರಾಹುಲ್‌ ಗಾಂಧಿ ಅವರ ಹೇಳಿಕೆ ನೋಡಿದರೆ ಅವರಿಗೆ ಪರಿಸರ ಕಾಳಜಿ ಇದೆ ಎಂದೆನಿಸುವುದಿಲ್ಲ. ಮತಗಳಿಗಾಗಿ ಈ ರೀತಿಯ ಹೇಳಿಕೆಗಳನ್ನು ಯಾರೂ ನೀಡಬಾರದು. ರಾತ್ರಿ ಸಂಚಾರ ನಿಷೇಧದಿಂದ ಪ್ರಾಣಿಗಳಿಗೆ, ಪರಿಸರಕ್ಕೆ ಅನುಕೂಲವಾಗಿದೆ’ ಎಂದು ಚಾಮರಾಜನಗರದ ಪರಿಸರಪ್ರೇಮಿ ಸಿ.ಎಂ.ವೆಂಕಟೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವ ಬಗ್ಗೆ ಯಾವ ರಾಜಕಾರಣಿಯೂ ಯೋಚನೆ ಮಾಡಬಾರದು. ಚುನಾವಣೆಗೆ ನಿಂತಿರುವುದರಿಂದ ರಾಹುಲ್‌ ಅವರು ಕೇರಳ ಪರವಾಗಿ ವಾದ ಮಾಡಬಹುದು. ಆದರೆ, ಪರಿಸರದ ವಿಚಾರದಲ್ಲಿ ಈ ರೀತಿ ಮಾಡಬಾರದು. ರಾತ್ರಿ ಸಂಚಾರಕ್ಕೆ ಅವಕಾಶ ನೀಡಿದರೆ ಅಥವಾ ಮೇಲ್ಸೇತುವೆ ನಿರ್ಮಿಸಿದರೆ ಅದರಿಂದ ನೈಸರ್ಗಿಕ ಸಂಪತ್ತಿಗೆ ನಷ್ಟವಾಗುತ್ತದೆ’ ಎಂದು ಅವರು ಹೇಳಿದರು.

ನಿವೃತ್ತ ಅರಣ್ಯಾಧಿಕಾರಿ ಹಾಗೂ ಪರಿಸರವಾದಿ ಚಿನ್ನಸ್ವಾಮಿ ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 

‘ರಾಹುಲ್‌ ಗಾಂಧಿ ಅವರು ಈಗ ವಯನಾಡಿನಲ್ಲಿ ಚುನಾವಣೆಗೆ ನಿಂತಿದ್ದಾರೆ. ಅವರಿಗೆ ಮತಗಳು ಬೇಕಾಗಿವೆ. ಹಾಗಾಗಿ, ಕೇರಳ ಪರವಾಗಿ ಹೇಳಿಕೆ ನೀಡಿದ್ದಾರೆ. ರಾಹುಲ್ ಅವರಾಗಲಿ, ನರೇಂದ್ರ ಮೋದಿ ಅವರಾಗಲಿ ಬಂಡೀಪುರ ರಾತ್ರಿ ಸಂಚಾರ ನಿಷೇಧ ವಿಷಯದಲ್ಲಿ ತಲೆ ಹಾಕಬಾರದು. ಮುಂದೆಯೂ ಯಥಾಸ್ಥಿತಿ ಕಾಪಾಡಬೇಕು’ ಎಂದು ಚಿನ್ನಸ್ವಾಮಿ ಹೇಳಿದರು.

ಕಳೆದ ಬುಧವಾರ ವಯನಾಡಿನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ ಅವರು, ‘ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧದಿಂದ ಇಲ್ಲಿನ ಜನರಿಗೆ ಆಗುತ್ತಿರುವ ಕಷ್ಟದ ಅರಿವು ಇದೆ’ ಎಂದು ಹೇಳಿದ್ದರು.

ಜೊತೆಗೆ, ‘ಪರಿಸರ ಮತ್ತು ಅಭಿವೃದ್ಧಿಯ ನಡುವಿನ ಸಂಘರ್ಷದ ಬಗ್ಗೆಯೂ ತಿಳಿದಿದೆ. ಎಲ್ಲ ಬಿಕ್ಕಟ್ಟುಗಳಿಗೂ ಪರಿಹಾರ ಇದ್ದೇ ಇದೆ ಎಂದು ನಾನು ನಂಬಿದ್ದೇನೆ’ ಎಂದೂ ಹೇಳಿದ್ದರು.

ಪಟ್ಟು ಬಿಡದ ಕೇರಳದಿಂದ ಶತಪ್ರಯತ್ನ

ಬಂಡೀಪುರದಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ (67, 212) ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಇದನ್ನು 2009ರಲ್ಲಿ ರಾಜ್ಯ ಹೈಕೋರ್ಟ್‌ ‌ಎತ್ತಿ ಹಿಡಿದಿತ್ತು.

ಕೇರಳ ಸರ್ಕಾರ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇದು ಇನ್ನೂ ವಿಚಾರಣೆಯ ಹಂತದಲ್ಲಿದೆ. 

ಅಂದಿನಿಂದ ಇಂದಿನವರೆಗೂ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸಲು ಕೇರಳ ಸರ್ಕಾರ ಪ್ರಯತ್ನಿಸುತ್ತಲೇ ಇದೆ. ಕರ್ನಾಟಕದ ಸರ್ಕಾರದ ಮೇಲೆ, ಕೇಂದ್ರ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಲೇ ಇದೆ. ಇತ್ತೀಚೆಗೆ ಮಂಡಿಸಲಾಗಿರುವ ರಾಜ್ಯ ಬಜೆಟ್‌ನಲ್ಲಿ ಬಂಡೀಪುರ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಿಸಲು ಹಣವನ್ನೂ ಅದು ಮೀಸಲಿಟ್ಟಿದೆ. 

ಕಳೆದ ವಾರವೂ ಸ್ಥಳೀಯ ಕಾಂಗ್ರೆಸ್‌ ನಾಯಕರು ಇದೇ ವಿಚಾರವನ್ನು ರಾಹುಲ್‌ ಗಾಂಧಿ ಅವರಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗಿದೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು