ಮಂಗಳವಾರ, ಮೇ 18, 2021
24 °C
ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮದ ದುಃಸ್ಥಿತಿ; ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ

ಕನಿಷ್ಠ ಮೂಲಸೌಕರ್ಯ‌ ವಂಚಿತ ದೊಡ್ಡಣೆ ಗ್ರಾಮ

ಜಿ.ಪ್ರದೀಪ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ, ಕಾಡಂಚಿನಲ್ಲಿರುವ ದೊಡ್ಡಣೆ ಗ್ರಾಮ ಮೂಲಸೌಕರ್ಯಗಳಿಂದ ವಂಚಿತವಾಗಿದೆ.

ಕುಡಿಯುವ ನೀರು, ರಸ್ತೆ, ಆರೋಗ್ಯಸೇವೆ ಇನ್ನಿತರ ಸರ್ಕಾರಿ ಸೌಲಭ್ಯಗಳು ಇಲ್ಲಿನ ಜನರಿಗೆ ಸಿಗುತ್ತಿಲ್ಲ. ಪಡಿತರ ಹಾಗೂ ಆರೋಗ್ಯ ಸೇವೆ ಪಡೆಯಲು 15ರಿಂದ 20 ಕಿ.ಮೀ ದೂರದವರೆಗೆ ಕಾಡು ಹಾದಿಯಲ್ಲಿ ಸಾಗಬೇಕಾಗದ ದುಃಸ್ಥಿಯಲ್ಲಿ ಗ್ರಾಮಸ್ಥರು ಇದ್ದಾರೆ.

ಅನಾರೋಗ್ಯ ಕಾಡಿದ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ‌ಡೋಲಿಯಲ್ಲಿ ಕಿಲೋಮೀಟರ್‌ ಗಟ್ಟ‌ಲೆ ಹೊತ್ತೊಯ್ಯಬೇಕಾದ ಸ್ಥಿತಿ ಇವರದ್ದು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾಗಲಿ, ಅಧಿಕಾರಿಗಳಾಗಲಿ ತಮ್ಮ ಕಷ್ಟಗಳ ಬಗ್ಗೆ ಗಮನಹರಿಸುತ್ತಿಲ್ಲ ಎಂಬುದು ಇಲ್ಲಿನ ಜನರ ದೂರು.

‘ಹಲವು ವರ್ಷಗಳಿಂದ ನಮ್ಮ ಗ್ರಾಮದ ಸ್ಥಿತಿ ಇದೇ ರೀತಿ ಇದೆ. ಕುಡಿಯುವ ನೀರಿನ ವ್ಯವಸ್ಥೆ, ಉತ್ತಮವಾದ ರಸ್ತೆ ಹಾಗೂ ಮನೆಗಳ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ನಮ್ಮ ಕುಂದುಕೊರತಗಳ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅದಿಕಾರಿ ಹಾಗೂ ಹನೂರು ಶಾಸಕ ಆರ್‌.ನರೇಂದ್ರ ಅವರಿಗೆ ಮನವಿ ಮಾಡಿ ವರ್ಷಗಳೇ ಸಂದಿವೆ. ಆದರೆ, ಏನೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥ ಮಾದೇವ್‌ ಅವರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು. 

ಬಾರದ ಅಂಗನವಾಡಿ ಕಾರ್ಯಕರ್ತೆಯರು: ‘ರೋಗಿಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಲು ಡೋಲಿ ಮೂಲಕ ತೆಗೆದುಕೊಂಡು ಹೋಗುವಾಗ ದಾರಿ ಮಧ್ಯೆಯಲ್ಲಿ ಮೃತಪಟ್ಟ ನಿದರ್ಶನಗಳೂ ಇವೆ. ಒಂದು ತಿಂಗಳಿನಿಂದ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಕ್ಕೆ ಬರುತ್ತಿಲ್ಲ. ಪಡಿತರ ಸರಿಯಾಗಿ ಸಿಗದೆ, ಗರ್ಭಿಣಿ, ಬಾಣಂತಿಯರ ಪೌಷ್ಟಿಕ ಆಹಾರಗಳು ಸರಿಯಾಗಿ ದೊರೆಯದೆ ರಕ್ತಹೀನತೆಯಂತಹ ಸಮಸ್ಯೆ ಕಂಡು ಬಂದಿದೆ. ನಮ್ಮ ಕಷ್ಟಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸದಸ್ಯರ ವಿರುದ್ಧ ಆಕ್ರೋಶ: ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದ ಅಭಿವೃದ್ಧಿಗಾಗಿ ಏನೂ ಮಾಡುತ್ತಿಲ್ಲ ಎಂಬುದು ಸ್ಥಳೀಯರ ಆಕ್ರೋಶ.

‘ಆಯ್ಕೆಯಾಗಿ ಮೂರು ವರ್ಷಗಳಾದರೂ ಜನರ ಜೀವನ ಸುಧಾರಿಸಲು ಏನೂ ಮಾಡಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮತ ಕೇಳಲು ಬರುತ್ತಾರೆ. ಅಧಿಕಾರಿಗಳು ಅಷ್ಟೇ; ಚುನಾವಣಾ ಸಮಯದಲ್ಲಿ ಬರುತ್ತಾರೆ. ನಂತರ ಜನ ಬದುಕಿದ್ದಾರೆಯೇ ಎಂಬುದನ್ನು ನೋಡಲೂ ಬರುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹತ್ತು ದಿನಗಳಿಂದ ಗ್ರಾಮ ಪಂಚಾಯಿತಿ ಸದಸ್ಯರಾದ ತೋಕೆರೆ ಮಾದೇವಿ, ದೊಡ್ಡಣೆ ಮುರುಗ, ಕೊಂಬುಡಿಕ್ಕಿ ಕುಮಾರ, ಹಣೆಹೊಲ ದೊಟ್ಟತಾಯಮ್ಮ, ವಡಕೆಹಳ್ಳದ ನಾಗರಾಜು ಅವರು ಗ್ರಾಮದಲ್ಲಿ ಕಾಣಿಸುತ್ತಿಲ್ಲ. ಎಲ್ಲಿಗೆ ಹೋಗಿದ್ದಾರೆ ಎಂಬುದೇ ಗೊತ್ತಿಲ್ಲ’ ಎಂದು ಗ್ರಾಮಸ್ಥರು ಹೇಳಿದರು.

ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಪ್ರಸಾದ್‌ ಅವರಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.

ಸೌಲಭ್ಯ ಕಲ್ಪಿಸಲಾಗಿದೆ’

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಣಿ ಅವರು, ‘ದೊಡ್ಡಣೆ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದಕ್ಕಾಗಿ ಪಂಚಾಯಿತಿ ಸದಸ್ಯರ ಮೂಲಕ ಅನುದಾನ ಬಿಡುಗಡೆಯಾಗಿವೆ. ಈಗಾಗಲೇ 64 ಮನೆಗಳು ಮಂಜೂರಾಗಿದ್ದು, ಅವುಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿವೆ. ನೀರಿನ ಸೌಲಭ್ಯ, ಸೋಲಾರ್ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು