ಭಾನುವಾರ, ಸೆಪ್ಟೆಂಬರ್ 26, 2021
28 °C

ಇಲ್ಲದ ಹುದ್ದೆಗೆ ಮುಖ್ಯ ಎಂಜಿನಿಯರ್‌ ನೇಮಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಹುದ್ದೆಗೆ ಮುಖ್ಯ ಎಂಜಿನಿಯರ್‌ ಒಬ್ಬರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಪ್ರಾಧಿಕಾರದ ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ.

ಎಂ.ವಿ. ಪ್ರಸಾದ್‌ ಅವರು ರೈಲ್ವೆ ಇಲಾಖೆಯಲ್ಲಿ ಪ್ರಧಾನ ಮುಖ್ಯ ಎಂಜಿನಿಯರ್‌ ಆಗಿದ್ದರು. ಅವರು ಸ್ಥಳ ನಿರೀಕ್ಷೆಯಲ್ಲಿದ್ದರು. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯ ಎಂಜಿನಿಯರ್‌ ಹುದ್ದೆಗೆ ನೇಮಕ ಮಾಡಲಾಗಿದೆ. ಇದು ಖಾಲಿ ಹುದ್ದೆಯಾಗಿದ್ದು, ಷರತ್ತು ಹಾಗೂ ನಿಬಂಧನೆಗಳನ್ನು ಹೊರಡಿಸುವುದನ್ನು ಕಾಯ್ದಿರಿಸಿ ಪ್ರತಿ ನಿಯೋಜನೆ ಮೇರೆಗೆ ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಪ್ರಸಾದ್‌ ಅವರು ಶಾಸಕರೊಬ್ಬರ ಹತ್ತಿರದ ಸಂಬಂಧಿ. ಹಿರಿಯ ಸಚಿವರೊಬ್ಬರ ಒತ್ತಡಕ್ಕೆ ಮಣಿದು
ಈ ವರ್ಗಾವಣೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.

ಪ್ರಾಧಿಕಾರದಲ್ಲಿ ಇರುವುದು ಎಂಜಿನಿಯರಿಂಗ್‌ ಸದಸ್ಯ ಹುದ್ದೆ. ಈ ಹಿಂದೆ ಬಿ.ಎಸ್‌.ಶಿವಕುಮಾರ್ ಅವರು ಎಂಜಿನಿಯರಿಂಗ್‌ ಸದಸ್ಯ ಆಗಿದ್ದರು. ಪ್ರಾಧಿಕಾರದ ಆಯುಕ್ತ ರಾಕೇಶ್ ಸಿಂಗ್‌ ಜತೆಗಿನ ಶೀತಲ ಸಮರದ ಕಾರಣದಿಂದ ಅವರು ಆರೇ ತಿಂಗಳಲ್ಲಿ ವರ್ಗಾವಣೆ ಆಗಿದ್ದರು. ಅವರ ಸ್ಥಾನಕ್ಕೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ನಿರ್ದೇಶಕರಾಗಿದ್ದ ಟಿ.ಶಿವಶಂಕರ್ ಅವರನ್ನು 2019ರ ಜನವರಿ 21ರಂದು ವರ್ಗಾವಣೆ ಮಾಡಲಾಗಿತ್ತು. ‌

ಪ್ರಾಧಿಕಾರದಲ್ಲಿ ಮುಖ್ಯ ಎಂಜಿನಿಯರ್ ಹುದ್ದೆ ಇಲ್ಲವೇ ಇಲ್ಲ. ಮುಖ್ಯ ಎಂಜಿನಿಯರ್‌ ನೇಮಕದ ಆದೇಶದ ಪ್ರತಿ ಪ್ರಾಧಿಕಾರಕ್ಕೆ ಬಂತು. ಇದನ್ನು ಕಂಡು ಅಧಿಕಾರಿಗಳು ಗಲಿಬಿಲಿಗೊಂಡರು. ಪ್ರಸಾದ್‌ ಅವರಿಗೆ ಯಾವ ಹೊಣೆ ನೀಡುವುದು ಎಂದು ಗೊತ್ತಾಗದೆ ಆಯುಕ್ತರ
ಬಳಿ ಚರ್ಚಿಸಿದರು. ಈ ಬಗ್ಗೆ ಸ್ಪಷ್ಟನೆ ಕೋರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆಯುವಂತೆ ಸೂಚಿಸಿದರು. ಈ ಸಂಬಂಧ ಇಲಾಖೆಗೆ ಗುರುವಾರವೇ ಪತ್ರ ಬರೆಯಲಾಗಿದೆ ಎಂದು ಮೂಲಗಳು ಹೇಳಿವೆ. 

‘ರೈಲ್ವೆಯ ಮುಖ್ಯ ಎಂಜಿನಿಯರ್ ಒಬ್ಬರನ್ನು ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿದ ಉದಾಹರಣೆಯೇ ಇಲ್ಲ. ಈಗ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಜತೆಗೆ, ಈ ಅಧಿಕಾರಿಯನ್ನು ಬಿಡಿಎಗೆ ವರ್ಗಾವಣೆ ಮಾಡುವ ಮುನ್ನ ನಗರಾಭಿವೃದ್ಧಿ ಇಲಾಖೆಯ ಸುಪರ್ದಿಗೆ ಒಪ್ಪಿಸಬೇಕು. ಇಲ್ಲಿ ಈ ಪ್ರಕ್ರಿಯೆ ಆಗಿಲ್ಲ. ಮುಖ್ಯ ಎಂಜಿನಿಯರ್‌ ಹುದ್ದೆ ಇಲಾಖಾ ಮುಖ್ಯಸ್ಥರಿಗೆ ಸಮ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅವರನ್ನು ವರ್ಗ ಮಾಡುವ ಮುನ್ನ ಚುನಾವಣಾ ಆಯೋಗದ ಒಪ್ಪಿಗೆ ಪಡೆಯಬೇಕಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

2018ರ ಮೇ 31ರಂದು 27 ಮುಖ್ಯ ಎಂಜಿನಿಯರ್‌ಗಳನ್ನು ಜಲಸಂಪನ್ಮೂಲ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಚರ್ಚೆ ನಡೆಸದೆ ವರ್ಗಾವಣೆ ಪ್ರಕ್ರಿಯೆ ನಡೆಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು