ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಪುರುಷರಲ್ಲೂ ಅರಳಲಿ ಸೌಂದರ್ಯ ಪ್ರಜ್ಞೆ

Last Updated 19 ಸೆಪ್ಟೆಂಬರ್ 2020, 8:08 IST
ಅಕ್ಷರ ಗಾತ್ರ
ADVERTISEMENT
""

ಹೆಣ್ಣೆಂದರೇನು ಸೌಂದರ್ಯವೇನು ಕಣ್ಣಾರೆ ನಾ ಕಂಡೆನು.. ಹಾಡು ಕೇಳಿದ್ದೀರಲ್ಲವಾ. ಹೀಗೆ ಸೌಂದರ್ಯವನ್ನು ಯಾವಾಗಲೂ ಹೆಣ್ಣಿಗೇ ಹೋಲಿಸುತ್ತಾರೆ. ಇದು ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು. ಈಗ ಅದು ಬದಲಾಗಿದೆ. ಮಹಿಳೆಯರಂತೆ ಪುರುಷರಲ್ಲೂ ಸೌಂದರ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತಿದೆ.

ನೀವು ಗಮನಿಸಿ; ಒಂದು ಕಾಲದಲ್ಲಿ ಹೆಣ್ಣುಮಕ್ಕಳ ಸೌಂದರ್ಯವೃದ್ಧಿಗಾಗಿ ಕೆಲವು ಕ್ರೀಂಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದರು. ಆದರೆ, ಇತ್ತೀಚೆಗೆ ಕೆಲವೊಂದು ಕಂಪನಿಗಳು ಪುರುಷರಿಗಾಗಿಯೇ ಎಕ್ಸ್‌ಕ್ಲ್ಯೂಸಿವ್ ಕ್ರೀಂಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಮೊದಲು ಪುರುಷರಿಗೆ ಕಟಿಂಗ್‌ ಶಾಪ್‌ಗಳಿದ್ದವು. ಈಗ ಪಾರ್ಲರ್‌ಗಳು, ಸಲೂನ್‌ಗಳು ಹುಟ್ಟಿಕೊಂಡಿವೆ. ಅದೆಷ್ಟೋ ಕ್ರೀಮ್‌ಗಳು ಪುರುಷರ ಅಂದ ಹೆಚ್ಚಿಸಲು ಮಾರುಕಟ್ಟೆ ಅಲಂಕರಿಸಿವೆ.

ಮೊದಲೆಲ್ಲಾ ಮುಖದ ಮೇಲೆ ಮೊಡವೆ ಕಲೆ ಕಾಣಿಸಿಕೊಂಡರೆ ‘ಅದೇನ್ಮಾಡುತ್ತೆ ಬಿಡಪ್ಪಾ, ನಾನೇನು ಹುಡುಗಿನಾ ಅದರ ಬಗ್ಗೆ ತಲೆ ಕೆಡಿಸಿಕೊಂಡು ಕೂರೋಕೆ’ ಎಂದು ಅಸಡ್ಡೆ ಮಾಡುತ್ತಿದ್ದ ಹುಡುಗರು, ಈಗ ಚರ್ಮದ ಮೇಲೆ ಸಣ್ಣ ಕಲೆ ಕಾಣಿಸಿಕೊಂಡರು ಚಿಂತೆ ಮಾಡುತ್ತಾರೆ. ಆ ಕಲೆ ನಿವಾರಿಸಿಕೊಳ್ಳಲು ‘ಗೂಗಲ್‌ ಗುರು’ವಿನಿಂದ ಹಿಡಿದು ಯೂಟ್ಯೂಬ್‌, ಮನೆ ಮದ್ದಿನ ಪುಸ್ತಕಗಳನ್ನೆಲ್ಲ ತಲಾಶ್ ಮಾಡಿ, ಔಷಧ ಪತ್ತೆ ಮಾಡಿಕೊಳ್ಳುತ್ತಾರೆ. ಒಟ್ಟಾರೆ ಈಗ ಪುರುಷರು ಸೌಂದರ್ಯದ ಹಿಂದೆ ಬಿದ್ದಿರುವುದು ಸುಳ್ಳಲ್ಲ.

ಪುರುಷರಿಗೂ ಸೌಂದರ್ಯ ಹಾಗೂ ಚರ್ಮದ ಕಾಳಜಿ ಬೇಕು. ಪ್ರಸ್ತುತ ವಾತಾವರಣಕ್ಕೆ ಅದು ಅವಶ್ಯ ಕೂಡ ಎನ್ನುವುದು ಹಲವರ ಅಭಿಪ್ರಾಯ. ‘ಅಂದವಾಗಿ ಕಾಣಬೇಕು ಎಂಬುದು ಎಲ್ಲರಲ್ಲೂ ಇರುತ್ತದೆ. ಹಿಂದೆಲ್ಲಾ ಹುಡುಗರಿಗೆ ಇಷ್ಟೊಂದು ಸೌಂದರ್ಯಕಾಳಜಿ ಇರಲಿಲ್ಲ ನಿಜ. ಆದರೆ ಈಗ ಶೇ 75ರಷ್ಟು ಮಂದಿ ಚರ್ಮದ ಕಾಳಜಿ ವಹಿಸುತ್ತಾರೆ. ಹುಡುಗರಿಗೂ ಈಗ ಅನೇಕ ಫೇಶಿಯಲ್ ಕ್ರೀಮ್‌ಗಳು, ಫೇಸ್‌ವಾಷ್‌ಗಳು, ಕೂದಲಿಗೆ ಸಂಬಂಧಿಸಿದ ಲೋಷನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಜಾಹೀರಾತುಗಳಲ್ಲೂ ಪುರುಷ ಸೌಂದರ್ಯಕ್ಕೆ ಪ್ರಾಮುಖ್ಯ ನೀಡುವ ಕಾಲ ಬಂದಿದೆ. ಈ ಎಲ್ಲಾ ಕಾರಣಗಳಿಂದ ಪುರುಷರಲ್ಲಿ ಸೌಂದರ್ಯಪ್ರಜ್ಞೆ ಹೆಚ್ಚಿದೆ. ಅದು ಅವಶ್ಯವೂ ಕೂಡ ಎನ್ನುತ್ತಾರೆ’ ಐಟಿ ಉದ್ಯೋಗಿ ಸಮನ್ವಯ್‌.

ಉತ್ತಮ ಆಹಾರ ಸೇವನೆಯೂ ಅಗತ್ಯ
ಈಗಿನ ಕಾಲದಲ್ಲಿ ಅದರಲ್ಲೂ ಪಟ್ಟಣದಲ್ಲಿರುವವರು ಚರ್ಮದ ಕಾಳಜಿ ವಹಿಸಲೇಬೇಕು. ಋತುಮಾನಗಳ ಬದಲಾವಣೆ, ಕಲುಷಿತ ವಾತಾವರಣ, ದೂಳು, ಹೊಗೆ ಮುಂತಾದವುಗಳಿಂದ ಚರ್ಮವು ಅಂದಗೆಟ್ಟಿರುತ್ತದೆ. ಆ ಕಾರಣಕ್ಕೆ ಗಂಡುಮಕ್ಕಳೂ ಕೂಡ ಚರ್ಮದ ಕಾಳಜಿ ಮಾಡುವುದು ಅಗತ್ಯ.

ಚರ್ಮವನ್ನು ಅಂತರಿಕವಾಗಿ ಹಾಗೂ ಬಾಹ್ಯವಾಗಿ ಚೆನ್ನಾಗಿ ಇರಿಸಿಕೊಳ್ಳಬೇಕು. ಆಹಾರ ಕ್ರಮವನ್ನು ಸರಿಯಾಗಿ ಅನುಸರಿಸುವ ಮೂಲಕ ಆಂತರಿಕವಾಗಿ ಚರ್ಮವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಹಸಿರು ತರಕಾರಿ, ಹಣ್ಣು ಮುಂತಾದವುಗಳ ಸೇವನೆಯಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಹೊರಗಡೆ ಹೋಗುವಾಗ ಸನ್‌ಸ್ಕ್ರೀನ್‌ ಲೋಷನ್‌, ಬಾಡಿ ಲೋಷನ್‌ಗಳು ಹಚ್ಚಿಕೊಳ್ಳುವುದರಿಂದ ಬಾಹ್ಯವಾಗಿ ಚರ್ಮವನ್ನು ರಕ್ಷಿಸಿಕೊಳ್ಳಬಹುದು. ಇದರಿಂದ ಚರ್ಮ‌ಕ್ಕೆ ಸಂಬಂಧಿಸಿ ದೀರ್ಘಕಾಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು’ ಎಂಬುದು ಕಿರುತೆರೆ ನಟ ಚರಿತ್ ಬಾಲಪ್ಪ ಅವರ ಅಭಿಪ್ರಾಯ.

ಸೆಲ್ಫ್ ಮೆಡಿಕೇಷನ್ ಬೇಡ
ಚರ್ಮದ ವಿಷಯದಲ್ಲಿ ಹೆಣ್ಣಾಗಲಿ, ಗಂಡಾಗಲಿ ಕಾಳಜಿ ವಹಿಸಬೇಕು. ದಶಕಗಳ ಹಿಂದೆ, ಚರ್ಮದ ವಿಚಾರದಲ್ಲಿ ಪುರುಷರು ಹೆಚ್ಚು ಕಾಳಜಿವಹಿಸುತ್ತಿರಲಿಲ್ಲ. ಈಗ ಅವರಲ್ಲೂ ಚರ್ಮದ ಆರೋಗ್ಯ ಹಾಗೂ ಸೌಂದರ್ಯದ ಕುರಿತು ಜಾಗೃತಿ, ಕಾಳಜಿ ಹೆಚ್ಚಾಗುತ್ತಿದೆ. ಅದರಲ್ಲೂ ಹದಿಹರೆಯದವರಲ್ಲಿ ಇದು ತುಸು ಹೆಚ್ಚಾಗಿರುತ್ತದೆ. ಮುಖ, ಚರ್ಮದ ಮೇಲೆ ಸಣ್ಣದೊಂದು ಕಲೆಯಾದರೂ ವೈದ್ಯರ ಬಳಿ ಹೋಗುತ್ತಾರೆ.

ಚರ್ಮದ ಸಮಸ್ಯೆ ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಕಾಯಿಲೆಗೂ ಕಾರಣವಾಗಬಹುದು.ಆ ಕಾರಣಕ್ಕೂ ಚರ್ಮದ ಕಾಳಜಿ ಮಾಡುವುದು ಅಗತ್ಯ.ಚರ್ಮಕ್ಕೆ ಸಂಬಂಧಿಸಿದಂತೆ ಅನೇಕ ಬಗೆಯ ಚಿಕಿತ್ಸೆಗಳೂ ಲಭ್ಯವಿವೆ. ಆದರೆ ವೈದ್ಯರ ಸಲಹೆ ಪಡೆದುಕೊಳ್ಳದೆ ಸಿಕ್ಕಿದ ಕ್ರೀಮ್ ಹಚ್ಚುವುದು, ಯಾರೋ ಹೇಳಿದರು ಎಂಬ ಕಾರಣಕ್ಕೆ ಅದನ್ನು ಪಾಲಿಸುವುದು ಮಾಡುವುದು ಸರಿಯಲ್ಲ.

‘ಸೆಲ್ಫ್ ಮೆಡಿಕೇಷನ್‌ನಿಂದ ಶಾಶ್ವತ ಸಮಸ್ಯೆ ಉಂಟಾಗಬಹುದು. ಆ ಕಾರಣಕ್ಕೆ ಚಿಕ್ಕ ಕಲೆಯಾದರೂ ವೈದ್ಯರ ಬಳಿ ಹೋಗಿ ಸಲಹೆ ಪಡೆಯಬೇಕು’ ಎನ್ನುತ್ತಾರೆ ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯ ಡರ್ಮಟಾಲಜಿ ವಿಭಾಗದ ಪ್ರೊಫೆಸರ್ ಡಾ. ವೀರಣ್ಣ ಶಾಸ್ತ್ರಿ.

ಕಾಳಜಿ ಬೇಕೇ ಬೇಕು
‘ಮೊದಲೆಲ್ಲಾ ಪುರುಷರು ದೈಹಿಕ ಚಟುವಟಿಕೆ, ಕ್ರೀಡೆ ಇಂತಹ ವಿಭಾಗದಲ್ಲೇ ಹೆಚ್ಚು ತೊಡಗಿಕೊಂಡಿರುತ್ತಿದ್ದರು. ಆಗ ದೇಹದಾರ್ಡ್ಯಕ್ಕಷ್ಟೇ ಆದ್ಯತೆ ನೀಡುತ್ತಿದ್ದರೇ ಹೊರತು, ಸೌಂದರ್ಯದ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ. ಆದರೆ ಮಾಡೆಲಿಂಗ್‌‌, ಸಿನಿಮಾ ಕ್ಷೇತ್ರದ ವಿಸ್ತಾರ ಹೆಚ್ಚಿದಂತೆ ಪುರುಷರಲ್ಲೂ ಸೌಂದರ್ಯ ಪ್ರಜ್ಞೆ ಜಾಗೃತಗೊಂಡಿತು. ಅದರ ಮೇಲೆ ಇನ್ನಷ್ಟು ಒಲವು ಮೂಡಿತ್ತು. ಈಗ ಪುರುಷರು ಫೇಶಿಯಲ್‌, ಫೇಸ್‌ಪ್ಯಾಕ್ ಎಂಬ ಸಲೂನ್‌, ಪಾರ್ಲರ್‌ಗಳ ಮೊರೆ ಹೋಗುತ್ತಿದ್ದಾರೆ.

‘ಪುರುಷರಿಗೂ ಸೌಂದರ್ಯದ ಮೇಲೆ ಕಾಳಜಿ ಇರಬೇಕು. ಪ್ರತಿದಿನ ಕನಿಷ್ಠ ಏಳು ಗಂಟೆ ನಿದ್ದೆ, ಜಂಕ್ ಆಹಾರಗಳಿಂದ ದೂರವಿರುವುದು, ಪ್ರತಿದಿನ ವ್ಯಾಯಾಮ ಮಾಡುವುದು, ಹೆಚ್ಚು ಹೆಚ್ಚು ನೀರು ಕುಡಿಯುವಂತಹ ವಿಧಾನಗಳನ್ನು ಅನುಸರಿಸುವುದರಿಂದ ದೇಹದೊಂದಿಗೆ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು’ ಎನ್ನುತ್ತಾರೆ ರೂಪದರ್ಶಿ ಮನೋಜ್ ರಾಜ್‌.

ಮನೋಜ್ ರಾಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT