ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಸ್‌ ಭಾರತ್‌ ಅರ್ಥ್‌’ ಕಿರೀಟ ಮುಡಿಗೇರಿಸಿಕೊಂಡ ಹುಬ್ಬಳ್ಳಿ ಬೆಡಗಿ

Last Updated 7 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ನವದೆಹಲಿಯ ಪ್ರತಿಷ್ಠಿತ ‘ಅಮನ್‌ ಗಾಂಧಿ ಫಿಲ್ಮ್‌ ಪ್ರೊಡಕ್ಷನ್ಸ್‌’ ಸಂಸ್ಥೆಯು ಆಗಸ್ಟ್‌ 30ರಂದು ಆಯೋಜಿಸಿದ್ದ ‘ಮಿಸ್‌ ಭಾರತ್‌ ಅರ್ಥ್‌ 2018’ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದಕ್ಷಿಣ ಭಾರತದ ಏಕೈಕ ಯುವತಿ, ಹುಬ್ಬಳ್ಳಿ ಬೆಡಗಿ ಪ್ರಿಯಾಂಕಾ ಕೊಳ್ವೇಕರ್‌ ರನ್ನರ್‌ ಅಪ್‌ ಆಗುವ ಮೂಲಕ ಪ್ರಸಿದ್ಧಿ ಗಳಿಸಿದ್ದಾರೆ.

ಗೋಕುಲ ರೋಡ್‌ನ ನಿವಾಸಿ ನರಸಿಂಹ ಕೊಳ್ವೇಕರ್‌ ಮತ್ತು ಮಂಗಳಾ ದಂಪತಿಯ ಪುತ್ರಿಯಾಗಿರುವ ಪ್ರಿಯಾಂಕಾ ಕೊಳ್ವೇಕರ್‌ ಏಳು ವರ್ಷಗಳಿಂದ ಮಾಡೆಲಿಂಗ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. 2012ರಲ್ಲಿ ‘ಮಿಸ್‌ ಮಂಗಳೂರು’, 2016ರಲ್ಲಿ ‘ಸೌತ್‌ ಇಂಡಿಯಾ ಬ್ಯೂಟಿಫುಲ್‌ ಸ್ಮೈಲ್‌’, 2015ರಲ್ಲಿ ‘ಮಿಸ್‌ ಇಂಡಿಯಾ ಅಡ್ವೆಂಚರ್‌’ ಟೈಟಲ್‌ಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಹಾಗೂ ಐಬಿಎಂಆರ್‌ ಕಾಲೇಜಿನಲ್ಲಿ ಎಂಬಿಎ ಪದವಿಯನ್ನು ಗಳಿಸಿರುವ ಇವರು, ಗೋಕುಲ ರೋಡ್‌ನ ಮೊರಾರ್ಜಿ ನಗರದಲ್ಲಿ ‘ಬ್ರೈನ್‌ ಚಕ್ಕರ್‌’ ಎಂಬ ಸಂಸ್ಥೆಯನ್ನು ಆರಂಭಿಸಿದ್ದು, ಉದ್ಯೋಗ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅರಳು ಹುರಿದಂತೆ ಪಟಪಟನೆ ಮಾತುಗಳನ್ನಾಡುವ, ಸದಾ ನಗುಮೊಗದ ಈ ಚೆಲುವೆ ಅತ್ಯುತ್ತಮ ನೃತ್ಯ ಸಂಯೋಜಕಿ ಕೂಡ ಆಗಿದ್ದಾರೆ. ಬಾಲ್ಯದಿಂದಲೇ ನೃತ್ಯ, ಸಂಗೀತದಲ್ಲಿ ಆಸಕ್ತಿ ಹೊಂದಿರುವ ಪ್ರಿಯಾಂಕಾ, ಹತ್ತು ಹಲವು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ.

ಕನ್ನಡ, ಮರಾಠಿ, ಪಂಜಾಬಿ, ತೆಲಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಪರಿಣಿತವಾಗಿರುವ ಪ್ರಿಯಾಂಕಾ ಬಹುಮುಖ ಪ್ರತಿಭೆಯಾಗಿದ್ದಾರೆ.

‘ಮಿಸ್‌ ಭಾರತ್‌ ಅರ್ಥ್‌ ರನ್ನರ್‌ ಅಪ್‌ ಆದ ಬಳಿಕ ಸ್ಯಾಂಡಲ್‌ವುಡ್‌ ಮತ್ತು ಬಾಲಿವುಡ್‌ ಸಿನಿಮಾಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬಂದಿವೆ. ಆದರೆ, ಪಾತ್ರಗಳು ಇಷ್ಟವಾಗದ ಕಾರಣ ಒಪ್ಪಿಕೊಳ್ಳಲಿಲ್ಲ ಎನ್ನುತ್ತಾರೆ ಪ್ರಿಯಾಂಕಾ. ಪುನೀತ್‌ ರಾಜ್‌ಕುಮಾರ್‌, ಅಮಿತಾಭ್‌ ಬಚ್ಚನ್‌, ಅಕ್ಷಯ್‌ಕುಮಾರ್‌ ಜೊತೆ ನಟಿಸುವಾಸೆ ಇದೆ’ ಎನ್ನುತ್ತಾರೆ.

ಇಷ್ಟೇ ಅಲ್ಲದೇ, ಪ್ರಿಯಾಂಕಾ ಪ್ರಾಣಿಪ್ರಿಯೆ ಕೂಡ. ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರ ‘ಪೀಪಲ್‌ ಫಾರ್‌ ಅನಿಮಲ್‌’ ಎನ್‌ಜಿಒದ ಸಕ್ರಿಯ ಕಾರ್ಯಕರ್ತೆಯಾಗಿದ್ದಾರೆ. ಹುಬ್ಬಳ್ಳಿ ನಗರದಲ್ಲಿ ಅಪಾಯಕ್ಕೆ ಸಿಲುಕಿದ್ದ 200ಕ್ಕೂ ಅಧಿಕ ಹಸು, ಕರು, ನಾಯಿ ಮತ್ತಿತರ ಜಾನುವಾರುಗಳನ್ನು ಸಂರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

‘ಭವಿಷ್ಯದಲ್ಲಿ ಕೋಟ್ಯಂತರ ರೂಪಾಯಿ ಹಣ ಸಂ‍ಪಾದನೆ ಮಾಡಬೇಕು, ಬಿಎಂಡಬ್ಲ್ಯುಕಾರಿನಲ್ಲಿ ಓಡಾಡಬೇಕು ಎಂಬ ಆಸೆ ನನ್ನದಲ್ಲ. ಬಡವರ ಪರ, ನೊಂದ ಮಹಿಳೆಯ ಪರವಾಗಿ ದುಡಿಯುಬೇಕು. ವನ್ಯಪ್ರಾಣಿಗಳ ಸಂರಕ್ಷಣೆಗಾಗಿ ಖಾಸಗಿಯಾಗಿ ವನ್ಯಜೀವಿಧಾಮವೊಂದನ್ನು ಸ್ವಂತ ನಿರ್ಮಿಸಬೇಕು ಎಂಬ ಮಹತ್ತರ ಆಶಯ ಹೊಂದಿದ್ದೇನೆ. ಪ್ರಾಕೃತಿಕ ವಿಕೋಪಗಳಿಂದ ಉಂಟಾಗುತ್ತಿರುವ ಅವಘಡಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತೇನೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT