ಬುಧವಾರ, ಸೆಪ್ಟೆಂಬರ್ 22, 2021
25 °C

ಉಗುರಿನ ಅಂದಕ್ಕೆ ಮನೆಯಲ್ಲೇ ಆರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಣ್ಣುಮಕ್ಕಳಿಗೆ ಮುಖದ ಅಂದದ ಜೊತೆಗೆ ತಮ್ಮ ಉಗುರುಗಳ ಮೇಲೂ ಕಾಳಜಿ ಹೆಚ್ಚು. ನೀಳವಾದ ಅಂದದ ಉಗುರು ಯಾರಿಗೆ ಇಷ್ಟವಿಲ್ಲ ಹೇಳಿ. ಕೈಗಳ ಅಂದ ಹೆಚ್ಚಿಸಲು ಉದ್ದನೆಯ ಉಗುರುಗಳನ್ನು ಬೆಳೆಸಿ ಅದಕ್ಕೆ ಬೇರೆ ಬೇರೆ ಆಕಾರ ನೀಡುತ್ತಿರುತ್ತಾರೆ. ಅಲ್ಲದೇ ಬಣ್ಣ ಬಣ್ಣದ ನೈಲ್‌ಪಾಲಿಶ್‌ ಹಚ್ಚಿಕೊಳ್ಳುವ ಮೂಲಕ ಉಗುರನ್ನು ಅಂದಗಾಣಿಸುತ್ತಾರೆ. ಆದರೆ, ಇನ್ನೂ ಕೆಲವರು ಉಗುರಿನ ಮೇಲೆ ಲಕ್ಷ್ಯವೇ ವಹಿಸುವುದಿಲ್ಲ. ಉಗುರಿನ ಸ್ಥಿತಿಯು ನಿಮ್ಮ ಆರೋಗ್ಯ ಹಾಗೂ ನೈರ್ಮಲ್ಯವನ್ನು ತಿಳಿಸುತ್ತದೆ. ಅಂದದ ಹಾಗೂ ಆರೋಗ್ಯಕರ ಉಗುರಿಗೆ ನೀವು ಪಾರ್ಲರ್‌ಗಳಿಗೆ ಹೋಗಿ ಮೆನಿಕ್ಯೂರ್ ಮಾಡಿಸಿ ಹಣ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಅಡುಗೆಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ನಿಮ್ಮ ಉಗುರಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಆರೋಗ್ಯಕರ ಅಂದದ ಉಗುರು ನಿಮ್ಮದಾಗಬೇಕು ಎಂದರೆ ಈ ಮನೆಮದ್ದುಗಳನ್ನು ಬಳಸಿ.

ಆಲಿವ್ ಎಣ್ಣೆ
ಆಲಿವ್‌ ಎಣ್ಣೆಯಲ್ಲಿ ಆದ್ರತೆಯ ಅಂಶ ಹೆಚ್ಚಿರುವ ಕಾರಣ ಇದು ಉಗುರಿನ ಹೊರಪೊರೆಗಳಿಗೆ ಪೋಷಕಾಂಶ ಒದಗಿಸುತ್ತವೆ. ಅಲ್ಲದೆ ಉಗುರಿನ ಹೊಳಪನ್ನು ಹೆಚ್ಚಿಸುತ್ತದೆ. ಉ‌ಗುರಿನ ಆರೋಗ್ಯ ಹೆಚ್ಚಿಸಲು ಆಲಿವ್ ಎಣ್ಣೆ ಬಳಸುವ ಮೊದಲು ಕೆಲ ಮಾರ್ಗಗಳನ್ನು ಅನುಸರಿಸಬೇಕು. ಮೊದಲು ಉಗುರುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಮಾಡಿ ಒರೆಸಿಕೊಳ್ಳಬೇಕು. ನಂತರ ಬಿಸಿ ಮಾಡಿರುವ ಆಲಿವ್‌ ಎಣ್ಣೆಯಲ್ಲಿ ಉಗುರುಗಳನ್ನು ಅದ್ದಬೇಕು. ಕನಿಷ್ಠ 15 ನಿಮಿಷಗಳ ಕಾಲ ಹಾಗೇ ಇಡಿ. ನಂತರ ಸ್ವಚ್ಛವಾದ ಟವೆಲ್‌ನಿಂದ ಚೆನ್ನಾಗಿ ಒರೆಸಿಕೊಳ್ಳಿ. ಪ್ರತಿನಿತ್ಯ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಬೆಳ್ಳುಳ್ಳಿ
ನಿಮ್ಮದು ಬೇಗನೆ ತುಂಡಾಗುವ, ಮೃದುವಾದ ಉಗುರಾಗಿದ್ದರೆ ನೀವು ಬೆಳ್ಳುಳ್ಳಿ ಸಹಾಯದಿಂದ ಉಗುರನ್ನು ದೃಢವಾಗಿಸಿಕೊಳ್ಳಬಹುದು. ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಅರ್ಧಕ್ಕೆ ಕತ್ತರಿಸಿ ಉಗುರಿನ ಮೇಲೆ ಚೆನ್ನಾಗಿ ಉಜ್ಜಿ. ಸಮಯವಿದ್ದರೆ ಬೆಳ್ಳುಳ್ಳಿ ರಸ ತಯಾರಿಸಿ, ಉಗುರನ್ನು ಆ ರಸದಲ್ಲಿ ಅದ್ದುವುದರಿಂದಲೂ ಉಗುರು ಚೆನ್ನಾಗಿ ಬೆಳೆಯುತ್ತದೆ. ಅಲ್ಲದೆ ಇದು ಚರ್ಮದ ಒಳಗಿನಿಂದಲೇ ಉಗುರು ಸದೃಢವಾಗಿ ಬೆಳೆಯಲು ಸಹಕರಿಸುತ್ತದೆ.

ನಿಂಬೆರಸ
ನಿಂಬೆರಸವು ಉಗುರನ್ನು ಸ್ವಚ್ಛಗೊಳಿಸಿ ಅದರ ಅಂದವನ್ನು ಹೆಚ್ಚಿಸುತ್ತದೆ. ಕಳೆಗುಂದಿದ ಉಗುರಿನ ಬಣ್ಣವನ್ನು ನೈಸರ್ಗಿಕವಾಗಿ ಹೊಳಪು ಹೆಚ್ಚುವಂತೆ ಮಾಡುತ್ತದೆ. ಅದಕ್ಕೆ ಒಂದು ಬೌಲ್‌ಗೆ ಒಂದು ಚಮಚ ಅಡುಗೆ ಸೋಡಾ, ಒಂದು ಕಪ್ ನೀರು ಹಾಗೂ ಒಂದು ಟೀ ಚಮಚ ನಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆ ಮಿಶ್ರಣದಲ್ಲಿ ಉಗುರುಗಳನ್ನು ಅದ್ದಿಟ್ಟುಕೊಳ್ಳಬೇಕು.

ಹತ್ತು ನಿಮಿಷ ಹಾಗೇ ಬಿಡಿ. ನಂತರ ಬ್ರಶ್‌ನ ಸಹಾಯದಿಂದ ಚೆನ್ನಾಗಿ ಉಜ್ಜಿ. ನಂತರ ನೀರಿನಿಂದ ತೊಳೆಯಿರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.