ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಮುಖದ ಚರ್ಮದಲ್ಲಿ ರಂಧ್ರಗಳು ಏನಿದೆ ಪರಿಹಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವ ಹೊತ್ತಿಗೆ ಮೂಗಿನ ಮೇಲೆ, ಕೆನ್ನೆಯ ಚರ್ಮದ ಮೇಲೆ ಆಗಿರುವ ರಂಧ್ರಗಳತ್ತ ನಮ್ಮ ದೃಷ್ಟಿ ಹಾಯುತ್ತದೆ. ಚರ್ಮದ ಮೇಲಿರುವ ಸಣ್ಣ ರಂಧ್ರಗಳು ದೊಡ್ಡ ದೊಡ್ಡ ಬಾವಿಗಳಂತೆ ನಮಗೆ ಕಾಣಿಸಲು ಪ್ರಾರಂಭವಾಗುತ್ತದೆ! ಅಯ್ಯೋ ಈ ರಂಧ್ರಗಳು ನಮ್ಮ ಸೌಂದರ್ಯವನ್ನು ಹಾಳು ಮಾಡುತ್ತಿವೆ ಎಂದೇ ನಾವು ಭಾವಿಸುತ್ತೇವೆ.

ಹಾಗಿದ್ದರೆ, ನೈಸರ್ಗಿಕವಾಗಿ ಇರುವ ಈ ರಂಧ್ರಗಳು ನಿಜಕ್ಕೂ ನಮ್ಮ ಸೌಂದರ್ಯವನ್ನು ಹಾಳು ಮಾಡುತ್ತವೆಯೇ? ಅಥವಾ ಇವು ನಮ್ಮ ಚರ್ಮದ ಆರೋಗ್ಯಕ್ಕೆ ಮುಖ್ಯವಾಗಿ ಬೇಕಾಗಿರುವ ರಂಧ್ರವೇ? ಹೌದು ಎನ್ನುತ್ತಾರೆ ಚರ್ಮರೋಗ ತಜ್ಞರು.

ರಂಧ್ರಗಳ ಮಹತ್ವ: ಮುಖದ ರಂಧ್ರಗಳಲ್ಲಿ ಫಾಲಿಕಲ್ಸ್‌ಗಳ ಮರುಹುಟ್ಟಿಗೆ ಕಾರಣವಾಗುತ್ತವೆ. ಈ ರಂಧ್ರಗಳಲ್ಲಿಯೇ ಚರ್ಮದ ಆರೋಗ್ಯಕ್ಕೆ ಬೇಕಾದ ದ್ರವಗಳು ಉತ್ಪತ್ತಿ ಆಗುತ್ತವೆ. ಒಣಚರ್ಮ ಇದ್ದವರಿಗೆ ಅಥವಾ ಒಣ ಹವಾಮಾನದಲ್ಲಿ ಮತ್ತು ವಯಸ್ಸು ಕಳೆದಂತೆ ಚರ್ಮ ಒಣಗಲು ಪ್ರಾರಂಭವಾದಾಗ ಈ ರಂಧ್ರಗಳು ಚರ್ಮ ಒಣಗದಂತೆ ದ್ರವಗಳನ್ನು ಬಿಡುಗಡೆ ಮಾಡುತ್ತವೆ. ಇದು ಚರ್ಮದಲ್ಲಿ ಜಿಡ್ಡಿನ ಅಂಶ ಇರುವಂತೆ ನೋಡಿಕೊಳ್ಳುತ್ತವೆ. ಆದ್ದರಿಂದ ಈ ರಂಧ್ರಗಳು ಆರೋಗ್ಯದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ.

ಸೌಂದರ್ಯವರ್ಧಕ ಜಾಹೀರಾತುಗಳು ‘ಮುಖದ ಮೇಲಿನ ಈ ರಂಧ್ರಗಳು ನಮ್ಮ ಸೌಂದರ್ಯವನ್ನು ಹಾಳು ಮಾಡುತ್ತವೆ. ಆದ್ದರಿಂದ ಈ ಉತ್ಪನ್ನವನ್ನು ತೆಗೆದುಕೊಳ್ಳಿ, ಸೌಂದರ್ಯವಂತರಾಗಿ’ ಎನ್ನುತ್ತವೆ. ಅದಕ್ಕೆ ಮರುಳಾಗಿ ನಾವು ಆ ರಂಧ್ರಗಳನ್ನು ಮುಚ್ಚುವುದಕ್ಕೆ ಮುಂದಾಗುತ್ತೇವೆ. ಆದರೆ, ನಿಜದಲ್ಲಿ ಈ ರಂಧ್ರಗಳು ಇಲ್ಲದೇ ಇರುವ ಹಾಗೆ ಮಾಡಲು ಅಥವಾ ಅದರ ಗಾತ್ರವನ್ನು ಸಣ್ಣ ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ವೈದ್ಯರು.

ಮುಖದ ಮೇಲೆ ಈ ರಂಧ್ರಗಳು ಕಾಣಲೇ ಬಾರದು ಎಂದಿದ್ದರೆ, ಕೆಲವು ಮಾರ್ಗಗಳ ಮೂಲಕ ಇದನ್ನು ಸಾಧಿಸಬಹುದಿದೆ. ಕೆಲವು ಸೌಂದರ್ಯವರ್ಧಕಗಳ ಮೂಲಕ ಕೆಲವು ಹೊತ್ತು ಈ ರಂಧ್ರಗಳು ಕಾಣದೇ ಇರುವ ಹಾಗೆ ಅಥವಾ ರಂಧ್ರಗಳು ಸಣ್ಣ ಗಾತ್ರದ್ದಾಗಿ ಕಾಣುವ ಹಾಗೆ ಮಾಡಿಕೊಳ್ಳಬಹುದಾಗಿದೆ. ಸನ್‌ಕ್ರೀಂ ಲೋಷನ್‌ಗಳ ಮೂಲಕವಾಗಿ ಅದರ ಗಾತ್ರಗಳು ಸಣ್ಣದಾಗಿ ಕಾಣುವಂತೆ ಮಾಡಿಕೊಳ್ಳಬಹುದು.

ಪ್ರತಿದಿನ ಮುಖಕ್ಕೆ ಸನ್‌ಸ್ಕ್ರೀನ್ ಲೋಷನ್‌ ಹಚ್ಚಿಕೊಳ್ಳುವುದರಿಂದ ಚರ್ಮದಲ್ಲಿ ವ್ಯತ್ಯಾಸ ಕಾಣಬಹುದು. ಎಸ್‌ಪಿಎಫ್‌ ಅಂಶ ಇರುವ ‌ಕ್ರೀಮ್ ಬಳಸುವುದರಿಂದ ಮುಖದಲ್ಲಿ ಕೆಂಪು ದದ್ದಾಗುವುದು, ಕಿರಿಕಿರಿ ಹಾಗೂ ರಂಧ್ರಗಳಿಗೆ ನೇರವಾಗಿ ಬಿಸಿಲು ತಾಕುವುದನ್ನು ತಡೆಯಬಹುದು.

ಬ್ಯೂಟಿಪಾರ್ಲರ್‌ಗಳಲ್ಲಿ ಕ್ಲೆನ್ಸಿಂಗ್ ಮಾಡಿಸಿಕೊಳ್ಳುವುದರಿಂದಲೂ ರಂಧ್ರಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕ್ಲೆನ್ಸಿಂಗ್‌ ಮಾಡಿ ಮಸಾಜ್ ಮಾಡುವುದರಿಂದ ಕೊಂಚ ರಂಧ್ರಗಳು ಮುಚ್ಚಿದಂತೆ ಕಾಣಬಹುದು.

ಆದರೆ, ಈ ಎಲ್ಲದಕ್ಕಿಂತ ವೈದ್ಯರ ಬಳಿ ಹೋಗಿ ಅವರ ಸಲಹೆ ‍ಪಡೆಯುವುದೇ ಹೆಚ್ಚು ಪರಿಣಾಮಕಾರಿ ಆದುದು ಎನ್ನುತ್ತಾರೆ ಚರ್ಮರೋಗ ತಜ್ಞರು. ಮೈಕ್ರೋ ನೀಡ್ಲಿಂಗ್‌ ಮತ್ತು ಲೇಸರ್‌ ಚಿಕಿತ್ಸೆಗಳಿಂದ ಉತ್ತಮ ಪರಿಣಾಮ ದೊರೆಯಬಹುದು. ಇದ್ಯಾವುದೂ ಬೇಡ, ಮನೆಯಲ್ಲೇ ಮದ್ದು ಇದೆಯೇ ಎಂದು ಪ್ರಶ್ನೆ ಹಾಕಿಕೊಂಡರೆ, ಖಂಡಿತ ಮನೆಮದ್ದು ಇದೆ; ಅದುವೇ ಮುಖ ತೊಳೆಯುವುದು. ಮನೆಯಲ್ಲೇ ಪದೇ ಪದೇ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳುವುದರಿಂದ ಈ ರಂಧ್ರಗಳು ಶುಚಿ ಆಗಿಯೂ ಇರುತ್ತವೆ ಜೊತೆಗೆ, ಸಣ್ಣ ಗಾತ್ರದ್ದಾಗಿಯೂ ಕಾಣುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.