ಶನಿವಾರ, ಏಪ್ರಿಲ್ 1, 2023
23 °C

ಕೃಷ್ಣ ಸುಂದರಿಯರ ಕಲರವ

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

ದಕ್ಷಿಣ ಭಾರತದ ಟಿ.ವಿ ಧಾರಾವಾಹಿಗಳು ಇತ್ತೀಚೆಗೆ ‘ಕೃಷ್ಣ ಸುಂದರಿ’ಯರ ಜಪ ಮಾಡುತ್ತಿವೆ. ಲಾಗಾಯ್ತಿನಿಂದಲೂ ಹಿಂದೆ ತಳ್ಳುತ್ತಾ ಬಂದಿದ್ದ ಈ ಸುಂದರಿಯರನ್ನು ಈಗ ಮುನ್ನೆಲೆಗೆ ತಂದಿದ್ದೇಕೆ? ಕಪ್ಪು ಮೈಬಣ್ಣದ ಕುರಿತು ಜನರ ಮನೋಭಾವ ನಿಜಕ್ಕೂ ಬದಲಾಗಿದೆಯೇ? ಅಥವಾ ಬೂದಿ ಮುಚ್ಚಿದ ಕೆಂಡದಂತೆ ಸುಡುತ್ತಿದೆಯೇ? ‘ಕೃಷ್ಣ ಪಕ್ಷ’ ಹಿಡಿದು ಹೀಗೊಂದು ಸುತ್ತಾಟ...

***

ಕಪ್ಪುವರ್ಣದ ಮಹಿಳೆಯರನ್ನು ನಮ್ಮ ಸಮಾಜ ಸುತರಾಂ ಇಷ್ಟಪಡುವುದಿಲ್ಲ. ಕಪ್ಪು ಎನ್ನುವ ಕಾರಣಕ್ಕೆ ಕಾಳಿ ದೇವಿಯನ್ನೂ ನಾವು ದೂರವೇ ಇಟ್ಟಿದ್ದೇವೆ, ಅಲ್ಲವೇ? ಕಪ್ಪು ಬಣ್ಣ ಕುರಿತ ಈ ಚರ್ಚೆ ಇಂದು, ನಿನ್ನೆಯದಲ್ಲ. ಟಿ.ವಿಗಳಲ್ಲಿ ಈಗ ಕಿಕ್ಕಿರಿದು ತುಂಬಿರುವ ಕೃಷ್ಣ ತುಳಸಿ, ಲಕ್ಷಣ, ಮುದ್ದು ಲಕ್ಷ್ಮಿ, ಸುಂದರಿ ಮೊದಲಾದ ಧಾರಾವಾಹಿಗಳು ಕಪ್ಪುಬಣ್ಣದ ಮಹಿಳೆಯರ ಕುರಿತೇ ಮಾತನಾಡುತ್ತಿವೆ. ಮೈಬಣ್ಣದ ಕಾರಣಕ್ಕಾಗಿ ಶತಮಾನಗಳಿಂದ ಶೋಷಿತರಾದ ಮಹಿಳೆಯರು ಅದೆಷ್ಟೋ, ಲೆಕ್ಕವನ್ನು ಇಟ್ಟವರಿಲ್ಲ. ಸುಮ್ಮನೆ ಕೆದಕುತ್ತಾ ಹೋದರೆ ನಮ್ಮ ಮನೆಯಲ್ಲೋ ಪಕ್ಕದ ಮನೆಯಲ್ಲೋ ಅಂತಹ ಹತ್ತಾರು ಕಥೆಗಳು ಸದ್ದಿಲ್ಲದೆ ನಮ್ಮ ಕಾಲುಗಳ ಅಡಿಯಲ್ಲೇ ಬಿಚ್ಚಿಕೊಳ್ಳುತ್ತವೆ.

ಶಿವಮೊಗ್ಗ ಜಿಲ್ಲೆಯ ಆ ಪುಟ್ಟ ಊರಿನ ಮನೆಯ ಜಗುಲಿಯ ಮೇಲೆ ಕುಳಿತ 70 ವರ್ಷದ ಕಮಲಕ್ಕಜ್ಜಿ ಆಕಾಶವನ್ನೇ ದಿಟ್ಟಿಸಿ ನೋಡುತ್ತಿದ್ದರು. ಸಂಜೆ ತನ್ನ ರಂಗು ಕಳಚಿ ಕತ್ತಲು ಇನ್ನೇನು ಆವರಿಸುವುದರಲ್ಲಿ ಇತ್ತು. ಮಳೆಗಾಲ ಬೇರೆ. ತುಂಡು ತುಂಡು ಕಪ್ಪು ಮೋಡಗಳು ಒಟ್ಟುಗೊಳ್ಳುತ್ತಾ ಇದ್ದವು. ‘ಮಳೆ ಶುರು ಆಗೋ ಲಕ್ಷಣ ಕಾಣ್ತಿದೆ’ ಎಂದಿದ್ದು ಅವರ ಕಿವಿಗೆ ಬೀಳಲಿಲ್ಲ.

‘ಕತ್ತಲು ಇದ್ದರೆ ತಾನೆ ನಕ್ಷತ್ರ–ತಾರೆಗಳಿಗೆ ಅಸ್ತಿತ್ವ. ಬಿಳಿಯಂತೆಯೇ ಕಪ್ಪು ಕೂಡ ಇನ್ನೊಂದು ಬಣ್ಣವಷ್ಟೆ. ಮಳೆ ಸುರಿಸುವ ಮೋಡ ಅವರು ಕಪ್ಪು, ಇವರು ಬಿಳಿ ಎಂದು ಮಳೆ ಸುರಿಸುತ್ತಾ...’ ಯಾವುದೋ ಧಾರಾವಾಹಿಯಲ್ಲಿ ಬಂದ ಈ ಮಾತು ಕಮಲಕ್ಕಜ್ಜಿಯನ್ನು ಬಹುವಾಗಿ ಕಾಡಿತ್ತು. ಸಂಜೆ ಆಕಾಶವನ್ನು ನೋಡುತ್ತಾ ಕಮಲಕ್ಕಜ್ಜಿ ಅದನ್ನೇ ನೆನಪು ಮಾಡಿಕೊಳ್ಳುತ್ತಿದ್ದಳು. ಬಿಳಿ ಮಾತ್ರವೇ ಚಂದ ಎನ್ನುವಂತಹ ಮಾತುಗಳನ್ನು ಈ ಅಜ್ಜಿ, ತಮ್ಮ ಕಿವಿಯ ತಮಟೆ ಹರಿದು ಹೋಗುವಷ್ಟು ಬಾರಿ ಕೇಳಿದ್ದರು. ಅದರಿಂದ ಅಸಾಧ್ಯ ಚಿತ್ರಹಿಂಸೆಯನ್ನೂ ಅನುಭವಿಸಿದ್ದರು.


ಸೆರೆನಾ ವಿಲಿಯಮ್ಸ್‌

‘ಸಮಾಜದಲ್ಲಿ ಕಪ್ಪು ಎಂದಾಕ್ಷಣ ಒಂದು ರೀತಿಯ ತಾತ್ಸಾರ, ಅಸಹ್ಯ, ಜುಗುಪ್ಸೆ. ನನ್ನ ಬದುಕಿನಲ್ಲೂ ‘ಕಪ್ಪು’ ವಹಿಸಿದ ಪಾತ್ರವನ್ನು ಮರೆಯಲು ಬಯಸಿದಷ್ಟೂ ಗಟ್ಟಿಯಾಗಿ ಮನದಂಗಳದಲ್ಲಿ ಬೇರೂರುತ್ತಲೇ ಇದೆ’ ಎಂದು ಅವರು ಕಣ್ಣೀರು ತುಂಬಿಕೊಂಡರು. ‘ಹುಟ್ಟಿದ ಮಗು ನನ್ನಂತೆ ಕಪ್ಪಗಿಲ್ಲ ಎಂದು ಖಾತರಿಪಡಿಸಿಕೊಳ್ಳುವವರೆಗೆ ನನಗೆ ಸಮಾಧಾನವಿರಲಿಲ್ಲ’ ಎಂದು ಹೇಳುವಾಗ ಅವರ ಕಣ್ಣುಗಳಲ್ಲಿ ನೀರು ಧಾರೆಯಾಗಿ ಹರಿಯುತ್ತಿತ್ತು. ಕಪ್ಪು ಎನ್ನುವ ಒಂದೇ ಕಾರಣಕ್ಕೆ ಅವರ ಮನಸ್ಸನ್ನು ಅಷ್ಟೊಂದು ನೋಯಿಸಿದ ಸಮಾಜದ ಕುರಿತು ನನ್ನಲ್ಲೂ ಜುಗುಪ್ಸೆ ಮೂಡಿತ್ತು.

‘ಇದು ಆಧುನಿಕ ಯುಗ, 21ನೇ ಶತಮಾನದಲ್ಲಿ ಕಪ್ಪು, ಬಿಳಿ ಎಂದೆಲ್ಲಾ ಯಾರೂ ನೋಡುವುದಿಲ್ಲ ಎನ್ನುವ ಮಾತುಗಳನ್ನೆಲ್ಲ ಸುತ್ತಿ ಬಿಸಾಡಬೇಕು. #blackivesmatter’ ಎಂದು ಇತ್ತೀಚೆಗಷ್ಟೆ ಟ್ವೀಟ್‌ ಮಾಡಿದ್ದ ನನಗೆ ಕಮಲಕ್ಕಜ್ಜಿ ಅನುಭವವನ್ನು ಕೇಳಿ ಗಾಸಿಯಾಯಿತು. ಎಷ್ಟೋ ಬಾರಿ ಜಗತ್ತಿನಲ್ಲಿ ಆಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ನಾವು ನಮ್ಮ ಹತ್ತಿರದಲ್ಲೇ ಆಗುವ ಅನ್ಯಾಯಕ್ಕೆ ಸ್ಪಂದಿಸುವುದೇ ಇಲ್ಲ. ಹೆಚ್ಚೆಂದರೆ ಮಾತಿನ ಸಾಂತ್ವನವಷ್ಟೆ. ಎಂಥ ವಿಪರ್ಯಾಸ!

ನಮ್ಮ ಬಾಲಿವುಡ್‌ ಚಿತ್ರಗಳೂ ಸಮಾಜದ ಇಂತಹ ಮನಃಸ್ಥಿತಿಯ ಪ್ರತಿಬಿಂಬದಂತೆಯೇ ಇವೆ. ‘ತು ಹಸೀನಾ ಲಡ್ಕಿ ಹೈ, ಮೈ ಜವಾನ್‌ ಲಡ್ಕಾ ಹ್ಞೂಂ’ (ನೀನು ಸುಂದರ ಹುಡುಗಿ, ನಾನು ಯೌವನ ಉಕ್ಕೇರುವ ಹುಡುಗ) ಎಂಬರ್ಥದ ಹಾಡು ಹೇಳುವುದಾದರೂ ಏನನ್ನು? ಹುಡುಗಿಯರು ಮಾತ್ರ ತೆಳ್ಳಗೆ–ಬೆಳ್ಳಗೆ ಇರಬೇಕು, ಹುಡುಗರಿಗೆ ಯೌವನ ಒಂದಿದ್ದರೆ ಸಾಕು ಎಂದಲ್ಲವೇ? ಹೀಗೆ ತೆಳ್ಳಗೆ–ಬೆಳ್ಳಗೆ ಕಾಣಿಸಿಕೊಳ್ಳಲು ಹುಡುಗಿಯರು ಹೇಗೆಲ್ಲ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ನೆನಪಿಸಿಕೊಂಡರೆ ಎದೆ ಝಲ್‌ ಎನ್ನುತ್ತದೆ. ಬ್ಲೀಚಿಂಗ್‌ ಮಾಡಿಸಿಕೊಂಡು, ಬಟ್ಟೆ ಸುತ್ತಿಕೊಂಡು, ಚುಚ್ಚುಮದ್ದು ಹಾಕಿಸಿಕೊಂಡು ಅವರು ಅನುಭವಿಸುವ ಹಿಂಸೆ ಅಷ್ಟಿಷ್ಟಲ್ಲ.


ಸೆರೆನಾ ವಿಲಿಯಮ್ಸ್‌

‘ನೀವು ಎಲ್ಲಿಯಾದರೂ ನೋಡಿ ಅಥವಾ ಎಲ್ಲ ಕಡೆಗೂ ನೋಡಿ. ಬಿಳಿಬಣ್ಣ ಮಾತ್ರ ಸುಂದರವಾಗಿ ಕಾಣುತ್ತದೆ ಎನ್ನುವ ಗಟ್ಟಿ ಹಾಗೂ ಆಳವಾದ ನಂಬಿಕೆ ಬೇರೂರಿದೆ. ಮೈಬಣ್ಣವನ್ನು ಬಿಳಿ ಮಾಡಿಕೊಳ್ಳಲು ಅದೆಷ್ಟೊಂದು ಕ್ರೀಮುಗಳು. ಬಿಳಿಯರಾಗಲು ಬೆಟ್ಟದಷ್ಟು ಒತ್ತಡ. ಆದರೆ, ಈ ವಿಷಯವಾಗಿ ನಮ್ಮಲ್ಲಿ ಪುಟ್ಟ ಚರ್ಚೆಯೂ ನಡೆದಿಲ್ಲ. ಬಿಳಿಯರಾಗಲು ಹೋಗಬೇಡಿ, ಆದರೆ ಸುಂದರವಾಗಿರಿ’ ಎಂಬ ದಿಟ್ಟ ಮಾತುಗಳನ್ನು ಆಡಿದವರು ನಟಿ ನಂದಿತಾ ದಾಸ್‌. ಬ್ಲ್ಯಾಕ್‌ ಈಸ್‌ ಬ್ಯೂಟಿಫುಲ್‌ ಎಂಬ ಆಂದೋಲನವನ್ನೂ ನಡೆಸಿದವರು ಆಕೆ.

‘ಸಾವಿರ ಸಾವಿರ ಸಂಖ್ಯೆಯಲ್ಲಿ ಯುವತಿಯರು ನನಗೆ ಇ–ಮೇಲ್‌ ಮಾಡುತ್ತಿದ್ದರು. ಕಪ್ಪು ಮೈಬಣ್ಣದ ಕಾರಣದಿಂದ ಅವರು ಹೇಗೆಲ್ಲ ನೋವು ಅನುಭವಿಸುತ್ತಿದ್ದಾರೆ ಎಂಬುದನ್ನು ವಿವರಿಸುತ್ತಿದ್ದರು. ಮೈಬಣ್ಣದ ಕಾರಣಕ್ಕಾಗಿ ಅನುಭವಿಸುತ್ತಿರುವ ಹಿಂಸೆಯಿಂದ ಸಾಕಾಗಿದೆ, ಆತ್ಮಹತ್ಯೆ ಮಾಡಿಕೊಳ್ಳೋಣ ಎನಿಸುತ್ತದೆ ಎಂದೂ ಕೆಲವರು ಬರೆದಿದ್ದರು. ಹೀಗಾಗಿ ನಾವು ಬ್ಲ್ಯಾಕ್‌ ಈಸ್‌ ಬ್ಯೂಟಿಫುಲ್‌ ಆಂದೋಲನ ಶುರು ಮಾಡಿದೆವು’ ಎಂದು ನೆನೆಯುತ್ತಾರೆ ನಂದಿತಾ.

ಬ್ಲ್ಯಾಕ್‌ ಈಸ್‌ ಬ್ಯೂಟಿಫುಲ್‌ ಎನ್ನುವುದು ನಮ್ಮ ಪರಂಪರೆಯಲ್ಲೂ ಇದೆ. ಮಹಾಭಾರತದ ದ್ರೌಪದಿಯ ಬಣ್ಣ ಕಪ್ಪು. ನಾವು ಪೂಜಿಸುವ ಕೃಷ್ಣ ಕೂಡ ಕಪ್ಪು. ಆತನಿಂದಾಗಿಯೇ ಕಪ್ಪು ಬಣ್ಣಕ್ಕೆ ಕೃಷ್ಣವರ್ಣ ಎಂದೇ ಹೆಸರು. ಕೃಷ್ಣನನ್ನು ಆರಾಧಿಸುವ, ದ್ರೌಪದಿಯನ್ನು ಮೆಚ್ಚುಗೆಯಿಂದ ನೋಡುವ ಸಮಾಜವೇ ನಮ್ಮ ಮನೆಯ ಹೆಣ್ಣುಮಕ್ಕಳು ಕಪ್ಪಾಗಬಾರದು ಎಂದರೆ, ಕಪ್ಪು ಎನ್ನುವ ಕಾರಣಕ್ಕೇ ಅವರನ್ನು ನಿಕೃಷ್ಟವಾಗಿ ಕಂಡರೆ ಹೇಗೆ? ಆತ್ಮಾವಲೋಕನ ಮಾಡಿಕೊಳ್ಳುವುದು, ತಪ್ಪನ್ನು ತಿದ್ದಿಕೊಳ್ಳುವುದು ಇಂದಿನ ಜರೂರು.


ನಂದಿತಾ ದಾಸ್‌

‘ನಾನು ಕಪ್ಪಗಿರುವುದನ್ನು ಪ್ರೀತಿಸುತ್ತೇನೆ. ಆದರೆ, ಈ ಪಾಪ್‌ ಸಂಗೀತ ಜಗತ್ತು, ಕಾಸ್ಮೆಟಿಕ್ಸ್‌ ಜಗತ್ತು ನಮ್ಮಂಥವರನ್ನು ಕಪ್ಪು ಎನ್ನುವ ಕಾರಣಕ್ಕೆ ಮತ್ತೆ ಮತ್ತೆ ಹೊರಗಿಡಲು ಯತ್ನಿಸುತ್ತದೆ. ನಾನು ಹಾಡಿದರೆ, ನೃತ್ಯ ಮಾಡಿದರೆ ಎಲ್ಲರೂ ಖುಷಿಪಡುತ್ತಾರೆ, ಎಂಜಾಯ್‌ ಮಾಡುತ್ತಾರೆ. ಆಗ ನಾನು ಕಪ್ಪು ಎನ್ನುವ ಸತ್ಯ ಅವರ ಸಂತೋಷಕ್ಕೆ ಅಡ್ಡಿ ಬರುವುದಿಲ್ಲ. ಆದರೆ, ನನ್ನ ಆಲ್ಬಮ್‌ನ ಮಾರಾಟ, ಖರೀದಿಯ ವಿಚಾರ ಬಂದರೆ, ನೀನು ಕಪ್ಪು ಎಂದುಬಿಡುತ್ತಾರೆ...’ ಅಮೆರಿಕದ ಪಾಪ್‌ ಗಾಯಕಿ ರಿಯಾನಾ ಅವರ ನೋವಿನ ಮಾತಿದು.

ವರ್ಣಭೇದ ಎನ್ನುವುದು ಅಮೆರಿಕ ಮತ್ತು ಆಫ್ರಿಕಾ ಖಂಡಗಳಲ್ಲಿ ಢಾಳಾಗಿ ಎದ್ದುಕಂಡರೆ, ನಮ್ಮಲ್ಲಿ ಹಲವು ಶೇಡ್‌ಗಳಲ್ಲಿ, ಹಲವು ಸ್ತರಗಳಲ್ಲಿ ಗೆದ್ದಲಿನಂತೆ ಸ್ತ್ರೀ ಅಸ್ಮಿತೆಯನ್ನು ತಿನ್ನುತ್ತಿದೆ. ಜಾತಿಗಳ ಕುರಿತ ಸಂಕಥನಗಳು, ದುರ್ಬಲ ವರ್ಗದ ಮಹಿಳೆಯರನ್ನು ಸಮಾಜ ಕಾಣುವ ರೀತಿ–ರಿವಾಜುಗಳು ತರತಮದ ಕಥೆಗಳನ್ನು ಗೊಂದಲಕ್ಕೆ ಎಡೆ ಇಲ್ಲದಂತೆ ಟಾಮ್‌ ಟಾಮ್‌ ಎಂದು ಹೇಳುತ್ತವೆ. ‘ನಿನಗೆ ಬೇಗ ಮದುವೆ ಆಗಬೇಕಾದರೆ ನಿನ್ನ ಮೈಬಣ್ಣ ಬೆಳ್ಳಗಿರಬೇಕು’ ಎನ್ನುವ ಮಾತು ಸಾಮಾನ್ಯ. ಕಪ್ಪು ಮೈಬಣ್ಣದ ಯುವತಿಯರಿಗೆ ಬೇಗ ಮದುವೆ ಆಗದಿರುವುದು ಕೂಡ ನಿಜ. ಇದು ನಾವು ಬದುಕಿರುವ ಸಮಾಜದ ಮನಃಸ್ಥಿತಿಯನ್ನು ಎತ್ತಿ ತೋರುತ್ತದೆ.

ಅಮೆರಿಕದಿಂದ ಪ್ರಾರಂಭವಾದ, ಯುವಜನರೇ ಕಟ್ಟಿದ ಬ್ಲ್ಯಾಕ್‌ಲೈವ್ಸ್‌ಮ್ಯಾಟರ್‌ ಹೋರಾಟ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ್ದು ಸುಳ್ಳಲ್ಲ. ‘ಫೇರ್‌ ಆ್ಯಂಡ್ ಲವ್ಲಿ’ ‘ಗ್ಲೋ ಆ್ಯಂಡ್‌ ಲವ್ಲಿ’ ಕ್ರೀಮ್‌ ಆದದ್ದೇ ಇದಕ್ಕೆ ಉದಾಹರಣೆ. ನಮ್ಮ ದೇಶದಲ್ಲಿ ಇತ್ತೀಚೆಗೆ ಕಪ್ಪು–ಬಿಳಿ ಎನ್ನುವಂಥ ಕಥೆ ಇಟ್ಟುಕೊಂಡ ಧಾರಾವಾಹಿಗಳೂ ಬರುತ್ತಿವೆ. ಇದು ಲಕ್ಷಾಂತರ ಜನರನ್ನು ತಲುಪುವ ಮಾಧ್ಯಮ. ಏನೋ ಅದ್ಭುತವಾದದ್ದನ್ನು ತೋರಿಸುತ್ತಿದ್ದಾರೆ ಎಂದಲ್ಲ. ಆದರೆ, ಸ್ವಲ್ಪ ಮಟ್ಟಿಗಾದರೂ ಜನರು ಯೋಚಿಸುವಂತಾಗಿದೆ.


ರಿಯಾನಾ

‘ನನ್ನ ಮಟ್ಟಿಗಂತೂ ಪರಿಸ್ಥಿತಿ ಉತ್ತಮಗೊಳ್ಳುವ ಸಾಧ್ಯತೆ ಇಲ್ಲ. ಆದರೆ, ಕಪ್ಪುವರ್ಣೀಯ ಮಹಿಳೆಯರಿಗೂ ಧ್ವನಿ ಇದೆ ಎಂಬುದನ್ನು ಯಾರಾದರೂ ತೋರಿಸಿಕೊಡಬೇಕು’ ಎನ್ನುತ್ತಾರೆ ಟೆನಿಸ್‌ ತಾರೆ ಸೆರೆನಾ ವಿಲಿಯಮ್ಸ್‌. ಹೌದು, ನಾವು ಈ ವಿಷಯವನ್ನು ಮತ್ತೆ ಮತ್ತೆ ಹೇಳುತ್ತಲೇ ಇರಬೇಕು. ಸಮಾಜದ ಜಾಣ ಕಿವುಡನ್ನು ದಾಟಿಕೊಂಡು ಅದರ ಪ್ರಜ್ಞೆಯನ್ನು ಜಾಗೃತಗೊಳಿಸುವವರೆಗೆ, ನಡೆದಿರುವ ಅನ್ಯಾಯದ ಬಗೆಗಿನ ವಿವರಗಳನ್ನು ಕಾದ ಸೀಸದಂತೆ ಅದರ ಕಿವಿಗಳಲ್ಲಿ ನಾವು ಸುರಿಯುತ್ತಲೇ ಇರಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು