ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಾಡೆಲಿಂಗ್ ಕ್ಷೇತ್ರದಲ್ಲಿ ಯುವ ರೈತನ ಛಾಪು

ರೈತ ಸಂಸ್ಕೃತಿ ಬಿಂಬಿಸುವ ಉಡುಗೆ– ತೊಡುಗೆಗೂ ಬೇಕು ಸ್ಥಾನಮಾನ
Last Updated 23 ಸೆಪ್ಟೆಂಬರ್ 2020, 1:41 IST
ಅಕ್ಷರ ಗಾತ್ರ
ADVERTISEMENT
""
""

‘ಪ್ರತಿಯೊಬ್ಬರ ಜೀವನದಲ್ಲೂ ಫ್ಯಾಷನ್ ಎನ್ನುವುದು ಅಂತರ್ಗತವಾಗಿರುತ್ತದೆ. ಉಡುಗೆ–ತೊಡುಗೆ ಬಗ್ಗೆ ಅವರದ್ದೇ ಆದ ಅಭಿರುಚಿಯೂ ಇರುತ್ತದೆ. ಅದೇ ರೀತಿ, ರೈತರು ಬೆಳೆದ ಆಹಾರ ಧಾನ್ಯಗಳಿಲ್ಲದೆ ಜನ ಬದುಕಲು ಸಾಧ್ಯವಿಲ್ಲ. ಈ ಎರಡೂ ಕ್ಷೇತ್ರಗಳ ಮೇಲೆ ನನ್ನ ಗಮನವನ್ನು ಕೇಂದ್ರೀಕರಿಸಿದ್ದೇನೆ...’

ಫ್ಯಾಷನ್ ಲೋಕದಲ್ಲಿ ರೈತ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ–ತೊಡುಗೆ ಹಾಗೂ ಪರಿಕರಗಳಿಗೂ ವಿಶೇಷ ಸ್ಥಾನಮಾನ ದೊರಕಬೇಕು ಎಂಬ ಅಭಿಲಾಷೆ ಹೊಂದಿರುವ ಮೈಸೂರಿನ ರೂಪದರ್ಶಿ ಡಿ.ಸಿ.ನಾಗೇಶ್ ಅವರ ನುಡಿಗಳಿವು.

ತಿಬ್ಬಾಸ್ ಗ್ರೂಪ್ ಮಾಡೆಲಿಂಗ್ ಕಂಪನಿ ಆರಂಭಿಸಿರುವ ನಾಗೇಶ್ ಅವರು, 2021ರ ಫ್ರೆಬ್ರುವರಿಯಲ್ಲಿ ನಡೆಸಲು ಉದ್ದೇಶಿಸಿರುವ ‘ಮಿಸ್ಟರ್ ಅಂಡ್ ಮಿಸ್ ತಿಬ್ಬಾಸ್ ಗ್ರೂಪ್ ಮಾಡೆಲ್ ಆಫ್ ಇಂಡಿಯಾ’ ಸ್ಪರ್ಧೆಯಲ್ಲಿ ‘ಫಾರ್ಮರ್ ಥೀಮ್’ ಎಂಬ ಪ್ರತ್ಯೇಕ ವಿಭಾಗದ ಮೂಲಕ ರೈತ ಸಂಸ್ಕೃತಿ ಬಿಂಬಿಸುವಂತಹ ಸ್ಪರ್ಧೆ ಆಯೋಜಿಸಲು ನಿರ್ಧರಿಸಿದ್ದಾರೆ.

‘ಕರ್ನಾಟಕದಲ್ಲಿ ಭಾಷೆ, ಸಂಸ್ಕೃತಿ, ಆಚಾರ–ವಿಚಾರದಲ್ಲಿ ವೈವಿಧ್ಯತೆ ಇದ್ದಂತೆ, ರೈತ ಸಂಸ್ಕೃತಿಯಲ್ಲೂ ವೈವಿಧ್ಯತೆ ಇದೆ. ಒಂದೊಂದು ಪ್ರಾಂತ್ಯದಲ್ಲೂ ರೈತರು ಧರಿಸುವ ಉಡುಗೆ–ತೊಡುಗೆ ಭಿನ್ನವಾಗಿದೆ. ಇಂತಹ ವಿಭಿನ್ನ ಸಂಸ್ಕೃತಿಯನ್ನು ಸಾರುವಂತಹ ಉಡುಗೆ ತೊಟ್ಟು, ಪರಿಕರ ಬಳಸಿ ವೇದಿಕೆ ಮೇಲೆ ರೂಪದರ್ಶಿಗಳು ಹೆಜ್ಜೆ ಹಾಕಬಹುದು. ಈ ಮೂಲಕವಾದರೂ ನೇಗಿಲಯೋಗಿಗೆ ಮಾನ್ಯತೆ ದೊರಕಿಸಬಹುದು’ ಎನ್ನುತ್ತಾರೆ ನಾಗೇಶ್.

ಕೃಷಿಗೂ ಸೈ ಎನ್ನುವ ನಾಗೇಶ್

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದ ರೈತ ಚಿನ್ನಬುದ್ಧಿ ಮತ್ತು ರೇಣುಕಾ ದಂಪತಿ ಪುತ್ರ ಡಿ.ಸಿ.ನಾಗೇಶ್. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರೂ ಮಾಡೆಲಿಂಗ್, ಸಿನಿಮಾ ಹಾಗೂ ಕೃಷಿ ಕ್ಷೇತ್ರದ ಬಗ್ಗೆ ಒಲವು ಹೊಂದಿದ್ದಾರೆ. ದೆಹಲಿಯಲ್ಲಿ ಕೆಲ ಸಮಯ ಉಪನ್ಯಾಸಕರಾಗಿ ಕೆಲಸ ಮಾಡಿದ್ದ ಅವರು, ಸದ್ಯ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದಾರೆ.

‘ನಮ್ಮದು ಅವಿಭಕ್ತ ಕುಟುಂಬ. 9 ಎಕರೆ ಭೂಮಿ ಇದ್ದು, ಇದರಲ್ಲಿ 4 ಎಕರೆ ನೀರಾವರಿ ಭೂಮಿ ಇದೆ. ಬಾಳೆ, ಟೊಮೆಟೊ, ಚೆಂಡುಹೂವು, ರೇಷ್ಮೆ ಬೆಳೆಯುತ್ತಿದ್ದಾರೆ. ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಬೇಕು ಎಂಬ ಉದ್ದೇಶವಿದೆ’ ಎನ್ನುತ್ತಾರೆ ನಾಗೇಶ್.

‘ಕೃಷಿ ಎನ್ನುವುದು ತಂತಿ ಮೇಲಿನ ನಡಿಗೆ ಇದ್ದಂತೆ. ರೈತನ ಉತ್ಪನ್ನಗಳಿಗೆ ಯಾವಾಗ ಒಳ್ಳೆಯ ಬೆಲೆ ಸಿಗುತ್ತದೆ ಎಂದು ಹೇಳಲು ಬರುವುದಿಲ್ಲ. ಹವಾಮಾನ ವೈಪರೀತ್ಯ, ಮಾರುಕಟ್ಟೆ ಸಮಸ್ಯೆ, ಬೆಲೆ ಕುಸಿತದಂತಹ ಸಮಸ್ಯೆಗಳಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನು ದಾಟಿ ಯಶಸ್ಸು ಪಡೆಯುವ ಕಡೆಗೆ ಗಮನ ಹರಿಸಿದ್ದೇನೆ’ ಎನ್ನುತ್ತಾರೆ.

ಮಾಡೆಲಿಂಗ್: ಪ್ರಶಸ್ತಿಗಳ ಗರಿ

28 ವರ್ಷದ ನಾಗೇಶ್ ಅವರು 2017ರಲ್ಲಿ ಮಾಡೆಲಿಂಗ್ ಕ್ಷೇತ್ರವನ್ನು ಪ್ರವೇಶಿಸಿದ್ದರು. ಮಿ.ಎಲೈಟ್ ಇಂಡಿಯಾ ಸ್ಪರ್ಧೆ, 2018ರಲ್ಲಿ ನಡೆದಿದ್ದ ಮಿ. ರಾಯಲ್ ಮೈಸೂರು, ಮಿ. ಹ್ಯಾಂಡ್‌ಸಮ್ ಮತ್ತು 2019ರಲ್ಲಿ ಮಿ. ಕರ್ನಾಟಕ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಮಂಜರಿ ನೇಪಾಳ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕಳೆದ ಜ.31ರಿಂದ ಫೆ.7ರವರೆಗೆ ನೇಪಾಳದಲ್ಲಿ ಆಯೋಜಿಸಿದ್ದ ಮಿಸ್ಟರ್ ಏಷ್ಯಾ ಮಾಡೆಲ್ ಸ್ಪರ್ಧೆಯ ಮಿ. ಏಷ್ಯಾ ಅಡ್ವೆಂಚರ್, ಮಿ. ಏಷ್ಯಾ ಕಲ್ಚರ್ ಮತ್ತು ಮಿ. ಏಷ್ಯಾ ಸೌತ್ ಇಂಡಿಯಾ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಈ ಸ್ಪರ್ಧೆಯಲ್ಲಿ ರೈತನ ಉಡುಗೆ ತೊಟ್ಟು ರ್‍ಯಾಂಪ್‌ನಲ್ಲಿ ಹೆಜ್ಜೆ ಹಾಕಿದ್ದು ವಿಶೇಷ. ಪಂಚೆ, ಬನಿಯನ್, ಕೆಂಪು ಟವೆಲ್ ಹಾಗೂ ನೇಗಿಲು ಹಿಡಿದು ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದರು.

ನಟನಾಗುವ ಬಯಕೆ

ಚಲನಚಿತ್ರಗಳಲ್ಲಿ ನಾಯಕ ನಟನಾಗಿ ಮಿಂಚುವ ಆಸೆಯನ್ನೂ ನಾಗೇಶ್ ವ್ಯಕ್ತಪಡಿಸುತ್ತಾರೆ. ರಂಗಾಯಣದ ಕಲಾವಿದ ಮೈಮ್ ರಮೇಶ್ ಅವರ ಬಳಿ ಆರು ತಿಂಗಳ ನಟನಾ ತರಬೇತಿ ಪಡೆದಿದ್ದಾರೆ. ನಾಟಕ, ಬೀದಿನಾಟಕ ಹಾಗೂ ಕಿರುಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ‘ಕಿರುಧ್ವನಿ’ ಎಂಬ ಚಿತ್ರದಲ್ಲೂ ಸಣ್ಣ ಪಾತ್ರ ಮಾಡಿರುವ ಅವರು, ಪ್ರಮುಖ ಪಾತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನೆಲೆಯೂರುವ ಬಯಕೆ ಹೊಂದಿದ್ದಾರೆ.

‘ನಟನಾಗಬೇಕೆಂಬ ಉದ್ದೇಶದಿಂದಲೇ ಮಾಡೆಲಿಂಗ್ ಕ್ಷೇತ್ರವನ್ನು ಪ್ರವೇಶಿಸಿದೆ. ಈಗ ನಟನೆ ಕಡೆಗೂ ಗಮನ ಹರಿಸುತ್ತಿದ್ದೇನೆ. ಒಂದೆರಡು ಸಿನಿಮಾಗಳಲ್ಲಿ ನಟಿಸುವ ಅವಕಾಶ ಬಂದಿದೆ’ ಎನ್ನುತ್ತಾರೆ ನಾಗೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT