ಸೋಮವಾರ, ಸೆಪ್ಟೆಂಬರ್ 16, 2019
29 °C

ಬೆಂಗಳೂರು ವಿವಿ–ವಿಟಿಯು ಒಪ್ಪಂದ

Published:
Updated:
Prajavani

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾ ಮತ್ತು ಮೌಲ್ಯಮಾಪನ ಕಾರ್ಯಗಳನ್ನು ಡಿಜಿಟಲೀಕರಣಗೊಳಿಸಲು ಸಾಫ್ಟ್‌ವೇರ್ ತಂತ್ರಾಂಶದ ಭಾಗಗಳನ್ನು ಹಂಚಿಕೆ ಮಾಡಿಕೊಳ್ಳುವ ಬಗ್ಗೆ ಹಾಗೂ ಡಿಜಿಟಲ್ ಮೌಲ್ಯಮಾಪನ ಕೇಂದ್ರವನ್ನು ಸ್ಥಾಪಿಸುವ ಕುರಿತಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ನಾಗರಭಾವಿಯಲ್ಲಿರುವ ವಿಟಿಯು ಪ್ರಾದೇಶಿಕ ಕಚೇರಿಯಲ್ಲಿ ಜರುಗಿದ ಸಮಾರಂಭದಲ್ಲಿ ಬೆಂಗಳೂರು ವಿವಿ ಕುಲಪತಿ ಪ್ರೊ.ವೇಣುಗೋಪಾಲ್ ಕೆ.ಆರ್. ಮತ್ತು ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರ ಉಪಸ್ಥಿತಿಯಲ್ಲಿ ಎರಡೂ ವಿವಿಗಳ ಕುಲಸಚಿವರಾದ ಪ್ರೊ.ಬಿ.ಕೆ ರವಿ ಮತ್ತು ಪ್ರೊ.ಸತೀಶ್ ಅಣ್ಣಿಗೆರೆ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಕುಲಸಚಿವ (ಮೌಲ್ಯಮಾಪನ) ಪ್ರೊ.ಸಿ. ಶಿವರಾಜು ಇದ್ದರು.

ಪ್ರೊ.ವೇಣುಗೋಪಾಲ್ ಕೆ.ಆರ್. ಮಾತನಾಡಿ, ‘ಈ ಡಿಜಿಟಲ್ ಮೌಲ್ಯಮಾಪನದ ಅಳವಡಿಕೆಯಿಂದ, ಮೌಲ್ಯಮಾಪನ ಕಾರ್ಯದಲ್ಲಿ ಮಾನವಿಕ ತಪ್ಪುಗಳು, ಉತ್ತರ ಪತ್ರಿಕೆಗಳ ತಿದ್ದುಪಡಿ ಮತ್ತು ಪರೀಕ್ಷಾ ಅಕ್ರಮಗಳನ್ನು ತಡೆಯಬಹುದು, ಫಲಿತಾಂಶವನ್ನು ಸಹ ಬೇಗನೆ ಪ್ರಕಟಿಸಬಹುದು ಎಂದರು. ಸದ್ಯ ಪರೀಕ್ಷಾ ವೆಚ್ಚ ₹ 2.5 ಕೋಟಿಯಷ್ಟಿದ್ದು, ಅದು ₹ 20 ಲಕ್ಷಕ್ಕೆ ತಗ್ಗಲಿದೆ’ ಎಂದು ಮಾಹಿತಿ ನೀಡಿದರು.

ಪ್ರೊ.ಸಿ. ಶಿವರಾಜು ಮಾತನಾಡಿ, ‘ಮೌಲ್ಯಮಾಪಕರಿಗೆ ಸಂಭಾವನೆ ನೀಡುವ ಪ್ರಕ್ರಿಯು ಇನ್ನು ಸರಳಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸುಲಭವಾಗಿ ಉತ್ತರ ಪತ್ರಿಕೆಗಳನ್ನು ಒದಗಿಸಬಹುದಾಗಿದೆ’ ಎಂದರು.

ವಿಟಿಯು 2012ರಿಂದಲೇ ತನ್ನದೇ ಆದ ಡಿಜಿಟಲ್ ಮೌಲ್ಯಮಾಪನ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಬೆಂಗಳೂರು ವಿಶ್ವವಿದ್ಯಾಲಯವೂ ಸಹ ಈ ಒಪ್ಪಂದದಿಂದಾಗಿ ವರ್ಷಾಂತ್ಯದಲ್ಲಿ ಸಂಪೂರ್ಣವಾಗಿ ಡಿಜಿಟಲ್ ಮೌಲ್ಯಮಾಪನವನ್ನು ಅಳವಡಿಸಿಕೊಳ್ಳಲಿದೆ.

Post Comments (+)