ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಆಗ್ರಹ

7
ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಆಗ್ರಹ

Published:
Updated:
Prajavani

ಚಾಮರಾಜನಗರ: ಹಿಂದುಳಿದ ವರ್ಗಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಮಾವೇಶಗೊಂಡ ಸದಸ್ಯರು ಹಾಗೂ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಪುಟ್ಟರಂಗಶೆಟ್ಟಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಟೈಪಿಸ್ಟ್‌ ಆಗಿರುವ ಮೋಹನ್‌ ಬಳಿ ವಿಧಾನಸೌಧದಲ್ಲಿ ₹ 25.76 ಲಕ್ಷ ಹಣ ಸಿಕ್ಕಿದೆ. ವಿಧಾನಸೌಧದ ಒಳಗೆ ಅಷ್ಟು ಹಣ ಏಕೆ ಇರಿಸಬೇಕಿತ್ತು? ಇದು ಅಪರಾಧ. ಈ ಕೂಡಲೇ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ವಿಧಾನಸೌಧದ ಸಚಿವರ ಕಚೇರಿಯಿಂದ ಮೋಹನ್‌ ಹಣದ ಬ್ಯಾಗ್‌ ಹಿಡಿದು ಹೋಗುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಚಿವ ಸ್ಥಾನದ ಜವಾಬ್ದಾರಿ ಹೊತ್ತಿರುವ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಕೆಲಸ ಮಾಡುವವರು ಈ ರೀತಿ ಹಣದ ಬ್ಯಾಗ್‌ ಹಿಡಿದು ಸಾಗುವುದು ಅನಾಗರಿಕ ಪ್ರಜ್ಞೆಯಾಗಿದೆ ಎಂದರು.

ಯಾವುದೇ ವ್ಯಕ್ತಿ ವಿಧಾನಸೌಧದ ಒಳಗೆ ಪ್ರವೇಶಿಸಬೇಕಾದರೆ ಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ. ಹೀಗಿರುವಾಗ ಸಚಿವರ ಕಚೇರಿಗೆ ಎಲ್ಲರ ಕಣ್ಣು ತಪ್ಪಿಸಿ ಅಷ್ಟೊಂದು ಹಣ ತೆಗೆದುಕೊಂಡು ಹೋಗಿದ್ದ ವ್ಯಕ್ತಿ ಯಾರು ಎನ್ನುವುದು ನಿಗೂಢವಾಗಿದೆ. ಸಚಿವರ ಸಲಹೆ ಸೂಚನೆ ಇಲ್ಲದೆ ಹಣ ಕಚೇರಿ ಸೇರಲು ಸಾಧ್ಯವಿಲ್ಲ. ಇದರಲ್ಲಿ ಸಚಿವರೂ ಪಾಲುದಾರರು ಎಂದು ಆರೋಪಿಸಿದರು.

ಹೀಗಾಗಿ ಸಚಿವರು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಘಟನೆ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನೂರೊಂದು ಶೆಟ್ಟಿ, ನಾಗೇಂದ್ರಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಪೃಥ್ವಿರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ಬಸವಣ್ಣ, ಸುಂದರ್‌ರಾಜ್‌, ಪುರುಷೋತ್ತಮ್, ಚಂದ್ರು, ಕಿರಣ್‌ ಭಾಗವಹಿಸಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !