ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ಗೂ ಮುನ್ನ ‘ಹಲ್ವಾ‘ ಸಮಾರಂಭ ನಡೆಯುವುದೇಕೆ?

Last Updated 20 ಜನವರಿ 2020, 7:39 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಸೋಮವಾರಹಲ್ವಾ ಕಾರ್ಯಕ್ರಮ ಆಯೋಜಿಸುವಮೂಲಕ ಬಜೆಟ್‌ ಪ್ರತಿ ಮುದ್ರಣ ಕಾರ್ಯಕ್ಕೆ ಚಾಲನೆ ನೀಡಿದರು. ಈ ಮೂಲಕ ವಿತ್ತ ಇಲಾಖೆಯ ಸಿಬ್ಬಂದಿಯನ್ನು ಬಜೆಟ್‌ ಪ್ರತಿ ಮುದ್ರಣಾ ಕಾರ್ಯಕ್ಕೆತೊಡಗಿಸಿದರು.

ಅಷ್ಟಕ್ಕೂ ಹಲ್ವಾ ಸಮಾರಂಭ ಎಂದರೇನು?

* ಕೇಂದ್ರ ಬಜೆಟ್‌ ಮಂಡನೆಯಾಗುವುದಕ್ಕೂ ಕೆಲ ವಾರಗಳಿಗೆ ಮೊದಲು ಹಣಕಾಸು ಇಲಾಖೆಯಿಂದ ಈ ಹಲ್ವಾ ಸಮಾರಂಭವನ್ನು ಆಯೋಜಿಸಲಾಗುತ್ತದೆ.

* ಸಮಾರಂಭದ ಮೂಲಕ ಕೇಂದ್ರ ಬಜೆಟ್‌ನ ಪ್ರತಿ ಮುದ್ರಣಾ ಕಾರ್ಯಕ್ಕೆ ಇಲಾಖೆಯು ಅಧಿಕೃತವಾಗಿ ಚಾಲನೆ ನೀಡುತ್ತದೆ. ಅದರಂತೆ ಈ ಬಾರಿ ನಿರ್ಮಲಾ ಸೀತಾರಾಮನ್‌ ಅವರು ಹಲ್ವಾ ಕಾರ್ಯಕ್ರಮದ ಮೂಲಕ ಬಜೆಟ್‌ ಪ್ರತಿ ಮುದ್ರಣಾ ಕಾರ್ಯಕ್ಕೆ ಚಾಲನೆ ನೀಡಿದರು.

* ಹಲ್ವಾ ಸಮಾರಂಭದ ಹಿಂದಿನ ಚಾರಿತ್ರಿಕ ಹಿನ್ನೆಲೆ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಯಾವುದೇ ಶುಭ ಕಾರ್ಯ ಆರಂಭಿಸುವುದಕ್ಕೂ ಮೊದಲು ಸಿಹಿ ಹಂಚುವ ಸಂಪ್ರದಾಯದಂತೆ ಹಲ್ವಾ ಸಮಾರಂಭವೂ ನಡೆದುಕೊಂಡು ಬಂದಿದೆ. ಕೇಂದ್ರ ಹಣಕಾಸು ಇಲಾಖೆಯ ಪ್ರಕಾರ ಹಲ್ವಾ ಸಮಾರಂಭ ಎಂದರೆ ಅದು ಇಲಾಖೆಯ ಸಿಬ್ಬಂದಿಯನ್ನು ಬಜೆಟ್‌ ಪ್ರತಿ ಮುದ್ರಣ ಕಾರ್ಯದಲ್ಲಿ ತೊಡಗಿಸುವುದು ಎಂದೇ ಅರ್ಥ.

* ದೊಡ್ಡ ಬಾಣಲೆಯಲ್ಲಿಹಲ್ವಾ ತಯಾರಿಸಿ ಹಣಕಾಸು ಇಲಾಖೆಯ ಸಿಬ್ಬಂದಿ, ಅಧಿಕಾರಿಗಳಿಗೆ ಹಂಚಲಾಗುತ್ತದೆ.

* ಈ ಕಾರ್ಯಕ್ರಮ ಮುಗಿದ ಕೂಡಲೇ ಹಣಕಾಸು ಇಲಾಖೆಯ ಸಿಬ್ಬಂದಿ ಬಂಧಿಗಳಾಗುತ್ತಾರೆ! ಅಂದರೆ, ಮನೆಗೂ ಹೋಗದಂತೆ ಬಜೆಟ್‌ ಪ್ರತಿ ಮುದ್ರಣ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಬಜೆಟ್‌ ಮುಗಿಯುವವರೆಗೆ ಅವರಿಗೆ ಬಾಹ್ಯ ಜಗತ್ತಿನ ಸಂಪರ್ಕ ಇರುವುದಿಲ್ಲ. ಮುದ್ರಣ ಕಾರ್ಯಕ್ಕಾಗಿ ಅವರೆಲ್ಲರೂ ಉತ್ತರ ಬ್ಲಾಕ್‌ನ ತಳ ಅಂತಸ್ಥಿನ ಕಚೇರಿಗೆ ಸ್ಥಳಾಂತರಗೊಳ್ಳುತ್ತಾರೆ.

* ಬಜೆಟ್‌ನ ಕುರಿತು ಗೌಪ್ಯತೆಯನ್ನು ಕಾದುಕೊಳ್ಳುವುದೇ ಇದರ ಮೂಲ ಉದ್ದೇಶ. ಬಜೆಟ್‌ ಮುಗಿಯವರೆಗೆ ಸಿಬ್ಬಂದಿ ಹೊರಗಿನವರೊಂದಿಗಾಗಲಿ, ಕುಟುಂಬಸ್ಥರೊಂದಿಗಾಗಲಿ ಮಾತನಾಡಲೂ ಸಾಧ್ಯವಿಲ್ಲ. ಇ–ಮೇಲ್‌, ಫೋನ್‌ ಸಂಪರ್ಕವೂ ಇರಲಾರದು. ಮೇಲಧಿಕಾರಿಗಳು ಮಾತ್ರ ಮನೆಯೊಂದಿಗೆ ಸಂಪರ್ಕ ಹೊಂದಿರಬಹುದು.

* ಬಜೆಟ್‌ ಪ್ರತಿಗಳು 1950ರ ವರೆಗೆ ರಾಷ್ಟ್ರಪತಿ ಭವನದಲ್ಲಿ ಮುದ್ರಣವಾಗುತ್ತಿದ್ದವು. ಅದೇ ವರ್ಷ ಪ್ರತಿಗಳು ಸೋರಿಕೆಯಾಗಿದ್ದವು. ಇದೇ ಹಿನ್ನೆಲೆಯಲ್ಲಿ ಉತ್ತರ ಬ್ಲಾಕ್‌ಗೆ ಮುದ್ರಣ ಕಾರ್ಯ ಸ್ಥಳಾಂತರಗೊಂಡಿತು. ಅಂದಿನಿಂದಲೂ ಮುದ್ರಣ ಅಲ್ಲಿಯೇ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT