ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಗೂ ವಿತ್ತೀಯ ಹೊಣೆಗಾರಿಕೆ

ಉತ್ಪ್ರೇಕ್ಷೆಯ ಬಜೆಟ್‌ಗೆ ಬೀಳಲಿದೆ ಲಗಾಮು l ವರಮಾನ ಲೆಕ್ಕಾಚಾರ ಇನ್ನು ವಾಸ್ತವಕ್ಕೆ ಹತ್ತಿರ
Last Updated 26 ಜನವರಿ 2021, 19:38 IST
ಅಕ್ಷರ ಗಾತ್ರ

ಬೆಂಗಳೂರು: ವಾಸ್ತವಕ್ಕಿಂತ ಹೆಚ್ಚು ವರಮಾನ ನಿರೀಕ್ಷಿಸಿ ಬಿಬಿಎಂಪಿ ಬಜೆಟ್‌ ಮಂಡಿಸುವ ಪರಿಪಾಠಕ್ಕೆ ಕಡಿವಾಣ ಹಾಡಲು ಸರ್ಕಾರ ಮುಂದಾಗಿದೆ. ಈ ಸಲುವಾಗಿ ‘ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿಯಮಗಳು 2020’ರ ಕರಡಿಗೆ ಅಂತಿಮ ರೂಪ ನೀಡಲಾಗಿದ್ದು, ಅದರ ಜಾರಿಗೂ ಸಿದ್ಧತೆ ನಡೆದಿದೆ.

‘2003ರ ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ವಿತ್ತೀಯ ಹೊಣೆಗಾರಿಕೆ ಕಾಯ್ದೆಯಲ್ಲಿರುವ ಅಂಶಗಳನ್ನು ಆಧರಿಸಿ ನಿಯಮಗಳನ್ನು ರೂಪಿಸಲಾಗಿದೆ. ಈ ನಿಯಮಗಳ ಕುರಿತು ಬಿಬಿಎಂಪಿ ಸಿದ್ಧಪಡಿಸಿದ್ದ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆ ಈಗಾಗಲೇ ಅನುಮೋದನೆ ನೀಡಿದೆ. ಹಣಕಾಸು ಇಲಾಖೆಯೂ ಇದನ್ನು ಪರಿಶೀಲಿಸಿ ಹೆಚ್ಚಿನ ಪರಾಮರ್ಶೆಗಾಗಿ ಕಾನೂನು ಇಲಾಖೆಗೆ ಕಳುಹಿಸಿತ್ತು. ಕಾನೂನು ಇಲಾಖೆ ಇದನ್ನು ಪರಿಶೀಲಿಸಿ ಮತ್ತೆ ಹಣಕಾಸು ಇಲಾಖೆಗೆ ಕಳುಹಿಸಿಕೊಟ್ಟಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರ ಈ ಕರಡು ನಿಯಮಗಳ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡಿ, ಆಕ್ಷೇಪಣೆ ಅಥವಾ ಸಲಹೆಗಳನ್ನು ನೀಡಲು ಕನಿಷ್ಠ 15 ದಿನಗಳ ಕಾಲಾವಕಾಶ ನೀಡಲಿದೆ. ಸಾರ್ವಜನಿಕ ಪ್ರತಿಕ್ರಿಯೆಯನ್ನು ಆಧರಿಸಿ ನಿಯಮಗಳ ಬಗ್ಗೆ ಅಂತಿಮ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗುತ್ತದೆ’ ಎಂದರು.

ಕರಡು ನಿಯಮಗಳಲ್ಲೇನಿದೆ

ಬಿಬಿಎಂಪಿಯು ಹಣಕಾಸು ನಿರ್ವಹಣಾ ನೀತಿ ರೂಪಿಸಬೇಕಾಗುತ್ತದೆ. ಅದರ ಪ್ರಕಾರ ಬಿಬಿಎಂಪಿ ವಿತ್ತೀಯ ಕೊರತೆ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬಜೆಟ್‌ ಮಂಡಿಸುವಾಗ ಯಾವತ್ತೂ ವೆಚ್ಚಕ್ಕಿಂತ ಹೆಚ್ಚು ವರಮಾನ (ಮಿಗತೆ) ಇರುವಂತೆ ನೋಡಿಕೊಳ್ಳಬೇಕು.

ಸರ್ಕಾರ ಅನುಮೋದನೆ ನೀಡುವ ಬಜೆಟ್‌ನಲ್ಲಿ ವಿತ್ತೀಯ ಕೊರತೆ, ಬಜೆಟ್‌ ಮಂಡಿಸುವ ಹಿಂದಿನ ವರ್ಷದ ಸ್ವೀಕೃತಿಯ ಒಟ್ಟು ಮೊತ್ತಕ್ಕಿಂತ ಶೇ 3ಕ್ಕಿಂತ ಹೆಚ್ಚು ಇರುವಂತಿಲ್ಲ. ನಿರೀಕ್ಷಿತ ವರಮಾನವು ವಾಸ್ತವ ಸಂಯುಕ್ತ ವಾರ್ಷಿಕ ಬೆಳವಣಿಗೆ ದರಕ್ಕಿಂತ (ಸಿಎಜಿಆರ್‌) ಹೆಚ್ಚು ಇರುವಂತಿಲ್ಲ.

ಪ್ರಾಕೃತಿಕ ವಿಕೋಪ ಮತ್ತಿತರ ಕಾರಣಗಳಿಂದ ಎದುರಾಗುವ ಊಹಿಸಲು ಸಾಧ್ಯವಿಲ್ಲದ ಪರಿಸ್ಥಿತಿಯ ಸಂದರ್ಭದಲ್ಲಿ ಮಾತ್ರವಿತ್ತೀಯ ಕೊರತೆಯ ಪ್ರಮಾಣವನ್ನು ಈ ನಿಯಮದಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಇರಬಹುದು. ಆದರೆ, ಈ ಪ್ರಮಾಣವು ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿದ ಹಣಕಾಸು ವೆಚ್ಚಕ್ಕಿಂತ ಹೆಚ್ಚು ಇರುವಂತಿಲ್ಲ.

ಬಜೆಟ್‌ ಸಿದ್ಧಪಡಿಸುವಾಗ ಪಾಲಿಕೆಯ ಸ್ವಂತ ಮೂಲಗಳ ವರಮಾನದ ಮಿತಿಯನ್ನು ಪಾಲಿಕೆಯ ಹಿಂದಿನ ವರ್ಷದ ವಾಸ್ತವದ ವರಮಾನಕ್ಕೆ ಅದರ ಆ ವರ್ಷದ ವಾಸ್ತವ ವರಮಾನದ ಆಧಾರದಲ್ಲಿ ಲೆಕ್ಕಹಾಕಲಾದ ಸಿಎಜಿಆರ್‌ನ ಶೇಕಡವಾರು ಪ್ರಮಾಣವನ್ನು ಸೇರಿಸಿ ನಿಗದಿಪಡಿಸಬೇಕು. ಯಾವುದೇ ವರಮಾನವನ್ನು ಲೆಕ್ಕಹಾಕುವಾಗ ಅದು ಸಾಧ್ಯವಾದಷ್ಟು ವಾಸ್ತವದ ಆಧಾರದಲ್ಲಿರಬೇಕು. ಯಾವುದಾದರೂ ಅನುದಾನ ವಾಸ್ತವದಲ್ಲಿ ಬಿಡುಗಡೆಯಾಗಿರದೇ ಇದ್ದರೆ, ಬಜೆಟ್‌ ರೂಪಿಸುವಾಗ ಪರಿಷ್ಕೃತ ವರಮಾನವನ್ನು ಪರಿಗಣಿಸಬೇಕು.

ವಾರ್ಷಿಕ ಬಜೆಟ್‌ ಈ ಮಿತಿಯನ್ನು ಮೀರುವಂತಿಲ್ಲ. ಆದರೆ, ಬಜೆಟ್‌ನಲ್ಲಿ ಉಲ್ಲೇಖಿಸುವ ಅಂಶಗಳಿಗೆ ಸರ್ಕಾರದಿಂದ ಮುಂಚಿತವಾಗಿ ಲಿಖಿತ ಮಂಜೂರಾತಿ ಪಡೆದು ಹಾಗೂ ಅದರ ವೆಚ್ಚವನ್ನು ಭರಿಸುವುದಕ್ಕೆ ಹಣಕಾಸಿನ ಮೂಲವನ್ನು ಉಲ್ಲೇಖಿಸಿದ್ದರೆ ಈ ಮಿತಿಗಿಂತಲೂ ಹೆಚ್ಚು ಮೊತ್ತದ ಬಜೆಟ್‌ ರೂಪಿಸಬಹುದು. ಆಗಲೂ ವರ್ಷಾಂತ್ಯದ ನಗದು ಉಳಿಕೆಯು ₹ 1 ಲಕ್ಷಕ್ಕಿಂತ ಕಡಿಮೆ ಇರದಂತೆ ನೋಡಿಕೊಳ್ಳಬೇಕು ಎಂಬ ಅಂಶಗಳು ಈ ನಿಯಮಗಳಲ್ಲಿವೆ.

ಏನಿದು ಸಿಎಜಿಆರ್‌?

ಐದು ವರ್ಷಗಳ ಅವಧಿಯಲ್ಲಿ ಪಾಲಿಕೆಯ ಅಭಿವೃದ್ಧಿ ದರಗಳ ಸರಾಸರಿಯೇ ಸಿಜಿಎಆರ್. ಬಜೆಟ್‌ ರೂಪಿಸುವ ವರ್ಷದ ಹಿಂದಿನ ವರ್ಷದ ಕಂದಾಯ ಸ್ವೀಕೃತಿಗೆ, ಸಿಜಿಎಆರ್‌ ಲೆಕ್ಕ ಹಾಕುವ ಆರಂಭಿಕ ವರ್ಷದ ಕಂದಾಯ ಸ್ವೀಕೃತಿಯಿಂದ ಭಾಗಿಸಿ, ಇದನ್ನು ಲೆಕ್ಕಾಚಾರ ಮಾಡಲು ಪರಿಗಣಿಸಿದ ಒಟ್ಟು ವರ್ಷಗಳನ್ನು ಅದಕ್ಕೆ ಗುಣಿಸಿ ಒಂದನ್ನು ಕಳೆಯುವ ಮೂಲಕ ಇದನ್ನು ಲೆಕ್ಕಹಾಕಲಾಗುತ್ತದೆ.

ಸಿಎಜಿಆರ್‌ ಲೆಕ್ಕಾಚಾರ ಹಾಕಲು ಪರಿಗಣಿಸುವ ಮೊದಲ ಆರ್ಥಿಕ ವರ್ಷದ ಮತ್ತು ಕೊನೆಯ ಆರ್ಥಿಕ ವರ್ಷದ ವಾಸ್ತವ ತೆರಿಗೆ ಸ್ವೀಕೃತಿಯನ್ನು ಮಾತ್ರ ಪರಿಗಣಿಸಬೇಕು.

ಸಿಎಜಿಆರ್‌ ನಿರ್ಧರಿಸಲು ಬಳಸುವ ಕಂದಾಯ ಸ್ವೀಕೃತಿಯನ್ನು ಹೇಗೆ ಲೆಕ್ಕಹಾಕಬೇಕೆಂಬುದನ್ನೂ ನಿಯಮಗಳ ಕರಡಿನಲ್ಲಿ ಸ್ಪಷ್ಟಪಡಿಸಲಾಗಿದೆ.

ಹಿಂದಿನ ವರ್ಷದಲ್ಲಿ ವಾಸ್ತವದಲ್ಲಿ ಎಷ್ಟು ವರಮಾನ ಬಂದಿದೆ ಎಂಬ ಆಧಾರದಲ್ಲೇ ಬಜೆಟ್‌ ರೂಪಿಸಬೇಕು. ಆದರೆ ಬಜೆಟ್‌ ಗಾತ್ರವನ್ನು ಸಿಎಜಿಆರ್‌ ದರದಷ್ಟು ಪ್ರಮಾಣದಲ್ಲಿ ಹೆಚ್ಚಿಸುವುದಕ್ಕೆ ಅವಕಾಶ ಇರುತ್ತದೆ. ಉದಾಹರಣೆಗೆ ಹಿಂದಿನ ವರ್ಷದ ಕಂದಾಯ ಸ್ವೀಕೃತಿ ₹ 4ಸಾವಿರ ಕೋಟಿ ಆಗಿದ್ದರೆ, ಸಿಎಜಿಆರ್‌ ದರ 10 ಇದ್ದರೆ, ಕಂದಾಯ ಸ್ವೀಕೃತಿಯನ್ನು ₹4,400 ಕೋಟಿ ಎಂದು ಅಂದಾಜು ಮಾಡಿ ಅದಕ್ಕೆ ಬಂಡವಾಳ ಸ್ವೀಕೃತಿಯನ್ನು ಸೇರಿಸಿ ಬಜೆಟ್‌ ಗಾತ್ರವನ್ನು ನಿಗದಿಪಡಿಸಬೇಕಾತ್ತದೆ.


ಸಿಎಜಿಆರ್ ಲೆಕ್ಕ ಹಾಕಲು ಬಳಸುವ ಸ್ವೀಕೃತಿಗಳು

l ಆಸ್ತಿ ತೆರಿಗೆ (ದಂಡನಾ ಶುಲ್ಕ, ಬಡ್ಡಿಯನ್ನು ಒಳಗೊಂಡ ಸೆಸ್‌ಗಳನ್ನು ಹೊರತಾಗಿ)

l ಜಾಹೀರಾತು ತೆರಿಗೆ ಅಥವಾ ಶುಲ್ಕ

l ಮನೋರಂಜನಾ ತೆರಿಗೆ

l ತೆರಿಗೆಯೇತರ ವರಮಾನಗಳು

l ರಾಜ್ಯ ಹಣಕಾಸು ಆಯೋಗದ ಅನುದಾನ

l ಕೇಂದ್ರ ಹಣಕಾಸು ಆಯೋಗದ ಅನುದಾನ

* ಇತರ ಸ್ವೀಕೃತಿಗಳು

ಸಿಜಿಎಆರ್‌ಗೆ ಸ್ವೀಕೃತಿ ಲೆಕ್ಕಹಾಕುವಾಗ ಇವುಗಳನ್ನು ಪರಿಗಣಿಸುವಂತಿಲ್ಲ

l ಪ್ರಮುಖ ಕಾಮಗಾರಿಗಳಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಂಜೂರಾದ ನಿರ್ದಿಷ್ಟ ಅನುದಾನ

l ಯಾವುದೇ ಏಜೆನ್ಸಿಗಳಿಂದ ಸ್ವೀಕರಿಸಿರುವ ಠೇವಣಿಗಳು

l ಸಾಲಗಳು

l ಮುಂಗಡ, ಸಾಲ ಮತ್ತು ಶಾಸನಬದ್ಧ ಬಾಕಿಗಳ ವಸೂಲಾತಿ

l ಮರುಪಾವತಿ ಮಾಡಬೇಕಾದ ಭದ್ರತಾ ಠೇವಣಿಗಳು, ಇಎಂಡಿ ಅಥವಾ ಇತರ ಮರುಪಾವತಿ ಮಾಡಬೇಕಾದ ಠೇವಣಿಗಳು

l ಜಮೀನಿನ ಮಾರಾಟದಿಂದ ಬರುವ ಸ್ವೀಕೃತಿಗಳು

l ಸಾಮಾನ್ಯ ಸ್ವೀಕೃತಿಗಳಿಂದ ಹೊರತಾದ ಸ್ವೀಕೃತಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT