ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಸಿಯಾದ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ನಿರೀಕ್ಷೆ

ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ₹500 ಕೋಟಿ
Last Updated 5 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೀದರ್: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ₹500 ಕೋಟಿ ಅನುದಾನ ಘೋಷಣೆ ಮಾಡಿರುವುದು ಜಿಲ್ಲೆಯ ಜನರಿಗೆ ಸಂತಸ ತಂದರೆ, ಪ್ರವಾಸೋದ್ಯಮದ ಅಭಿವೃದ್ಧಿಗೆ ಬಿಡಿಗಾಸನ್ನೂ ನೀಡದಿರುವುದು ಬೇಸರ ಉಂಟು ಮಾಡಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನುಭವ ಮಂಟಪ ನಿರ್ಮಾಣಕ್ಕಾಗಿ ಗೋ.ರು.ಚೆನ್ನಬಸಪ್ಪ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಈ ಸಮಿತಿಯು ₹ 650 ಕೋಟಿ ಯೋಜನಾ ವೆಚ್ಚದ ವರದಿ ಸಲ್ಲಿಸಿದ ನಂತರ ಅನುದಾನ ಒದಗಿಸುವ ಭರವಸೆ ನೀಡಿದ್ದರು. ಕಳೆದ ವರ್ಷ ಯಡಿಯೂರಪ್ಪ ಅವರು ₹ 50 ಕೋಟಿ ಮಂಜೂರು ಮಾಡಿ, ₹ 20 ಕೋಟಿ ಬಿಡುಗಡೆಯನ್ನೂ ಮಾಡಿದ್ದರು. ಇದೀಗ ಬಜೆಟ್‌ನಲ್ಲೇ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ₹ 500 ಕೋಟಿ ಘೋಷಣೆ ಮಾಡಿರುವುದನ್ನು ಬಸವ ಅನುಯಾಯಿಗಳು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.

ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಬಜೆಟ್‌ನಲ್ಲಿ  ಆದ್ಯತೆ ನೀಡಿಲ್ಲ. ಜಿಲ್ಲೆಯ ಪ್ರವಾಸೋದ್ಯಮವನ್ನು ಹಿಂದಿನ ಕಾಂಗ್ರೆಸ್ ಹಾಗೂ ಜೆಡಿಎಸ್–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಂತೆ ಬಿಜೆಪಿ ಸರ್ಕಾರವೂ ಕಡೆಗಣಿಸಿದೆ. ಜಿಲ್ಲೆಗೆ ಹೊಸ ಯೋಜನೆ ಅಥವಾ ಅನುದಾನ ಬಿಡುಗಡೆ ಮಾಡುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸದಿರುವುದು ಜಿಲ್ಲೆಯ ಜನರಿಗೆ ಬೇಸರ ಉಂಟು ಮಾಡಿದೆ.

ಕೃಷಿ ಕಾಲೇಜು ಮಂಜೂರು ಮಾಡುವ, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಪುನಃಶ್ಚೇತನ ನೀಡುವ ಹಾಗೂ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ಜನರ ನಿರೀಕ್ಷೆಯನ್ನು ಬಜೆಟ್‌ ಹುಸಿಗೊಳಿಸಿದೆ.

‘ಬೆಂಗಳೂರು ಹಾಗೂ ಶಿವಮೊಗ್ಗದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಒತ್ತು ಕೊಡಲಾಗಿದೆ. ಬೀದರ್‌ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ವಿಪುಲ ಅವಕಾಶಗಳಿದ್ದರೂ ರಾಜ್ಯ ಸರ್ಕಾರ ಜಿಲ್ಲೆಯನ್ನು ಕಡೆಗಣಿಸಿದೆ’ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಹೇಳುತ್ತಾರೆ.
ಜಿಲ್ಲೆಯ 200 ಗ್ರಾಮಗಳು ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಸರ್ಕಾರ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಬೀದರ್, ಚಿಟಗುಪ್ಪ, ಭಾಲ್ಕಿ ಪಟ್ಟಣಕ್ಕೆ ಕಾರಂಜಾ ಜಲಾಶಯದಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ.ಔರಾದ್‌ ಪಟ್ಟಣ ಸೇರಿದಂತೆ ತಾಲ್ಲೂಕಿನ ಅನೇಕ ಗ್ರಾಮಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿವೆ. ಆಲಮಟ್ಟಿ ಜಲಾಶಯದಿಂದ ಔರಾದ್‌ಗೆ ನೀರು ತರುವ ವಿಸ್ತೃತ ವರದಿಯೊಂದನ್ನು ಜಿಲ್ಲಾ ಆಡಳಿತ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ರಾಜ್ಯ ಸರ್ಕಾರ ಅದನ್ನೂ ಪರಿಗಣಿಸಿಲ್ಲ.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಜೆಟ್‌ ಭಾಷಣದ ನಂತರ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ಕಾರಂಜಾ ಜಲಾಶಯದಿಂದ ಭಾಲ್ಕಿ ತಾಲ್ಲೂಕಿನ 20 ಹಳ್ಳಿಗಳಿಗೆ ಶಾಶ್ವತ ನೀರಿನ ಸರಬರಾಜಿಗೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಆರು ತಿಂಗಳ ಒಳಗೆ ಶಾಶ್ವತ ನೀರಿನ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಆದರೆ, ಬಜೆಟ್‌ನಲ್ಲಿ ಕುಡಿಯುವ ನೀರಿನ ಯೋಜನೆಗೆ ಅನುದಾನ ಕಾಯ್ದಿರಿಸುವ ನಿರೀಕ್ಷೆ ಹುಸಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT