ಗುರುವಾರ , ಏಪ್ರಿಲ್ 9, 2020
19 °C
ಬೀದರ್‌ನಲ್ಲಿ ಹೂಡಿಕೆ ಮಾಡಲು ದೊಡ್ಡ ಬಂಡವಾಳದಾರರ ನಿರಾಸಕ್ತಿ

ಅಗ್ರಿಕಲ್ಚರ್‌ ಕ್ಲಸ್ಟರ್‌ ಯೋಜನೆ ಮರೀಚಿಕೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

ಬೀದರ್‌: ಕೃಷಿಕರು ಹಾಗೂ ನಿರುದ್ಯೋಗಿ ಯುವಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಹಿಂದಿನ ಜೆಡಿಎಸ್– ಕಾಂಗ್ರೆಸ್ ನೇತೃತ್ವದ ಸರ್ಕಾರ ತನ್ನ ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಣೆ ಮಾಡಿದ್ದ ‘ಅಗ್ರಿಕಲ್ಚರ್‌ ಕ್ಲಸ್ಟರ್‌’ ಸರ್ಕಾರದ ಕಡತಗಳಲ್ಲೇ ಉಳಿದುಕೊಂಡಿದೆ.

‘ಅಗ್ರಿಕಲ್ಚರ್‌ ಕ್ಲಸ್ಟರ್‌’ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಯಾವ ಪ್ರಕ್ರಿಯೆಯೂ ಆರಂಭವಾಗಿಲ್ಲ. ಹುಬ್ಬಳ್ಳಿಯಲ್ಲಿ ಈಚೆಗೆ ನಡೆದ ಹೂಡಿಕೆದಾರರ ಸಮಾವೇಶದಲ್ಲೂ ಬಂಡವಾಳದಾರರು ಬೀದರ್‌ನಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರಿಸಿಲ್ಲ. ಹೀಗಾಗಿ ‘ಅಗ್ರಿಕಲ್ಚರ್‌ ಕ್ಲಸ್ಟರ್‌’ ಯೋಜನೆಗೆ ಕಾರ್ಮೋಡ ಕವಿದಿದೆ.

ಕೃಷಿ ಚಟುವಟಿಕೆಗೆ ಪೂರಕ ಉಪಕರಣ ಹಾಗೂ ಕೃಷಿ ಉತ್ಪನ್ನಗಳನ್ನು ಸಂರಕ್ಷಿಸುವ ಯಂತ್ರಗಳ ಅವಶ್ಯಕತೆ ಇದೆ. ಜಿಲ್ಲೆಗೆ ಮುಂದಿನ ನಾಲ್ಕು ವರ್ಷಗಳಲ್ಲಿ ಕೃಷಿ ಉಪಕರಣಗಳನ್ನು ತಯಾರಿಸಲು ಮುಂದೆ ಬರುವ ಕಂಪನಿಗಳಿಗೆ ₹ 2,000 ಕೋಟಿ ಬಂಡವಾಳ ಹೂಡಲು ಉದ್ದೇಶಿಸಲಾಗಿದೆ ಎಂದು ಹಿಂದಿನ ಬಜೆಟ್‌ನಲ್ಲಿ ಆಗಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದರು. ಒಂದು ವರ್ಷ ಕಳೆದರೂ ಯೋಜನೆ ಆರಂಭದ ಲಕ್ಷಣಗಳು ಕಂಡು ಬಂದಿಲ್ಲ.

‘ಅಗ್ರಿಕಲ್ಚರ್‌ ಇಂಪ್ಲಿಮೆಂಟ್‌ ಕ್ಲಸ್ಟರ್‌ನಲ್ಲಿ ಬಂಡವಾಳ ಹೂಡಲು ಒಂದಿಬ್ಬರು ಹೂಡಿಕೆದಾರರು ಇಲ್ಲಿಯ ಕೈಗಾರಿಕೆ ಪ್ರದೇಶ ಹಾಗೂ ಖಾಸಗಿ ಭೂಮಿಯನ್ನು ನೋಡಿಕೊಂಡು ಹೋಗಿದ್ದಾರೆ. ಹೂಡಿಕೆದಾರರ ಕಡೆಯಿಂದ ಪ್ರತಿಕ್ರಿಯೆ ಬರಬೇಕಿದೆ’ ಎಂದು ಜಿಲ್ಲಾ ಕೈಗಾರಿಕೆ ಕೇಂದ್ರದ ಉಪ ನಿರ್ದೇಶಕಿ ಸುರೇಖಾ ಮುನೋಳಿ ಹೇಳುತ್ತಾರೆ.

‘ಬೆಂಗಳೂರಿನ ಉದ್ಯೋಗ ಮಿತ್ರ ಯೋಜನೆಯ ಅಧಿಕಾರಿ ಅಗ್ರಿಕಲ್ಚರ್ ಕ್ಲಸ್ಟರ್‌ ನೋಡಲ್‌ ಅಧಿಕಾರಿಯಾಗಿದ್ದಾರೆ. ‘ಅಗ್ರಿಕಲ್ಚರ್‌ ಕ್ಲಸ್ಟರ್‌’ಗೆ ಈವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಯೋಜನೆ ಆರಂಭವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ನಂತರದಲ್ಲಿ ಅದು ವೇಗ ಪಡೆದುಕೊಳ್ಳಲಿದೆ’ ಎನ್ನುತ್ತಾರೆ.

ಅಗ್ರಿಕಲ್ಚರ್‌ ಇಂಪ್ಲಿಮೆಂಟ್‌ ಕ್ಲಸ್ಟರ್‌ನಲ್ಲಿ ಹೂಡಿಕೆ ಮಾಡಲು ಸ್ಥಳೀಯರು ಒಲವು ತೋರಬೇಕಿದೆ. ಹೊರಗಿನವರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಚುನಾಯಿತ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಯೋಜನೆಗಳನ್ನು ತರಲು ಪ್ರಯತ್ನಿಸಬೇಕು. ಇಲ್ಲಿದಿದ್ದರೆ ಕ್ಲಸ್ಟರ್‌ ಸ್ಥಾಪನೆ ಯೋಜನೆ ಕಡತಗಳಲ್ಲೇ ಉಳಿಯಲಿದೆ.

ಜನಪ್ರತಿನಿಧಿಗಳು ಕೃಷಿ ಮಾರುಕಟ್ಟೆಯಲ್ಲಿನ ಯಂತ್ರೋಪಕರಣಗಳ ಬೇಡಿಕೆ ಹಾಗೂ ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುತ್ತಿಲ್ಲ. ಇದೇ ಕಾರಣಕ್ಕೆ ಅಗ್ರಿಕಲ್ಚರ್‌ ಇಂಪ್ಲಿಮೆಂಟ್‌ ಕ್ಲಸ್ಟರ್‌ನಲ್ಲಿ ಹಣ ಹೂಡಿಕೆ ಮಾಡಲು ಹೂಡಿಕೆದಾರರು ಮುಂದೆ ಬರುತ್ತಿಲ್ಲ. ಸರ್ಕಾರವೇ ನೇರವಾಗಿ ಹಣ ಹೂಡಿದರೆ ಮಾತ್ರ ಯೋಜನೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ರೈತರು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು