ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್: 50ಕ್ಕೂ ಹೆಚ್ಚು ವಸ್ತುಗಳ ಮೇಲೆ ಆಮದು ಸುಂಕ ಶೇ 5–10 ಹೆಚ್ಚಳ ಸಾಧ್ಯತೆ

Last Updated 29 ಜನವರಿ 2021, 7:28 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಬಜೆಟ್‌ನಲ್ಲಿ ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ 50ಕ್ಕೂ ಹೆಚ್ಚು ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇ 5ರಿಂದ 10ರಷ್ಟು ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮ ನಿರ್ಭರ ಭಾರತ’ ಅಭಿಯಾನಕ್ಕೆ ಪೂರಕವಾಗಿ ಮತ್ತು ದೇಶೀಯ ಉತ್ಪಾದನೆ ಬೆಂಬಲಿಸಲು ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಸುಂಕ ಹೆಚ್ಚಳದಿಂದ ಸುಮಾರು ₹270–280 ಕೋಟಿ ಹೆಚ್ಚುವರಿ ಆದಾಯ ಗಳಿಸುವುದನ್ನು ಸರ್ಕಾರ ಎದುರುನೋಡುತ್ತಿದೆ. ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಆರ್ಥಿಕತೆ ಕುಂಠಿತಗೊಂಡಿರುವ ಬೆನ್ನಲ್ಲೇ ಸರ್ಕಾರ ಈ ಕ್ರಮಕ್ಕೆ ಮುಂದಾಗುತ್ತಿದೆ ಎಂದೂ ಮೂಲಗಳು ಹೇಳಿವೆ.

ಸುಂಕ ಹೆಚ್ಚಳವು ಪೀಠೋಪಕರಣ ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲೂ ಪರಿಣಾಮ ಬೀರಲಿದೆ. ಸ್ವೀಡನ್‌ನ ಪೀಠೋಪಕರಣ ತಯಾರಿಕಾ ಸಂಸ್ಥೆ ಐಕಿಯಾ ಹಾಗೂ ಈ ವರ್ಷ ಭಾರತದಲ್ಲಿ ಕಾರು ಬಿಡುಗಡೆಗೆ ಉದ್ದೇಶಿಸಿರುವ ಟೆಸ್ಲಾಗೂ ಹಿನ್ನಡೆಯಾಗಲಿದೆ.

ಪೀಠೋಪಕರಣ ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲೆ ಎಷ್ಟು ತೆರಿಗೆ ಹೆಚ್ಚಳ ಮಾಡಲಾಗುತ್ತದೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ.

ಈ ವಿಚಾರವಾಗಿ ಹಣಕಾಸು ಸಚಿವಾಲಯವನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಗಿದ್ದು, ಪ್ರತಿಕ್ರಿಯೆ ದೊರೆತಿಲ್ಲ. ಇ–ಮೇಲ್‌ಗೂ ಸಚಿವಾಲಯ ಉತ್ತರ ಕಳುಹಿಸಿಲ್ಲ.

ಫೆಬ್ರುವರಿ 1ರಂದು 2021–22ನೇ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಇದು ಏಪ್ರಿಲ್ 1ರಿಂದ ಅನ್ವಯವಾಗಲಿದೆ.

ಕಳೆದ ವರ್ಷ ಪಾದರಕ್ಷೆ, ಪೀಠೋಪಕರಣ, ಆಟಿಕೆಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಆಮದು ತೆರಿಗೆಯನ್ನು ಶೇ 20ರ ವರೆಗೆ ಹೆಚ್ಚಿಸಲಾಗಿತ್ತು.

ಯಾವೆಲ್ಲ ಆಮದು ಉತ್ಪನ್ನ ದುಬಾರಿಯಾಗಬಹುದು?

* ರೆಫ್ರಿಜರೇಟರ್

* ಏರ್ ಕಂಡೀಷನರ್

* ಸ್ಮಾರ್ಟ್‌ಫೋನ್

* ಎಲೆಕ್ಟ್ರಾನಿಕ್ ಉಪಕರಣಗಳು

* ಎಲೆಕ್ಟ್ರಿಕ್ ವಾಹನಗಳು

* ಪೀಠೋಪಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT