ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಹೊಸ ಮತ್ತು ಹಳೆ ತೆರಿಗೆ ನೀತಿ? ಯಾರಿಗೆಲ್ಲ ತೆರಿಗೆ ವಿನಾಯಿತಿ?

Last Updated 1 ಫೆಬ್ರುವರಿ 2023, 16:11 IST
ಅಕ್ಷರ ಗಾತ್ರ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತೆರಿಗೆ ವಿನಾಯಿತಿ ಮಿತಿಯನ್ನು ಹಳೆ ತೆರಿಗೆ ಪದ್ದತಿಯಲ್ಲಿ ₹ 2.5 ಲಕ್ಷದಿಂದ ₹ 3 ಲಕ್ಷಕ್ಕೆ ಹಾಗೂ ಹೊಸ ತೆರಿಗೆ ಪದ್ದತಿಯಲ್ಲಿ ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಏರಿಸಿದ್ದಾರೆ.

ಆದರೆ ಇಲ್ಲಿ ಬಹು ಚರ್ಚಿತವಾಗುತ್ತಿರುವುದು ಹಳೆ ಮತ್ತು ಹೊಸ ತೆರಿಗೆ ನೀತಿ ನಡುವಿನ ವ್ಯತ್ಯಾಸವೇನು? ಯಾರೆಲ್ಲ ₹7ಲಕ್ಷ ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು ಎಂಬುದು.

‘ಆದಾಯ ಮತ್ತು ವೆಚ್ಚ ಕಳೆದ ಬಳಿಕ ₹15 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಉದ್ಯೋಗಿಗಳಿಗೆ ಈ ಎರಡು ತೆರಿಗೆ ನೀತಿಗಳಿಂದ ಹೆಚ್ಚೇನೂ ವ್ಯತ್ಯಾಸವಾಗುವುದಿಲ್ಲ. ಆದಾಗ್ಯೂ ಇದು ಅವರ ವೈಯಕ್ತಿಕ ಹೂಡಿಕೆ ಮತ್ತು ಉಳಿತಾಯಗಳನ್ನು ಅವಲಂಬಿಸಿ ಇರುತ್ತದೆ. 80ಸಿ ಅನ್ವಯ ತೆರಿಗೆ ವಿನಾಯಿತಿ ಪಡೆದ ಹೂಡಿಕೆ ಅಥವಾ ಉಳಿತಾಯ ಹೆಚ್ಚಿದ್ದವರಿಗೆ ಹಳೆ ತೆರಿಗೆ ನೀತಿ ಲಾಭದಾಯಕ. ₹20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಹೊಸ ತೆರಿಗೆ ನೀತಿ ಉತ್ತಮ. ಹೀಗಾಗಿ ಇದು ವೈಯಕ್ತಿಕ ಹೂಡಿಕೆ ಆಧಾರಿತವಾಗಿದೆ’ ಎನ್ನುತ್ತಾರೆ ಲೆಕ್ಕ ಪರಿಶೋಧಕ ವಿನಾಯಕ ಎನ್‌.ಎಲ್‌.

ಹಳೆಯ ತೆರಿಗೆ ನೀತಿಯಲ್ಲಿ ಗೃಹ ಸಾಲ, ಮಕ್ಕಳ ಶಾಲಾ ಶುಲ್ಕದಿಂದ ಹಿಡಿದು ವಿಮೆವೆರೆಗೆ ಸಾಕಷ್ಟು ಹೂಡಿಕೆಗಳು, ಉಳಿತಾಯ ಯೋಜನೆಗಳು ತೆರಿಗೆ ವಿನಾಯಿತಿ ವ್ಯಾಪ್ತಿಯಲ್ಲಿದ್ದವು. ಸುಲಭವಾಗಿ ಹೇಳುವುದಿದ್ದರೆ ಸುಮಾರು 120 ಬಗೆಯ ಹೂಡಿಕೆ, ವೆಚ್ಚಗಳಿಗೆ ತೆರಿಗೆ ವಿನಾಯಿತಿ ಲಭಿಸುತ್ತಿತ್ತು. ಆದರೆ ಹೊಸ ತೆರಿಗೆ ನೀತಿಯಲ್ಲಿ ಈ ಬಗೆಯ ಎಲ್ಲ ವಿನಾಯಿತಿಗಳನ್ನು ತೆಗೆದು ಹಾಕಲಾಗಿದೆ. ಮನೆ ಬಾಡಿಗೆ, ವೈದ್ಯಕೀಯ ವೆಚ್ಚ, ದಾನ, ದೇಣಿಗೆಯಂತಹ 50 ಬಗೆಯ ಹೂಡಿಕೆ ಅಥವಾ ವೆಚ್ಚವನ್ನು ಮಾತ್ರ ವಿನಾಯಿತಿ ವ್ಯಾಪ್ತಿಯಲ್ಲಿ ಇಡಲಾಗಿದೆ.

ಬಜೆಟ್ 2023: ನಿಮ್ಮ ಆದಾಯ ತೆರಿಗೆ ಲೆಕ್ಕಾಚಾರ ಹಾಕಲು ಇಲ್ಲಿ ಕ್ಲಿಕ್ ಮಾಡಿ

‘ಆದಾಯ ತೆರಿಗೆ ಸಲ್ಲಿಕೆ ಮಾಡುವಾಗ ಲೆಕ್ಕಪರಿಶೋಧಕರು ಹೊಸ ಮತ್ತು ಹಳೆ ತೆರಿಗೆ ನೀತಿ ಎರಡನ್ನೂ ಪರಿಗಣಿಸಿ ಸಾಮಾನ್ಯವಾಗಿ ವೇತನ ಪಡೆಯುವ ಉದ್ಯೋಗಿಗಳಿಗೆ ಹೆಚ್ಚು ಲಾಭದಾಯಕವಾಗುವ ನೀತಿ ಅನ್ವಯ ಟ್ಯಾಕ್ಸ್‌ ಫೈಲ್‌ ಮಾಡುತ್ತೇವೆ. ಹಿಂದಿನ ತೆರಿಗೆ ಪದ್ಧತಿಯಲ್ಲಿ ಸಾಕಷ್ಟು ವಿಭಾಗಗಳ ಹೂಡಿಕೆಯು ತೆರಿಗೆ ವಿನಾಯಿತಿ ವ್ಯಾಪ್ತಿಗೆ ಬರುತ್ತಿತ್ತು. ಈಗ ಹಾಗಲ್ಲ ಬೇಸಿಕ್‌ಗಳನ್ನು ಹೊರತುಪಡಿಸಿ ಉಳಿದ ಆದಾಯಕ್ಕೆ ನೇರವಾಗಿ ತೆರಿಗೆ ಅನ್ವಯವಾಗುತ್ತದೆ. ಕಡಿಮೆ ಆದಾಯ ಹೊಂದಿರುವವರಿಗೆ ಸದ್ಯಕ್ಕೆ ಹೊಸ ತೆರಿಗೆ ನೀತಿ ಉತ್ತಮ’ಎನ್ನುತ್ತಾರೆ ಖಾಸಗಿ ಕಂಪನಿ ತೆರಿಗೆ ಅಧಿಕಾರಿ ಬಿ.ಸಿ.ಅರುಣ್‌.

ಹಳೆ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂಪಾಯಿಯಿಂದ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. 3 ಲಕ್ಷದಿಂದ 6 ಲಕ್ಷದವರಗೆ ಶೇಕಡ 5ರಷ್ಟು, 6 ರಿಂದ 9 ಲಕ್ಷದವರೆಗೆ ಶೇಕಡ10 ರಷ್ಟು, 9 ಲಕ್ಷದಿಂದ 12 ಲಕ್ಷದವರೆಗೆ ಶೇಕಡ 15ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದರೆ ಹೊಸ ತೆರಿಗೆ ನೀತಿಯಲ್ಲಿ ₹7 ಲಕ್ಷದ ವರೆಗೆ ನೇರವಾಗಿ ವಿನಾಯಿತಿ ಸಿಗುತ್ತದೆ.

‘ಮೇಲ್ನೋಟಕ್ಕೆ ಹೊಸ ತೆರಿಗೆ ನೀತಿಯಲ್ಲಿ ಸಲ್ಲಿಕೆ ಮಾಡುವವರೆಗೆ ಹೆಚ್ಚು ಲಾಭವಿದೆ. ಆದರೆ ವಿನಾಯಿತಿಗೆ ಒಳಪಡುವ ಉಳಿತಾಯದ ವ್ಯಾಪ್ತಿ ಕಡಿಮೆ ಇದೆ. ಹೌಸಿಂಗ್‌ ಲೋನ್‌ ಇಂಟರೆಸ್ಟ್‌, 80ಸಿ ವ್ಯಾಪ್ತಿಗೆ ಬರುವ ಎಲ್ಲ ಪಿಪಿಎಫ್‌, ಎಲ್‌ಐಸಿಯಂತಹ ಸಾಕಷ್ಟು ಉಳಿತಾಯ ಯೋಜನೆಗಳು, ಟ್ಯೂಷನ್‌ ಫೀಯನ್ನು ವಿನಾಯಿತಿ ಅಡಿಯಲ್ಲಿ ತರಲು ಸಾಧ್ಯವಿಲ್ಲ. ಅಂಥವರಿಗೆ ಹೊಸ ತೆರಿಗೆ ನೀತಿ ಸೂಕ್ತವಲ್ಲ. ಆದರೆ ₹15 ಲಕ್ಷ ಆದಾಯ ಹೊಂದಿರುವವರು ₹ 1.5 ಲಕ್ಷ ಅಥವಾ ಶೇ 10 ರಷ್ಟು ತೆರಿಗೆ ಪಾವತಿಸಬೇಕು. ಹಳೆ ನೀತಿ ಅಡಿಯಲ್ಲಿನ ₹ 1,87,500ಕ್ಕೆ ಹೋಲಿಸಿದರೆ ಶೇ 20 ರಷ್ಟು ಕಡಿತಗೊಳ್ಳಲಿದೆ. ಜನ ಹೊಸ ತೆರಿಗೆ ನೀತಿ ಆಯ್ದುಕೊಳ್ಳುವುದು ಹೆಚ್ಚಾಗಬೇಕು ಎಂಬುದು ಇದರ ಉದ್ದೇಶ ಕೂಡ. ಭವಿಷ್ಯದಲ್ಲಿ ಹೊಸ ತೆರಿಗೆ ನೀತಿಯನ್ನೇ ಜಾರಿಗೊಳಿಸಿ ನೇರವಾಗಿ ₹10 ಲಕ್ಷ ಆದಾಯವರೆಗೂ ತೆರಿಗೆ ವಿನಾಯಿತಿ ನೀಡುವುದು ಕೇಂದ್ರದ ಲೆಕ್ಕಾಚಾರವಿರಬಹುದು’ ಎನ್ನುತ್ತಾರೆ ಅರುಣ್‌.

ಸಣ್ಣ ಉದ್ಯಮಿಗಳು, ಸ್ವಂತ ಉದ್ಯೋಗ ಮಾಡುವವರು ಸಾಮಾನ್ಯವಾಗಿ ಲಾಭದ ಮೇಲೆ ತೆರಿಗೆ ಕಟ್ಟಿಯೇ ಕಟ್ಟುತ್ತಾರೆ. ಉದಾಹರಣೆಗೆ ಜ್ಯೂಸ್‌ ಅಂಗಡಿಯಂತಹ ನಗದು ವ್ಯವಹಾರ ನಡೆಸುವವನು ಒಟ್ಟು ಲಾಭ ಘೋಷಿಸಿ, ತೆರಿಗೆ ಕಟ್ಟುತ್ತಾನೆ. ಕಿರಾಣಿ ಅಂಗಡಿಯವನು ಕೂಡ ಒಂದು ಸಾಮಾನ್ಯ ಆದಾಯ ಘೋಷಿಸಿ ತೆರಿಗೆ ಪಾವತಿಸುತ್ತಾನೆ. ಹೀಗಾಗಿ ಈ ವರ್ಗಗಳಿಗೂ ಎರಡು ತೆರಿಗೆ ನೀತಿಗಳಿಂದ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ ಎಂಬುದು ತಜ್ಞರ ಮಾತು.

ಇವನ್ನೂ ಓದಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT