ಸೋಮವಾರ, ಫೆಬ್ರವರಿ 24, 2020
19 °C

ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ನಿರೀಕ್ಷೆ, ಕಳೆದ ಬಾರಿ ಶೇ10 ಈ ಬಾರಿ ಎಷ್ಟು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಅತ್ಯಂತ ಪ್ರಮುಖ ಕ್ಷೇತ್ರಗಳು. ಇವು ರಾಜ್ಯವಿರಲೀ, ಕೇಂದ್ರವಿರಲೀ ಎಲ್ಲಾ ಸರ್ಕಾರಗಳು ಹೆಚ್ಚು ಒತ್ತು ಕೊಟ್ಟು ಅಭಿವೃದ್ಧಿಪಡಿಸಬೇಕಾದ ಕ್ಷೇತ್ರಗಳು. ಇವುಗಳಲ್ಲಿ ಹಣಹೂಡಿಕೆ ಮಾಡಿದರೆ, ತಕ್ಷಣಕ್ಕೆ ಫಲಿತಾಂಶ ಸಿಗದಿರಬಹುದು. ದೀರ್ಘ ಕಾಲದಲ್ಲಿ ಇವುಗಳ ಫಲಿತಾಂಶ ಸಿಗುವುದರಲ್ಲಿ ಎರಡು ಮಾತಿಲ್ಲ.

ಈ ಅಂಶಗಳನ್ನು ಯಾವುದೇ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬಂದಿಲ್ಲ. 2020-21ನೇ ಸಾಲಿನ ಬಜೆಟ್ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಬಜೆಟ್. ಈ ಬಜೆಟ್‌ನಲ್ಲಿ ಜನರು ಹಲವು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.

ಕಳೆದ ವರ್ಷ ಬಜೆಟ್ ಆರೋಗ್ಯಕ್ಕೆ ಸಂಬಂಧಿಸಿ ಹೊಸ ಯೋಜನೆಗಳನ್ನಾಗಲೀ, ನೀತಿಗಳನ್ನಾಗಲೀ ಪ್ರಸ್ತಾಪಿಸದೆ ಹೋದರೂ ಈ ರಂಗಕ್ಕೆ ನೀಡಲಾದ ಅನುದಾನ ₹61,398 ಕೋಟಿ. 2018-19ನೇ ವರ್ಷಕ್ಕೆ ಹೋಲಿಸಿದರೆ ಶೇಕಡ 16ರಷ್ಟು ಹೆಚ್ಚಳ ಕಂಡಿತ್ತು. ಎರಡನೇ ವರ್ಷದಲ್ಲಿ ಇದು ಮಹತ್ತರ ಹೆಚ್ಚಳವಾಗಿತ್ತು. ಭವಿಷ್ಯದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಹತ್ತು ಅಂಶಗಳಲ್ಲಿ ಒಂಬತ್ತನೆಯದ್ದು ಆರೋಗ್ಯದ ಕುರಿತಾಗಿತ್ತು. ಅದು ಬಹಳ ಸ್ಥೂಲವಾದ ಒಂದು ಭರವಸೆ: ‘2030ರ ವೇಳೆಗೆ ಸಮಗ್ರ ಆರೋಗ್ಯ ಸೇವೆಗಳನ್ನು ಜನರು ಎಲ್ಲಾ ಸಂಕಷ್ಟಗಳಿಂದ ಮುಕ್ತವಾಗಿ ಪಡೆದುಕೊಳ್ಳಲು ಸಾಧ್ಯವಾಗುವಂತೆ ಮಾಡಲು ಸರಕಾರ ಶ್ರಮಿಸಲಿದೆ.’ ಈ ಗುರಿ ಸೇರುವ ಹಾದಿಯ ಬಗ್ಗೆ ವಿಶೇಷ ಪ್ರಸ್ತಾಪವೇನೂ ಇರಲಿಲ್ಲ.

2019-20ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾದ ಅನುದಾನ ₹93,847.64 ಕೋಟಿ, ಇದು 2018-19ಕ್ಕೆ ಹೋಲಿಸಿದರೆ, ಸುಮಾರು ಶೇಕಡ 10ರಷ್ಟು ಹೆಚ್ಚಳ ಕಂಡಿತ್ತು. ಮುಂದಿನ ಮೂರು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಶಿಕ್ಷಣ ಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ಮತ್ತು ವ್ಯವಸ್ಥೆಯನ್ನು ಸಮಗ್ರವಾಗಿ ಪುನಶ್ಚೇತನಗೊಳಿಸುವ ಯೋಜನೆಯೊಂದನ್ನು ಪ್ರಕಟಿಸಲಾಗಿತ್ತು. 

ಉಳಿದಂತೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳು ಎಂದಿನಂತೆ ಉತ್ಕೃಷ್ಟತೆಯ ದ್ವೀಪಗಳನ್ನು ಸೃಷ್ಟಿಸುವ ಮತ್ತು ತಂತ್ರಜ್ಞಾನದಲ್ಲೇ ಶಿಕ್ಷಣ ರಂಗದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲೇ ಇರುವಂತಿದ್ದವು.

ಕಳೆದ ಬಾರಿ ಶೇ10ರಷ್ಟು ಹೆಚ್ಚಳ : ಈ ಬಾರಿ ಎಷ್ಟು ?

ಶಿಕ್ಷಣ ಇಲಾಖೆಗೆ ಕಳೆದ ಬಾರಿ ಶೇ10ರಷ್ಟು ಅನುದಾನ ಹೆಚ್ಚಳ ಮಾಡಲಾಗಿತ್ತು. 2019–20ರಲ್ಲಿ ₹93,847.64 ಕೋಟಿ ಅನುದಾನ ನೀಡಲಾಗಿದೆ. ಉನ್ನತ ಶಿಕ್ಷಣಕ್ಕೆ ₹37,46.01 ಕೋಟಿ ನೀಡಲಾಗಿತ್ತು, ಪ್ರಾಥಮಿಕ ಶಿಕ್ಷಣಕ್ಕೆ 56,386.63 ಕೋಟಿ ನೀಡಲಾಗಿತ್ತು.

2018ರಲ್ಲಿ ಮಂಡನೆಯಾದ ಪೂರ್ಣಪ್ರಮಾಣದ ಬಜೆಟ್‌ನಲ್ಲಿ ₹85,010 ಕೋಟಿ ಮೀಸಲಿಡಲಾಗಿತ್ತು. ಮೂಲಸೌಕರ್ಯ ಮತ್ತು ಶೈಕ್ಷಣಿಕ ವ್ಯವಸ್ಥೆಯ ಪುನರುಜ್ಜೀವನ–2022 ಯೋಜನೆ ರೂಪಿಸಲಾಗುವುದು ಎಂದು ಹೇಳಿದ್ದ ಸರ್ಕಾರ ಅದಕ್ಕಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ₹1 ಲಕ್ಷ ಕೋಟಿ ವ್ಯಯಿಸಲಾಗುವುದು ಎಂದಿತ್ತು. ಈ ಯೋಜನೆ ಅಡಿಯಲ್ಲಿ ಸಂಶೋಧನೆ, ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆರೋಗ್ಯ ಸಂಬಂಧಿ ಸಂಸ್ಥೆಗಳಿಗೂ ಅನುದಾನ ನೀಡಲಾಗುವುದು ಎಂದಿತ್ತು.

2019-20ರಲ್ಲಿ ಶೈಕ್ಷಣಿಕ ಸಂಶೋಧನೆ ಹಾಗೂ ನಾವಿನ್ಯತೆಗೆ ₹608.87 ಕೋಟಿ ನೀಡಲಾಗಿತ್ತು. 2018ರಲ್ಲಿ ₹350.23 ಕೋಟಿ ನಿಗದಿಪಡಿಸಲಾಗಿತ್ತು. ದೇಶದಲ್ಲಿ ಯೋಜನೆ ಹಾಗೂ ವಿನ್ಯಾಸಕ್ಕೆ ಸಂಬಂಧಿಸಿದ ಎರಡು ಶಾಲೆಗಳನ್ನು ತೆರೆಯುವ ಪ್ರಸ್ತಾವ ಇದೆ ಎಂದು ಹೇಳಿದ್ದ ಸರ್ಕಾರ, ದೇಶದಲ್ಲಿರುವ 18 ಐಐಟಿ ಹಾಗೂ ಎನ್‌ಐಟಿಗಳಲ್ಲಿ ಯೋಜನೆ ಹಾಗೂ ವಿನ್ಯಾಸ ಕೊರ್ಸ್‌ ಆರಂಭಿಸಲಾಗುವದು ಎಂದು ಹೇಳಿತ್ತು.

ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ತಂತ್ರಜ್ಞಾನವು ದೊಡ್ಡ ಜಾಲವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನದ ತೀವ್ರತೆಯನ್ನು ಹೆಚ್ಚಿಸಲು ಮುಂದಡಿ ಇಡಲಾಗಿದೆ ಎಂದಿದ್ದ ಸರ್ಕಾರ ‘ಕಪ್ಪು ಫಲಕದಿಂದ ’ಡಿಜಿಟಲ್ ಬೋರ್ಡ್’ಗೆ ಬದಲಾಗಲು ಇದು ಸಕಾಲ ಎಂದು ಹೇಳಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು