ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕ ಬಜೆಟ್ 2020 | ಅನ್ನದಾತನ ಮನವೊಲಿಕೆಗೆ ‘ನೀತಿ’

ಮನೆ ಬಾಗಿಲಿಗೆ ಹೆಲ್ತ್‌ ಕ್ಲಿನಿಕ್‌: ಎತ್ತಿನ ಹೊಳೆಗೆ ₹1,500 ಕೋಟಿ
Published : 5 ಮಾರ್ಚ್ 2020, 20:00 IST
ಫಾಲೋ ಮಾಡಿ
Comments
ADVERTISEMENT
""

ಬೆಂಗಳೂರು: ಕೃಷಿ ಮತ್ತು ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಬೇಕು ಎಂಬ ರೈತರ ಬಹು ದಿನಗಳ ಒತ್ತಾಯಕ್ಕೆ ಸ್ಪಂದಿಸಿರುವ ಸರ್ಕಾರ ಇದಕ್ಕಾಗಿ ಹೊಸ ಕೃಷಿ ನೀತಿಯೊಂದನ್ನು ಅನುಷ್ಠಾನ ಮಾಡಲು ಮುಂದಾಗಿದೆ.

ನೀರಿನ ಭದ್ರತೆ, ಭೂ ಸಂಚಯ ಮತ್ತು ‘ಸಾಮೂಹಿಕ ಕೃಷಿ’ಗೆ ಪ್ರೋತ್ಸಾಹ. ಸೂಕ್ಷ್ಮ ನೀರಾವರಿ ಕೃಷಿಕರಿಗೆ ಉತ್ತೇಜನ, ಕೃಷಿ ಉತ್ಪನ್ನ ಸಂಸ್ಕರಣೆ, ಮಾರುಕಟ್ಟೆ ಪ್ರೋತ್ಸಾಹ ನೀಡುವ ಮೂಲಕ ಉದ್ದಿಮೆ ಎಂದು ಪರಿಗಣಿಸುವುದಕ್ಕಾಗಿ ಹೊಸ ಕೃಷಿ ನೀತಿ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಅಲ್ಲದೆ, ಕೃಷಿ ಉತ್ಪನ್ನ ಬೆಂಬಲ ಬೆಲೆ ಆವರ್ತ ನಿಧಿ ಮೊತ್ತ ₹2,000 ಕೋಟಿಗೆ ಹೆಚ್ಚಳ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸುವ ‘ಮನೆ ಮನೆಗೆ ಗಂಗೆ’ ಯೋಜನೆ ಸೇರಿ ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿದರು.ತಳಮಟ್ಟದಲ್ಲಿ ಕೃಷಿ ಕ್ಷೇತ್ರವನ್ನು ಗಟ್ಟಿಗೊಳಿಸಲು ಮತ್ತು ಸಣ್ಣ ರೈತರನ್ನು ಸಬಲಗೊಳಿಸಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ ಎಂದರು.

ಪ್ರಮುಖ ಅಂಶಗಳು: ಸಾಂಪ್ರದಾಯಿಕಕೃಷಿ ಬಿಟ್ಟು; ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ಹೆಕ್ಟೇರಿಗೆ ₹5,000 ದಂತೆ ಗರಿಷ್ಠ ₹10,000 ನೆರವು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್‌ ನಿಧಿ ಯೋಜನೆಯಡಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ₹4,000 ಹೆಚ್ಚುವರಿ ನೆರವು ನೀಡುವ ಯೋಜನೆ ಮುಂದುವರಿಸಲು ₹2,600 ಕೋಟಿ ಅನುದಾನ ನೀಡಿದೆ.

ಅಡಿಕೆ ಬೆಳೆಗಾರರ ನೆರವಿಗೆ ಧಾವಿಸಿರುವ ಸರ್ಕಾರ, ಪ್ರಾಥಮಿಕ ಅಥವಾ ಮಾರುಕಟ್ಟೆ ಸಹಕಾರ ಸಂಘಗಳು ಪ್ರತಿ ರೈತ ಕುಟುಂಬಕ್ಕೆ ನೀಡುವ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ ₹ 2 ಲಕ್ಷವರೆಗಿನ ಸಾಲಕ್ಕೆ ಶೇ 5ರಷ್ಟು ಬಡ್ಡಿ ವಿನಾಯಿತಿ ನೀಡಿದೆ.

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ ₹ 10 ಸಾವಿರ ಹಣಕಾಸು ನೆರವು ನೀಡುವುದರ ಜತೆಗೆ ಎಲ್ಲ ರೈತರಿಗೆ ಮತ್ತು ಮೀನುಗಾರರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ನೀಡಲಾಗುವುದು. ಇದರಿಂದ ರೈತರು ಅಧಿಕ ಬಡ್ಡಿ ದರದ ಅನೌಪಚಾರಿಕ ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸಬಹುದು.

ಮಣ್ಣು, ನೀರು ಮತ್ತು ಇತರೆ ತಾಂತ್ರಿಕ ನೆರವಿಗಾಗಿ ಸಂಚಾರಿ ‘ಕೃಷಿ ಹೆಲ್ತ್‌ ಕ್ಲಿನಿಕ್‌’ಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಈ ಸಂಚಾರಿ ಘಟಕಗಳು ಹಳ್ಳಿಗಳಿಗೆ ಭೇಟಿ ನೀಡಿ ರೈತರ ಮನೆ ಬಾಗಿಲಲ್ಲೇಮಣ್ಣು, ನೀರಿನ ಪರೀಕ್ಷೆ ನಡೆಸಿ ಸಲಹೆ ನೀಡಲಿವೆ.

ರಾಜ್ಯದಲ್ಲಿ ಹೊಸ ಏತ ನೀರಾವರಿ ಯೋಜನೆಗಳಿಗೆ ₹5,000 ಕೋಟಿ ಮತ್ತು ಸೂಕ್ಷ್ಮ ನೀರಾವರಿಗೆ ₹627 ಕೋಟಿ ಅನುದಾನ ಪ್ರಕಟಿಸಲಾಗಿದೆ. ರೈತರು ಕೈಗೆಟಕುವ ಬೆಲೆಯಲ್ಲಿ ಹನಿ ಮತ್ತು ತುಂತುರು ನೀರಾವರಿ ಅಳವಡಿಸಲು ₹627 ಕೋಟಿ ಒದಗಿಸಲಾಗಿದೆ.

ಬೃಹತ್‌ ನೀರಾವರಿ ಯೋಜನೆಯಡಿಯ ಅಚ್ಚುಕಟ್ಟು ಪ್ರದೇಶಗಳಲ್ಲಿ ‘ಫ್ಲಡ್‌ ಇರಿಗೇಷನ್‌’ ಪದ್ಧತಿ ಕೈಬಿಟ್ಟು ಇಸ್ರೇಲ್‌ ಮಾದರಿಯಲ್ಲಿ ಸೂಕ್ಷ್ಮ ನೀರಾವರಿ ಅಳವಡಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದು.

ತೋಟಗಾರಿಕೆ ಉತ್ಪನ್ನಗಳ ಕಟಾವಿನ ಬಳಿಕ ನಿರ್ವಹಣೆಗೆ ವಿವಿಧ ಜಿಲ್ಲೆಗಳ 10 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ₹75 ಕೋಟಿ ವೆಚ್ಚದಲ್ಲಿ ಪಿಪಿಪಿ (ಸಾರ್ವಜನಿಕ–ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ 5,000 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಶೀತಲ ಗೃಹಗಳ ನಿರ್ಮಾಣ ಮಾಡಲಾಗುವುದು. ಅಲ್ಲದೆ, ಪಶುಸಂಗೋಪನಾ ಆರ್ಥಿಕ ಚಟುವಟಿಕೆಗಳ ವಿಸ್ತರಣೆಗೆ ಸಮೀಕ್ಷೆ ನಡೆಸಿ, ಸಮಗ್ರ ನೀತಿ ರೂಪಿಸಲಾಗುವುದು.

ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನ
ಮೀನು ಸಾಗಿಸಲು ಅನುಕೂಲವಾಗಲು 1,000 ಮೀನುಗಾರ ಮಹಿಳೆಯರಿಗೆ ‘ಮಹಿಳಾ ಮೀನುಗಾರ ಸಬಲೀಕರಣ’ ಯೋಜನೆಯಡಿ ದ್ವಿಚಕ್ರ ವಾಹನಗಳನ್ನು ನೀಡಲಾಗುವುದು. ಈ ಯೋಜನೆ ಜಾರಿಗಾಗಿ ₹ 5 ಕೋಟಿ ನಿಗದಿ.

‘ಸಾಮೂಹಿಕ ಕೃಷಿ’ ಆಪತ್ತಿಗೆ ದಾರಿಯೇ?
ಕೃಷಿಯನ್ನು ಉದ್ದಿಮೆಯಾಗಿಸುವ ಭರದಲ್ಲಿ ಕಾರ್ಪೊರೇಟ್‌ ಕಂಪನಿಗಳಿಗೆ ರತ್ನಗಂಬಳಿ ಹಾಕುವ ಪ್ರಯತ್ನ ನಡೆದಿದೆಯೇ ಎಂಬ ಚರ್ಚೆ ಆಗಿದೆ. ಒಂದು ವೇಳೆ ಅದು ಕೃಷಿ ಕ್ಷೇತ್ರ ಒದಗುವ ಆಪತ್ತು ಎಂದು ವ್ಯಾಖ್ಯಾನಿಸಲಾಗಿದೆ. ರೈತರ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಅಲ್ಲಿ ಕಂಪನಿಗಳೇ ಕೃಷಿ ಮಾಡುವುದರಿಂದ ರೈತರು ಅತಂತ್ರರಾಗಬಹುದು ಎಂದೂ ಹೇಳಲಾಗಿದೆ.

ಮನೆ ಮನೆಗೆ ಗಂಗೆ
ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಜಲ ಜೀವನ್‌ ಮಿಷನ್‌ ಮತ್ತು ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಒದಗಿಸುವ ‘ಮನೆ ಮನೆಗೆ ಗಂಗೆ’ ಯೋಜನೆ ಅನುಷ್ಠಾನ ಮಾಡಲಾಗುವುದು. 2020–21 ನೇ ಸಾಲಿನಲ್ಲಿ 10 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗುವುದು.

ಗ್ರಾಮೀಣ ಸುಮಾರ್ಗ ಯೋಜನೆ
ಮುಂದಿನ 5 ವರ್ಷಗಳಲ್ಲಿ 20 ಸಾವಿರ ಕಿ.ಮೀ ಗ್ರಾಮೀಣ ರಸ್ತೆ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಇದಕ್ಕಾಗಿ ₹780 ಕೋಟಿ ಅನುದಾನ ನಿಗದಿ.

ಪಂಚಾಯತ್‌ರಾಜ್ ಆಯುಕ್ತಾಲಯ
ಪಂಚಾಯತ್‌ ರಾಜ್‌ ಸಂಸ್ಥೆಗಳ ಅಧಿಕಾರ ವಿಕೇಂದ್ರೀಕರಣವನ್ನು ಬಲಪಡಿಸುವ ಉದ್ದೇಶದಿಂದ ಪಂಚಾಯತ್‌ರಾಜ್‌ ಆಯುಕ್ತಾಲಯ ಆರಂಭ.

ಮೀನುಗಾರ ಮಹಿಳೆಯರಿಗೆ ವಾಹನ
ಮೀನು ಸಾಗಿಸಲು ಅನುಕೂಲವಾಗಲು 1,000 ಮೀನುಗಾರ ಮಹಿಳೆಯರಿಗೆ ‘ಮಹಿಳಾ ಮೀನುಗಾರ ಸಬಲೀಕರಣ’ ಯೋಜನೆಯಡಿ ದ್ವಿಚಕ್ರ ವಾಹನಗಳನ್ನು ನೀಡಲಾಗುವುದು. ಈ ಯೋಜನೆ ಜಾರಿಗಾಗಿ ₹ 5 ಕೋಟಿ ನಿಗದಿ.

ಕೃಷಿಕರಿಗೆ ಕೆಲವು ಕಾರ್ಯಕ್ರಮಗಳು
* ನೀರಿನ ಕೊರತೆ ನೀಗಿಸಲು ಪ್ರತಿ ಗ್ರಾಮದಲ್ಲೂ ‘ಜಲ ಗ್ರಾಮ ಕ್ಯಾಲೆಂಡರ್‌’
* ಹೂವು, ಟೊಮೆಟೊ, ಆಲೂಗಡ್ಡೆ, ಈರುಳ್ಳಿ, ಹೂಕೋಸು, ದಾಳಿಂಬೆ ಸೇರಿದಂತೆ ಹೂವು, ಹಣ್ಣು ತರಕಾರಿಗಳನ್ನು ದೆಹಲಿ, ಮುಂಬಯಿ ಮತ್ತು ತಿರುವನಂತಪುರಕ್ಕೆ ಸಾಗಿಸಲು ‘ಕೃಷಿ ರೈಲ್‌’ ಸೌಲಭ್ಯ
* ಕೃಷಿ ಮತ್ತು ಅದಕ್ಕೆ ಸಂಬಂಧಿತ ವಲಯಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಬೆಂಗಳೂರು ಬಯೋ ಇನ್ನೋವೇಷನ್‌ ಕೇಂದ್ರದ ಆಶ್ರಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಕೃಷಿ ನಾವೀನ್ಯ ಕೇಂದ್ರದ ಸ್ಥಾಪನೆ
* ಸಾವಯವ ಕೃಷಿ ಪ್ರೋತ್ಸಾಹಕ್ಕೆ ₹200 ಕೋಟಿ ಅನುದಾನ
* ಕರಾವಳಿ ಪ್ರದೇಶದಲ್ಲಿ ಪಶ್ಚಿಮಘಟ್ಟದ ನದಿಗಳಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಮಾಸ್ಟರ್‌ ಪ್ಲಾನ್‌
* ವಿದೇಶಿ ಹಂದಿಗಳ ತಳಿ ಆಮದು ಮಾಡಿಕೊಳ್ಳಲು ₹5 ಕೋಟಿ ವೆಚ್ಚದಲ್ಲಿ ‘ಸಮಗ್ರ ವರಾಹ ಅಭಿವೃದ್ಧಿ ಯೋಜನೆ’
* ಹೈನುಗಾರಿಕೆ, ಕುರಿ, ಹಂದಿ, ಕೋಳಿ ಸಾಕಾಣಿಕೆ ಅಭಿವೃದ್ಧಿಗೆ ಉತ್ತಮ ಅವಕಾಶ ಇರುವುದರಿಂದ ಸವಿಸ್ತಾರ ಸಮೀಕ್ಷೆ ನಡೆಸಿ, ಸಮಗ್ರ ನೀತಿ ತಯಾರು
* ಹೈನು ರಾಸುಗಳಲ್ಲಿಕೃತಕ ಗರ್ಭಧಾರಣೆ ಮೂಲಕ ಶೇ 90ಕ್ಕಿಂತ ಹೆಚ್ಚು ಹೆಣ್ಣು ಕರುಗಳನ್ನು ಪಡೆಯುವ ಯೋಜನೆಗೆ ₹2 ಕೋಟಿ ಅನುದಾನ
* ಕೃಷಿ ಮೌಲ್ಯ ಸರಪಳಿಯ ಅಭಿವೃದ್ಧಿಗಾಗಿ 100 ಎಫ್‌ಪಿಒ (Farmers Producers Organisation- ರೈತ ಉತ್ಪಾದಕ ಸಂಸ್ಥೆಗಳು) ರಚನೆ, ಎಫ್‌ಪಿಒಗಳ ಮೂಲಕ ಮೌಲ್ಯ ಸರಪಳಿ ಅಭಿವೃದ್ಧಿಗೆ ₹8 ಕೋಟಿ
* ರೈತರ ಸಾಮರ್ಥ್ಯ ಅಭಿವೃದ್ಧಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳಿಗಾಗಿ ರಾಜ್ಯದಾದ್ಯಂತ 40 ಪ್ರಾತ್ಯಕ್ಷಿಕೆ ಕ್ಷೇತ್ರಗಳ ಅಭಿವೃದ್ಧಿ
* ವಿಶ್ವಬ್ಯಾಂಕ್‌ ಪ್ರಾಯೋಜಿತ ಸುಜಲಾ 3 ಯೋಜನೆಯನ್ನು ಜಾರಿಗೊಳಿಸಲಾಗುವುದು. ಈ ಮೂಲಕ 12 ಮಳೆ ಆಶ್ರಿತ ಜಿಲ್ಲೆಗಳ 2500 ಗ್ರಾಮಗಳ ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ಭೂಸಂಪನ್ಮೂಲ ಯಾದಿಯ ತರಬೇತಿ ನೀಡಿ ಕಾರ್ಡ್‌ ವಿತರಣೆ. ಇದಕ್ಕಾಗಿ ₹10 ಕೋಟಿ ನಿಗದಿ
* ಡಿಸಿಸಿ, ಪಿಕಾರ್ಡ್ ಮತ್ತು ಪಿಎಸಿಎಸ್‌ಗಳಿಂದ ನೀಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾಗೆ ₹466 ಕೋಟಿ ನೆರವು. 92 ಸಾವಿರ ರೈತರಿಗೆ ಪ್ರಯೋಜನ
* ಆಧುನಿಕ ಮೀನುಗಾರಿಕೆ ತಂತ್ರಜ್ಞಾನ ಅಳವಡಿಕೆಯ ಉತ್ತೇಜನಕ್ಕೆ ₹1.5 ಕೋಟಿ ವೆಚ್ಚದಲ್ಲಿ ‘ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ’ ಜಾರಿ
* ಸಾಗರ ತಾಲ್ಲೂಕು ಇರುವಕ್ಕಿ ಗ್ರಾಮದಲ್ಲಿ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಕಾಮಗಾರಿಗೆ ₹155 ಕೋಟಿ ಹಂಚಿಕೆ ಮಾಡಿದ್ದು, ಇದೇ ಸಾಲಿನಲ್ಲಿ ತರಗತಿ ಆರಂಭ

ಕೃಷ್ಣಾ ಮತ್ತು ಕಾವೇರಿ ಕೊಳ್ಳಕ್ಕೆ ನಾಸ್ತಿ!
ಕೃಷ್ಣಾ ಮತ್ತು ಕಾವೇರಿ ಕೊಳ್ಳದ ಯೋಜನೆಗಳಿಗೆ ಈ ಬಾರಿ ಬಜೆಟ್‌ನಲ್ಲಿ ಅನುದಾನ ನಿಗದಿ ಮಾಡಿಲ್ಲ. ಕೃಷ್ಣಾ ಮೇಲ್ದಂಡೆಯ 3 ನೇ ಹಂತದ ಯೋಜನೆಗೆ ಸುಮಾರು ₹56,000 ಕೋಟಿ ಅಗತ್ಯವಿದೆ. ಆದರೆ, ಈ ಯಾವುದೇ ಯೋಜನೆಗಳಿಗೂ ಅನುದಾನ ನೀಡಿಲ್ಲ.

* ಕಳಸ–ಬಂಡೂರಿಗೆ ₹ 500 ಕೋಟಿ
ಮಹದಾಯಿ ಯೋಜನೆಯನ್ನು ತ್ವರಿತವಾಗಿ ಮುಂದುವರಿಸಲು ಕಳಸಾ ಬಂಡೂರಿ ನಾಲಾಗಳ ಕಾಮಗಾರಿಗಾಗಿ 2020–21 ನೇ ಸಾಲಿಗೆ ₹500 ಕೋಟಿ ನೀಡಲಾಗುವುದು. ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು.

* ಎತ್ತಿನ ಹೊಳೆಗೆ ₹1,500 ಕೋಟಿ
ಎತ್ತಿನ ಹೊಳೆಯ ಮೂರನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ₹1,500 ಕೋಟಿ ನೀಡಲಾಗುವುದು. ಮುಂದಿನ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಚಾಲನೆ

* ನವಲೆ ಬಳಿ ಸಮತೋಲನಾ ಜಲಾಶಯ
ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಪರ್ಯಾಯ ಹರಿವು ನಾಲೆ ಮೂಲಕ ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಿಸುವ ಯೋಜನೆಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ₹20 ಕೋಟಿ ನಿಗದಿ

* ಕೃಷ್ಣಾ ನದಿಗೆ ಜಲಾಶಯ
– ರಾಯಚೂರು, ಯಾದಗಿರಿ, ಕಲಬುರ್ಗಿ ಜಿಲ್ಲೆಗೆ ಕುಡಿಯುವ ನೀರಿನ ಪೂರೈಕೆಗೆ ತಿಂತಿಣಿ ಸೇತುವೆ ಬಳಿ ಕೃಷ್ಣಾ ನದಿಗೆ ಜಲಾಶಯ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿಗೆ ಕ್ರಮ
– ಜಲಸಂಪನ್ಮೂಲ ಇಲಾಖೆ ಮೂಲಕ ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ
– ಅಟಲ್‌ ಭೂ–ಜಲ ಯೋಜನೆಯಡಿ ₹1,202 ಕೋಟಿ ಬಳಸಿಕೊಂಡು ರಾಜ್ಯದ ಆಯ್ದ ಜಿಲ್ಲೆಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ
– ಅಂತರ್ಜಲ ಸ್ಥಿತಿ ಗಂಭೀರವಾಗಿರುವ 76 ತಾಲ್ಲೂಕುಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ 4 ಲಕ್ಷ ಹೆಕ್ಟೇರ್‌ಗಳಲ್ಲಿ 810 ಅತಿ ಸಣ್ಣ ಜಲಾನಯನ ಪ್ರದೇಶಗಳಲ್ಲಿ ‘ಜಲಾಮೃತ’ ಯೋಜನೆ ಜಾರಿ
– ವಿಶ್ವ ಬ್ಯಾಂಕ್‌ ಅನುದಾನಿತ ಹೊಸ ಬಹು ರಾಜ್ಯ ಜಲಾನಯನ ಅಭಿವೃದ್ಧಿ ಯೋಜನೆಯಲ್ಲಿ(REWARD) ಮುಂದಿನ 6 ವರ್ಷ ಅವಧಿಗೆ ರಾಜ್ಯ ಭಾಗಿ

ಬಜೆಟ್‌ನಲ್ಲಿ ಕೃಷಿ:ರೈತರು ಏನಂತಾರೆ?

‘ರೈತಪರ’ ಎಂಬುದು ಬಜೆಟ್‌ನಲ್ಲಿ ಕಾಣಿಸುತ್ತಿಲ್ಲ. ರಾಷ್ಟ್ರೀಯ ಬ್ಯಾಂಕ್‌, ಕೃಷಿ, ಗ್ರಾಮೀಣ ಬ್ಯಾಂಕ್‌ಗಳಲ್ಲಿ ಇರುವ ರೈತರ ಸಾಲವನ್ನು ₹ 1 ಲಕ್ಷದವರೆಗಾದರೂ ಮನ್ನಾ ಮಾಡಬೇಕಿತ್ತು. ನೀರಾವರಿಗೆ ಆದ್ಯತೆ ನೀಡಿಲ್ಲ.
–ಮಲ್ಲಿಕಾರ್ಜುನಪ್ಪ,ಪ್ರಗತಿಪರ ರೈತರು, ಕೆ.ಬೇವಿನಹಳ್ಳಿ, ಹರಿಹರ ತಾಲ್ಲೂಕು

**

ಬಜೆಟ್‍ನಲ್ಲಿ ಕೃಷಿ ಮತ್ತು ನೀರಾವರಿಗೆ ಆದ್ಯತೆ ನೀಡಿದ್ದಾರೆ. ಸಣ್ಣ ಮತ್ತು ಅತಿಸಣ್ಣ ರೈತರ ನೆರವಿಗೆ ಧಾವಿಸಿದ್ದು ಸಮಾಧಾನ ತಂದಿದೆ. ಆದರೆ ಸಾಲಮನ್ನಾ ಮಾಡಿದ್ದರೆ ಖುಷಿಯಾಗುತ್ತಿತ್ತು
–ಚಿತ್ರಶೇಖರ ಪಾಟೀಲ,ರೈತ, ಚಿಂಚೋಳಿ, ಕಲಬುರ್ಗಿ ಜಿಲ್ಲೆ

**

ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರುಕಟ್ಟೆಗೆ ಉತ್ತೇಜನಕ್ಕೆ ಕೃಷಿ, ತೋಟಗಾರಿಕೆಯನ್ನು ಉದ್ಯಮವಾಗಿ ಪರಿಗಣಿಸಲು ಹೊಸ ಕೃಷಿ ನೀತಿಯ ಅನುಷ್ಠಾನಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಮಾವು ಮತ್ತಿತರ ಹಣ್ಣಿನ ಬೆಳೆಗಾರರಿಗೆ ಅನುಕೂಲವಾಗಲಿದೆ.
–ಸಚಿನ್‌ ಹಟ್ಟಿಹೊಳಿ, ಮಾವು ಬೆಳೆಗಾರ, ಅಳ್ನಾವರ, ಧಾರವಾಡ

**

ರೈತರನ್ನು ಸಂಘಟಿಸಲು 100 ಕೃಷಿ ಉತ್ಪಾದಕರ ಸಂಸ್ಥೆ ರಚನೆ ₹ 5 ರಿಂದ ₹ 10 ಸಾವಿರ ಪ್ರೋತ್ಸಾಹಧನ ಘೋಷಣೆ ಸ್ವಾಗತಾರ್ಹ. ದ್ರಾಕ್ಷಿ, ಲಿಂಬೆ, ದಾಳಿಂಬೆ, ತೊಗರಿ ಬೆಳೆಗಳ ಉತ್ಪಾದಕರ ಸಂಘ ಸ್ಥಾಪನೆ ಅನುಕೂಲಕರ.
–ಪುಷ್ಪಾ ಶಿವರಾಜ ಪಾರಗೊಂಡ, ನೈಸರ್ಗಿಕ ಕೃಷಿಕರು, ವಿಜಯಪುರ

**

ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿ, ಶಾಶ್ವತ ಖರೀದಿ ಕೇಂದ್ರ, ಕೃಷಿ ಉತ್ಪನ್ನಗಳ ರಕ್ಷಣೆಗೆ ಶೀತಲೀಕರಣ ಘಟಕಗಳ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿಲ್ಲ. ಹೀಗಾಗಿ, ಇದನ್ನು ರೈತಪರ ಬಜೆಟ್‌ ಎನ್ನಲು ಸಾಧ್ಯವಿಲ್ಲ.
–ಬಳ್ಳಾರಿಗೌಡ,ಹೊಳಲು ಗ್ರಾಮದ ರೈತ, ಮಂಡ್ಯ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT