ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಆರೋಗ್ಯ ಕ್ಷೇಮ ಕೇಂದ್ರಗಳಿಗೆ ಬೇಕಿದೆ ಕಟ್ಟಡ

246 ಆರೋಗ್ಯ ಕ್ಷೇಮ ಕೇಂದ್ರಗಳು ಮಂಜೂರು, 268 ಹುದ್ದೆಗಳ ಭರ್ತಿ, ಸಲಕರಣೆಗಳದ್ದೇ ಸಮಸ್ಯೆ
Last Updated 4 ಮಾರ್ಚ್ 2020, 7:48 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಗೆ ರಾಜ್ಯ ಸರ್ಕಾರ 246 ‘ಆರೋಗ್ಯ ಕ್ಷೇಮ ಕೇಂದ್ರ’ಗಳನ್ನು ಮಂಜೂರು ಮಾಡಿದೆ. ಆದರೆ, ಇವುಗಳಿಗೆ ಸ್ವಂತ ಕಟ್ಟಡ, ಅಗತ್ಯ ವೈದ್ಯಕೀಯ ಸಲಕರಣೆ ಹಾಗೂ ಮೂಲಸೌಕರ್ಯ ಒದಗಿಸುವುದು ಬಾಕಿ ಇದ್ದು, ಪ್ರಸಕ್ತ ಬಜೆಟ್‌ನಲ್ಲಿ ಈ ಬೇಡಿಕೆ ಈಡೇರಿಸಬೇಕು ಎಂಬ ಬೇಡಿಕೆ ಹೆಚ್ಚಿದೆ.

ರಾಷ್ಟ್ರೀಯ ಆರೋಗ್ಯ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಗ್ರಾಮೀಣ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಆರೋಗ್ಯ ಕ್ಷೇಮ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಈ ಹಿಂದೆ 2017ರಲ್ಲಿ ಪ್ರಾಯೋಗಿಕವಾಗಿ ಸೇಡಂ ತಾಲ್ಲೂಕಿನಲ್ಲಿ 33 ಹಾಗೂ ಚಿಂಚೋಳಿ ತಾಲ್ಲೂಕಿನಲ್ಲಿ 45 ಸೇರಿ ಒಟ್ಟು 78 ಕೇಂದ್ರಗಳನ್ನು ಮಂಜೂರು ಮಾಡಲಾಗಿತ್ತು. ಎರಡು ವರ್ಷಗಳಿಂದ ಈ ಕೇಂದ್ರಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿವೆ. ಇದನ್ನು ಮನಗಂಡು ಪ್ರಸಕ್ತ ಸರ್ಕಾರ ಉಳಿದ ಐದೂ ಜಿಲ್ಲೆಗಳನ್ನು ಒಳಗೊಂಡು ಮತ್ತೆ 246 ಕೇಂದ್ರಗಳನ್ನು ಮಂಜೂರು ಮಾಡಿದೆ. ಆದರೆ, ಇದೂವರೆಗೆ ಇವುಗಳ ಕಟ್ಟಡ ನಿರ್ಮಾಣ ಅಥವಾ ಬಾಡಿಗೆ ಅಥವಾ ಸಲಕರಣೆಗಳನ್ನು ಪೂರೈಸಿಲ್ಲ.

ಸನ್ನದ್ಧವಾಗಿದ್ದಾರೆ ಅಧಿಕಾರಿಗಳು: ಬಿಎಸ್‌ಸಿ ನರ್ಸಿಂಗ್‌ ಪದವಿ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ವೈದ್ಯಕೀಯ ಹಾಗೂ ಆರೈಕೆ ತರಬೇತಿ ನೀಡಿ ಸಮುದಾಯ ಆರೋಗ್ಯ ಅಧಿಕಾರಿ ಎಂದು ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಅಧಿಕಾರಿಗಳೇ ಕ್ಷೇಮ ಕೇಂದ್ರಗಳನ್ನು ನಿರ್ವಹಿಸುತ್ತಾರೆ.

ಈಗಾಗಲೇ ಜಿಲ್ಲೆಗೆ ಒಟ್ಟು 268 ಪೋಸ್ಟ್‌ಗಳು ಮಂಜೂರಾಗಿವೆ. ಇದರಲ್ಲಿ 89 ಮಂದಿ ವಿವಿಧೆಡೆ ಸೇವೆ ಆರಂಭಿಸಿದ್ದಾರೆ. 81 ಮಂದಿ ತರಬೇತಿ ಪೂರೈಸಿದ್ದು, ಪೋಸ್ಟಿಂಗ್‌ಗಾಗಿ ಕಾಯುತ್ತಿದ್ದಾರೆ. ಉಳಿದ 98 ಮಂದಿಯನ್ನೂ ನೇಮಿಸಿಕೊಳ್ಳಲಾಗಿದ್ದು, ಆರೋಗ್ಯ ಇಲಾಖೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಇದರೊಂದಿಗೆ ಜಿಲ್ಲೆಗೆ ಅಗತ್ಯವಿದ್ದ ಎಲ್ಲ ಸಮುದಾಯ ಆರೋಗ್ಯಾಧಿಕಾರಿ ಹುದ್ದೆಗಳನ್ನೂ ಭರ್ತಿ ಮಾಡಿದಂತೆ ಆಗುತ್ತದೆ.

ಬಹುಪಾಲಾಗಿ ಈ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಕೇಂದ್ರದಂತೆ ಕೆಲಸ ಮಾಡುತ್ತವೆ. ಎಲ್ಲ ಕೇಂದ್ರಗಳನ್ನೂ ಸ್ವಂತ ಕಟ್ಟಡದಲ್ಲೇ ಆರಂಭಿಸಬೇಕು ಎಂದು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಬೆರಳೆಣಿಕೆಯಷ್ಟು ಮಾತ್ರ ನಿರ್ಮಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳ ಪಕ್ಕದಲ್ಲಿ ಎಲ್ಲೆಲ್ಲಿ ಜಾಗವಿದೆಯೋ ಅಲ್ಲಿ ಕೆಲವನ್ನು ನಿರ್ಮಿಸಿದ್ದಾರೆ. ಉಳಿದಂತೆ ಬಾಡಿಗೆ ಕಟ್ಟಡದಲ್ಲೇ ಕೇಂದ್ರ ಆರಂಬಿಸಲು ಚಿಂತನೆ ನಡೆದಿದೆ. ಆದರೆ, ಎಲ್ಲ ಕೇಂದ್ರಗಳನ್ನೂ ಸ್ವಂತ ಕಟ್ಟಡದಲ್ಲೇ ಆರಂಭಿಸಬೇಕು. ಜತೆಗೆರಕ್ತದೊತ್ತಡ, ಮಧುಮೇಹ ತಪಾಸಣೆ, ಇಸಿಜಿ ಸೇರಿದಂತೆ ಪ್ರಾಥಮಿಕ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯ ಸಲಕರಣೆಗಳು ಬೇಕು ಎಂಬ ಬೇಡಿಕೆ ಆರೋಗ್ಯ ಇಲಾಖೆಯದ್ದು.‌

‌ಏನೇನು ಕೆಲಸ ಮಾಡುತ್ತವೆ?: ಆರೋಗ್ಯ ಕ್ಷೇಮ ಕೇಂದ್ರಗಳನ್ನು ಮುಖ್ಯವಾಗಿ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿಯೇ ಆರಂಭಿಸಲಾಗಿದೆ. ಜತೆಗೆ, ಗರ್ಭಿಣಿಯರ ತಪಾಸಣೆ, ಉಪಚಾರ, ಬಾಣಂತಿಯರು ಹಾಗೂ ಶಿಶುಗಳ ಆರೈಕೆ, ಪೌಷ್ಟಿಕಾಂಶ ಕೊರತೆಯ ತಪಾಸಣೆ ಮುಂತಾದ ಕೆಲಸಗಳನ್ನು ಇವು ಮಾಡುತ್ತವೆ. ಮಾತೃಪೂರ್ಣ, ಪಲ್ಸ್‌ ಪೋಲಿಯೊ, ಆನೆಕಾಲು ರೋಗ ನಿಯಂತ್ರಣ, ಮಳೇರಿಯ ಮಾಸಾಚರಣೆ ಮುಂತಾದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಹೊಣೆಯನ್ನೂ ಇವು ಹೊತ್ತುಕೊಳ್ಳುತ್ತವೆ.

ಸದ್ಯ ಎಲ್ಲ ಅಧಿಕಾರಿಗಳನ್ನೂ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ. ಪ್ರತಿ ಕೇಂದ್ರಕ್ಕೂ ವಾರ್ಷಿಕ ₹ 30 ಸಾವಿರ ಸಲಕರಣೆ ಖರೀದಿಗೆ, ₹ 25 ಸಾವಿರ ಔಷಧ ಖರೀದಿಗೆ ಅನುದಾನ ಮೀಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT