ಮಂಗಳವಾರ, ಏಪ್ರಿಲ್ 7, 2020
19 °C
‘ಜನ್ಮಭೂಮಿಯೇ ಕರ್ಮಭೂಮಿ’ ಘೋಷಣೆಗಿಲ್ಲ ಬೆಲೆ, ಕಳೆದ ವರ್ಷದ ‘ಜಲಧಾರೆ’ ಯೋಜನೆ ಅನುಷ್ಠಾನಕ್ಕೆ ಹಣ

ಬಜೆಟ್‌ನಲ್ಲಿ ‘ತವರಿನ ಋಣ’ ಮರೆತರೇ ಮುಖ್ಯಮಂತ್ರಿ?

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

ಮಂಡ್ಯ: ಕೆ.ಆರ್‌.ಪೇಟೆ ವಿಧಾನಸಭಾ ಉಪ ಚುನಾವಣೆ ವೇಳೆ ‘ತವರಿನ ಋಣ’ದ ಬಗ್ಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬುಧವಾರ ಮಂಡಿಸಿದ ಬಜೆಟ್‌ನಲ್ಲಿ ತವರು ಜಿಲ್ಲೆಯ ಸೊಲ್ಲು ಎತ್ತಲಿಲ್ಲ. ಹೀಗಾಗಿ, ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಜಿಲ್ಲೆಯ ಜನರು ನಿರಾಸೆ ಅನುಭವಿಸಿದರು.

‘ಹುಟ್ಟೂರಿನ ಅಭಿವೃದ್ಧಿಗೆ ಒಂದು ಅವಕಾಶ ಕೊಡಿ, ತವರಿನ ಋಣ ತೀರಿಸುತ್ತೇನೆ’ ಎಂದು ಮುಖ್ಯಮಂತ್ರಿ ಪದೇಪದೇ ಹೇಳುತ್ತಿದ್ದರು. ತವರಿನ ಅಭಿವೃದ್ಧಿಯ ಕನಸಿನ ಬಗ್ಗೆಯೂ ಮಾತನಾಡಿದ್ದರು. ‘ಜನ್ಮಭೂಮಿಯೇ ಕರ್ಮ ಭೂಮಿ’ ಎಂದೂ ಘೋಷಿಸಿದ್ದರು. ಭರವಸೆಗಳನ್ನು ನಂಬಿದ್ದ ಜನರು ಈ ಬಜೆಟ್‌ನಲ್ಲಿ ಜಿಲ್ಲೆಗೆ ದೊಡ್ಡ ಕೊಡುಗೆಗಳನ್ನೇ ಕೊಡುತ್ತಾರೆ ಎಂದು ಭಾವಿಸಿದ್ದರು. ಆದರೆ, ಆ ನಂಬಿಕೆ ಸುಳ್ಳಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಹೊಸ ಯೋಜನೆ ಘೋಷಿಸದೇ ಇರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‌ ವಿರುದ್ಧ ಯಡಿಯೂರಪ್ಪ ಅವರು ‘ಮಂಡ್ಯ ಬಜೆಟ್‌’ ಎಂದು ಟೀಕೆ ಮಾಡಿದ್ದರು. ಆದರೆ, ಈ ಬಾರಿಯ ಬಜೆಟ್‌ ಭಾಷಣದಲ್ಲಿ ಅವರು ಮಂಡ್ಯದ ಹೆಸರು ಎತ್ತಲಿಲ್ಲ. ಜಿಲ್ಲೆಯ ಎಲ್ಲಾ ಶಾಸಕರು ಬಜೆಟ್‌ನಲ್ಲಿ ಸೇರಿಸಿಕೊಳ್ಳುವಂತೆ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನೇ ಕೊಟ್ಟಿದ್ದರೂ ಅವುಗಳನ್ನು ಪರಿಗಣಿಸಿಲ್ಲ.

ಜಲಧಾರೆಗೆ ₹700 ಕೋಟಿ: ಕಳೆದ ಬಜೆಟ್‌ನಲ್ಲಿ ಎಚ್‌.ಡಿ.ಕುಮಾರಸ್ವಾಮಿ ವಿಜಯಪುರ ಹಾಗೂ ಮಂಡ್ಯ ಜಿಲ್ಲೆ ಸೇರಿ ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ‘ಜಲಧಾರೆ’ ಯೋಜನೆ ಘೋಷಿಸಿದ್ದರು. ಯೋಜನೆಯಡಿ ಮಂಡ್ಯ ಜಿಲ್ಲೆಗೆ ₹1,400 ಕೋಟಿ ಅನುದಾನ ಘೋಷಿಸಿದ್ದರು. ಇದಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಟೆಂಡರ್‌ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಜಲಧಾರೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಜೆಟ್‌ನಲ್ಲಿ ₹700 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಈ ಹಣ ವಿಜಯಪುರ ಹಾಗೂ ಮಂಡ್ಯ ಜಿಲ್ಲೆಗೆ ಹಂಚಿ ಹೋಗುವ ಕಾರಣ ಜಿಲ್ಲೆಗೆ ಲಾಭವಾಗುವುದಿಲ್ಲ ಎಂದೇ ಹೇಳಲಾಗುತ್ತಿದೆ.

‘ಜಲಧಾರೆ ಯೋಜನೆ ಎಚ್‌.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ರಮ. ಬಿಜೆಪಿ ಸರ್ಕಾರ ಯೋಜನೆಗೆ ಹಣ ತಡೆಹಿಡಿಯುವ ಯತ್ನ ನಡೆಸಿತ್ತು. ಆದರೆ ಹಾಗಾಗಲಿಲ್ಲ. ಈಗ ಮುಖ್ಯಮಂತ್ರಿ ಮಂಡ್ಯ ಜಿಲ್ಲೆಗೆ ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ. ಹಳೆಯ ಯೋಜನೆಗೆ ಹಣ ಬಿಡುಗಡೆ ಮಾಡಿದ್ದಾರೆ ಅಷ್ಟೇ’ ಎಂದು ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.

ಕಾರ್ಖಾನೆ ಮಾತಿಲ್ಲ: ಮೈಷುಗರ್‌ ಕಾರ್ಖಾನೆ ಪುನಶ್ಚೇತನಕ್ಕೆ ಬಜೆಟ್‌ನಲ್ಲಿ ಘೋಷಣೆ ಮಾಡುತ್ತಾರೆ ಎಂಬ ಜಿಲ್ಲೆಯ ರೈತರ ನಿರೀಕ್ಷೆ ಸುಳ್ಳಾಗಿದೆ. ಸ್ಥಗಿತಗೊಂಡಿರುವ ಸಕ್ಕರೆ ಕಾರ್ಖಾನೆಗಳ ಬಗ್ಗೆ ಅವರು ಯಾವುದೇ ಮಾತುಗಳನ್ನಾಡಿಲ್ಲ. ಹೀಗಾಗಿ, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯಂತೆಯೇ ಮೈಷುಗರ್‌ ಕಾರ್ಖಾನೆಯನ್ನೂ ಖಾಸಗಿ ಗುತ್ತಿಗೆ ನೀಡುವುದು ಬಹುತೇಕ ಖಚಿತಗೊಂಡಂತಾಗಿದೆ.

‘ಕೆ.ಆರ್‌.ಪೇಟೆ ಉಪ ಚುನಾವಣೆ ವೇಳೆ ಪ್ರಚಾರಕ್ಕೆ ಬಂದಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಹುಟ್ಟೂರನ್ನು ರಾಮರಾಜ್ಯ ಮಾಡುತ್ತಾರೆ ಎಂದು ಹೇಳಿದ್ದರು. ಆದರೆ, ಮುಖ್ಯಮಂತ್ರಿ ಹುಟ್ಟೂರಿಗೆ ಕನಿಷ್ಠ ಕಾರ್ಯಕ್ರಮವನ್ನೂ ಘೋಷಣೆ ಮಾಡಿಲ್ಲ’ ಎಂದು ರೈತ ಮುಖಂಡ ನಾಗರಾಜು ಆರೋಪಿಸಿದರು.

ಗಾರ್ಮೆಂಟ್ಸ್‌: ಮಹಿಳೆಯರ ಪ್ರಾಣಕ್ಕಿಲ್ಲ ರಕ್ಷಣೆ

ಬೆಂಗಳೂರಿನ ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮುಖ್ಯಮಂತ್ರಿಯು ‘ವನಿತಾ ಸಂಗಾತಿ’ ಯೋಜನೆ ಘೋಷಿಸಿದ್ದಾರೆ. ಇದರಿಂದ ಒಂದು ಲಕ್ಷ ಮಹಿಳೆಯರಿಗೆ ಮಾಸಿಕ ಬಸ್‌ ಪಾಸ್‌ ಸೌಲಭ್ಯ ದೊರೆಯಲಿದೆ.

ಆದರೆ, ಗೆಜ್ಜಲಗೆರೆ, ಶ್ರೀರಂಗಪಟ್ಟಣ ಬಳಿಯ ಸಿದ್ಧ ಉಡುಪು ಕಾರ್ಖಾನೆಗಳಿಗೆ ತೆರಳುವ ಜಿಲ್ಲೆಯ ಸಾವಿರಾರು ಮಹಿಳೆಯರು ಗೂಡ್ಸ್‌ ಆಟೊಗಳಲ್ಲಿ ಪ್ರಾಣಿಗಳಂತೆ ಪ್ರಯಾಣ ಮಾಡುತ್ತಿದ್ದಾರೆ. ಅವರ ಪ್ರಾಣಕ್ಕೆ ಲೆಕ್ಕವೇ ಇಲ್ಲದಂತಾಗಿದೆ. ಮಹಿಳೆಯರ ಬಸ್‌ ಸೌಲಭ್ಯದ ಕನಸು ಇನ್ನೂ ಕನಸಾಗಿಯೇ ಉಳಿದಿದೆ ಎಂದು ಕಾರ್ಮಿಕರು ಹೇಳುತ್ತಾರೆ.

ಜಾಲತಾಣಗಳಲ್ಲಿ ಆಕ್ರೋಶ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಡ್ಯ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳಲ್ಲಿ ಸಂದೇಶ ಪ್ರಕಟಿಸಿರುವ ಜನರು, ಮುಖ್ಯಮಂತ್ರಿ ತವರಿನ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು