ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್: ನರೇಗಾ ಯೋಜನೆಗೆ ಅನುದಾನ ಕಡಿತ– ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೂ ನಿರಾಸೆ

Last Updated 1 ಫೆಬ್ರುವರಿ 2023, 14:15 IST
ಅಕ್ಷರ ಗಾತ್ರ

ನವದೆಹಲಿ: ಗ್ರಾಮೀಣ ಜನರಿಗೆ ಉದ್ಯೋಗದ ಖಾತ್ರಿ ನೀಡುವ ಮಹತ್ವದ ‘ನರೇಗಾ‘ ಯೋಜನೆಗೆ 2023–24ರ ಬಜೆಟ್‌ನಲ್ಲಿ ಅನುದಾನ ಕಡಿತವಾಗಿದೆ. ಅಲ್ಲದೆ, ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪ್ರಸಕ್ತ ಹಣಕಾಸು ವರ್ಷದಲ್ಲಿ ನಿರೀಕ್ಷೆ ಮಾಡಿದ್ದ ಅಂದಾಜು ವೆಚ್ಚಕ್ಕಿಂತಲೂ ಶೇ 13ರಷ್ಟು ಕಡಿಮೆ ಅನುದಾನ ಹಂಚಿಕೆಯಾಗಿದೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಬಜೆಟ್‌ನಲ್ಲಿ ₹ 1,57,545 ಕೋಟಿ ಹಂಚಿಕೆಯಾಗಿದೆ. ನರೇಗಾ ಯೋಜನೆಗೆ ₹ 60 ಸಾವಿರ ಕೋಟಿ ಹಂಚಿಕೆಯಾಗಿದ್ದು ಇದು, ಕಳೆದ ಹಣಕಾಸು ವರ್ಷದ ಪರಿಷ್ಕೃತ ಅಂದಾಜು ವೆಚ್ಚಕ್ಕಿಂತ ಶೇ 32ರಷ್ಟು ಕಡಿಮೆಯಾಗಿದೆ.

ನರೇಗಾ ಯೋಜನೆಗೆ 2022–23ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು ₹ 73 ಸಾವಿರ ಕೋಟಿ ಹಂಚಿಕೆ ಮಾಡಲಾಗಿತ್ತು. ಪರಿಷ್ಕೃತ ಅಂದಾಜಿನ ಪ್ರಕಾರ, ಈ ಮೊತ್ತ ನಂತರ ₹ 89,400 ಕೋಟಿಗೆ ಏರಿಕೆಯಾಗಿತ್ತು.

ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬದ ಕನಿಷ್ಠ ಒಬ್ಬರಿಗೆ ಕನಿಷ್ಠ 100 ದಿನ ಉದ್ಯೋಗದ ಖಾತ್ರಿ ನೀಡಲಾಗುತ್ತದೆ. ಈ ಯೋಜನೆಯಡಿ ಮೂರನೇ ಒಂದರಷ್ಟು ಉದ್ಯೋಗವನ್ನು ಮಹಿಳೆಯರಿಗೆ ನೀಡುವುದು ಕಡ್ಡಾಯವಾಗಿದೆ.

ಉಳಿದಂತೆ, ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಗೆ ಕಳೆದ ವರ್ಷ ಇದ್ದಂತೆ ₹ 19,000 ಕೋಟಿ ಹಂಚಿಕೆ ಮಾಡಲಾಗಿದೆ. ಅಜೀವಿಕಾ ಯೋಜನೆಗೆ ₹ 14,129 ಕೋಟಿ ಹಂಚಿಕೆಯಾಗಿದ್ದು, ಕಳೆದ ವರ್ಷದ ಪರಿಷ್ಕೃತ ಅಂದಾಜಿಗಿಂತಲೂ ಹೆಚ್ಚಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅನುದಾನವನ್ನು ₹ 54,487 ಕೋಟಿಗೆ ಏರಿಸಲಾಗಿದೆ. ಇದು, ಕಳೆದ ವರ್ಷ ₹ 48,422 ಕೋಟಿ ಇತ್ತು. ಆದರೆ, ಶ್ಯಾಮಪ್ರಸಾದ್‌ ಮುಖರ್ಜಿ ರುರ್ಬಾನ್‌ ಮಿಷನ್‌ಗೆ ಈ ಬಾರಿ ಯಾವುದೇ ಅನುದಾನ ನಿಗದಿಪಡಿಸಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಸಮಗ್ರ ಮೂಲಸೌಕರ್ಯ ಒದಗಿಸುವ ಸಮಗ್ರ ಯೋಜನೆಯ ಅನುಷ್ಠಾನ ಈ ಯೋಜನೆಯ ಗುರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT