ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'2047ರ ಹೊತ್ತಿಗೆ ವಿಕಸಿತ ಭಾರತ' ಖಾತ್ರಿಪಡಿಸಿದ ಬಜೆಟ್‌: ಪ್ರಧಾನಿ ನರೇಂದ್ರ ಮೋದಿ

Published 1 ಫೆಬ್ರುವರಿ 2024, 8:15 IST
Last Updated 1 ಫೆಬ್ರುವರಿ 2024, 8:15 IST
ಅಕ್ಷರ ಗಾತ್ರ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರದ ಮಧ್ಯಂತರ ಬಜೆಟ್‌ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.

ಬಜೆಟ್‌ ಮಂಡನೆ ಬಳಿಕ ಮಾತನಾಡಿರುವ ಮೋದಿ, 'ಮಧ್ಯಂತರ ಬಜೆಟ್‌ ವಿನೂತನ ಮತ್ತು ಎಲ್ಲವನ್ನೂ ಒಳಗೊಳ್ಳುವಂತಿದೆ. ನಿರಂತರತೆಯ ಭರವಸೆ ಮೂಡಿಸಿದೆ. ವಿಕಸಿತ ಭಾರತದ ನಾಲ್ಕು ಆಧಾರ ಸ್ಥಂಭಗಳಾದ ಯುವ ಜನರು, ಬಡವರು, ಮಹಿಳೆಯರು ಮತ್ತು ರೈತರನ್ನು ಈ ಬಜೆಟ್‌ ಸಬಲೀಕರಣಗೊಳಿಸಲಿದೆ. 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ಖಾತ್ರಿ ನೀಡಿದೆ‘ ಎಂದಿದ್ದಾರೆ.

'ಬಡವರು ಮತ್ತು ಮಧ್ಯಮ ವರ್ಗದ ಜನರನ್ನು ಸಬಲೀಕರಣಗೊಳಿಸುವ ಮತ್ತು ಅವರಿಗಾಗಿ ಅವಕಾಶಗಳನ್ನು ಸೃಷ್ಟಿಸುವುದಕ್ಕೆ ಒತ್ತು ನೀಡಲಾಗಿದೆ. ಮನೆಗಳ ಛಾವಣಿಗಳ ಮೇಲೆ ಸೌರವಿದ್ಯುತ್‌ ಫಲಕಗಳನ್ನು ಅಳವಡಿಸುವ ಯೋಜನೆಯು ಕೋಟ್ಯಂತರ ಕುಟುಂಬಗಳು ಉಚಿತ ವಿದ್ಯುತ್‌ ಪಡೆಯಲು ನೆರವಾಗಲಿದೆ' ಎಂದು ಪ್ರತಿಪಾದಿಸಿದ್ದಾರೆ.

'ಬಜೆಟ್‌ನಲ್ಲಿ ನೀಡಲಾಗಿರುವ ಖಾತ್ರಿಗಳು 'ವಿಕಸಿತ ಭಾರತ–2047'ರ ಅಡಿಪಾಯವನ್ನು ಭದ್ರಪಡಿಸಿವೆ. ನಿರ್ಮಲಾ ಸೀತಾರಾಮನ್ ಮತ್ತು ಅವರ ತಂಡಕ್ಕೆ ಅಭಿನಂದನೆಗಳು. ಯುವ ಭಾರತದ ಆಕಾಂಕ್ಷೆಗಳು ಈ ಬಜೆಟ್‌ ಪ್ರತಿಫಲಿಸುತ್ತಿವೆ ' ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

‘ವಿಕಸಿತ ಭಾರತ’ಕ್ಕೆ ರಾಜ್ಯಗಳಿಗೆ ಸಾಲ

ನವದೆಹಲಿ: ‘ವಿಕಸಿತ ಭಾರತ’ ಸಾಕಾರಗೊಳಿಸಲು ಹಾಗೂ ರಾಜ್ಯಗಳ ಅಭಿವೃದ್ದಿ ಬೆಂಬಲಿಸಲು ರಾಜ್ಯಗಳಿಗೆ ಈ ವರ್ಷ ₹75 ಸಾವಿರ ಕೋಟಿ ನೀಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದು 50 ವರ್ಷಗಳ ಬಡ್ಡಿರಹಿತ ಸಾಲ.

ವಿಕಸಿತ ಭಾರತಕ್ಕಾಗಿ ರಾಜ್ಯಗಳಲ್ಲಿ ಅನೇಕ ಬೆಳವಣಿಗೆ ಹಾಗೂ ಅಭಿವೃದ್ಧಿಯನ್ನು ಸಕ್ರಿಯಗೊಳಿಸುವ ಸುಧಾರಣೆಗಳ ಅಗತ್ಯವಿದೆ. ಇದಕ್ಕಾಗಿ ರಾಜ್ಯಗಳಿಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ ಎಂದು ನಿರ್ಮಲಾ ಹೇಳಿದರು. ‘ಈ ಹೊಸ ವ್ಯವಸ್ಥೆಯು ಕೇಂದ್ರ ಹಾಗೂ ರಾಜ್ಯಗಳ ಸಂಬಂಧವನ್ನು ಇನ್ನಷ್ಟು ಬಲಪಡಿಸಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ಹಣಕಾಸಿನ ನೆರವು ನೀಡಲು ಯೋಜನೆಯನ್ನು ಹಣಕಾಸು ಸಚಿವಾಲಯವು 2020–21ರಲ್ಲಿ ಆರಂಭಿಸಿತ್ತು. ಕೋವಿಡ್‌–19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಜ್ಯಗಳ ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಉದ್ದೇಶದಿಂದ ಈ ಉಪಕ್ರಮಕ್ಕೆ ಚಾಲನೆ ನೀಡಲಾಯಿತು. ಆರೋಗ್ಯ, ಶಿಕ್ಷಣ, ನೀರಾವರಿ, ನೀರು ಸರಬರಾಜು, ವಿದ್ಯುತ್, ರಸ್ತೆ, ಸೇತುವೆಗಳು, ರೈಲ್ವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಯೋಜನೆಗಳಿಗೆ ಈ ಮೊತ್ತವನ್ನು ನಿಗದಿಪಡಿಸಲಾಗಿದೆ. ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲದ ರೂಪದಲ್ಲಿ ಈ ಮೊತ್ತ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT