ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌: ಏಕಲವ್ಯ ಶಾಲೆ: 38 ಸಾವಿರ ಶಿಕ್ಷಕರ ನೇಮಕ

157 ಹೊಸ ನರ್ಸಿಂಗ್ ಕಾಲೇಜು ಸ್ಥಾಪನೆ ಪ್ರಸ್ತಾವ
Last Updated 1 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):ಶಿಕ್ಷಣ ಸುಧಾರಣೆ ನಿಟ್ಟಿನಲ್ಲಿ, ಶಿಕ್ಷಕರ ನೇಮಕ, ಶಿಕ್ಷಕರ ತರಬೇತಿ, ಉತ್ಕೃಷ್ಠತಾ ಕೇಂದ್ರಗಳ ಸ್ಥಾಪನೆ, ನರ್ಸಿಂಗ್ ಕಾಲೇಜು ಸ್ಥಾಪನೆ, ಅನುದಾನ ಹೆಚ್ಚಳದಂತಹ ಕೆಲವು ಕ್ರಮಗಳನ್ನು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪಿಸಿದೆ.

ದೇಶದ 740 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಮುಂದಿನ 3 ವರ್ಷಗಳಲ್ಲಿ 38 ಸಾವಿರ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಶಾಲೆಗಳಲ್ಲಿ 3.5 ಲಕ್ಷ ಬುಡಕಟ್ಟು ಮಕ್ಕಳು ಓದುತ್ತಿದ್ದಾರೆ. ಶಿಕ್ಷಕರಿಗೆ ಸುಧಾರಿತ ಮಾದರಿಯ ತರಬೇತಿ ನೀಡುವುದಕ್ಕೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.

157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸುವ ಪ್ರಸ್ತಾವವನ್ನು ಸರ್ಕಾರ ಮುಂದಿರಿಸಿದೆ. ಈಗಾಗಲೇ ಇರುವ 157 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೇ ಇವು ಸ್ಥಾಪನೆಯಾಗಲಿವೆ. ವೈದ್ಯಕೀಯ ಸಾಧನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ನುರಿತ ಮಾನವ ಸಂಪನ್ಮೂಲ ಒದಗಿಸುವ ನಿಟ್ಟಿನಲ್ಲಿ ಬಹುಶಿಸ್ತೀಯ ಕೋರ್ಸ್‌ಗಳನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ. ಭವಿಷ್ಯದ ವೈದ್ಯಕೀಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಇದರಿಂದ ಸುಲಭವಾಗಲಿದೆ.

ಕೃತಕ ಬುದ್ಧಿಮತ್ತೆಗೆ (ಎಐ) ಸಂಬಂಧಿಸಿದ ಮೂರು ಉತ್ಕೃಷ್ಠತಾ ಕೇಂದ್ರಗಳು ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಆರಂಭವಾಗಲಿವೆ. ಖಾಸಗಿಯವರ ಸಹಭಾಗಿತ್ವದಲ್ಲಿ ಕೃಷಿ, ಸುಸ್ಥಿರ ನಗರ, ಆರೋಗ್ಯ ಕ್ಷೇತ್ರಗಳಲ್ಲಿ ಅಂತರ್‌ಶಿಸ್ತೀಯ ಸಂಶೋಧನೆ ಮತ್ತು ಅಪ್ಲಿಕೇಷನ್‌ಗಳ ಅಭಿವೃದ್ಧಿ ಕೆಲಸಗಳು ನಡೆಯಲಿವೆ.

5ಜಿ ತಂತ್ರಜ್ಞಾನ ಆಧರಿತ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 100 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತದೆ. ಬ್ಯಾಂಕ್‌ಗಳು, ಉದ್ಯಮಗಳು ಮೊದಲಾದ ಪ್ರಾಧಿಕಾರಗಳ ಸಹಯೋಗದಲ್ಲಿ ಅಪ್ಲಿಕೇಷನ್‌ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಸ್ಮಾರ್ಟ್ ತರಗತಿಗಳು, ಕೃಷಿ, ಸಾರಿಗೆ, ಆರೋಗ್ಯ ಸೇರಿದಂತೆ ವಿವಿಧ ವಲಯಗಳಿಗೆ ಸಂಬಂಧಿಸಿದ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಪ್ರಯೋಗಾಲಯ ಗಳಲ್ಲಿ ಕೃತಕವಾಗಿ ವಜ್ರ ತಯಾರಿಕೆ ಬಗ್ಗೆ ಯಾವುದಾದರೂ ಒಂದು ಐಐಟಿಯಲ್ಲಿ ಐದು ವರ್ಷ ಸಂಶೋಧನೆ ನಡೆಸಲು ಅನುದಾನ ಒದಗಿಸಲು ನಿರ್ಧರಿಸಲಾಗಿದೆ.

ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ

ಕೋವಿಡ್‌ ಅವಧಿಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಆಗಿರುವ ಹಿನ್ನಡೆಯನ್ನು ಪರಿಗಣಿಸಿರುವ ಸರ್ಕಾರ, ಮಕ್ಕಳಿಗಾಗಿ ‘ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ’ ಸ್ಥಾಪಿಸುವ ಘೋಷಣೆ ಮಾಡಿದೆ. ಎಲ್ಲ ಭಾಷೆ, ಪ್ರಕಾರಗಳ ಗುಣಮಟ್ಟದ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ. ಡಿಜಿಟಲ್ ಗ್ರಂಥಾಲಯಗಳ ಸೌಲಭ್ಯ ಮಕ್ಕಳಿಗೆ ದೊರಕಿಸುವ ನಿಟ್ಟಿನಲ್ಲಿ ವಾರ್ಡ್‌ ಮತ್ತು ಪಂಚಾಯಿತಿ ಮಟ್ಟದಲ್ಲಿ ಭೌತಿಕ ಸ್ವರೂಪದ ಗ್ರಂಥಾಲಯ ತೆರೆಯಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಸರ್ಕಾರ ಹೇಳಿದೆ. ಶಾಲಾ ಪಠ್ಯಕ್ರಮಕ್ಕೆ ಹೊರತಾದ ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳ ಗ್ರಂಥಗಳನ್ನು ನ್ಯಾಷನಲ್ ಬುಕ್ ಟ್ರಸ್ಟ್‌, ಚಿಲ್ಡ್ರನ್ಸ್ ಬುಕ್ ಟ್ರಸ್ಟ್ ಹಾಗೂ ಇತರೆ ಸಂಸ್ಥೆಗಳು ಒದಗಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT