ಸತತ ಐದನೇ ವಾರವೂ ಜಿಗಿದ ಷೇರುಪೇಟೆ
ಷೇರುಪೇಟೆ ಸೂಚ್ಯಂಕಗಳು ಸತತ ಐದನೇ ವಾರವೂ ಗಳಿಕೆ ಕಂಡಿವೆ. ಡಿಸೆಂಬರ್ 1ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಉತ್ತಮ ಜಿಗಿತ ಕಂಡಿವೆ. 67481 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.29 ರಷ್ಟು ಹೆಚ್ಚಳ ಕಂಡಿದೆ. 20267 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 2.39 ರಷ್ಟು ಪುಟಿದೆದ್ದಿದೆ. ವಿದೇಶಿ ಹೂಡಿಕೆದಾರರಿಂದ ಖರೀದಿ ಭರಾಟೆ ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕತೆ ತೈಲ ಬೆಲೆ ಇಳಿಕೆ ತಗ್ಗಿದ ಬಾಂಡ್ ಗಳಿಕೆ ಸೇರಿ ಹಲವು ಅಂಶಗಳು ಮಾರುಕಟ್ಟೆ ಜಿಗಿತಕ್ಕೆ ಕಾರಣವಾಗಿವೆ. ವಲಯವಾರು ಪ್ರಗತಿ ನೋಡಿದಾಗ ಎಲ್ಲಾ ಕ್ಷೇತ್ರಗಳೂ ಸಕಾರಾತ್ಮಕವಾಗಿ ಕಂಡುಬಂದಿವೆ. ಬಿಎಸ್ಇ ಅನಿಲ ಮತ್ತು ತೈಲ ಸೂಚ್ಯಂಕ ಮತ್ತು ಪವರ್ ಸೂಚ್ಯಂಕ ತಲಾ ಶೇ 5.7 ರಷ್ಟು ಜಿಗಿದಿವೆ. ಬಿಎಸ್ಇ ಕ್ಯಾಪಿಟಲ್ ಗೂಡ್ಸ್ ಶೇ 3.6 ಮತ್ತು ಬಿಎಸ್ಇ ಮೆಟಲ್ ಸೂಚ್ಯಂಕ ಶೇ 3 ರಷ್ಟು ಹೆಚ್ಚಳವಾಗಿದೆ. ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಅದಾನಿ ಟೋಟಲ್ ಗ್ಯಾಸ್ ಅದಾನಿ ಎನರ್ಜಿ ಸಲ್ಯೂಷನ್ಸ್ ಅದಾನಿ ಪವರ್ ಹಿಂದುಸ್ತಾನ್ ಏರೊನಾಟಿಕ್ಸ್ ಅದಾನಿ ಗ್ರೀನಿ ಎನರ್ಜಿ ಎಕ್ಸಿಸ್ ಬ್ಯಾಂಕ್ ಮತ್ತು ಗೇಲ್ ಇಂಡಿಯಾ ಗಳಿಕೆ ಕಂಡಿವೆ. ಬಿಎಸ್ಇ ಮಿಡ್ ಕ್ಯಾಪ್ ನಲ್ಲಿ ಟೋರೆಂಟ್ ಪವರ್ ಪವರ್ ಫೈನಾನ್ಸ್ ಕಾರ್ಪೊರೇಷನ್ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಆರ್‌ಇಸಿ ನ್ಯೂ ಇಂಡಿಯಾ ಅಶುರೆನ್ಸ್ ಕಂಪನಿ ಮುತ್ತೊಟ್ ಫೈನಾನ್ಸ್ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಗಳಿಕೆ ಕಂಡಿವೆ. ವರ್ಲ್ ಪೂಲ್ ಇಂಡಿಯಾ ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ ಟ್ಯೂಬ್ ಇನ್ವೆಸ್ಟ್ ಮೆಂಟ್ಸ್ ಎಪಿಎಲ್ ಅಪೋಲೋ ಟ್ಯೂಬ್ಸ್ ಶೇ 3 ರಿಂದ ಶೇ 9 ರಷ್ಟು ಕುಸಿದಿವೆ. ಮುನ್ನೋಟ: ಐದು ರಾಜ್ಯಗಳ ಚುನಾವಣಾ ಫಲಿತಾಂಶ ಷೇರುಪೇಟೆ ಮೇಲೆ ಒಂದಿಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ. ಡಿಸೆಂಬರ್ 6 ರಿಂದ 8ರ ವರೆಗೆ ಆರ್‌ಬಿಐ ಹಣಕಾಸು ಸಮಿತಿ ಸಭೆ ಜರುಗಲಿದೆ. ಬಡ್ಡಿ ದರ ವಿಚಾರವಾಗಿ ಆರ್‌ಬಿಐ ಯಾವ ನಿಲುವು ತಳೆಯಲಿದೆ ಎನ್ನುವುದು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ.