ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ಜೀವ ವಿಮೆ: ಮೂರು ತಪ್ಪು ಮಾಡಬೇಡಿ!

Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇ 4ರಷ್ಟು ಮಂದಿ ಮಾತ್ರ ಜೀವ ವಿಮೆ (ಲೈಫ್ ಇನ್ಶೂರೆನ್ಸ್ ) ಹೊಂದಿದ್ದಾರೆ. ಹೀಗೆ ಜೀವ ವಿಮೆ ಪಡೆದವರು ಕೂಡ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅನೇಕ ತಪ್ಪುಗಳನ್ನು ಮಾಡಿಕೊಂಡಿರುತ್ತಾರೆ.

ನನಗೆ ಎಷ್ಟು ಜೀವ ವಿಮಾ ಪಾಲಿಸಿಗಳು ಬೇಕು? ಟರ್ಮ್ ಇನ್ಶೂರೆನ್ಸ್ ಉತ್ತಮವೋ; ಇಲ್ಲ ಎಂಡೋಮೆಂಟ್ ಪಾಲಿಸಿ ಸೂಕ್ತವೋ? ಹೀಗೆ ವಿಮೆ ಮಾಡಿಸುವಾಗ ಏಳುವ ಹತ್ತಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮುನ್ನವೇ ಅವರು ಇನ್ಶೂರೆನ್ಸ್ ಖರೀದಿಯನ್ನು ಮುಗಿಸಿರುತ್ತಾರೆ. ಇನ್ಶೂರೆನ್ಸ್ ಪಡೆಯುವಾಗ ಯಾವ ತಪ್ಪುಗಳನ್ನು ತಪ್ಪಿಸಬೇಕು ಎನ್ನುವ ಕುರಿತ ವಿವರ ಇಲ್ಲಿದೆ.

ಹತ್ತಾರು ಲೈಫ್ ಇನ್ಶೂರೆನ್ಸ್ ಬೇಡ, ಸೂಕ್ತ ವಿಮೆ ಮತ್ತು ಕವರೇಜ್ ಬಹಳ ಮುಖ್ಯ: ರಮೇಶ ಅಂತ ನನ್ನ ಸ್ನೇಹಿತರಿದ್ದಾರೆ. ಅವರು ಮಡದಿ, ಮಗಳು, ಮಗ ಮತ್ತು ತಮ್ಮ ಹೆಸರಿನಲ್ಲಿ ಸುಮಾರು 10ಕ್ಕೂ ಹೆಚ್ಚು ಇನ್ಶೂರೆನ್ಸ್ ಪಾಲಿಸಿಗಳನ್ನು ಮಾಡಿಸಿದ್ದಾರೆ. ಕೆಲವು ಇನ್ಶೂರೆನ್ಸ್‌ಗಳನ್ನು ಸ್ನೇಹಿತರು ಹೇಳಿದರು ಅಂತ ಮಾಡಿದ್ರೆ, ಮತ್ತೆ ಕೆಲವನ್ನು ಏಜೆಂಟರ್, ಸಂಬಂಧಿಕರು ಹೇಳಿದ್ರು ಅಂತ ಪಡೆದಿದ್ದಾರೆ. ಆದರೆ, ಆ ಎಲ್ಲಾ ಲೈಫ್ ಇನ್ಶೂರೆನ್ಸ್‌ಗಳನ್ನು ಒಟ್ಟುಗೂಡಿಸಿದರೂ ಇರುವ ಕವರೇಜ್ ಮೊತ್ತ ಮಾತ್ರ ₹25 ಲಕ್ಷ. ಇವತ್ತಿನ ಬೆಲೆ ಏರಿಕೆ ಕಾಲದಲ್ಲಿ ₹25 ಲಕ್ಷ ಕವರೇಜ್ ಯಾವುದಕ್ಕೂ ಸಾಲುವುದಿಲ್ಲ.

ಕವರೇಜ್ ಅಂತ ಬಂದಾಗ ಟರ್ಮ್ ಲೈಫ್ ಇನ್ಶೂರೆನ್ಸ್ (ಅವಧಿ ವಿಮೆ) ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಕಡಿಮೆ ಮೊತ್ತಕ್ಕೆ ದೊಡ್ಡ ಮೊತ್ತದ ವಿಮಾ ಕವರೇಜ್ ಅನ್ನು ಟರ್ಮ್ ಲೈಫ್ ಇನ್ಶೂರೆನ್ಸ್ ಒದಗಿಸುತ್ತದೆ. 32 ವರ್ಷದ ವ್ಯಕ್ತಿಗೆ ವಾರ್ಷಿಕ ₹13,000ದಿಂದ ₹14,000 ಕೊಟ್ಟರೆ ₹75 ಲಕ್ಷದಿಂದ ₹1 ಕೋಟಿ ವರೆಗೆ ಕವರೇಜ್ ಕೊಡುವ ಟರ್ಮ್ ಲೈಫ್ ಇನ್ಶೂರೆನ್ಸ್ ಸಿಗುತ್ತದೆ.

ಟರ್ಮ್ ಇನ್ಶೂರೆನ್ಸ್ ನಿಮ್ಮ ಕುಟುಂಬಕ್ಕೆ ಹಣಕಾಸಿನ ಸುರಕ್ಷತೆಯನ್ನು ಒದಗಿಸುತ್ತದೆ. ಟರ್ಮ್ ಇನ್ಶೂರೆನ್ಸ್ ಕವರೇಜ್ ಪಡೆದಿರುವ ವ್ಯಕ್ತಿ ಮೃತಪಟ್ಟರೆ ಆತ ಎಷ್ಟು ಮೊತ್ತದ ಕವರೇಜ್ ಪಡೆದಿದ್ದನೋ ಅಷ್ಟು ಮೊತ್ತದ ಹಣ ಆತನ ಕುಟುಂಬಕ್ಕೆ ಸಿಗುತ್ತದೆ. ಹಣಕಾಸಿನ ಸ್ಥಿತಿಗತಿಗಳ ಕಾರಣಕ್ಕೆ ಕೆಲವರಿಗೆ ಟರ್ಮ್ ಇನ್ಶೂರೆನ್ಸ್ ಪಡೆಯಲು ಸಾಧ್ಯವಾಗುವುದಿಲ್ಲ. ಅಂತವರು ಎಂಡೋಮೆಂಟ್ ಪಾಲಿಸಿ, ಮನಿ ಬ್ಯಾಕ್ ಪಾಲಿಸಿ, ಯುಲಿಪ್‌ನಂತಹ ಇನ್ಶೂರೆನ್ಸ್ ಪಾಲಿಸಿಗಳನ್ನು ಪರಿಗಣಿಸಬಹುದು.

ಆದರೆ, ನೆನಪಿರಲಿ ಇಂತಹ ಹಳೆ ಮಾದರಿಯ ವಿಮಾ ಪಾಲಿಸಿಗಳಲ್ಲಿ ಹೂಡಿಕೆ ಮೊತ್ತಕ್ಕೆ ಸಣ್ಣ ಪ್ರಮಾಣದ ಇನ್ಶೂರೆನ್ಸ್ ಕವರೇಜ್ ಜೊತೆಗೆ ಸಣ್ಣ ಪ್ರಮಾಣದ ಲಾಭ ಮಾತ್ರ ಸಿಗುತ್ತದೆ. ಹಳೆ ಮಾದರಿಯ ವಿಮಾ ಪಾಲಿಸಿಗಳು ಮೆಚ್ಯೂರಿಟಿಗೆ ಬಂದಾಗ ಒಟ್ಟಾರೆ ಶೇ 4ರಿಂದ 5ರಷ್ಟು ಲಾಭಾಂಶ ಸಿಕ್ಕರೆ ಅದೇ ಹೆಚ್ಚು.

ಹಾಗಾಗಿ, ಹಳೆಯ ಮಾದರಿಯ ಪಾಲಿಸಿಗಳನ್ನು ಹೂಡಿಕೆಗಳು ಎಂದುಕೊಂಡು ಹೆಚ್ಚೆಚ್ಚು ಹಣವನ್ನು ಅವುಗಳಲ್ಲಿ ತೊಡಗಿಸುವುದು ಸರಿಯಲ್ಲ. ಹೂಡಿಕೆ ಮತ್ತು ಇನ್ಶೂರೆನ್ಸ್ ಅನ್ನು ಪ್ರತ್ಯೇಕಿಸಿ ನೋಡುವುದು ಬಹಳ ಮುಖ್ಯ. ಇನ್ಶೂರೆನ್ಸ್ ಅಂತ ಬಂದಾಗ ಟರ್ಮ್ ಲೈಫ್ ಇನ್ಶೂರೆನ್ಸ್‌ಗೆ ಆದ್ಯತೆ ಕೊಟ್ಟರೆ ಒಳ್ಳೆಯದು. ಅದು ನಿಮಗೆ ಸಿಗುವುದಿಲ್ಲ ಎಂದಾಗ ಮಾತ್ರ ಹಳೆ ಮಾದರಿಯ ಇನ್ಶೂರೆನ್ಸ್ ಪಾಲಿಸಿಗಳತ್ತ ಚಿತ್ತ ಹರಿಸಿ. ಹೆಚ್ಚು ಕವರೇಜ್ ಮೊತ್ತವಿರುವ ಒಂದು ಅಥವಾ ಹೆಚ್ಚೆಂದರೆ ಎರಡು ಲೈಫ್ ಇನ್ಶೂರೆನ್ಸ್ ಪಾಲಿಸಿ ಸಾಕಾಗುತ್ತದೆ.

ಟರ್ಮ್ ಲೈಫ್ ಇನ್ಶೂರೆನ್ಸ್ ಖರೀದಿ ವಿಳಂಬ ಮಾಡಬೇಡಿ: ನನಗೇನಾಗುತ್ತೆ, ನಂಗೆ ಇನ್ನು 25 ವರ್ಷ. ಸದೃಢ ಆರೋಗ್ಯದಿಂದ ಇದ್ದೀನಿ ಅಂತ ಹೇಳಿಕೊಂಡು ಕೆಲವರು ಟರ್ಮ್ ಲೈಫ್ ಇನ್ಶೂರೆನ್ಸ್ ಖರೀದಿಸಲು ವಿಳಂಬ ಮಾಡುತ್ತಾರೆ. ಆದರೆ, ಟರ್ಮ್ ಇನ್ಶೂರೆನ್ಸ್ ಖರೀದಿ ವಿಳಂಬ ಮಾಡಿದಷ್ಟೂ ಪ್ರೀಮಿಯಂ ಮೊತ್ತ ಜಾಸ್ತಿಯಾಗುತ್ತದೆ. ಉದಾಹರಣೆಗೆ 25 ವರ್ಷದ ವ್ಯಕ್ತಿ ₹1 ಕೋಟಿ ಇನ್ಶೂರೆನ್ಸ್ ಕವರೇಜ್‌ಗೆ ವರ್ಷಕ್ಕೆ ₹9 ಸಾವಿರ ಕಟ್ಟಿದರೆ ಸಾಕು.

ಆದರೆ, ಅದೇ ವ್ಯಕ್ತಿ 35ನೇ ವಯಸ್ಸಿನಲ್ಲಿ ಟರ್ಮ್ ಇನ್ಶೂರೆನ್ಸ್ ಪಡೆದರೆ ವರ್ಷಕ್ಕೆ ₹16 ಸಾವಿರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಹಾಗಾಗಿ, ಕೆಲಸಕ್ಕೆ ಸೇರಿದ ತಕ್ಷಣ ಟರ್ಮ್ ಲೈಫ್ ಇನ್ಶೂರೆನ್ಸ್ ಖರೀದಿಸುವುದು ಒಳಿತು. ಹೀಗೆ ಮಾಡಿದಾಗ ಕುಟುಂಬಕ್ಕೆ ಆರ್ಥಿಕ ಭದ್ರತೆ ಸಿಗುವ ಜೊತೆಗೆ ಪ್ರೀಮಿಯಂ ಮೊತ್ತವೂ ಉಳಿತಾಯವಾಗುತ್ತದೆ.

ಇನ್ಶೂರೆನ್ಸ್ ಪಡೆಯುವಾಗ ಸುಳ್ಳು ಮಾಹಿತಿ ನೀಡಬೇಡಿ: ಟರ್ಮ್ ಲೈಫ್ ಇನ್ಶೂರೆನ್ಸ್ ಪಡೆಯುವಾಗ ನಿಮ್ಮ ಆರೋಗ್ಯದ ಸ್ಥಿತಿಗತಿಯ ಮಾಹಿತಿಯನ್ನು ನಿಖರವಾಗಿ ನೀಡುವುದು ಬಹಳ ಮುಖ್ಯ. ನಿಮಗೆ ಈಗಾಗಲೇ ಯಾವುದೋ ಕಾಯಿಲೆ ಇದ್ದರೆ ಅದನ್ನು ಟರ್ಮ್ ಇನ್ಶೂರೆನ್ಸ್‌ನ ಅರ್ಜಿಯಲ್ಲಿ ನಮೂದಿಸಬೇಕು.

ಮದ್ಯಪಾನ , ಧೂಮಪಾನ ಮಾಡುತ್ತಿದ್ದರೆ ಆ ಬಗ್ಗೆಯೂ ತಿಳಿಸಬೇಕು. ಮದ್ಯಪಾನ, ಧೂಮಪಾನ ಮಾಡುವವರಿಗೆ ಇನ್ಶೂರೆನ್ಸ್ ಕಂಪನಿಗಳು ಹೆಚ್ಚಿನ ಇನ್ಶೂರೆನ್ಸ್ ಪ್ರೀಮಿಯಂ ನಿಗದಿ ಮಾಡುತ್ತವೆ. ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆಯಾಗಲಿ ಎನ್ನುವ ಕಾರಣಕ್ಕೆ ಮದ್ಯಪಾನ, ಧೂಮಪಾನ ಮಾಡುವುದನ್ನು ಮರೆಮಾಚಿದರೆ ಅನಿರೀಕ್ಷಿತ ಸಂದರ್ಭದಲ್ಲಿ ಕವರೇಜ್ ಕ್ಲೇಮ್ ಮಾಡುವಾಗ ಸಮಸ್ಯೆ ಎದುರಾಗುತ್ತದೆ. ಹಾಗಾಗಿ, ಇನ್ಶೂರೆನ್ಸ್ ಪಡೆಯುವಾಗ ಯಾವುದೇ ಕಾರಣಕ್ಕೂ ಸುಳ್ಳು ಮಾಹಿತಿ ನೀಡಬೇಡಿ.

ಷೇರುಪೇಟೆಯಲ್ಲಿ ನಿಲ್ಲದ ಗೂಳಿ ಓಟ

2024-25ನೇ ಹಣಕಾಸು ವರ್ಷದ ಮೊದಲ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಭಾರೀ ಜಿಗಿತ ಕಂಡಿವೆ. ಅನಿಶ್ಚಿತತೆಯ ವಾತಾವರಣದ ನಡುವೆಯೂ ಸೆನ್ಸೆಕ್ಸ್ ಮತ್ತು ನಿಫ್ಟಿ ಪುಟಿದೆದ್ದಿವೆ. ಏಪ್ರಿಲ್ 5ಕ್ಕೆ ಕೊನೆಗೊಂಡ ವಾರದಲ್ಲಿ 74248 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇ 0.81ರಷ್ಟು ಗಳಿಸಿಕೊಂಡಿದೆ. 22513 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ 0.83ರಷ್ಟು ಹೆಚ್ಚಳ ಕಂಡಿದೆ. ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 7ರಷ್ಟು ಗಳಿಸಿಕೊಂಡಿದ್ದರೆ ಮಿಡ್ ಕ್ಯಾಪ್ ಮತ್ತು ಲಾರ್ಜ್ ಕ್ಯಾಪ್‌ ಸೂಚ್ಯಂಕಗಳು ಕ್ರಮವಾಗಿ ಶೇ 4 ಮತ್ತು ಶೇ 1ರಷ್ಟು ಹೆಚ್ಚಳ ದಾಖಲಿಸಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಧ್ಯಮ ಸೂಚ್ಯಂಕ ಶೇ 6.7ರಷ್ಟು ಗಳಿಸಿಕೊಂಡಿದೆ. ನಿಫ್ಟಿ ಲೋಹ ಶೇ 5.3 ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 4.2 ಮತ್ತು ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 4ರಷ್ಟು ಜಿಗಿದಿವೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಅದಾನಿ ಪವರ್ ವೇದಾಂತ ಹಿಂದುಸ್ಥಾನ್ ಜಿಂಕ್ ಭಾರತ್ ಎಲೆಕ್ಟ್ರಾನಿಕ್ಸ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅದಾನಿ ವಿಲ್ಮಾರ್ ಬಂಧನ್ ಬ್ಯಾಂಕ್ ಮತ್ತು ಡಿವೀಸ್ ಲ್ಯಾಬೊರೇಟರೀಸ್ ಉತ್ತಮ ಗಳಿಕೆ ಕಂಡಿವೆ. ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಕಳೆದ ವಾರ ಎಚ್‌ಡಿಎಫ್‌ಸಿ ಬ್ಯಾಂಕ್ ಹೆಚ್ಚು ವೃದ್ಧಿ ಕಂಡಿದೆ. ನಂತರದಲ್ಲಿ ಟಿಸಿಎಸ್ ಎನ್‌ಟಿಪಿಸಿ ಮತ್ತು ಮಹೀಂದ್ರ ಆ್ಯಂಡ್‌ ಮಹೀಂದ್ರ ಇವೆ. ಮತ್ತೊಂದೆಡೆ ರಿಲಯನ್ಸ್ ಇಂಡಸ್ಟ್ರೀಸ್ ಏರ್‌ಟೆಲ್ ಐಸಿಐಸಿಐ ಬ್ಯಾಂಕ್ ಹೆಚ್ಚಿನ ಪ್ರಮಾಣದಲ್ಲಿ ಮೌರುಕಟ್ಟೆ ಮೌಲ್ಯ ಕಳೆದುಕೊಂಡಿವೆ.

ಇನ್ನು ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹3835.75 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಮುನ್ನೋಟ: ಈ ವಾರದಲ್ಲಿ ಕಂಪನಿಗಳು ತ್ರೈಮಾಸಿಕ ಫಲಿತಾಂಶದ ಪರ್ವ ಆರಂಭಗೊಳ್ಳಲಿದೆ. ಆನಂದ್ ರಾಟಿ ವೆಲ್ತ್ ಲಿಮಿಟೆಡ್‌ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಜಸ್ಟ್ ರೈಡ್ ಎಂಟರ್‌ಪ್ರೈಸಸ್ ಲಿಮಿಟೆಡ್ ಕ್ಯೂಪಿಡ್ ಲಿಮಿಟೆಡ್‌ ಪಾಪ್ಯೂಲರ್ ವೆಹಿಕಲ್ಸ್ ಆ್ಯಂಡ್‌ ಸರ್ವಿಸಸ್ ಕ್ರಿಸ್ಟಲ್ ಇಂಟಿಗ್ರೇಟೆಡ್ ಸರ್ವಿಸಸ್ ಹಾಗೂ ಕೆಲವು ಕಂಪನಿಗಳು ತ್ರೈಮಾಸಿಕ ಸಾಧನೆಯ ವರದಿ ಪ್ರಕಟಿಸಲಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ದೇಶೀಯ ಬೆಳವಣಿಗೆಗಳು ಲೋಕಸಭಾ ಚುನಾವಣೆ ಸೇರಿ ಹಲವು ಅಂಶಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT