ಸಂಬಳದ ಎಷ್ಟು ಮೊತ್ತವನ್ನು ಮ್ಯೂಚುವಲ್ ಫಂಡ್‌ನಲ್ಲಿ (ಎಂ.ಎಫ್) ಹೂಡಿಕೆ ಮಾಡಬೇಕು? ಇಂಥದ್ದೊಂದು ಪ್ರಶ್ನೆ ವೇತನ ಪಡೆಯುತ್ತಿರುವ ಅನೇಕ ಹೂಡಿಕೆದಾರರಲ್ಲಿದೆ.
ಎಷ್ಟು ಉಳಿತಾಯ ಮಾಡಬೇಕು ಮತ್ತು ಎಷ್ಟು ಹೂಡಿಕೆ ಮಾಡಬೇಕು ಎನ್ನುವುದನ್ನು ಲೆಕ್ಕಾಚಾರ ಮಾಡಲು ಕೆಲವು ಸೂತ್ರಗಳಿದ್ದರೂ ಎಲ್ಲರಿಗೂ ಒಪ್ಪುವಂತಹ ಒಂದು ನಿರ್ದಿಷ್ಟ ಸಂಖ್ಯೆ ನೀಡುವುದು ಕಷ್ಟ. ಏಕೆಂದರೆ, ಒಬ್ಬೊಬ್ಬರ ಹಣಕಾಸಿನ ಪರಿಸ್ಥಿತಿ ಒಂದೊಂದು ರೀತಿ ಇರುತ್ತದೆ. ಹಾಗಾಗಿ, ಒಂದು ಉದಾಹರಣೆ ತೆಗೆದುಕೊಂಡು ಸಂಬಳದ ಎಷ್ಟು ಪಾಲನ್ನು ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸಬಹುದು ಎನ್ನುವುದಕ್ಕೆ ಉತ್ತರ ಕಂಡುಕೊಳ್ಳೋಣ.
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆಗೆ ಮುಂದಾಗುವ ಮೊದಲು ನಿಮ್ಮ ಹಣಕಾಸಿನ ಪರಿಸ್ಥಿತಿ ಅರಿತುಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ವ್ಯಕ್ತಿಯೊಬ್ಬ ತನ್ನ ಆದಾಯವನ್ನು ಪ್ರಮುಖವಾಗಿ ಮೂರು ಮೂಲ ಉದ್ದೇಶಗಳಿಗೆ ಬಳಸಿಕೊಳ್ಳುತ್ತಾನೆ. ಆತನ ದೈನಂದಿನ ಖರ್ಚು, ತುರ್ತು ಅಗತ್ಯ ಮತ್ತು ದೀರ್ಘಾವಧಿ ಹೂಡಿಕೆಗೆ ಹಣ ಬಳಕೆಯಾಗುತ್ತದೆ.
ನಿಮ್ಮ ತಿಂಗಳ ಒಟ್ಟು ಆದಾಯ ಎಷ್ಟು ಮತ್ತು ಖರ್ಚು ಎಷ್ಟು ಎನ್ನುವುದನ್ನು ಕಂಡುಕೊಳ್ಳುವ ಮೂಲಕ ಮ್ಯೂಚುವಲ್ ಫಂಡ್‌ನಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎನ್ನುವುದನ್ನು ಅರಿತುಕೊಳ್ಳಲು ಮುಂದಾಗಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ತಿಂಗಳ ಗಳಿಕೆ ₹50 ಸಾವಿರ ಆಗಿದ್ದು ಖರ್ಚು
₹25 ಸಾವಿರ ಎಂದು ಭಾವಿಸಿ. ಆಗ ಇನ್ನುಳಿದ ₹25 ಸಾವಿರ ನಿಮ್ಮ ಉಳಿತಾಯದ ಮೊತ್ತವಾಗುತ್ತದೆ.
ಈಗ ಉಳಿತಾಯದ ಮೊತ್ತದಲ್ಲಿ ಎಷ್ಟು ಪಾಲನ್ನು ಮ್ಯೂಚುವಲ್ ಫಂಡ್ ಮೇಲೆ ತೊಡಗಿಸಬೇಕು ಎಂದು ತೀರ್ಮಾನಿಸಬೇಕಾ ಗುತ್ತದೆ. ಮುಂದಿನ ಹಂತಗಳಲ್ಲಿ ಮ್ಯೂಚುವಲ್ ಫಂಡ್ ಮೇಲೆ ಎಷ್ಟು ಮೊತ್ತ ಹಾಕಬೇಕು ಎನ್ನುವುದಕ್ಕೆ ಇನ್ನಷ್ಟು ಸ್ಪಷ್ಟತೆ ಪಡೆದುಕೊಳ್ಳೋಣ.
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ ಹೂಡಿಕೆ ಗುರಿಗಳನ್ನು ಅರಿತು ಮುನ್ನಡೆಯುವುದು ಬಹಳ ಮುಖ್ಯ. ಮಕ್ಕಳ ಉನ್ನತ ಶಿಕ್ಷಣ, ಮನೆ ಖರೀದಿ, ನಿವೃತ್ತಿ ಜೀವನಕ್ಕಾಗಿ ಹೂಡಿಕೆ ಹೀಗೆ ನಿರ್ದಿಷ್ಟ ಗುರಿ ಸ್ಪಷ್ಟವಾಗಿದ್ದಾಗ ಮಾತ್ರ ಹೂಡಿಕೆ ಸುಗಮವಾಗುತ್ತದೆ. ನಿಮ್ಮ ಹೂಡಿಕೆಯ ಗುರಿ ಏನು ಎನ್ನುವುದನ್ನು ಆಧರಿಸಿ ಹೂಡಿಕೆಯನ್ನು ಅಲ್ಪಾವಧಿಗೆ ಮಾಡಬೇಕೋ, ಮಧ್ಯಮ ಅವಧಿಗೆ ಮಾಡಬೇಕೋ ಅಥವಾ ದೀರ್ಘಾವಧಿಗೆ ಹೂಡಿಕೆ ಪರಿಗಣಿಸಬೇಕೋ ಎನ್ನುವುದನ್ನು ತೀರ್ಮಾನಿಸಬೇಕಾಗುತ್ತದೆ.
ಉದಾಹರಣೆಗೆ ಮುಂದಿನ ವರ್ಷ ವಿದೇಶ ಪ್ರವಾಸಕ್ಕೆ ಹೋಗುತ್ತಿರುವಿರಿ ಎಂದುಕೊಳ್ಳಿ. ಇದಕ್ಕೆ ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವಾಗ ಹೆಚ್ಚು ರಿಸ್ಕ್ ಇರುವ ಮಾದರಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಹೂಡಿಕೆಗೆ ಹೆಚ್ಚು ಸಮಯ ಸಿಗುವುದಿಲ್ಲ.
ಆದರೆ ಮಕ್ಕಳ ಉನ್ನತ ಶಿಕ್ಷಣಕ್ಕೆ, ನಿವೃತ್ತಿಗಾಗಿ ಹೂಡಿಕೆ ಮಾಡುವಾಗ 15ರಿಂದ 25 ವರ್ಷದವರೆಗೆ ಸಮಯ ಸಿಗುತ್ತದೆ. ಇಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಂಡು ಹೆಚ್ಚು ಲಾಭ ಕೊಡುವ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸಮಂಜಸ ಎನಿಸಿಕೊಳ್ಳುತ್ತದೆ.
ಉದಾಹರಣೆಗೆ ಮನೆ ಖರೀದಿಯ ಡೌನ್ ಪೇಮೆಂಟ್‌ಗೆ ಮುಂದಿನ ಐದು ವರ್ಷದಲ್ಲಿ ಒಂದಷ್ಟು ಮೊತ್ತ ಪೇರಿಸಬೇಕು ಎಂದರೆ ಈಕ್ವಿಟಿ ಮತ್ತು ಡೆಟ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮೊತ್ತವನ್ನು ಸಮ್ಮಿಶ್ರಣ ಮಾಡಿ ತೊಡಗಿಸಬೇಕು. ಆದರೆ, ನಿವೃತ್ತಿಯ ಉದ್ದೇಶಕ್ಕಾಗಿ ಹೂಡಿಕೆ ಮಾಡುತ್ತಿರುವಿರಿ ಎಂದಾದಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳನ್ನು ಮಾತ್ರಪರಿಗಣಿಸಬಹುದು. ಒಟ್ಟಾರೆಯಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸುವಾಗ ಹೂಡಿಕೆಯಲ್ಲಿ ವೈವಿಧ್ಯತೆ ಕಾಯ್ದುಕೊಳ್ಳುವುದು ಬಹಳ ಮುಖ್ಯ.
ಹೂಡಿಕೆ ಗುರಿ, ಹೂಡಿಕೆ ಮಾದರಿ ಮತ್ತು ರಿಸ್ಕ್ ಅರಿತುಕೊಂಡ ಬಳಿಕ ಮ್ಯೂಚುವಲ್ ಫಂಡ್ ಮೇಲೆ ಎಷ್ಟು ಮೊತ್ತ ಹೂಡಿಕೆ ಮಾಡಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ. ಎಲ್ಲದಕ್ಕೂ ಮೊದಲು 50:30:20 ನಿಯಮದ ಬಗ್ಗೆ ಅರಿತುಕೊಳ್ಳೋಣ.
ಬಂದ ಆದಾಯದಲ್ಲಿ ಯಾವ್ಯಾವ ಉದ್ದೇಶಕ್ಕೆ ಎಷ್ಟೆಷ್ಟು ಹಣ ಖರ್ಚು ಮಾಡಬೇಕು ಎನ್ನುವುದನ್ನು 50:30:20 ನಿಯಮ ಹೇಳುತ್ತದೆ. ಬಂದ ಆದಾಯದಲ್ಲಿ ಶೇ 50ರಷ್ಟನ್ನು ಅಗತ್ಯಗಳಿಗೆ, ಶೇ 30ರಷ್ಟು ಹಣವನ್ನು ಆಸೆಗಳಿಗೆ ಮತ್ತುಶೇ 20ರಷ್ಟು ಮೊತ್ತವನ್ನು ಹೂಡಿಕೆಗೆ ಬಳಸಬೇಕು ಎಂಬುದು ಈ ನಿಯಮದ ಸಾರ.
ಉದಾಹರಣೆಗೆ, ವ್ಯಕ್ತಿಯೊಬ್ಬರ ಸಂಬಳ ₹60 ಸಾವಿರ ಎಂದುಕೊಳ್ಳಿ. ₹60 ಸಾವಿರದಲ್ಲಿ
₹30 ಸಾವಿರವನ್ನು ಆ ವ್ಯಕ್ತಿ ಅಗತ್ಯ ವಸ್ತುಗಳ ಮೇಲೆ ಖರ್ಚು ಮಾಡಬೇಕಾಗುತ್ತದೆ. ಇನ್ನುಳಿದ ₹18 ಸಾವಿರವನ್ನು ಆಸೆಪಟ್ಟ ವಸ್ತುಗಳ ಖರೀದಿಗೆ
ಬಳಸಬಹುದಾಗಿದೆ. ಇನ್ನುಳಿದ ₹12 ಸಾವಿರವನ್ನು ಉಳಿತಾಯಕ್ಕೆ ಮೀಸಲಿಡಬೇಕಾಗುತ್ತದೆ.
ಈ ₹12 ಸಾವಿರದಲ್ಲಿ ಶೇ 70ರಷ್ಟು ಅಂದರೆ ₹8,400 ಮ್ಯೂಚುವಲ್ ಫಂಡ್ ಹೂಡಿಕೆಗೆ ಪರಿಗಣಿಸಬಹುದು. ಇನ್ನುಳಿದ ₹3,600 ಅನ್ನು ಫಿಕ್ಸೆಡ್ ಡೆಪಾಸಿಟ್, ಅಂಚೆ ಕಚೇರಿ ಹೂಡಿಕೆ, ಉಳಿತಾಯ ಖಾತೆಯಲ್ಲಿ ಇಟ್ಟುಕೊಳ್ಳಬಹುದು. ಈ ಹಣ ತುರ್ತು ಅಗತ್ಯಗಳಿಗೆ ನೆರವಿಗೆ ಬರುತ್ತದೆ. ಉಳಿತಾಯ ಮಾಡಿ ಹೂಡಿಕೆ ಮಾಡುವ ಮೊತ್ತದಲ್ಲಿ ಶೇ 70ರಷ್ಟು ಹಣವನ್ನು ಮ್ಯೂಚುವಲ್ ಫಂಡ್‌ಗಳಲ್ಲೇ ಹೂಡಿಕೆ ಮಾಡಬೇಕು ಎಂಬುವುದು ಕಡ್ಡಾಯದ ಸೂತ್ರವಲ್ಲ. ಹಣಕಾಸಿನ ಪರಿಸ್ಥಿತಿ ಮತ್ತು ವ್ಯಕ್ತಿಗತ ಸ್ಥಿತಿಗತಿ ಆಧರಿಸಿ ಬದಲಾವಣೆ ಮಾಡಿಕೊಳ್ಳಬಹುದು.
ಕಿವಿಮಾತು: ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಮುನ್ನ ತುರ್ತು ನಿಧಿ ಅಂದರೆ ಎಮರ್ಜೆನ್ಸಿ ಫಂಡ್ ರೂಪಿಸಿಕೊಂಡಿರಬೇಕು. ಮೂರರಿಂದ ಆರು ತಿಂಗಳ ಖರ್ಚಿನ ಬಾಬ್ತು ತುರ್ತಿ ನಿಧಿಯಲ್ಲಿ ಇರಬೇಕು. ಅಲ್ಲದೆ, ಜೀವನದ ಅನಿಶ್ಚಿತ ಸಂದರ್ಭ ಎದುರಿಸಲು ಆರೋಗ್ಯ ವಿಮೆ ಮತ್ತು ಜೀವ ವಿಮೆ ಮಾಡಿಸಿಕೊಂಡಿರಬೇಕು. ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವಾಗ ಹೂಡಿಕೆ ವೈವಿಧ್ಯ ಕಾಯ್ದುಕೊಳ್ಳುವತ್ತ ಗಮನಕೊಡಬೇಕು. ಹೀಗೆ ಅಳೆದು ತೂಗಿ ಹೂಡಿಕೆ ಮಾಡಿದಾಗ ಮಾತ್ರ ದೀರ್ಘಾವಧಿಯಲ್ಲಿ ಸಂಪತ್ತು ಗಳಿಸಲು ಸಾಧ್ಯವಾಗುತ್ತದೆ.
ಜಿಗಿದ ಷೇರು ಸೂಚ್ಯಂಕಗಳು
ಆಗಸ್ಟ್ 23ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. 81,086 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.81ರಷ್ಟು ಗಳಿಸಿಕೊಂಡಿದೆ. 24,823 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ವಾರದ ಅವಧಿಯಲ್ಲಿ ಶೇ 1.15ರಷ್ಟು ಜಿಗಿದಿದೆ.
ಅಮೆರಿಕದ ಕೇಂದ್ರೀಯ ಬ್ಯಾಂಕ್ ಆದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸಬಹುದು ಎಂಬ ನಿರೀಕ್ಷೆ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕತೆ, ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಕಂಪನಿಗಳು ಗಳಿಕೆಯಲ್ಲಿ ಚೇತರಿಕೆ ಕಂಡು ಮುನ್ನಡೆ ಸಾಧಿಸಲಿವೆ ಎಂಬ ವಿಶ್ವಾಸ ಸೇರಿ ಹಲವು ಅಂಶಗಳು ಮಾರುಕಟ್ಟೆ ಜಿಗಿತಕ್ಕೆ ಕಾರಣವಾಗಿವೆ.
ವಾರದ ಲೆಕ್ಕಾಚಾರದಲ್ಲಿ ವಲಯವಾರು ಪ್ರಗತಿ ನೋಡಿದಾಗ ನಿಫ್ಟಿ ರಿಯಲ್ ಎಸ್ಟೇಟ್ ಸೂಚ್ಯಂಕ ಮಾತ್ರ ಶೇ 2.91ರಷ್ಟು ಕುಸಿದಿದೆ. ಉಳಿದಂತೆ ಎಲ್ಲ ವಲಯಗಳು ಉತ್ತಮ ಪ್ರಗತಿ ಸಾಧಿಸಿವೆ.
ನಿಫ್ಟಿ ಲೋಹ ವಲಯ ಶೇ 3.3, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.54, ಎಫ್‌ಎಂಸಿಜಿ ಶೇ 1.92, ಫಾರ್ಮಾ ಶೇ 1.91, ನಿಫ್ಟಿ ಎನರ್ಜಿ ಶೇ 1.35, ಫೈನಾನ್ಸ್ ಶೇ 1.11, ಅನಿಲ ಮತ್ತು ತೈಲ ಶೇ 1.08, ನಿಫ್ಟಿ ಆಟೊ ಶೇ 0.99, ನಿಫ್ಟಿ ಬ್ಯಾಂಕ್ ಶೇ 0.82, ಮಾಹಿತಿ ತಂತ್ರಜ್ಞಾನ ಶೇ 0.52 ಮತ್ತು ಮಾಧ್ಯಮ ಸೂಚ್ಯಂಕ ಶೇ 0.45ರಷ್ಟು ಗಳಿಸಿಕೊಂಡಿವೆ.
ವಾರದ ಗಳಿಕೆ–ಇಳಿಕೆ: ನಿಫ್ಟಿಯಲ್ಲಿ ಹಿಂಡಾಲ್ಕೋ ಇಂಡಸ್ಟ್ರಿಸ್ ಶೇ 8.02, ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಶೇ 6.02, ಬಿಪಿಸಿಎಲ್ ಶೇ 5.85, ಬಜಾಜ್ ಫಿನ್‌ಸರ್ವ್ ಶೇ 5.81, ಗ್ರಾಸಿಮ್ ಇಂಡಸ್ಟ್ರಿಸ್ ಶೇ 5.81, ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಶೇ 5.55, ಕೋಲ್ ಇಂಡಿಯಾ ಶೇ 5.15 ಮತ್ತು ಬಜಾಜ್ ಆಟೊ ಶೇ 5.12ರಷ್ಟು ಗಳಿಸಿಕೊಂಡಿವೆ.
ಒಎನ್‌ಜಿಸಿ ಶೇ 3.19, ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 2.83, ಟಾಟಾ ಮೋಟರ್ಸ್ ಶೇ 1.27, ಅದಾನಿ ಎಂಟರ್‌ಪ್ರೈಸಸ್ ಶೇ 1.09, ಪವರ್ ಗ್ರಿಡ್ ಕಾರ್ಪೊರೇಷನ್ ಶೇ 0.83, ವಿಪ್ರೊ ಶೇ 0.78, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 0.41, ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 0.35, ಅದಾನಿ ಪೋರ್ಟ್ಸ್ ಶೇ 0.12 ಮತ್ತು ಎಕ್ಸಿಸ್ ಬ್ಯಾಂಕ್ ಶೇ 0.11ರಷ್ಟು ಕುಸಿದಿವೆ.
ಮುನ್ನೋಟ: ಜಾಗತಿಕ ಮಾರುಕಟ್ಟೆಗಳ ಪ್ರಭಾವ ದೇಶೀಯ ಮಾರುಕಟ್ಟೆ ಮೇಲೆ ಬೀರಲಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಇಳಿಕೆ ಕುರಿತಾಗಿ ಯಾವ ನಿರ್ಣಯ ತೆಗೆದುಕೊಳ್ಳಲಿದೆ ಎನ್ನುವುದು ವಿಶ್ವದ ಪ್ರಮುಖ ಮಾರುಕಟ್ಟೆಗಳ ಮೇಲೆ ನೇರ ಪರಿಣಾಮ ಉಂಟು ಮಾಡಲಿದೆ. ಉಳಿದಂತೆ ದೇಶೀಯ ವಿದ್ಯಮಾನಗಳು ಸಹ ಷೇರುಪೇಟೆ ಮೇಲೆ ಪ್ರಭಾವ ಬೀರಲಿವೆ.
(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.