ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳ ಮಾರುಕಟ್ಟೆ | ಕೊಳ್ಳುಬಾಕತನ; ಉಳಿತಾಯಕ್ಕೆ ಆಘಾತ

Published 12 ಫೆಬ್ರುವರಿ 2024, 0:20 IST
Last Updated 12 ಫೆಬ್ರುವರಿ 2024, 0:20 IST
ಅಕ್ಷರ ಗಾತ್ರ

ಯಾವುದೇ ಖರೀದಿ ಮಾಡುವ ಮುನ್ನ ಬಜೆಟ್‌ ಲೆಕ್ಕಾಚಾರ ಮಾಡಿರಬೇಕು. ಅಳೆದು ತೂಗಿ ಖರ್ಚು ಮಾಡದಿದ್ದರೆ ಬಂದ ದುಡ್ಡೆಲ್ಲಾ ನೀರಿನಂತೆ ಹರಿದುಹೋಗುತ್ತದೆ. ಆದರೆ, ಸಾಮಾನ್ಯವಾಗಿ ಶಾಪಿಂಗ್‌ಗೆ ಹೋದಾಗ ಬಹುತೇಕರು ಸಿಕ್ಕಸಿಕ್ಕ ವಸ್ತುಗಳನ್ನು ಜೇಬು ಖಾಲಿಯಾಗುವ ತನಕ ಕೊಳ್ಳುತ್ತಲೇ ಇರುತ್ತಾರೆ. ಈ ಕೊಳ್ಳುಬಾಕತನವು ದೃಢೀಕರಣ ಪಕ್ಷಪಾತ, ಪೂರ್ವಗ್ರಹಪೀಡಿತ ಪಕ್ಷಪಾತ, ಅವಕಾಶ ಕೈತಪ್ಪುವ ಪಕ್ಷಪಾತ, ಮನಃಸ್ಥಿತಿ ಆಧಾರಿತ ಪಕ್ಷಪಾತ ಸೇರಿದಂತೆ ಹಲವು ಮಾದರಿಯಲ್ಲಿ ಇರುತ್ತದೆ. ಇಂತಹ ಧೋರಣೆಗಳಿಂದ ಹೊರಬಂದು ಉತ್ತಮ ಖರೀದಿ ಮಾಡುವುದು ಹೇಗೆ ಎನ್ನುವುದನ್ನು ಇಲ್ಲಿ ವಿವರವಾಗಿ ತಿಳಿಯೋಣ ಬನ್ನಿ.

ದೃಢೀಕರಣ ಪಕ್ಷಪಾತ:

ನಿರ್ದಿಷ್ಟ ಬ್ರಾಂಡ್ ಅಥವಾ ಉತ್ಪನ್ನ ಖರೀದಿಸುವಾಗ ಅದರ ಬಗ್ಗೆ ಇರುವ ಸಕಾರಾತ್ಮಕ ವಿಮರ್ಶೆಗಳನ್ನು ಮಾತ್ರ ಗಮನಿಸುತ್ತಿದ್ದೇವೆ ಎಂದರೆ ಅದು ದೃಢೀಕರಣ ಪಕ್ಷಪಾತ ಆಗುತ್ತದೆ. ಉದಾಹರಣೆಗೆ, ನಿಮಗೆ ಯಾವುದೋ ಒಂದು ಸ್ಮಾರ್ಟ್‌ಫೋನ್ ಇಷ್ಟವಾಗಿರುತ್ತದೆ ಎಂದುಕೊಳ್ಳಿ. ಆಗ ಫೋನ್ ಬಗ್ಗೆ ಸಕಾರಾತ್ಮಕ ವಿಮರ್ಶೆಗಳನ್ನು ಮಾತ್ರ ಗಮನಿಸುತ್ತೀರಿ. ನಕಾರಾತ್ಮಕ ವಿಮರ್ಶೆಗಳು ಇದ್ದರೂ ಸಹಿತ ಅದನ್ನು ಗಮನಿಸಲು ಹೋಗುವುದಿಲ್ಲ. ಹೀಗೆ ಮಾಡಿದಾಗ ಅದು ಪಕ್ಷಪಾತದ ಖರೀದಿಯಾಗುತ್ತದೆ. ಯಾವುದೇ ವಸ್ತುವನ್ನು ಕೊಳ್ಳುವ ಮುನ್ನ ಅದರ ಧನಾತ್ಮಕ ಮತ್ತು ಋಣಾತ್ಮಕ ವಿಚಾರಗಳನ್ನು ಸಮಚಿತ್ತದಿಂದ ವಿಮರ್ಶೆ ಮಾಡಿದರೆ ಈ ರೀತಿಯ ಖರೀದಿ ತಪ್ಪಿಸಬಹುದು.

ಪೂರ್ವಗ್ರಹಪೀಡಿತ ಪಕ್ಷಪಾತ:

ವಸ್ತುವಿನ ವಾಸ್ತವದ ಬೆಲೆಯ ಬಗ್ಗೆ ಆಲೋಚನೆ ಮಾಡದೆ ರಿಯಾಯಿತಿ ಬೆಲೆ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದೀರಿ ಎಂದಾದರೆ ಅದು ಪೂರ್ವಗ್ರಹಪೀಡಿತ ಪಕ್ಷಪಾತ ಆಗುತ್ತದೆ. ಉದಾಹರಣೆಗೆ ಸೋಫಾ ಖರೀದಿಗೆ ನಿಮ್ಮ ಬಜೆಟ್ ಮಿತಿ ₹25 ಸಾವಿರ ಇರುತ್ತದೆ ಎಂದುಕೊಳ್ಳಿ. ರಿಯಾಯಿತಿ ದರದಲ್ಲಿ ಮತ್ತೊಂದು ಸೋಫಾ ₹40 ಸಾವಿರಕ್ಕೆ ಸಿಗುತ್ತದೆ ಎಂದುಕೊಳ್ಳಿ. ಆಗ ಬಜೆಟ್ ಎಷ್ಟಿದೆ ಎಂದು ಮನಗಾಣದೆ ಬಜೆಟ್ ಚೌಕಟ್ಟು ಮೀರಿ ₹40 ಸಾವಿರದ ಸೋಫಾ ಖರೀದಿಸಿದರೆ ಅದು ಪೂರ್ವಗ್ರಹಪೀಡಿತ ಪಕ್ಷಪಾತದ ಕೊಳ್ಳುವಿಕೆಯಾಗುತ್ತದೆ.

ಅವಕಾಶ ಕೈತಪ್ಪುವ ಪಕ್ಷಪಾತ:

60 ಇಂಚಿನ ಸ್ಮಾರ್ಟ್‌ ಟಿ.ವಿಗೆ ಶೇ 30ರಷ್ಟು ರಿಯಾಯಿತಿ, ಈ ಆಫರ್ ನಾಳೆಗೆ ಅಂತ್ಯ ಎನ್ನುವ ಜಾಹೀರಾತುಗಳನ್ನು ನೀವು ನೋಡಿರಬಹುದು. ಈ ರೀತಿಯ ಮಾರ್ಕೆಟಿಂಗ್‌ ತಂತ್ರಕ್ಕೆ ಮಾರು ಹೋಗಿ ನೋಡಿದ ಕೂಡಲೇ ಆ ವಸ್ತು ಅಗತ್ಯವೋ, ಇಲ್ಲವೋ ಎನ್ನುವುದನ್ನು ಲೆಕ್ಕಿಸದೆ ಖರೀದಿ ಮಾಡಿದರೆ ಅದು ಕೈತಪ್ಪುವ ಪಕ್ಷಪಾತದ ಖರೀದಿಯಾಗುತ್ತದೆ. ಮುಂದೆಂದೂ ಇಂತಹ ರಿಯಾಯಿತಿ ಸಿಗುವುದೇ ಇಲ್ಲವೇನೋ, ಇದನ್ನು ಕೊಳ್ಳದಿದ್ದರೆ ದೊಡ್ಡ ನಷ್ಟವಾಗುತ್ತದೇನೋ, ಒಳ್ಳೆಯ ಅವಕಾಶ ಕೈತಪ್ಪಿ ಹೋಗುವುದೇನೋ ಎನ್ನುವ ಧಾವಂತವನ್ನು ಸೃಷ್ಟಿಸಿ ಇಲ್ಲಿ ವಸ್ತುಗಳನ್ನು ಬಿಕರಿ ಮಾಡುವ ತಂತ್ರ ಹೆಣೆಯಲಾಗಿರುತ್ತದೆ.

ಮನಃಸ್ಥಿತಿ ಆಧಾರಿತ ಪಕ್ಷಪಾತ:

ಉತ್ಪನ್ನಗಳು, ಬ್ರಾಂಡ್‌ಗಳು ಹೇಗೆ ವಿಷಯಗಳನ್ನು ಪ್ರಸ್ತುತಪಡಿಸಿವೆ ಎನ್ನುವುದನ್ನು ಆಧರಿಸಿ ಖರೀದಿ ಮಾಡಿದರೆ ಅದು ಮನಃಸ್ಥಿತಿ ಆಧಾರಿತ ಪಕ್ಷಪಾತವಾಗುತ್ತದೆ. ಉದಾಹರಣೆಗೆ ಶೇ 100ರಷ್ಟು ನೈಸರ್ಗಿಕ, ಯಾವುದೇ ರಾಸಾಯನಿಕಗಳಿಲ್ಲ, ರೈತರಿಂದ ನೇರ ಮಾರುಕಟ್ಟೆಗೆ, ಇಂತಹ ಟಿಪ್ಪಣಿಗಳಿಂದ ಪ್ರಭಾವಿತರಾಗಿ ಖರೀದಿ ಮಾಡುವ ದೊಡ್ಡ ಸಂಖ್ಯೆಯ ಜನರಿದ್ದಾರೆ. ಕೇವಲ ಟಿಪ್ಪಣಿಗಷ್ಟೇ ಗಮನ ಕೊಡದೆ ಉತ್ಪನ್ನದ ಕುರಿತ ವಾಸ್ತವ ಅರಿತರೆ ಉತ್ತಮ ಖರೀದಿ ಸಾಧ್ಯವಾಗುತ್ತದೆ.

ಅಲ್ಪ ಕುಸಿತ ದಾಖಲಿಸಿದ ಸೂಚ್ಯಂಕಗಳು

ಫೆಬ್ರುವರಿ 9ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಅಲ್ಪ ಮೊತ್ತದ ಕುಸಿತ ದಾಖಲಿಸಿವೆ.

71,595 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.67ರಷ್ಟು ಕುಸಿದಿದೆ. 21,782 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.32ರಷ್ಟು ತಗ್ಗಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ಮತ್ತು ಆರ್‌ಬಿಐ ಬಡ್ಡಿದರ ಇಳಿಕೆ ಸದ್ಯಕ್ಕಿಲ್ಲ ಎಂಬ ಸೂಚನೆ ಕೊಟ್ಟಿದ್ದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟ ಭರಾಟೆ ಸೇರಿ ಹಲವು ಅಂಶಗಳು ಷೇರು ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 5ರಷ್ಟು ಜಿಗಿದಿದೆ. ಹೆಲ್ತ್ ಕೇರ್ ಸೂಚ್ಯಂಕ ಶೇ 4.4, ಆಯಿಲ್ ಆ್ಯಂಡ್ ಗ್ಯಾಸ್ ಸೂಚ್ಯಂಕ ಶೇ 4, ಫಾರ್ಮಾ ಸೂಚ್ಯಂಕ ಶೇ 3.9, ಫಾರ್ಮಾ ಸೂಚ್ಯಂಕ ಶೇ 3.6 ಮತ್ತು ಮಾಧ್ಯಮ ಸೂಚ್ಯಂಕ ಶೇ 3ರಷ್ಟು ಹೆಚ್ಚಳವಾಗಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹5,871.45 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹5,325.76 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಎಲ್‌ಐಸಿ, ಅದಾನಿ ಗ್ರೀನ್ ಎನರ್ಜಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಎಸ್‌ಬಿಐ, ಮ್ಯಾನ್ ಕೈಂಡ್ ಫಾರ್ಮಾ ಮತ್ತು ಭಾರತ್ ಪೆಟ್ರೋಲಿಯಂ ಶೇ 10ಕ್ಕಿಂತ ಹೆಚ್ಚು ಗಳಿಕೆ ಕಂಡಿವೆ. ಯುಪಿಎಲ್, ಪೇಟಿಎಂ, ನೈಕಾ, ಐಟಿಸಿ ಮತ್ತು ಬಂಧನ್ ಬ್ಯಾಂಕ್ ಕುಸಿತ ಕಂಡಿವೆ.

ಬಿಎಸ್ಇ ಮಿಡ್ ಕ್ಯಾಪ್‌ನಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್, ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿ, ಯುಕೋ ಬ್ಯಾಂಕ್, ಜೀ ಎಂಟರ್ ಟೇನ್ಮೆಂಟ್ ಎಂಟರ್‌ಪ್ರೈಸಸ್, ಆಯಿಲ್ ಇಂಡಿಯಾ, ಒರೆಕಲ್ ಫೈನಾನ್ಸಿಯಲ್ ಸರ್ವಿಸಸ್ ಸಾಫ್ಟ್‌ವೇರ್, ಮ್ಯಾಕ್ಸ್ ಹೆಲ್ತ್ ಕೇರ್ ಇನ್‌ಸ್ಟಿಟ್ಯೂಟ್, ಕುಮಿನ್ಸ್ ಇಂಡಿಯಾ, ಮ್ಯಾಕ್ಸ್ ಫೈನಾನ್ಸಿಯಲ್ ಸರ್ವಿಸಸ್, ಕೆನರಾ ಬ್ಯಾಂಕ್ ಮತ್ತು ವೋಡಾಫೋನ್ ಐಡಿಯಾ ಜಿಗಿದಿವೆ.

ಎಂಡುರೆನ್ಸ್ ಟೆಕ್ನಾಲಜೀಸ್, ಬ್ಯಾಂಕ್ ಆಫ್ ಇಂಡಿಯಾ, ರಾಮ್ಕೋ ಸಿಮೆಂಟ್ಸ್, ಎಪಿಎಲ್ ಅಪೋಲೊ ಟ್ಯೂಬ್ಸ್, ಯುಎನ್‌ಒ ಮಿಂದಾ, ನೆರೋಲ್ಯಾಕ್ ಪೇಂಟ್ಸ್, ಮತ್ತು ಅರುಬಿಂದೋ ಫಾರ್ಮಾ ಕುಸಿದಿವೆ.

ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ನೋಡಿದಾಗ ಕಳೆದ ವಾರ ಎಚ್‌ಡಿಎಫ್‌ಸಿ ಬ್ಯಾಂಕ್ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದ್ದು ನಂತರದಲ್ಲಿ ಐಟಿಸಿ, ಏರ್‌ಟೆಲ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಇವೆ. ಮತ್ತೊಂದೆಡೆ ಎಸ್‌ಬಿಐ, ಟಿಸಿಎಸ್, ಸನ್ ಫಾರ್ಮಾ ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡಿವೆ.

ಮುನ್ನೋಟ: ಈ ವಾರ ಬಿಎಎಸ್‌ಎಫ್ ಇಂಡಿಯಾ, ದಿ ಅನೂಪ್ ಎಂಜಿನಿಯರಿಂಗ್ ಲಿಮಿಟೆಡ್‌, ಅಂಜನಿ ಫುಡ್ಸ್ ಲಿಮಿಟೆಡ್‌, ಬಿನ್ನಿ ಮಿಲ್ಸ್ ಲಿಮಿಟೆಡ್‌, ಸೆರಾ ಸ್ಯಾನಿಟರಿ, ಫೋರ್ಸ್ ಮೋಟರ್ಸ್, ಎಚ್‌ಎಎಲ್, ಎಸ್‌ಎಐಎಲ್ ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸುತ್ತಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT