ಸೋಮವಾರ, ಜೂನ್ 14, 2021
23 °C

ಆಧಾರ್‌ಗೆ ಲಿಂಕ್ ಆಗದ 18 ಕೋಟಿ ಪಾನ್‌ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳುವ ಸಾಧ್ಯತೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮಾರ್ಚ್ 31ರ ಒಳಗೆ ಆಧಾರ್‌ಗೆ ಜೋಡಣೆಯಾಗದ 18 ಕೋಟಿ ಪಾನ್‌ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳುವ ಸಾಧ್ಯತೆಯಿದೆ.

ಹೆಚ್ಚು ಮೌಲ್ಯದ ವಹಿವಾಟು ನಡೆಸುವಾಗ ತೆರಿಗೆ ವಂಚಿಸಲೆಂದು ಒಬ್ಬನೇ ವ್ಯಕ್ತಿ ಹಲವು ಪಾನ್‌ ನಂಬರ್‌ಗಳನ್ನು ನಮೂದಿಸುತ್ತಿದ್ದು ಬೆಳಕಿಗೆ ಬಂದಿತ್ತು. ಇದರ ಜೊತೆಗೆ ಆರ್ಥಿಕವಾಗಿ ತಕ್ಕಷ್ಟು ಅನುಕೂಲ ಹೊಂದಿರುವ ಕೆಲವರು ಬಡವರಿಗಾಗಿ ಇರುವ ಕಲ್ಯಾಣ ಯೋಜನೆಗಳ ಫಲಾನುಭವಿಗಳೂ ಆಗಿದ್ದರು. ಆಧಾರ್‌ ಮೂಲಕ ವಹಿವಾಟಿನ ಮೇಲೆ ನಿಗಾ ಇರಿಸಿದರೆ ವೆಚ್ಚದ ರೀತಿನೀತಿಯನ್ನು ಕಂಡುಕೊಳ್ಳುವುದು ಸಾಧ್ಯ ಎಂದು ಆದಾಯ ತೆರಿಗೆ ಇಲಾಖೆ ಅಭಿಪ್ರಾಯಪಟ್ಟಿತ್ತು.

ಜನರು ಹಣ ವೆಚ್ಚು ಮಾಡುವ ವಿಧಾನದ ಮಾಹಿತಿಯನ್ನು ಆದಾಯ ತೆರಿಗೆಯು ವಿವಿಧ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಮ್ಯೂಚುವಲ್ ಫಂಡ್‌ ಮತ್ತು ಕ್ರೆಡಿಟ್ ಕಾರ್ಡ್‌ ಕಂಪನಿಗಳಿಂದ ಪಡೆದುಕೊಳ್ಳುತ್ತಿದೆ.

'ಒಬ್ಬನೇ ವ್ಯಕ್ತಿ ಹಲವು ಪಾನ್‌ಕಾರ್ಡ್‌ ಹೊಂದುವ ಸಾಧ್ಯತೆಗಳು ಇರುತ್ತದೆ. ಪಾನ್ ಸಂಖ್ಯೆಯನ್ನು ಆಧಾರ್‌ಗೆ ಜೋಡಿಸಿದರೆ ಇಂಥ ಅಕ್ರಮಕ್ಕೆ ಅವಕಾಶ ಇರುವುದಿಲ್ಲ' ಎಂದು ಟ್ಯಾಕ್ಸ್‌ಮನ್ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ನವೀನ್ ವಾಧ್ವಾ ಅಭಿಪ್ರಾಯಪಟ್ಟಿದ್ದಾರೆ.

'130 ಕೋಟಿ ಜನರಿರುವ ಭಾರತದಲ್ಲಿ ಕೇವಲ 1.5 ಕೋಟಿ ಜನರು ಮಾತ್ರ ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯವನ್ನು ಈಚೆಗೆ ಪ್ರಸ್ತಾಪಿಸಿದ್ದರು. ತೆರಿಗೆ ಪಾವತಿದಾರರ ವ್ಯಾಪ್ತಿ ಹಿಗ್ಗಿಸುವುದು ತುರ್ತು ಅಗತ್ಯವಾಗಿದೆ' ಎಂಬ ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರ ಹೇಳಿಕೆಯನ್ನೂ ವರದಿ ಉಲ್ಲೇಖಿಸಿದೆ.

ಜೂನ್ ಮಾಸಾಂತ್ಯದ ವೇಳೆಗೆ ದೇಶದಲ್ಲಿ ಒಟ್ಟು 50.95 ಕೋಟಿ ಜನರು ಪಾನ್‌ಕಾರ್ಡ್‌ ಹೊಂದಿದ್ದರು. ಒಟ್ಟು 6.48 ಕೋಟಿ ಮಂದಿ ತೆರಿಗೆ ರಿಟರ್ನ್ಸ್‌ ಸಲ್ಲಿಸಿದ್ದಾರೆ. ಈ ಪೈಕಿ ಕೇವಲ 1.5 ಕೋಟಿ ಜನರು ಮಾತ್ರ ತೆರಿಗೆ ಪಾವತಿಸಿದ್ದಾರೆ.

ಈವರೆಗೆ 32.7 ಕೋಟಿ ಪಾನ್‌ಕಾರ್ಡ್‌ಗಳನ್ನು ಮಾತ್ರ ಆಧಾರ್‌ಗೆ ಜೋಡಣೆ ಮಾಡಲಾಗಿದೆ. ಚಾಲ್ತಿಯಲ್ಲಿರುವ ಒಟ್ಟು ಪಾನ್‌ಕಾರ್ಡ್‌ಗಳ ಪೈಕಿ ಮೂರನೇ ಒಂದರಷ್ಟು ಪಾನ್‌ಕಾರ್ಡ್‌ಗಳು ಜೋಡಣೆಯಾಗಿಲ್ಲ. ಇಂತ ಪಾನ್‌ಕಾರ್ಡ್‌ಗಳು ಮಾರ್ಚ್ 31ರ ಒಳಗೆ ಜೋಡಣೆಯಾಗದಿದ್ದರೆ ಆದಾಯ ತೆರಿಗೆ ಇಲಾಖೆಯು ವಹಿವಾಟಿನ ಪರಾಮರ್ಶೆ ಆರಂಭಿಸಲಿದೆ ಎಂದು ಅಧಿಕಾರಿ ಹೇಳಿದ್ದಾರೆ.

₹ 1 ಲಕ್ಷಕ್ಕೂ ಹೆಚ್ಚು ಮೊತ್ತದ ಶಿಕ್ಷಣ ಶುಲ್ಕ, ವಿದ್ಯುತ್ ಬಿಲ್, ಬ್ಯುಸಿನೆಸ್ ಕ್ಲಾಸ್ ವಿಮಾನ ಪ್ರಯಾಣ, ₹ 20 ಸಾವಿರಕ್ಕೂ ಹೆಚ್ಚು ಮೊತ್ತದ ಆಸ್ತಿ ತೆರಿಗೆ, ₹ 50 ಸಾವಿಕ್ಕೂ ಹೆಚ್ಚು ಮೊತ್ತದ ಜೀವವಿಮೆ, ₹ 20 ಸಾವಿರಕ್ಕೂ ಹೆಚ್ಚು ಮೊತ್ತದ ಆರೋಗ್ಯ ವಿಮೆ ಕಂತು ಪಾವತಿಯೂ ಇನ್ನು ಮುಂದೆ ಸರ್ಕಾರದ ನಿಗಾವಣೆಗೆ ಒಳಪಡುವ ಸಾಧ್ಯತೆಯಿದೆ.

ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರಿಗೆ ಸರ್ಕಾರದ ಈ ಹೊಸನಡೆಯಿಂದ ಯಾವುದೇ ಅಪಾಯ ಇರುವುದಿಲ್ಲ. ವಂಚನೆಯ ಸಾಧ್ಯತೆಗಳನ್ನು ತಡೆಯುವುದು ಮಾತ್ರವೇ ಸರ್ಕಾರದ ಮುಖ್ಯ ಉದ್ದೇಶ ಎಂದು ವಾಧ್ವಾ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು