ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಷ್ಣ ವಿದ್ಯುತ್ ಸ್ಥಾವರ ಹೆಚ್ಚಿಸಿ ನಿರಂತರ ವಿದ್ಯುತ್‌: ಕೇಂದ್ರ ಸರ್ಕಾರ ಭರವಸೆ

Published 25 ಡಿಸೆಂಬರ್ 2023, 16:11 IST
Last Updated 25 ಡಿಸೆಂಬರ್ 2023, 16:11 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕಲ್ಲಿದ್ದಲನ್ನು ಅವಲಂಬಿಸಿರುವ ಉಷ್ಣ ವಿದ್ಯುತ್‌ ಸ್ಥಾವರಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ನಿರಂತರವಾಗಿ ವಿದ್ಯುತ್‌ ಪೂರೈಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮುಂದಿನ ವರ್ಷದಲ್ಲಿ ದೇಶದ ಯಾವುದೇ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಅನಿಶ್ಚಿತತೆ ತಲೆದೋರದಂತೆ ಕ್ರಮಹಿಸಲಾಗುವುದು. ಆ ಮೂಲಕ ಆರ್ಥಿಕತೆಯ ವಿಸ್ತರಣೆಗೆ ಒತ್ತು ನೀಡಲಾಗುವುದು ಎಂದು ಕೇಂದ್ರ ಇಂಧನ ಸಚಿವಾಲಯ ಹೇಳಿದೆ.

ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಸಂಬಂಧ ಈಗಿರುವ ಸ್ಥಾವರಗಳ ಉತ್ಪಾದನಾ ಸಾಮರ್ಥ್ಯಕ್ಕಿಂತ ಹೆಚ್ಚುವರಿಯಾಗಿ 91 ಗಿಗಾವಾಟ್‌ ವಿದ್ಯುತ್‌ ಉತ್ಪಾದನೆ ಹೆಚ್ಚಿಸಲು ನಿರ್ಧರಿಸಿದೆ. ಇದಕ್ಕಾಗಿ ₹7.28 ಲಕ್ಷ ಕೋಟಿ ವೆಚ್ಚ ಮಾಡಲು ಯೋಜನೆ ರೂಪಿಸಿದೆ. 

‘ರಷ್ಯಾ–ಉಕ್ರೇನ್‌ ನಡುವಿನ ಕದನದಿಂದಾಗಿ ಯುರೋಪ್‌ ಎದುರಿಸಿದ ಇಂಧನ ಬಿಕ್ಕಟ್ಟಿನ ಬಗ್ಗೆ ಎಲ್ಲರಿಗೂ ತಿಳಿದಿದೆ. ದಿನದ 24ಗಂಟೆಯೂ ವಿದ್ಯುತ್‌ ಪೂರೈಕೆಯ ಸೌಲಭ್ಯ ಪಡೆಯುವುದು ಪ್ರತಿಯೊಬ್ಬ ಗ್ರಾಹಕನ ಹಕ್ಕಾಗಿದೆ. ಇಂಧನ ಭದ್ರತೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ’ ಎಂದು ಕೇಂದ್ರ ಇಂಧನ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ‌ ಆರ್‌.ಕೆ. ಸಿಂಗ್‌ ಅವರು, ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಪ್ರಸ್ತುತ ನಗರ ಪ್ರದೇಶದಲ್ಲಿ ಸರಾಸರಿ ವಿದ್ಯುತ್‌ ಪೂರೈಕೆ 23.50 ಗಂಟೆ ಇದ್ದರೆ, ಗ್ರಾಮೀಣ ಪ್ರದೇಶದಲ್ಲಿ 22 ಗಂಟೆ ಇದೆ’ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ 243.27 ಗಿಗಾವಾಟ್‌ ವಿದ್ಯುತ್‌ ಬೇಡಿಕೆ ಸೃಷ್ಟಿಯಾಗಿತ್ತು. ಇದು ಇಲ್ಲಿಯವರೆಗಿನ ದಾಖಲೆಯ ವಿದ್ಯುತ್ ಬೇಡಿಕೆಯಾಗಿದೆ. ಹಾಗಾಗಿ, ಕಲ್ಲಿದ್ದಲು ಅವಲಂಬಿಸಿರುವ ಉಷ್ಣ ವಿದ್ಯುತ್‌ ಸ್ಥಾವರಗಳ ಸಾಮರ್ಥ್ಯ ಹೆಚ್ಚಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT