ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಸೆನ್ಸ್‌ ನವೀಕರಣ: ಹೈಕೋರ್ಟ್‌ ಮೊರೆಹೋದ ಬೆಂಗಳೂರು ಟರ್ಫ್‌ ಕ್ಲಬ್‌

Published 20 ಮೇ 2024, 16:10 IST
Last Updated 20 ಮೇ 2024, 16:10 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆ ಋತುವಿನಲ್ಲಿ ಆನ್‌ಕೋರ್ಸ್ ಮತ್ತು ಆಫ್‌ ಕೋರ್ಸ್ ರೇಸಿಂಗ್/ ಬೆಟ್ಟಿಂಗ್ ನಡೆಸಲು ಅವಕಾಶ ನೀಡುವಂತೆ ಕೋರಿ ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ಸೋಮವಾರ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿದೆ. ಲೈಸೆನ್ಸ್‌  ನವೀಕರಣಕ್ಕೆ ಸರ್ಕಾರ ಏಪ್ರಿಲ್‌ನಿಂದ ನಿರಾಕರಿಸುತ್ತ ಬಂದಿದೆ.

ಲೈಸೆನ್ಸ್‌ ನವೀಕರಣಕ್ಕೆ ಸಂಬಂಧಿಸಿ ಬಿಟಿಸಿ ಮಾತ್ರವಲ್ಲ, ಕರ್ನಾಟಕ ಟ್ರೇನರ್‌ಗಳ ಸಂಘವೂ ನ್ಯಾಯಾಲಯದ ಮೊರೆ ಹೋಗಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಕರ್ನಾಟಕ ರೇಸ್‌ ಹಾರ್ಸ್ ಮಾಲೀಕರ ಸಂಘವೂ ಇಂಥ ಅರ್ಜಿ ಸಲ್ಲಿಸಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಕಳೆದ ಶನಿವಾರವೇ ಬೇಸಿಗೆ ರೇಸ್‌ ಆರಂಭವಾಗಬೇಕಿತ್ತು.

‘ನಿಜ, ನಮ್ಮ ಮುಂದೆ ಹೈಕೋರ್ಟ್‌ ಮುಂದೆ ಹೋಗದೇ ಅನ್ಯಮಾರ್ಗವಿರಲಿಲ್ಲ’ ಎಂದು ಬಿಟಿಸಿ ಉನ್ನತ ಮೂಲಗಳು ಹೆಸರು ಬಹಿರಂಗಪಡಿಸಬಾರದೆಂಬ ಷರತ್ತಿನ ಮೇಲೆ ‘ಪ್ರಜಾವಾಣಿ’ಗೆ ತಿಳಿಸಿವೆ. ‘ಏಪ್ರಿಲ್ ಆರಂಭದಿಂದ ರಾಜ್ಯ ಸರ್ಕಾರದ ಜೊತೆ ನಾವು ಮಾತುಕತೆ ನಡೆಸಲು ನಮ್ಮೆಲ್ಲಾ ಪ್ರಯತ್ನ ನಡೆಸಿದ್ದೇವೆ. ಆದರೆ, ಹಣಕಾಸು ಖಾತೆ ಸಹ ಹೊಂದಿರುವ ಮುಖ್ಯಮಂತ್ರಿ (ಸಿದ್ದರಾಮಯ್ಯ) ಅವರು ಲೈಸೆನ್ಸ್‌ ನವೀಕರಣಕ್ಕೆ ನಿರಾಕರಿಸುತ್ತಿದ್ದಾರೆ’ ಎಂದು ತಿಳಿಸಿವೆ.

‘ಆರಂಭದಲ್ಲಿ ಚುನಾವಣೆಯ ಕಾರಣ ಹೇಳಲಾಗಿತ್ತು. ಬಿಡುವಿಲ್ಲದ ಅವರ ವೇಳಾಪಟ್ಟಿ ಅರ್ಥವಾಗುತ್ತದೆ. ರಾಜ್ಯದಲ್ಲಿ ಮತದಾನ ಮುಗಿಯುವವರೆಗೆ ನಾವು ಕಾದೆವು. ಆದರೂ ಪರಿಸ್ಥಿತಿಯಲ್ಲಿ ಏನೂ ಪ್ರಗತಿಯಾಗಿಲ್ಲ. ಇದನ್ನೇ ನಂಬಿ ಜೀವನ ನಡೆಸುವವರಿದ್ದಾರೆ. ನ್ಯಾಯಾಲಯದ ಮೊರೆಹೋಗುವುದೇ ಉಳಿದಿರುವ ಆಯ್ಕೆ ಎಂದು ಕ್ಲಬ್‌ನ ಬಹುತೇಕ ಮಂದಿ ಭಾವನೆ ವ್ಯಕ್ತಪಡಿಸಿದರು. ಲೈಸೆನ್ಸ್‌ ನವೀಕರಣ ಆಗದ ಕಾರಣ ನಮಗಷ್ಟೇ ಅಲ್ಲ, ಟ್ರೇನರ್‌ಗಳು, ಮಾಲೀಕರು, ಜಾಕಿಗಳು, ಕ್ಲಬ್‌ನ ಕಾರ್ಮಿಕರ ಮೇಲೂ ಪರಿಣಾಮ ಆಗುತ್ತಿದೆ’ ಎಂದು ತಿಳಿಸಿವೆ.

ಪ್ರಕರಣ ಆಗುಹೋಗುಗಳನ್ನು ಬಲ್ಲವರ ಪ್ರಕಾರ, ಸರ್ಕಾರದ ಗಟ್ಟಿ ನಿಲುವಿಗೆ ಕಾರಣ, ತನ್ನ ವಿರುದ್ಧ ಬಿಟಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಇರುವ ಪ್ರಕರಣವನ್ನು ವಾಪಸು ಪಡೆಯಲು ನಿರಾಕರಿಸಿರುವುದು. ದಶಕದ ಹಿಂದೆ ಟರ್ಫ್‌ ಕ್ಲಬ್‌ ಜಾಗದ ಲೀಸ್‌ ಅವಧಿ ಮುಗಿದಿದ್ದು, ಅದು ರೇಸ್‌ಕೋರ್ಸ್ ರಸ್ತೆಯಿಂದ ನಗರದ ಹೊರ ವಲಯಕ್ಕೆ ಸ್ಥಳಾಂತರಿಬೇಕು ಎಂಬುದು ಸರ್ಕಾರದ ನಿಲುವು.

ಶತಮಾನದ ಹಿಂದೆ ಆಗಿನ ಮೈಸೂರು ಮಹಾರಾಜರು ಭೋಗ್ಯದ ಮೇಲೆ ನೀಡಿರುವ ಜಾಗದಲ್ಲೇ ಚಟುವಟಿಕೆ ನಡೆಸುತ್ತೇನೆಂಬುದು ಬಿಟಿಸಿ ನಿಲುವಾಗಿದೆ. ಈ ಪ್ರಕರಣದ ಸಂಬಂಧ ಅರ್ಜಿಯ ವಿಚಾರಣೆ ಇನ್ನೂ ನಿಗದಿಯಾಗಬೇಕಿದೆ. ಸುಪ್ರೀಂ ಕೋರ್ಟ್‌ನಿಂದ ಈ ಸಂಬಂಧದ ಅರ್ಜಿ ಹಿಂಪಡೆಯುವವರೆಗೂ ಮಾತುಕತೆಗೆ ಆಸಕ್ತಿ ತೋರದಿರಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT