ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2.1 ಕೋಟಿ ಉದ್ಯೋಗ ನಷ್ಟ

ಲಾಕ್‌ಡೌನ್‌: ವೇತನ ಪಡೆಯುವ ವರ್ಗಕ್ಕೆ ಭಾರಿ ಏಟು
Last Updated 10 ಸೆಪ್ಟೆಂಬರ್ 2020, 15:46 IST
ಅಕ್ಷರ ಗಾತ್ರ

ಬೆಂಗಳೂರು: ವೇತನ ಪಡೆಯುವ ಅಂದಾಜು 2.1 ಕೋಟಿ ಜನ ಏಪ್ರಿಲ್‌ನಿಂದ ಆಗಸ್ಟ್‌ ಅಂತ್ಯದವರೆಗಿನ ಅವಧಿಯಲ್ಲಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ’ (ಸಿಎಂಐಇ) ಹೇಳಿದೆ.

2019–20ನೆಯ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಇದ್ದ ವೇತನ ಆಧಾರಿತ ಉದ್ಯೋಗಗಳ ಸಂಖ್ಯೆ 8.6 ಕೋಟಿ ಆಗಿತ್ತು. ಈ ವರ್ಷದ ಆಗಸ್ಟ್‌ನಲ್ಲಿ ಈ ಸಂಖ್ಯೆಯು 6.5 ಕೋಟಿಗೆ ಇಳಿಕೆ ಕಂಡಿದೆ ಎಂದು ಸಿಎಂಐಇ ತಿಳಿಸಿದೆ. ಲಾಕ್‌ಡೌನ್‌ ಅವಧಿಯಲ್ಲಿ ಅತಿಹೆಚ್ಚಿನ ನಷ್ಟ ಅನುಭವಿಸಿದವರು ವೇತನ ಪಡೆಯುವ ವರ್ಗಕ್ಕೆ ಸೇರಿದವರು ಎನ್ನುವುದು ಸಿಎಂಐಸಿ ಹೇಳಿಕೆ.

ಜುಲೈ ತಿಂಗಳಿನಲ್ಲಿ ಅಂದಾಜು 48 ಲಕ್ಷ ಉದ್ಯೋಗ ನಷ್ಟವಾಗಿದೆ. ಆಗಸ್ಟ್‌ ತಿಂಗಳಿನಲ್ಲಿ 33 ಲಕ್ಷ ಉದ್ಯೋಗ ನಷ್ಟವಾಯಿತು ಎಂದು ಈ ಸಂಸ್ಥೆ ಹೇಳಿದೆ. ಸಿಎಂಐಇ ಪ್ರಕಾರ, ಲಾಕ್‌ಡೌನ್‌ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡವರು ಅಂತಿಮವಾಗಿ ಆಶ್ರಯಿಸಿದ್ದು ಕೃಷಿ ಕ್ಷೇತ್ರವನ್ನು. 2019–20ರಲ್ಲಿ ಕೃಷಿಯನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದವರ ಸಂಖ್ಯೆ 11.1 ಕೋಟಿ ಆಗಿತ್ತು. ಇದು ಈ ವರ್ಷದ ಆಗಸ್ಟ್‌ ಅಂತ್ಯದ ವೇಳೆಗೆ 1.4 ಕೋಟಿಯಷ್ಟು ಹೆಚ್ಚಳ ಕಂಡಿದೆ ಎಂಬುದು ಅದು ಮಾಡಿರುವ ಅಂದಾಜು.

ವೇತನ ಪಡೆಯದ, ಇತರ ಪ್ರಕಾರಗಳ ಉದ್ಯೋಗಿಗಳು ಆರಂಭಿಕ ಹಂತದಲ್ಲಿ ಅನುಭವಿಸಿದ ನಷ್ಟದಿಂದ ಹೊರಬಂದಿದ್ದಾರೆ. ಆದರೆ, ವೇತನ ಪಡೆಯುವ ವರ್ಗಕ್ಕೆ ಸೇರಿದವರು ಉದ್ಯೋಗ ಕಳೆದುಕೊಳ್ಳುತ್ತಿರುವುದು ಮುಂದುವರಿದಿದೆ ಎಂದು ಈಚೆಗೆ ಪ್ರಕಟವಾಗಿರುವ ವರದಿಯಲ್ಲಿ ಸಿಎಂಐಇ ಅಭಿಪ್ರಾಯ ವ್ಯಕ್ತಪಡಿಸಿದೆ.

ವೇತನ ಪಡೆವ ಉದ್ಯೋಗವೆಂದರೆ: ಸಂಸ್ಥೆಯೊಂದರಿಂದ ನೇಮಕಗೊಂಡು, ನಿಗದಿತ ಅವಧಿಗೆ ಒಮ್ಮೆ ವೇತನ ಪಡೆಯುವವರನ್ನು ‘ವೇತನ ಪಡೆಯುವ ಉದ್ಯೋಗಿಗಳು’ ಎಂದು ಸಿಎಂಐಇ ವ್ಯಾಖ್ಯಾನಿಸಿದೆ. ಅಷ್ಟೇ ಅಲ್ಲದೆ, ಕೆಲವು ಕುಟುಂಬಗಳು ವೇತನ ನೀಡಿ ಕೆಲಸಕ್ಕೆ ನೇಮಕ ಮಾಡಿಕೊಂಡವರನ್ನು ಕೂಡ ಸಿಎಂಐಇ ‘ವೇತನ ಪಡೆಯುವ ಉದ್ಯೋಗಿಗಳು’ ಎಂದೇ ಪರಿಗಣಿಸಿದೆ. ಮನೆಗೆಲಸದವರು, ಅಡುಗೆಗೆ ನೇಮಕ ಆದವರು, ವಾಹನ ಚಾಲಕರು, ತೋಟದ ಮಾಲಿಗಳು, ಭದ್ರತಾ ಸಿಬ್ಬಂದಿ... ಇಂಥವರೆಲ್ಲ ನಿಗದಿತ ಅವಧಿಗೊಮ್ಮೆ ನಿಗದಿತ ಮೊತ್ತವನ್ನು ಪಡೆಯುತ್ತಿದ್ದಾರೆ ಎಂದಾದರೆ ಅವರು ಕೂಡ ‘ವೇತನ ಪಡೆಯುವ ಉದ್ಯೋಗಿಗಳು’ ಎಂಬುದು ಸಿಎಂಐಇ ನೀಡಿರುವ ವ್ಯಾಖ್ಯಾನ.

‘ಉದ್ಯೋಗ ಹೆಚ್ಚಳ ಇಲ್ಲ’: ದೇಶದಲ್ಲಿನ ಒಟ್ಟು ಉದ್ಯೋಗಗಳ ಸಂಖ್ಯೆಯಲ್ಲಿ ವೇತನ ಆಧಾರಿತ ಉದ್ಯೋಗಗಳ ಪ್ರಮಾಣ ಇರುವುದು ಶೇಕಡ 21ರಿಂದ ಶೇ 22ರಷ್ಟು. ಕೋವಿಡ್‌–19ಕ್ಕೂ ಮೊದಲು ಭಾರತದ ಅರ್ಥವ್ಯವಸ್ಥೆಯು ‘ವೇಗದ ಬೆಳವಣಿಗೆ ದಾಖಲಿಸಿದ್ದರೂ, ವೇತನ ಆಧಾರಿತ ಉದ್ಯೋಗಗಳ ಪ್ರಮಾಣದಲ್ಲಿನ ಏರಿಕೆಯು ಮಂದಗತಿಯಲ್ಲೇ ಇತ್ತು’ ಎಂದು ಸಿಎಂಐಇ ಹೇಳಿದೆ.

2016–17ರಲ್ಲಿ ವೇತನ ಆಧಾರಿತ ಉದ್ಯೋಗಗಳ ಪ್ರಮಾಣ ಶೇ 21.2ರಷ್ಟು ಇತ್ತು. ಇದು 2017–18ರಲ್ಲಿ ಶೇ 21.6ಕ್ಕೆ ಏರಿಕೆಯಾಯಿತು. 2018–19ರಲ್ಲಿ ಶೇ 21.9ಕ್ಕೆ ಹೆಚ್ಚಳವಾಯಿತು ಎಂದು ವರದಿಯಲ್ಲಿ ಸಿಎಂಐಇ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT