ಸೋಮವಾರ, ಜೂಲೈ 6, 2020
22 °C
ಸುರತ್ಕಲ್‌ನ ‘ಎನ್‌ಐಟಿಕೆ’ಗೆ ಸ್ಟ್ರ್ಯಾಟಸಿಸ್‌ ಇಂಡಿಯಾ ನೆರವು

ಕೋವಿಡ್‌ | ವೆಂಟಿಲೇಟರ್‌ಗೆ 3ಡಿ ಪ್ರಿಂಟರ್ಸ್‌ ನೆರವು

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಪಿಡುಗು ನಿಯಂತ್ರಿಸಲು ವೈದ್ಯ ಲೋಕ ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ತ್ರೀಡಿ (3D) ಮುದ್ರಣ ತಂತ್ರಜ್ಞಾನವು ನೆರವಿಗೆ ಬಂದಿದೆ.

ತುರ್ತಾಗಿ ಬೇಕಾದ ವೈದ್ಯಕೀಯ ಸಲಕರಣೆಗಳ ಪೂರೈಕೆಯಲ್ಲಿ ಈ  ತಂತ್ರಜ್ಞಾನದ ಬಳಕೆಯಾಗುತ್ತಿದೆ. ತ್ರೀಡಿ ಮುದ್ರಣದ ವೈದ್ಯಕೀಯ ಸಲಕರಣೆಗಳ ಬಿಡಿಭಾಗಗಳು ಆಸ್ಪತ್ರೆ ಮತ್ತು ವೈದ್ಯರ ಅಗತ್ಯಗಳನ್ನು ಪೂರೈಸುತ್ತಿವೆ. ಕೋವಿಡ್‌ ಪೀಡಿತರಿಗೆ ಚಿಕಿತ್ಸೆ ನೀಡುವ ವೈದ್ಯ  ಸಿಬ್ಬಂದಿಗೆ ಮುಖಗವಸು ಮತ್ತಿತರ ಸಲಕರಣೆಗಳ ಲಭ್ಯತೆ ಹೆಚ್ಚಿಸಲು ಮತ್ತು ವೆಂಟಿಲೇಟರ್ಸ್‌ ಕೊರತೆಗೆ ಇದರ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಸರಕು ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿರುವಾಗ ಸ್ಥಳೀಯವಾಗಿ ಈ ತಂತ್ರಜ್ಞಾನ ಬಳಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಸುರತ್ಕಲ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯು (ಎನ್‌ಐಟಿಕೆ) ವಿಶ್ವದ ಪ್ರಮುಖ 3ಡಿ ಮುದ್ರಣ ಕಂಪನಿಯಾಗಿರುವ ಸ್ಟ್ರ್ಯಾಟಸಿಸ್‌ ಇಂಡಿಯಾ ಕಂಪನಿಯ ಸಹಯೋಗದಲ್ಲಿ ಮಂಗಳೂರಿನ ಆಸ್ಪತ್ರೆಗಳಲ್ಲಿ ತ್ರೀಡಿ ಮುದ್ರಣದ ವೈದ್ಯಕೀಯ ಸಲಕರಣೆಗಳನ್ನು ಒದಗಿಸಿದೆ. ವೈದ್ಯರು ಬಳಸುವ ಫೇಸ್‌ ಶೀಲ್ಡ್‌ಗಳನ್ನೂ 3ಡಿ ಮುದ್ರಣ ನೆರವಿನಿಂದ ತಯಾರಿಸಲಾಗುತ್ತಿದೆ. ಎನ್‌95 ಕಾರ್ಟಿಡ್ಜ್‌ ಬಳಸಿ ವಿವಿಧ ಬಗೆಯ ಮುಖ ಗವಸುಗಳನ್ನು ತಯಾರಿಸಲೂ ಉದ್ದೇಶಿಸಲಾಗಿದೆ.

‘ಮಂಗಳೂರಿನ ವ್ಯಾಪ್ತಿಯಲ್ಲಿ ಆರೋಗ್ಯ ಕಾರ್ಯಕರ್ತರು, ಪೊಲೀ ಸರು, ಎಂಆರ್‌ಪಿಎಲ್‌ ಸಿಬ್ಬಂದಿ ಸೇರಿದಂತೆ ಅನೇಕರಿಗೆ ಫೇಸ್‌ ಶೀಲ್ಡ್‌ ವಿತರಿಸಲಾಗಿದೆ’ ಎಂದು ‘ಎನ್‌ಐಟಿಕೆ’ನ ಸೆಂಟರ್‌ ಫಾರ್ ಸಿಸ್ಟಮ್‌ ಡಿಸೈನ್‌ ವಿಭಾ ಗದ ಪ್ರೊ. ಕೆ. ವಿ. ಗಂಗಾಧರನ್‌ ಅವರು ’ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಸ್ಪ್ಲಿಟರ್‌ ತಯಾರಿಕೆ: ‘ಕೋವಿಡ್‌ ಪೀಡಿತ ಕೆಲವರಲ್ಲಿ ಉಸಿರಾಟದ ತೀವ್ರ ಸಮಸ್ಯೆ ಕಂಡುಬಂದಾಗ ವೆಂಟಿಲೇಟರ್‌ ಮೂಲಕ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ದೇಶದಲ್ಲಿ ವೆಂಟಿಲೇಟರ್‌ಗಳ ತೀವ್ರ ಕೊರತೆ ಇದೆ. ಒಂದು ವೆಂಟಿಲೇಟರ್‌ ಅನ್ನು ಒಬ್ಬರಿಗಿಂತ ಹೆಚ್ಚು ರೋಗಿಗಳಿಗೆ ಬಳಸಬಹುದಾದ ಸ್ಪ್ಲಿಟರ್‌ಗಳನ್ನು (Splitters) ತ್ರೀಡಿ ಮುದ್ರಣ ಮೂಲಕ ತಯಾರಿಸಲಾಗುತ್ತಿದೆ. ಸ್ಪ್ಲಿಟರ್‌ಗಳ ವಿನ್ಯಾಸವು ಓಪನ್‌ ಸೋರ್ಸ್‌ ಆಧಾರಿತವಾಗಿದೆ. ಅವುಗಳನ್ನು ಯಾವುದೇ ವೆಂಟಿಲೇಟರ್‌ಗಳಿಗೆ ಜೋಡಿ ಸಬಹುದಾಗಿದೆ. ವಿನ್ಯಾಸ ಆಧರಿಸಿ ಒಂದು ವೆಂಟಿಲೇಟರ್‌ ಅನ್ನು ನಾಲ್ವರು ರೋಗಿಗಳಿಗೆ ಬಳಸಬಹುದಾಗಿದೆ’ ಎಂದು ಸ್ಟ್ರ್ಯಾಟಾಸಿಸ್‌ ಇಂಡಿಯಾದ (Stratasys India) ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಬಜಾಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಎನ್‌ಐಟಿಕೆ’ದ 3ಡಿ ಪ್ರಿಂಟಿಂಗ್‌ನ ವಿನ್ಯಾಸ, ಪರೀಕ್ಷೆ ಮತ್ತು ಮರು ವಿನ್ಯಾಸದ  ಬೇಡಿಕೆ ಪೂರೈಸಲು ಸ್ಟ್ರ್ಯಾಟಾಸಿಸ್‌ ತನ್ನ ಬಳಿ ಇದ್ದ ಕೈಗಾರಿಕಾ ದರ್ಜೆಯ ಪ್ರಿಂಟರ್ಸ್‌ಗಳನ್ನು ಒದಗಿಸಿದೆ.

‘ಕಂಪನಿ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಬಳಸಿಕೊಂಡು ವೈದ್ಯಕೀಯ ಅಗತ್ಯಗಳನ್ನು ಪೂರೈಸಲು  ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಜತೆ ಸಮಾಲೋಚನೆ ನಡೆಸಲಾಗುತ್ತಿದೆ. 3ಡಿ ಪ್ರಿಂಟಿಂಗ್‌ ಸಾಮರ್ಥ್ಯ ಹೊಂದಿದ, ಈ ವಿಷಯದಲ್ಲಿ ನೆರವು ಬಯಸುವವರು ನಮ್ಮನ್ನು ಸಂಪರ್ಕಿಸಬಹುದು.

’ವೆಂಟಿಲೇಟರ್‌ ಡಿಸೈನ್‌, ಮುಖಗವಸು ತಯಾರಿಕೆ  ಮತ್ತಿತರ ತಂತ್ರಜ್ಞಾನ ಸೇವೆಗಳನ್ನು ಕಂಪನಿಯು ಗ್ರಾಹಕರಿಗೆ ಒದಗಿಸುತ್ತಿದೆ. ತ್ರೀಡಿ ಪ್ರಿಂಟಿಂಗ್‌ ಕ್ಷೇತ್ರದ ಅನೇಕ ಕಂಪನಿಗಳು ಮತ್ತು ತಂತ್ರಜ್ಞರು ಕೂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.  ಈ ಪಿಡುಗಿನ ವಿರುದ್ಧದ ಹೋರಾಟದಲ್ಲಿ 3ಡಿ ಪ್ರಿಂಟಿಂಗ್‌ ಉದ್ದಿಮೆಯು ಅವಿರ ತವಾಗಿ ಪರಿಶ್ರಮಿಸುತ್ತಿದೆ’ ಎಂದೂ ಬಜಾಜ್‌ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.