ಬೆಂಗಳೂರು: ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರವು ಈರುಳ್ಳಿ ಮೇಲಿನ ಕನಿಷ್ಠ ರಫ್ತು ದರವನ್ನು (ಎಂಇಪಿ) ರದ್ದುಪಡಿಸಿದೆ. ಅಲ್ಲದೆ, ಈರುಳ್ಳಿ ರಫ್ತು ಮೇಲಿನ ಶೇ 40ರಷ್ಟು ಸುಂಕವನ್ನು ಅರ್ಧದಷ್ಟು ಕಡಿತಗೊಳಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಸುಧಾರಿಸಲು ಮತ್ತು ಬೆಲೆ ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮಕೈಗೊಂಡಿದೆ. ಪ್ರತಿ ಟನ್‌ಗೆ ₹46,154 ಎಂಇಪಿ ನಿಗದಿಪಡಿಸಲಾಗಿತ್ತು.
ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಆ ರಾಜ್ಯದ ವಿಧಾನಸಭೆಗೆ ಶೀಘ್ರವೇ ಚುನಾವಣೆ ಘೋಷಣೆಯಾಗಲಿದೆ. ಹಾಗಾಗಿ, ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಸರ್ಕಾರ ಈ ಕ್ರಮಕೈಗೊಂಡಿದೆ ಎಂದು ಹೇಳಲಾಗಿದೆ.
ಸರ್ಕಾರದ ಈ ಕ್ರಮದ ಬೆನ್ನಲ್ಲೇ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶನಿವಾರ ಸಗಟು ಬೆಲೆಯು ಕ್ವಿಂಟಲ್‌ಗೆ ₹600 ಏರಿಕೆಯಾಗಿದೆ.
‘ಎಂಇಪಿ ರದ್ದತಿ ಹಾಗೂ ರಫ್ತು ಸುಂಕವನ್ನು ಶೇ 20ಕ್ಕೆ ಇಳಿಸಿರುವುದು ವರ್ತಕರಿಗೆ ವರದಾನವಾಗಿದೆ. ಬಹುತೇಕರು ರಫ್ತಿಗೆ ಮುಂದಾಗುತ್ತಾರೆ. ಶುಕ್ರವಾರ ಮಾರುಕಟ್ಟೆಗೆ 61 ಸಾವಿರ ಚೀಲ (ಪ್ರತಿ ಚೀಲ 50 ಕೆ.ಜಿ) ಈರುಳ್ಳಿ ಪೂರೈಕೆಯಾಗಿತ್ತು. ಶನಿವಾರ 51 ಸಾವಿರ ಚೀಲ ಪೂರೈಕೆಯಾಗಿದೆ. ಇದರಿಂದ ಸಗಟು ಬೆಲೆ ಏರಿಕೆಯಾಗಿದೆ’ ಎಂದು ವರ್ತಕ ಜಿ. ಲೋಕಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಎ’ ಗ್ರೇಡ್ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 4,000ದಿಂದ ₹4,200ಕ್ಕೆ ಮಾರಾಟವಾಗಿದೆ. ವರ್ತಕರು ರಫ್ತಿಗೆ ಮುಂದಾದರೆ ಮಾರುಕಟ್ಟೆಗೆ ಪೂರೈಕೆ ಮತ್ತಷ್ಟು ಕಡಿಮೆಯಾಗಲಿದೆ. ಇದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಏರಿಕೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ’ ಎಂದರು.