ನವದೆಹಲಿ: ಮನೆಗಳಲ್ಲಿ ಬಳಸುವ ಹವಾನಿಯಂತ್ರಕಗಳ (ಎ.ಸಿ.) ಬೆಲೆಯನ್ನು ಶೇಕಡ 5ರಿಂದ ಶೇ 8ರವರೆಗೆ ಹೆಚ್ಚಿಸಲು ಕಂಪನಿಗಳು ಚಿಂತನೆ ನಡೆಸುತ್ತಿವೆ. ಹೀಗಿದ್ದರೂ ಈ ವರ್ಷದಲ್ಲಿ ಎರಡಂಕಿ ಪ್ರಗತಿ ಸಾಧಿಸುವ ವಿಶ್ವಾಸವನ್ನೂ ಅವು ಹೊಂದಿವೆ.
ಲೋಹ ಮತ್ತು ಕಂಪ್ರೆಸ್ಸರ್ ಬೆಲೆಯಲ್ಲಿ ಏರಿಕೆ ಆಗಿರುವುದರಿಂದ ಎ.ಸಿ. ಬೆಲೆಯನ್ನು ಗರಿಷ್ಠ ಶೇ 5ರವರೆಗೂ ಹೆಚ್ಚಿಸುವುದಾಗಿ ಡಾಯ್ಕಿನ್ ಕಂಪನಿ ತಿಳಿಸಿದೆ. ಎಸಿ ಬೆಲೆಯನ್ನು ಶೇ 6ರಿಂದ ಶೇ 8ರ ಆಸುಪಾಸಿನಲ್ಲಿ, ರೆಫ್ರಿಜರೇಟ್ ಬೆಲೆಯನ್ನು ಶೇ 3ರಿಂದ ಶೆ 4ರಷ್ಟು ಹೆಚ್ಚಿಸಲು ಪ್ಯಾನಾಸಾನಿಕ್ ಕಂಪನಿ ಚಿಂತನೆ ನಡೆಸಿದೆ.
ಬ್ಲೂ ಸ್ಟಾರ್ ಕಂಪನಿಯು ಏಪ್ರಿಲ್‌ನಿಂದ ಶೇ 3ರಷ್ಟು ಬೆಲೆ ಹೆಚ್ಚಳ ಮಾಡಲು ಮುಂದಾಗಿದೆ.
ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿಯ ಕಾರಣದಿಂದಾಗಿ ಎ.ಸಿ.ಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ. ಇದರಿಂದಾಗಿ ಎರಡಂಕಿ ಪ್ರಗತಿ ಸಾಧ್ಯವಾಗಲಿದೆ ಎನ್ನುವುದು ವೋಲ್ಟಾಸ್, ಡಾಯ್ಕಿನ್, ಎಲ್‌ಜಿ, ಪ್ಯಾನಾಸಾನಿಕ್, ಹಾಯರ್, ಬ್ಲೂ ಸ್ಟಾರ್ ಮತ್ತು ಸ್ಯಾಮ್ಸಂಗ್ ಕಂಪನಿಗಳ ನಿರೀಕ್ಷೆಯಾಗಿದೆ.