ಮಂಗಳವಾರ, ಆಗಸ್ಟ್ 3, 2021
21 °C
ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ವರದಿ

ಕೋವಿಡ್‌-19 ಎರಡನೇ ಸುತ್ತು: ಪೂರ್ಣಾವಧಿ ಉದ್ಯೋಗ ಕುತ್ತು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಪ್ರಸಕ್ತ ವರ್ಷದ ದ್ವಿತೀಯಾರ್ಧದಲ್ಲಿ ಒಂದು ವೇಳೆ ‘ಕೋವಿಡ್‌–19’ ಪಿಡುಗಿನ ಎರಡನೇ ಅಲೆ ಕಂಡು ಬಂದರೆ ವಿಶ್ವದಾದ್ಯಂತ 2020ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 11.9ರಷ್ಟು ಕೆಲಸದ ಅವಧಿ ನಷ್ಟವಾಗಲಿದ್ದು ಇದು 34 ಕೋಟಿ ಪೂರ್ಣಾವಧಿ  ಉದ್ಯೋಗಗಳ ನಷ್ಟಕ್ಕೆ ಸಮನಾಗಿರುತ್ತದೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಎಚ್ಚರಿಸಿದೆ.

2020ರಲ್ಲಿ ಜಾಗತಿಕ ಕಾರ್ಮಿಕ ಮಾರುಕಟ್ಟೆಯ ಪುನಶ್ಚೇತನದ (ಉದ್ಯೋಗ ಅವಕಾಶಗಳ ಹೆಚ್ಚಳ) ಅನಿಶ್ಚಿತತೆ ಮುಂದುವರೆಯಲಿದೆ ಎಂದು ‘ಐಎಲ್‌ಒ’ದ ‘ಕೋವಿಡ್‌–19 ಮತ್ತು ಕೆಲಸದ ಜಗತ್ತಿನ ಮೇಲಿನ ನಿಗಾ’ ಕುರಿತ ವರದಿಯಲ್ಲಿ ತಿಳಿಸಲಾಗಿದೆ.

 2020ರ ಮೊದಲಾರ್ಧದಲ್ಲಿನ ವಿಶ್ವದಾದ್ಯಂತ ಕೆಲಸದ ಗಂಟೆಗಳ ನಷ್ಟವು ಈ ಮೊದಲಿನ ಅಂದಾಜಿಗಿಂತ ತೀವ್ರವಾಗಿ ಹೆಚ್ಚಳಗೊಂಡಿದೆ. ದ್ವಿತೀಯಾರ್ಧದಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಎಷ್ಟೇ ಸುಧಾರಣೆ ಕಂಡು ಬಂದರೂ, ಪಿಡುಗಿನ ಮುಂಚಿನ ಅವಧಿಯ ಹಂತಕ್ಕೆ ತಲುಪಲು ಸಾಧ್ಯವಾಗುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಿರಾಶಾದಾಯಕ ಪರಿಸ್ಥಿತಿ ಮಧ್ಯೆಯೇ, ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧವು ಭಾರಿ ಸವಾಲಿನಿಂದ ಕೂಡಿರಲಿದೆ. ಮೊದಲಾರ್ಧದಲ್ಲಿನ ಸಂಕಷ್ಟದ ಪರಿಸ್ಥಿತಿಯಿಂದ ಅನೇಕ ಪಾಠ ಕಲಿತು ಆರ್ಥಿಕ ಚಟುವಟಿಕೆಗಳಿಗೆ ಸಾಕಷ್ಟು ಉತ್ತೇಜನ ದೊರೆತಿದೆ. ಆದರೂ, ವರ್ಷಾಂತ್ಯದಲ್ಲಿ, 2019ರ ನಾಲ್ಕನೇ ತ್ರೈಮಾಸಿಕದಲ್ಲಿನ ಉದ್ಯೋಗ ಅವಕಾಶಗಳಿಗೆ ಹೋಲಿಸಿದರೆ ವಿಶ್ವದಾದ್ಯಂತ ಶೇ 11.9ರಷ್ಟು ಕೆಲಸದ ಗಂಟೆಗಳು ಇಲ್ಲವೆ 34 ಕೋಟಿ ಪೂರ್ಣಾವಧಿ ಉದ್ಯೋಗಗಳು ನಷ್ಟವಾಗಲಿವೆ.

ಇದನ್ನೂ ಓದಿ: 

ಕೋವಿಡ್‌ ಪಿಡುಗಿನ ಎರಡನೇ ಅಲೆ ಕಂಡು ಬರುವ ಸಾಧ್ಯತೆ ಮತ್ತು ಮತ್ತೆ ಜಾರಿಗೆ ಬರಲಿರುವ ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧಗಳಿಂದಾಗಿ ಜಾಗತಿಕ ಅರ್ಥ ವ್ಯವಸ್ಥೆಯ ಚೇತರಿಕೆಯು ಮುಂಬರುವ ದಿನಗಳಲ್ಲಿ ಗಮನಾರ್ಹವಾಗಿ ನಿಧಾನಗೊಳ್ಳಲಿದೆ.

ಒಂದು ವೇಳೆ ಕಾರ್ಮಿಕರ ಚಟುವಟಿಕೆಗಳು ತೀವ್ರವಾಗಿ ಚೇತರಿಕೆ ದಾಖಲಿಸಿ ಅದರಿಂದ ಬೇಡಿಕೆ ಹೆಚ್ಚಳವಾಗಿ  ಉದ್ಯೋಗ ಅವಕಾಶಗಳು ಸೃಷ್ಟಿಯಾಗುವ ಅಸಾಧಾರಣ ಆಶಾದಾಯಕ ಸಂದರ್ಭದಲ್ಲಿಯೂ ಕೆಲಸದ ಗಂಟೆಗಳ ಜಾಗತಿಕ ನಷ್ಟವು ಶೇ 1.2ಕ್ಕೆ (3.4 ಕೋಟಿ ಪೂರ್ಣಾವಧಿ ಉದ್ಯೋಗ ನಷ್ಟ) ಇಳಿಯಲಿದೆ.

‘ಮುಂದಿನ ಆರು ತಿಂಗಳಲ್ಲಿ ಚೇತರಿಕೆಯ ಮೂರು ಸಾಧ್ಯತೆಗಳ ಪೈಕಿ, ಯಾವುದೇ ಸಂದರ್ಭದಲ್ಲಿಯೂ ಉದ್ಯೋಗ ಮಾರುಕಟ್ಟೆಯಲ್ಲಿ ಲಾಕ್‌ಡೌನ್‌ ಮುಂಚಿನ ಪರಿಸ್ಥಿತಿ ಕಂಡು ಬರುವುದಿಲ್ಲ‘ ಎಂದು ‘ಐಎಲ್‌ಒ’ದ ಮಹಾ ನಿರ್ದೇಶಕ ಗಾಯ್‌ ರೈಡರ್‌ ಹೇಳಿದ್ದಾರೆ.

ಮಹಿಳಾ ಉದ್ಯೋಗಿಗಳ ಸಂಕಷ್ಟ: ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ದುಡಿಯುವ ವಸತಿ, ಆಹಾರ, ಮಾರಾಟ ಮತ್ತು ತಯಾರಿಕೆ ಕ್ಷೇತ್ರಗಳು ಪಿಡುಗಿನಿಂದ ತೀವ್ರವಾಗಿ ಬಾಧಿತವಾಗಿವೆ. ವಿಶ್ವದಾದ್ಯಂತ ಉದ್ಯೋಗ ನಿರತ ಮಹಿಳೆಯರಲ್ಲಿ ಶೇ 40ರಷ್ಟು (51 ಕೋಟಿ) ಈ ನಾಲ್ಕು ವಲಯಗಳಲ್ಲಿ ದುಡಿಯುತ್ತಿದ್ದಾರೆ.

ಆರೋಗ್ಯ, ಸಮಾಜ ಸೇವಾ ವಲಯ ಮತ್ತು  ಮನೆಗೆಲಸದಲ್ಲಿ ದುಡಿಯುವ ಮಹಿಳೆಯರು ಸೋಂಕಿಗೆ ಗುರಿಯಾಗುವ, ವರಮಾನಕ್ಕೆ ಎರವಾಗುವ ಅಪಾಯ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: 

ಉದ್ಯೋಗ ಅವಕಾಶಗಳಲ್ಲಿ ಸ್ಥಿರತೆ ಸಾಧಿಸಲು ಆರೋಗ್ಯ, ಆರ್ಥಿಕತೆ ಮತ್ತು ಸಾಮಾಜಿಕ ವಲಯಗಳಲ್ಲಿ ಸಮತೋಲನ ಸಾಧಿಸುವ ಅಗತ್ಯ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

***

ಉದ್ಯೋಗ ನಷ್ಟದ ಚಿತ್ರಣ

15 ಕೋಟಿ - 2020ರ ಮೊದಲ ತ್ರೈಮಾಸಿಕದಲ್ಲಿನ ಪೂರ್ಣಾವಧಿ ಉದ್ಯೋಗ ನಷ್ಟ

40 ಕೋಟಿ - ದ್ವಿತೀಯ ತ್ರೈಮಾಸಿಕದಲ್ಲಿನ ಉದ್ಯೋಗ ನಷ್ಟ

14 ಕೋಟಿ - ನಾಲ್ಕನೇ ತ್ರೈಮಾಸಿಕದಲ್ಲಿನ ಉದ್ಯೋಗಗಳ ನಷ್ಟ ಸಾಧ್ಯತೆ

34 ಕೋಟಿ - ಕೋವಿಡ್‌ 2ನೇ ಅಲೆ ಕಂಡು ಬಂದರೆ 2020ರ ನಾಲ್ಕನೇ ತ್ರೈಮಾಸಿಕದಲ್ಲಿನ ಉದ್ಯೋಗ ನಷ್ಟ

ಪ್ರದೇಶ; ಕೆಲಸದ ಅವಧಿ ನಷ್ಟ (% ನಲ್ಲಿ)

ಅಮೆರಿಕ - 18.3

ಯುರೋಪ್‌ ಮತ್ತು ಮಧ್ಯ ಏಷ್ಯಾ - 13.9

ಏಷ್ಯಾ ಮತ್ತು ಪೆಸಿಫಿಕ್ - 13.5

ಅರಬ್‌ ದೇಶಗಳು - 13.2

ಆಫ್ರಿಕಾ -12.1

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು