ಭಾರತದಲ್ಲಿ ತಯಾರಿಕೆ ಹೆಚ್ಚಿಸಲು ಆ್ಯಪಲ್ ಚಿಂತನೆ: ಗೋಯಲ್

ಗಾಂಧಿನಗರ: ಆ್ಯಪಲ್ ಕಂಪನಿಯು ಭಾರತದಲ್ಲಿ ತನ್ನ ತಯಾರಿಕೆಯನ್ನು ಹೆಚ್ಚಿಸಲು ಆಲೋಚಿಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಸೋಮವಾರ ತಿಳಿಸಿದ್ದಾರೆ.
‘ಆ್ಯಪಲ್ ಕಂಪನಿಯ ಒಟ್ಟು ತಯಾರಿಕೆಯಲ್ಲಿ ಸದ್ಯ ಶೇಕಡ 5ರಿಂದ ಶೇ 7ರಷ್ಟು ಭಾರತದಲ್ಲಿಯೇ ಆಗುತ್ತಿದೆ. ನಾನು ಭಾವಿಸಿರುವುದು ತಪ್ಪಿಲ್ಲ ಎಂದಾದರೆ, ಭಾರತದಲ್ಲಿನ ತಯಾರಿಕೆಯನ್ನು ಶೇ 25ರವರೆಗೆ ಹೆಚ್ಚಿಸಿಕೊಳ್ಳುವ ಗುರಿಯನ್ನು ಆ್ಯಪಲ್ ಹೊಂದಿದೆ. ಕಂಪನಿಯ ಈಚಿನ ಬಹುತೇಕ ಎಲ್ಲ ಮಾದರಿಗಳು ಭಾರತದಲ್ಲಿ ತಯಾರಾಗುತ್ತಿವೆ’ ಎಂದು ಗೋಯಲ್ ಹೇಳಿದ್ದಾರೆ.
ಭಾರತದಲ್ಲಿ ವಹಿವಾಟು ನಡೆಸಲು ಪೂರಕವಾದ ವಾತಾವರಣ ಇರುವುದು ಜಾಗತಿಕ ಕಂಪನಿಗಳಿಗೆ ಇಲ್ಲಿ ತಮ್ಮ ನೆಲೆ ಸ್ಥಾಪಿಸಲು ನೆರವಾಗುತ್ತಿದೆ. ಭಾರತವು ಎಲ್ಲರಿಗೂ ಒಂದೇ ಕಾನೂನು, ಪಾರದರ್ಶಕ ನೀತಿ ಮತ್ತು ವಹಿವಾಟು ಮಾದರಿಗಳನ್ನು ನೀಡುತ್ತದೆ. ಇದರಿಂದಾಗಿ ವಿದೇಶಿ ಹೂಡಿಕೆದಾರರಿಗೆ ಬಂಡವಾಳ ತೊಡಗಿಸಲು ಭಾರತವು ಆದ್ಯತೆಯ ತಾಣವಾಗಿದೆ ಎಂದು ಅವರು ಹೇಳಿದ್ದಾರೆ
ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿದ್ದ ಬಿ20 ಇಂಡಿಯಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ವಿದೇಶಿ ಕಂಪನಿಗಳ ಯಶಸ್ಸಿನ ಕುರಿತು ವಿವರಿಸಿದರು. ಅರ್ಥ್ ಮೂವರ್ಸ್ ಮಷಿನ್ ವಲಯದಲ್ಲಿನ ವಿದೇಶಿ ಕಂಪನಿಯೊಂದರ ಉದಾಹರಣೆ ನೀಡಿದ ಅವರು, ‘ಭಾರತದ ತಯಾರಿಕಾ ವಲಯವು ಸ್ಪರ್ಧಾತ್ಮಕತೆಯಿಂದ ಕೂಡಿದೆ. ಈ ಕಾರಣದಿಂದಲೇ ಆ ವಿದೇಶಿ ಕಂಪನಿಯು ಭಾರತದಲ್ಲಿ ತಯಾರಿಸಿರುವ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗೆ 110 ದೇಶಗಳಿಗೆ ಪೂರೈಸುವಂತೆ ಆಗಿದೆ. ಹೊಸ ಉತ್ಪನ್ನಗಳನ್ನೂ ಅದು ಬಿಡುಗಡೆ ಮಾಡುತ್ತಿದೆ’ ಎಂದಿದ್ದಾರೆ.
ಆ್ಯಪಲ್ ಕಂಪನಿಯ ಅತಿದೊಡ್ಡ ತಯಾರಿಕಾ ಘಟಕವು ಬೆಂಗಳೂರು ಸಮೀಪದ ಹೊಸೂರಿನಲ್ಲಿ ಸ್ಥಾಪನೆ ಆಗಲಿದ್ದು, ಅದರಿಂದ ಸುಮಾರು 60 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ 2022ರ ನವೆಂಬರ್‌ನಲ್ಲಿ ಹೇಳಿದ್ದರು. ಭಾರತದಲ್ಲಿ ಫಾಕ್ಸ್‌ಕಾನ್, ವಿಸ್ಟ್ರಾನ್ ಮತ್ತು ಪೆಗಟ್ರಾನ್ ಕಂಪನಿಗಳು ಐಫೋನ್ ತಯಾರಿಕೆ ಮಾಡುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.