ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ಅಡಿಕೆಗೆ ದಾಖಲೆ ಬೆಲೆ

ಒಂದು ತಿಂಗಳ ಅವಧಿಯಲ್ಲೇ ಕ್ವಿಂಟಲ್‌ಗೆ ₹5 ಸಾವಿರ ಏರಿಕೆ
Last Updated 7 ಜನವರಿ 2021, 20:13 IST
ಅಕ್ಷರ ಗಾತ್ರ

ಮಂಗಳೂರು: ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. ಗುರುವಾರ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ 135 ಕ್ವಿಂಟಲ್‌ ಹೊಸ ಅಡಿಕೆ ಆವಕವಾಗಿದ್ದು, ಕ್ವಿಂಟಲ್‌ಗೆ ಗರಿಷ್ಠ ₹ 35,200 ಲಭಿಸಿದೆ. ಇದು ಈ ಹಂಗಾಮಿನಲ್ಲಿ ಹೊಸ ಕೊಯ್ಲಿನ ಅಡಿಕೆಗೆ ಲಭಿಸಿರುವ ಗರಿಷ್ಠ ಧಾರಣೆ.

‘ಕಳೆದ ಐದು ವರ್ಷಗಳ ಅವಧಿಯಲ್ಲಿ ಬೆಳೆಗಾರರಿಗೆ ಹೊಸ ಅಡಿಕೆಗೆ ಲಭಿಸಿರುವ ದಾಖಲೆ ಧಾರಣೆ ಇದು. ಕೋವಿಡ್‌–19 ಸಂದರ್ಭದಲ್ಲಿ ಈ ಬೆಲೆ ಬಂದಿರುವುದು ಆರ್ಥಿಕ ಬಲ ತುಂಬಿದೆ’ ಎನ್ನುತ್ತಾರೆ ಅಡಿಕೆ ಬೆಳೆಗಾರರು.

ಕಳೆದೊಂದು ವಾರದಿಂದ ಹಳೆಯ ಅಡಿಕೆ, ಡಬಲ್‌ ಚೋಲ್‌ ಅಡಿಕೆ ಧಾರಣೆಯಲ್ಲೂ ಗಣನೀಯ ಏರಿಕೆಯಾಗಿದೆ. ಹಳೆಯ ಅಡಿಕೆಯು ಗುರುವಾರ ಕ್ವಿಂಟಲ್‌ಗೆ ಗರಿಷ್ಠ ₹ 39,500 ದರದಲ್ಲಿ ಮಾರಾಟವಾಯಿತು. ಪುತ್ತೂರು, ಬೆಳ್ತಂಗಡಿ ಮತ್ತು ಕಾರ್ಕಳ ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ಹೊಸ ಅಡಿಕೆಯು ಕ್ವಿಂಟಲ್‌ಗೆ ₹ 35,000ಕ್ಕೆ ಮಾರಾಟವಾಗಿದೆ.

ಸುಳ್ಯ, ಬಂಟ್ವಾಳ ಮಾರುಕಟ್ಟೆಯಲ್ಲಿ 34,500ಕ್ಕೆ ಹೊಸ ಅಡಿಕೆ ಖರೀದಿಯಾಗಿದೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ಹೊಸ ಅಡಿಕೆಗೆ ಕೆ.ಜಿಗೆ ₹250ರಿಂದ ₹270 ದರ ಇತ್ತು. ಹೊಸ ಅಡಿಕೆ ಕೆ.ಜಿ.ಗೆ ₹300ರ ಗಡಿ ದಾಟಿದ್ದ ಉದಾಹರಣೆ ಕಡಿಮೆ. ಈಗ ₹350ರ ಗಡಿ ದಾಟಿದೆ’ ಎನ್ನುತ್ತಾರೆ ಬೆಳ್ತಂಗಡಿಯ ಅಡಿಕೆ ಬೆಳೆಗಾರ ರತ್ನಾಕರ ಪೂಜಾರಿ.

ಹಳೆ ಅಡಿಕೆ ದರ ಸ್ಥಿರ: ಕಳೆದೊಂದು ವಾರದಿಂದ ಹಳೆಯ ಅಡಿಕೆ ಧಾರಣೆ ಸ್ಥಿರವಾಗಿದೆ. ಜ. 1ರಂದು ಹಳೆಯ ಅಡಿಕೆ ಕ್ವಿಂಟಲ್‌ಗೆ ಗರಿಷ್ಠ ₹39,500 ಇತ್ತು. ಈಗಲೂ ಅದೇ ದರ ಮುಂದುವರಿದಿದೆ.

ಒಂದು ವಾರದಿಂದ ಖಾಸಗಿ ವಲಯದಲ್ಲೂ ಅಡಿಕೆ ಧಾರಣೆ ಏರಿಕೆಯಾಗುತ್ತಿದೆ. ಕ್ಯಾಂಪ್ಕೊ ಕೂಡ ಬೆಲೆ ಏರಿಸಿದ್ದು, ಸಾರ್ವಕಾಲಿಕ ಗರಿಷ್ಠ ಬೆಲೆ ಸಿಕ್ಕಂತಾಗಿದೆ. ಕ್ಯಾಂಪ್ಕೊ ಮಾರುಕಟ್ಟೆಯಲ್ಲೂ ಹೊಸ ಅಡಿಕೆ ಕೆ.ಜಿಗೆ ₹ 350, ಡಬಲ್‌ ಚೋಲ್‌ ಅಡಿಕೆ ₹ 410ಕ್ಕೆ ಖರೀದಿಯಾಗಿದೆ.

‘ಉತ್ತರ ಭಾರತದಲ್ಲಿ ಅಡಿಕೆಯ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಷ್ಟು ಅಡಿಕೆ ಪೂರೈಕೆಯಾಗುತ್ತಿಲ್ಲ. ಇದೀಗ ಹೊಸ ಕೊಯ್ಲಿನ ಅಡಿಕೆಯತ್ತಲೇ ಮಾರುಕಟ್ಟೆ ಗಮನ ಹರಿಸಿದೆ. ಹೀಗಾಗಿ ಅಡಿಕೆ ಧಾರಣೆಯಲ್ಲಿ ಏರಿಕೆಯಾಗುತ್ತಿದೆ’ ಎನ್ನುತ್ತಾರೆ ವರ್ತಕರು.

ತಿಂಗಳಲ್ಲೇ ದಾಖಲೆ ಬೆಲೆ

ಜನವರಿ 1ರಿಂದ 7ರವರೆಗೆ ಮಂಗಳೂರು ಎಪಿಎಂಸಿಗೆ ಒಟ್ಟು 715 ಕ್ವಿಂಟಲ್‌ ಹೊಸ ಅಡಿಕೆ ಆವಕವಾಗಿದೆ. ಜನವರಿ 2ರಂದು ಕ್ವಿಂಟಲ್‌ಗೆ ₹33,500 ಇದ್ದ ಬೆಲೆಯು ಒಂದೇ ದಿನದಲ್ಲಿ ಕ್ವಿಂಟಲ್‌ಗೆ ₹1,500ರಷ್ಟು ಏರಿಕೆಯಾಯಿತು. ಡಿಸೆಂಬರ್‌ ಮೊದಲ ವಾರದಲ್ಲಿ ಹೊಸ ಅಡಿಕೆಗೆ ಕ್ವಿಂಟಲ್‌ಗೆ ಗರಿಷ್ಠ ₹30 ಸಾವಿರ ದರ ಇತ್ತು. ಇದೀಗ ಒಂದು ತಿಂಗಳಲ್ಲಿ ಹೊಸ ಅಡಿಕೆ ಬೆಲೆ ಕ್ವಿಂಟಲ್‌ಗೆ ₹ 5 ಸಾವಿರದಷ್ಟು ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT