ಬುಧವಾರ, ಜನವರಿ 22, 2020
18 °C
ನಾಲ್ಕು ವರ್ಷಗಳ ಹಿಂದೆ ಕ್ವಿಂಟಲ್‌ಗೆ ₹ 1 ಲಕ್ಷದ ಗಡಿ ಮುಟ್ಟಿದ್ದ ದರ

ಅಡಿಕೆ ಧಾರಣೆ ಏರಿಕೆ ನಿರೀಕ್ಷೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಅಧಿಕ ಮಳೆಯಿಂದಾಗಿ ಅಡಿಕೆ ಇಳುವರಿ ಗಣನೀಯವಾಗಿ ಕುಂಠಿತವಾಗಿದೆ. ವರ್ತಕರು, ಪಾನ್‌ಮಸಾಲ ಕಂಪನಿಗಳ ಬಳಿಯೂ ಸಂಗ್ರಹ ಕುಸಿದಿದೆ. ಹೀಗಾಗಿ ಈ ಬಾರಿ ಅಡಿಕೆ ಧಾರಣೆಯಲ್ಲಿ ಏರಿಕೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಬೆಳೆಗಾರರು.

ಅಧಿಕ ಮಳೆಯಿಂದ ಅಡಿಕೆ ಮರಗಳು ರೋಗಗಳಿಗೆ ತುತ್ತಾಗಿವೆ. ಪ್ರತಿವರ್ಷ ಎಕರೆಗೆ 7 ಕ್ವಿಂಟಲ್‌ನಿಂದ 8 ಕ್ವಿಂಟಲ್‌ವರೆಗೆ ಇಳುವರಿ ಸಿಗುತ್ತಿತ್ತು. ರಾಜ್ಯದಲ್ಲಿ ಪ್ರತಿವರ್ಷ 4 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದೆ. ಈ ಬಾರಿ ಶೇ 50ರಷ್ಟು ಇಳುವರಿ ಖೋತಾ ಆಗಿದೆ.

‘ರೈತರು ಸಾಕಷ್ಟು ಅಡಿಕೆ ಸಂಗ್ರಹಿಸಿದ್ದಾರೆ. ಗುಟ್ಕಾ ತಿನ್ನವವರ ಸಂಖ್ಯೆಯೂ ಕಡಿಮೆಯಾಗಿದೆ. ಒಂದು ವರ್ಷದ ಬೆಳೆ ಕುಸಿತ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದಿಲ್ಲ. ನಮ್ಮ ಸಂಸ್ಥೆಯಲ್ಲಿ ಹಿಂದಿನ ವರ್ಷ ರೈತರು 75,997 ಮೂಟೆ, ವರ್ತಕರು 34,744 ಮೂಟೆ ಅಡಿಕೆ ಇಟ್ಟಿದ್ದರು. ಈ ವರ್ಷ ರೈತರು 62,351 ಮೂಟೆ, ವರ್ತಕರು 16,941 ಮೂಟೆ ಇಟ್ಟಿದ್ದಾರೆ. ಅಡಿಕೆ ಕೊಯ್ಲು ಇನ್ನೂ ಮುಗಿದಿಲ್ಲ. ತೋಟಗಳ ವಿಸ್ತೀರ್ಣವೂ ಗಣನೀಯವಾಗಿ ಹೆಚ್ಚಿದೆ. ಇಳುವರಿ ಕಡಿಮೆಯಾದರೂ ಸಂಗ್ರಹ ಇದೆ. ಹಾಗಾಗಿ, ಬೆಲೆ ಸ್ಥಿರವಾಗಿಯೇ ಇರುತ್ತದೆ’ ಎನ್ನುತ್ತಾರೆ ಮ್ಯಾಮ್ಕೋಸ್‌ ಉಪಾಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ.

ಗರಿಷ್ಠ ಧಾರಣೆ: ಅಡಿಕೆ ಧಾರಣೆ 2010ರವರೆಗೂ ಕ್ವಿಂಟಲ್‌ಗೆ ₹ 10 ಸಾವಿರದಿಂದ ₹ 15 ಸಾವಿರದ ಆಸುಪಾಸು ಇತ್ತು. 2014–15ರಲ್ಲಿ ₹ 1 ಲಕ್ಷದ ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಅಡಿಕೆ ಪ್ರದೇಶ ವಿಸ್ತರಣೆ, ಕೆಲವು ರಾಜ್ಯಗಳಲ್ಲಿ ಗುಟ್ಕಾ ನಿಷೇಧ, ಮತ್ತಿತರ ಕಾರಣಗಳಿಂದ ಧಾರಣೆ ಮತ್ತೆ ಕುಸಿತದತ್ತ ಸಾಗಿತ್ತು.ಮೂರು ವರ್ಷಗಳಿಂದ ಧಾರಣೆ ₹ 30 ಸಾವಿರ–₹ 35 ಸಾವಿರ ಇದೆ.

‘ವಿದೇಶದಿಂದ ಆಮದು ಮಾಡಿಕೊಳ್ಳುವ ಒಂದು ಕ್ವಿಂಟಲ್ ಅಡಿಕೆಗೆ ಕೇಂದ್ರ ಸರ್ಕಾರ ₹ 25,100 ಕನಿಷ್ಠ ಬೆಲೆ ನಿಗದಿ ಮಾಡಿತ್ತು. ಆದರೂ, ಕಳ್ಳ ಸಾಗಣೆ ಮೂಲಕ ಸಾಕಷ್ಟು ಅಡಿಕೆ ತರಲಾಗುತ್ತಿದೆ. ಇದು ದೇಸಿ ಅಡಿಕೆ ಧಾರಣೆ ಕುಸಿಯಲು ಪ್ರಮುಖ ಕಾರಣ. ಮೊದಲು ಹೊರಗಿನ ಅಡಿಕೆಗೆ ಸಂಪೂರ್ಣ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸುತ್ತಾರೆ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ.

‘ನಾಲ್ಕು ವರ್ಷಗಳ ಹಿಂದೆ ಉತ್ತಮ ಧಾರಣೆ ಸಿಕ್ಕರೂ, ರೈತರ ಬಳಿ ಆವಕ ಇರಲಿಲ್ಲ. ಮಧ್ಯವರ್ತಿಗಳಿಗೆ ಲಾಭವಾಗಿತ್ತು. ಕೈಸುಟ್ಟುಕೊಂಡ ನಂತರ ಸಂಗ್ರಹಣಾ ಸಾಮರ್ಥ್ಯ ಬೆಳೆಸಿಕೊಂಡೆವು. ಈ ಸಲ ಉತ್ತಮ ಧಾರಣೆ ಸಿಗುವ ನಂಬಿಕೆ ಇದೆ’ ಎನ್ನುತ್ತಾರೆ ಭದ್ರಾವತಿ ತಾಲ್ಲೂಕಿನ ಅಡಿಕೆ ಬೆಳೆಗಾರ ಎನ್‌.ಎಸ್.ರುದ್ರೇಶ್. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು