ಸೋಮವಾರ, ಸೆಪ್ಟೆಂಬರ್ 23, 2019
28 °C

ಬ್ಯಾಂಕ್‌ ಎಟಿಎಂ: ಹೆಚ್ಚಿದ ಸುರಕ್ಷತೆ

Published:
Updated:
Prajavani

ಗ್ರಾಹಕರು ಎಟಿಎಂಗಳಿಂದ ನಗದು ಪಡೆಯುವುದನ್ನು ಹೆಚ್ಚು ಸುರಕ್ಷಿತಗೊಳಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಕಾರ್ಯೋನ್ಮುಖವಾಗಿವೆ. ಎಟಿಎಂ ಬಳಕೆಯ ಸುರಕ್ಷತೆ ಹೆಚ್ಚಿಸಲು ಡೆಬಿಟ್‌ ಕಾರ್ಡ್‌ಗಳಲ್ಲಿ ಇಎಂವಿ ಚಿಪ್‌ ಅಳವಡಿಸಿ ಸುರಕ್ಷತಾ ಮಟ್ಟವನ್ನು ಈಗಾಗಲೇ ಹೆಚ್ಚಿಸಲಾಗಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ತನ್ನ ‘ಯೋನೊ’ ಮೊಬೈಲ್‌ ಆ್ಯಪ್‌ ನೆರವಿನಿಂದ ಗ್ರಾಹಕರು ಡೆಬಿಟ್‌ ಕಾರ್ಡ್‌ ಇಲ್ಲದೆಯೇ ಎಟಿಎಂಗಳಿಂದ ಹಣ ಪಡೆಯುವ ಸೌಲಭ್ಯ ಜಾರಿಗೆ ತಂದಿದೆ.

ಕೆನರಾ ಬ್ಯಾಂಕ್, ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಬ್ಯಾಂಕ್‌ನಲ್ಲಿ ನೋಂದಾವಣೆಗೊಂಡಿರುವ ಗ್ರಾಹಕರ ಮೊಬೈಲ್‌ಗೆ ಒಂದು ಬಾರಿಗೆ ರಹಸ್ಯ ಸಂಖ್ಯೆ (ಒಟಿಪಿ) ಕಳಿಸುವ ಸೌಲಭ್ಯ ಜಾರಿಗೆ ತಂದಿದೆ. ಈ ಎರಡೂ ಕ್ರಮಗಳು ತಮ್ಮದೇ ಆದ ಬಗೆಯಲ್ಲಿ ಎಟಿಎಂ ವಹಿವಾಟಿನ ಸುರಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸಲಿವೆ.

ಎಟಿಎಂಗಳಲ್ಲಿನ ವಂಚನೆ ತಡೆಗಟ್ಟಲು ಗ್ರಾಹಕರು ಒಂದು ಬಾರಿ ಹಣ ಪಡೆದ ನಂತರ 6 ರಿಂದ 12 ಗಂಟೆಗಳ ತನಕ ಎಟಿಎಂ ಬಳಕೆ ಮೇಲೆ ನಿರ್ಬಂಧ ವಿಧಿಸುವ ಬಗ್ಗೆಯೂ ಬ್ಯಾಂಕಿಂಗ್‌ ವಲಯದಲ್ಲಿ ಈಗ ಹೊಸ ಚಿಂತನೆ ನಡೆಯುತ್ತಿದೆ. 24 ಗಂಟೆಗಳ ಅವಧಿಯಲ್ಲಿ ಎರಡು, ಮೂರನೇ ಬಾರಿಗೆ ಎಟಿಎಂ ಬಳಕೆ ಮೇಲೆ ನಿರ್ಬಂಧ ವಿಧಿಸುವುದರಿಂದ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ ಎನ್ನುವುದು ಈ ಚಿಂತನೆಯ ಹಿಂದಿರುವ ಉದ್ದೇಶವಾಗಿದೆ. ಎಟಿಎಂ ಒಳಗಿನ ಸುರಕ್ಷತಾ ಸೌಲಭ್ಯಗಳನ್ನು ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಹೆಲ್ಮೆಟ್‌ ಧರಿಸಿ ಹಣ ಪಡೆಯಲು ಮುಂದಾದರೆ, ಹೆಲ್ಮೆಟ್‌ ತೆಗೆಯಲು ಸೂಚಿಸುವ ಸ್ವಯಂ ಚಾಲಿತ ಧ್ವನಿ ವ್ಯವಸ್ಥೆ ಅಳವಡಿಸಲೂ ಕ್ರಮ ಕೈಗೊಳ್ಳಲಾಗುತ್ತಿದೆ.

ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎಟಿಎಂ ವಹಿವಾಟನ್ನು ಇನ್ನಷ್ಟು ಡಿಜಿಟಲಿಕರಣ ಮಾಡಲು ಮುಂದಾಗಿದೆ. ಈ ಸೌಲಭ್ಯದಡಿ ಗ್ರಾಹಕರು ಡೆಬಿಟ್‌ ಕಾರ್ಡ್ ಇಲ್ಲದೆಯೇ ಎಟಿಎಂಗಳಿಂದ ಹಣ ಪಡೆಯಬಹುದು. ಆದರೆ, ಮೊಬೈಲ್‌ನಲ್ಲಿ ಬ್ಯಾಂಕ್‌ನ ಯೋನೊ (You Only Need One–yono) ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿರಬೇಕು. ಈ ಆ್ಯಪ್‌ನಲ್ಲಿ ಗ್ರಾಹಕರ ಬ್ಯಾಂಕ್‌ ಖಾತೆಯ ವಿವರಗಳ ಜತೆಗೆ ಇರುವ ‘ಯೋನೊ ಕ್ಯಾಷ್‌’ ನೆರವಿನಿಂದ ಎಟಿಎಂಗಳಿಂದ ಡೆಬಿಟ್‌ ಕಾರ್ಡ್‌ ಬಳಸದೆಯೇ ಹಣ ಪಡೆಯಬಹುದು. ಡೆಬಿಟ್‌ ಕಾರ್ಡ್‌ ಬಳಸದ ಗರಿಷ್ಠ ಸುರಕ್ಷತೆಯ ಈ ಸೌಲಭ್ಯವು ಬ್ಯಾಂಕ್‌ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ಒದಗಿಸಲಿದೆ.

ಎಸ್‌ಬಿಐ ಯೋನೊ ಕ್ಯಾಷ್‌

ಈ ಆ್ಯಪ್‌ ಮೂಲಕ ನಗದು ಪಡೆಯಲು ಬಯಸುವ ಗ್ರಾಹಕರಿಗೆ ಬ್ಯಾಂಕ್‌ನ ಎಟಿಎಂಗಳನ್ನು ‘ಯೋನೊ ಕ್ಯಾಷ್‌ ಪಾಯಿಂಟ್‌’ ಎಂದು ಗುರುತಿಸಲಾಗಿರುತ್ತದೆ. ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡಿರುವ ಯೋನೊ ಆ್ಯಪ್‌ನಲ್ಲಿ  ಇರುವ ಕ್ವಿಕ್‌ ಲಿಂಕ್‌ ವಿಭಾಗದಲ್ಲಿ ಯೋನೊ ಕ್ಯಾಷ್‌ ವಿಭಾಗಕ್ಕೆ ಹೋಗಿ ಹಣ ಪಡೆಯಲು 6 ಅಂಕಿಯ ರಹಸ್ಯ ಸಂಖ್ಯೆ (ಯೋನೊ ಕ್ಯಾಷ್‌ ಪಿನ್‌) ನಮೂದಿಸಬೇಕು. ಇದಕ್ಕೆ ಪ್ರತಿಯಾಗಿ ಗ್ರಾಹಕರ ಮೊಬೈಲ್‌ಗೆ 6 ಅಂಕಿಯ ಸಂದೇಶ ಎಸ್‌ಎಂಎಸ್‌ ಮೂಲಕ ಬರುತ್ತದೆ. ಹತ್ತಿರದಲ್ಲಿನ ‘ಯೋನೊ ಕ್ಯಾಷ್‌ ಪಾಯಿಂಟ್‌’ ಎಟಿಎಂನಲ್ಲಿ ಎಸ್‌ಎಂಎಸ್‌ ಮೂಲಕ ಬಂದಿರುವ ಸಂಖ್ಯೆ ನಮೂದಿಸಿ ಹಣ ಪಡೆಯಬಹುದು. ಈ ಅಂಕಿಯು ಅರ್ಧಗಂಟೆಯವರೆಗೆ ಮಾತ್ರ ಚಾಲ್ತಿಯಲ್ಲಿ ಇರಲಿದೆ. ‘ಗ್ರಾಹಕರ ಬ್ಯಾಂಕಿಂಗ್‌ ಅನುಭವ ಹೆಚ್ಚಿಸಲು ‘ಯೋನೊ ಕ್ಯಾಷ್‌’ ಇನ್ನೊಂದು ಹೆಜ್ಜೆಯಾಗಿದೆ.

ಕೆನರಾ ಬ್ಯಾಂಕ್‌ನ ಒಟಿಪಿ ಸೌಲಭ್ಯ

ಎಟಿಎಂಗಳಿಂದ ₹ 10 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತ ಪಡೆಯುವ ಸಂದರ್ಭದಲ್ಲಿ ಗ್ರಾಹಕರ ಮೊಬೈಲ್‌ಗೆ ಬರುವ ‘ಒಟಿಪಿ’ಯನ್ನು ನಮೂದಿಸಿದರೆ ಮಾತ್ರ ನಗದು ಪಡೆಯುವ ಸೌಲಭ್ಯ ಇದಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಈ ಸೌಲಭ್ಯ ಜಾರಿಗೆ ತರಲಾಗಿದೆ. ಇದರಿಂದ ಬ್ಯಾಂಕ್‌ನ ಗ್ರಾಹಕರು ತಮ್ಮ ಎಟಿಎಂ ವಹಿವಾಟನ್ನು ಹೆಚ್ಚು ಸುರಕ್ಷಿತವಾಗಿ ನಡೆಸಬಹುದಾಗಿದೆ.

ಇತರ ಬ್ಯಾಂಕ್‌ಗಳೂ ಇಂತಹ ಸೌಲಭ್ಯ ಕಲ್ಪಿಸಲು ಮುಂದಾದರೆ ‘ಎಟಿಎಂ’ ವಹಿವಾಟಿನ ಸುರಕ್ಷತೆ ಹೆಚ್ಚಲಿದೆ. ಡೆಬಿಟ್‌ ಕಾರ್ಡ್‌ ಬಳಸುವ ಸಂದರ್ಭದಲ್ಲಿನ ಮಾಹಿತಿ ಕದ್ದು, ನಕಲಿ ಕಾರ್ಡ್‌ ತಯಾರಿಸಿ ವಂಚಿಸುವ, ಮೊಬೈಲ್‌ ನಂಬರ್‌ ಮತ್ತಿತರ ಮಾಹಿತಿ ಪಡೆದುಕೊಂಡು ದುರ್ಬಳಕೆ ಮಾಡಿಕೊಳ್ಳುವ, ಖಾತೆಯಲ್ಲಿನ ಹಣ ಬರಿದು ಮಾಡುವ, ಎಟಿಎಂಗಳಲ್ಲಿ ಸ್ಕಿಮ್ಮರ್‌ ಸಾಧನ ಅಳವಡಿಸಿ ಡೆಬಿಟ್‌ ಕಾರ್ಡ್‌ನ ಮಾಹಿತಿ ಕದ್ದು ವಂಚನೆ ಎಸಗುವ ಪ್ರವೃತ್ತಿಗೆ ಕಡಿವಾಣ ಬೀಳಲಿದೆ.  

Post Comments (+)